Thursday, July 3, 2008

How Maharaja's Devotees spread all over Karnataka, an article by S. Venkata Rao

ನಿವೇದನೆ--ಎಸ್. ವೆಂಕಟರಾವ್.

ಶ್ರೀ ಮಾರುತಿ ಅಂಶರೂ ಶ್ರೀ ಸಮರ್ಥ ರಾಮದಾಸರ ಪುನರಾವತಾರಿಗಳೆಂದೂ ಪ್ರಸಿದ್ಧರಾದ ಗೋಂದಾವಲಿ ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ದಹಿವಡಿ ಬಳಿ ಮಾನಗಂಗಾನದಿ ತಟದಲ್ಲಿರುವ ಗೋಂದಾವಲಿ ಎಂಬ ಗ್ರಾಮದಲ್ಲಿ, ಮಾಘ ಶುದ್ಧ ದ್ವಾದಶಿ ತಾರೀಖು ೧೦-೨-೧೮೪೪ ಬುಧವಾರ ಜನಿಸಿ ಅಖಂಡ ಭಾರತದಲ್ಲಿ ರಾಮನಾಮ ಪ್ರಸಾರಮಾಡಿ ಪ್ರಮಾದೀಚನಾಮ ಸಂವತ್ಸರದ ಮಾರ್ಗಶಿರ ಬಹುಳ ದಶಮಿ ಸೋಮವಾರ ೨-೧೨-೧೯೧೩ ರಂದು ಗೋಂದಾವಲಿಯಲ್ಲಿಯೇ ತಮ್ಮ ಅವತಾರ ಸಮಾಪ್ತಿಮಾಡಿದರು. ತಮ್ಮ ಜೀವಮಾನಕಾಲದಲ್ಲಿ ಇಡೀ ಭಾರತದೇಶವನ್ನು ೪-೫ಬಾರಿ ಕಾಲುನಡಿಗೆಯಲ್ಲಿಯೇ ಸುತ್ತಿದ್ದರೂ ಅವರು ಹಳೇ ಮೈಸೂರು ಪ್ರಾಂತ್ಯಕ್ಕೆ ಬಂದಿದ್ದ ಮಾಹಿತಿಯಿಲ್ಲ. ಆದರೂ ಈ ಭ್ಹಾಗದಲ್ಲಿ ಶ್ರೀ ಮಹಾರಾಜರ ಪ್ರಭಾವ ಮಹತ್ತರವಾಗಿ ಬೆಳೆದು ಲಕ್ಷಾಂತರ ಜನರು ಆ ಪಂಥದ ಅನುವರ್ತಿಗಳಾಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಬೆಳೆಯಲು ಕಾರಣ ಮತ್ತು ಕಾರಣರಾದವರ ಪರಿಚಯ ನನಗೆ ತಿಳಿದಷ್ಟು ಮಾಡಿಕೊಡುವುದೇ ಈ ಪ್ರಸ್ತಾವನೆಯ ಉದ್ದೇಶ.ಸನ್ ೧೯೦೯ರಲ್ಲಿ ತುಂಗಭದ್ರಾತೀರದ ಬಿದರಹಳ್ಳಿ ಎಂಬಲ್ಲಿ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಮುಖ್ಯ ಶಿಷ್ಯರಾದ ಶ್ರೀ ಬ್ರಹ್ಮಾನಂದರು ಹದಿಮೂರು ಕೋಟಿ ಜಪ ಸಂಖ್ಯೆ ಪೂರೈಸಿ ಅದರ ಸಾಂಗತಾ ಮಹೋತ್ಸವವನ್ನು ಅತಿ ವಿಜ್ರಂಭಣೆಯಿಂದ ನೆಡೆಸಿದರು. ಅದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ದತ್ತೋಪಂತ ತಬೀಬ ಮತ್ತು ಚಿದಂಬರ ನಾಯಕರೆಂಬ ಭಾವಿಕರು ಶ್ರೀ ರಾಮ ಸ್ಥಾಪನೆಯ ಸಕಲ ಸಿದ್ಧತೆಗಳನ್ನು ನಡೆಸಿದ್ದರಿಂದ ಶ್ರೀ ಬ್ರಹ್ಮಚೈತನ್ಯ ಮಹಾರಾಜರು ತಮ್ಮ ಪರಿವಾರದವರೊಡನೆ ಮೊದಲು ಹುಬ್ಬಳ್ಳಿಗೆ ಬಂದರು. ಶ್ರೀ ಬ್ರಹ್ಮಾನಂದರ ಗುರುಗಳು ಬರುತ್ತಾರೆಂದುತಿಳಿದು ಹುಬ್ಬಳ್ಳಿ, ಧಾರವಾಡ, ಗದಗ್,ಮ್ಕುಂತಾದ ಸ್ಥಳಗಳಿಂದ ಸಹಸ್ರಾರು ಜನರು ಅವರ ದರ್ಶನಕ್ಕಾಗಿ ಹುಬ್ಬಳ್ಳೀ ರೈಲ್ವೆ ಸ್ಟೇಷನ್ನಿನಲ್ಲಿ ನೆರೆದಿದ್ದರು. ಶ್ರೀ ಮಹಾರಾಜರಿಗೆ ಆಗ ಮೈಯಲ್ಲಿ ಸ್ವಸ್ಥವಿರಲಿಲ್ಲ. ಕೈಕಾಲು ತೊಳೆದುಕೊಳ್ಳಬೇಕಾಗಿ ಬರಲು ಜೊತೆಯಲ್ಲಿದ್ದ ಶ್ರೀ ನಾಗಪ್ಪನವರು ಅವರನ್ನು ಅಲ್ಲಿಯೇ ಹತ್ತಿರದಲ್ಲಿದ್ದ ರೈಲ್ವೇ ಟ್ರಾಫಿಕ್ ಇನ್ಸ್ಪೆಕ್ಟರ್ ಶ್ರೀ ಟ್.ಜಿ. ವೆಂಕಟಸುಬ್ಬರಾಯರ ಮನೆಗೆ ಕರೆದುಕೊಂದು ಹೋದರು.ಶ್ರೀ ವೆಂಕತಸುಬ್ಬರಾಯರು ದೈವಭಕ್ತೈಯುಳ್ಳವರೂ ಭಾವಿಕರೂ ಆಗಿದ್ದರು. ಮಹಾರಾಜರು ಕೈಕಾಲುತೊಳೆದುಕೊಂಡಮೇಲೆ ಅಲ್ಲಿಯೇ ದೇವರ ಜಗಲಿಯ ಹತ್ತಿರ ವಿಶ್ರಾಂತಿ ತೆಗೆದುಕೊಳ್ಳಲು ಕೂತಿದ್ದರು. ನಮಸ್ಕಾರ ಮಾಡಲು ಬಂದವರನ್ನು ಉಪದೇಶವಾಗಿದೆಯೇ ಎಂದು ಕೇಳಿ ಇಲ್ಲವೆಂದು ತಿಳಿದಮೇಲೆ ಎಲ್ಲರನ್ನೂ ಕರೆಸಿ ಉಪದೇಶಕೊಟ್ಟರು. ಅದೇ ವೆಂಕಟಸುಬ್ಬರಾಯರು ಶ್ರೀ ಬ್ರಹ್ಮಚೈತನ್ಯ ಮಹಾರಾಜರು ದೇಹಬಿಟ್ಟ ಎರಡು ವರ್ಷದಮೇಲೆ ಬೆಂಗಳೂರಿನಲ್ಲಿ ಡಿ.ಟಿ.ಎಸ್. ಆಫೀಸಿನಲ್ಲಿ ಹೆಡ್ ಕ್ಲಾರ್ಕ್ ಆಗಿದ್ದಾಗ ಬಳೇಪೇಟೆ ಲಾಲ್ದಾಸ್ ವೆಂಕಟರಮಣಸ್ವಾಮಿ ಗುಡಿಯಲ್ಲಿ ನಾಮ ಸಪ್ತಾಹ ಏರ್ಪಡಿಸಿದ್ದರು.ಶ್ರೀ ಬ್ರಹ್ಮಾನಂದರೂ, ಶ್ರೀ ಕುರ್ತುಕೋಟಿ ಮಹಾಭಾಗವತರೂ ಬಂದಿದ್ದು ಅವರ ನೇತ್ರುತ್ವದಲ್ಲ್ಲಿ ಬಹಳ ವೈಭವದಿಂದ ನಾಮ ಗರ್ಜನೆ, ಅನ್ನದಾನ ನಡೆಯಿತು. ಆ ಸಮಾರಂಭಕ್ಕೆ ಆಗಿನ ದಿವಾನರಾಗಿದ್ದ ಸರ್.ಎಮ್.ವಿಶ್ವೇಶ್ವರಯ್ಯನವರೂ, ಕೌನ್ಸಿಲರ್ ಸರ್ ಕೆ.ಪಿ. ಪುಟ್ಟಣ್ಣಚೆಟ್ಟರೂ ದಯಮಾಡಿಸಿದ್ದರು. ವಿಶ್ವೇಶ್ವರಯ್ಯನವರು ಶ್ರೀ ಬ್ರಹ್ಮಾನಂದರನ್ನು ಕುರಿತು ಇಂತಹ ಮಹತ್ಕಾರ್ಯ ಹಿಂದೆ ಋಷಿಗಳ ಕಾಲದಲ್ಲಿ ನಡೆದಂತೆ ನಡೆಸಿರುತ್ತೀರಿ ಎಂದು ಮನಸಾರೆ ಹೊಗಳಿದರಂತೆ.ಶ್ರೀ ವೆಂಕಟಸುಬ್ಬರಾಯರು ರಿಟೈರಾದ ಮೇಲೆ ತಮ್ಮ ಸ್ವಸ್ಥಳವಾದ ತುಮಕೂರಿನಲ್ಳಿ ಬಂದು ನೆಲಸಿ ಮನೆಯಲ್ಲಿ ಆನಂದದಿಂದ ಭಜನೆ, ಆರತಿ ನಡೆಸುತ್ತಾ ಭಜನೆ ವೆಂಕಟಸುಬ್ಬರಾಯರೆಂದೇ ಪ್ರಸಿದ್ಧರಾಗಿದ್ದರು. ಕೊನೆ ಕೊನೆಗೆ ಸಂಸಾರದಿಂದ ದೂರ ಸರಿಯುತ್ತಾ ಯೇಕಾಂತ ಮೌನಧಾರಣೆ ಮಾಡಿದರು. ಅದಕ್ಕೆ ಅನುಕೂಲವಾಗಿರಲೆಂದು ತುಮಕೂರು ಸಮೀಪದ ಮೆಳೆಕೋಟೆ ಎಂಬ ಗ್ರಾಮದಲ್ಲಿ ಸಣ್ಣ್ದಾಗಿ ಮನೆಯನ್ನು ಕಟ್ಟಿಸಿ ಅಲ್ಲಿಗೆ ಬಂದರು. ಅವರ ಮೌನಧಾರಣೆ ಅವರ ಕುಟುಂಬಕ್ಕೆ ಸರಿ ಎನಿಸದೆ ಎಲ್ಲಿ ಸಂಸಾರ ತ್ಯಾಗಮಾದಿ ಸನ್ಯಾಸಿಯಾಗಿ ಹೊರ್ಟುಬಿಡುತ್ತಾರೆಯೋ ಎಂದು ಅದಕ್ಕೆ ಎಲ್ಲಾ ವಿಧದಿಂದಲೂ ಅಡ್ಡಿಆತಂಕಗಳನ್ನು ತದೋಡ್ಡ್ತ್ತಾ ಬಂದರು. ಹಳ್ಳಿಗೆ ಬಂದ ಕೇವಲ ಎರಡೇ ತಿಂಗಳಲ್ಲಿ ಒಂದು ದಿನ ಹೆಂಡತಿಯ ಒತ್ತಾಯಕ್ಕೆ ಮೌನ ಮುರಿಯವೇಕಾಗಿ ಬಂತು. ಅದೇ ದಿನ ರಾತ್ರಿ ಕೈನಲ್ಲಿ ಶ್ರೀ ಬ್ರಹ್ಮಾನಂದರ ಫ್ಹೋಟೋ ಹಿಡಿದುಕೊಂಡಿದ್ದಂತೆಯೇ ಪ್ರಾಣ ಹೋಗಿತ್ತು. ಶ್ರೀ ವೆಂಕಟಸುಬ್ಬರಾಯರಿಂದ ಅವರ ಮನೆತನದ ಅನೇಕ ಜನರು ಈ ಪಂಥವನುಉ ಹಿಡಿಯಲವಕಾಶವಾಯಿತು. ಅವರ ಸೋದರಳಿಯಂದಿರು ಶ್ರೀ ಟಿ.ಎನ್. ಸುಬ್ಬರಾಯರು ಅದೇ ದಾರಿಯಲ್ಲಿದ್ದು ಮೈಸೂರು ತೇರಾಕೋಟೆ ಸಾಂಗತಾದಲ್ಲಿ ಮುಖ್ಯ ಪಾತ್ರವಹಿಸಿದ್ದರು. ೧೯೧೩ ನೆಯ ಇಸವಿ ನವೆಂಬರ್ ಮೂರನೆಯವಾರ ಗಂಜೂರು ವೆಂಕಣ್ಣಯ್ಯನವರೆಂಬ ಭಾವಿಕ ಭಕ್ತರು ತುಮಕೂರು ಡಿಸ್ಟ್ರಿಕ್ಟ್ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಲ್ಲಿಗೆರೆ ಎಂಬ ಗ್ರಾಮದ ಬಳಿ ಕೆರೆ ಕಟ್ಟಿಸುವ ಕೆಲಸವನ್ನು ನೋಡಿಕೊಳ್ಳುತ್ತಿದ್ದರು. ಒಂದು ದಿನ ಮಟಮಟ ಮಧ್ಯಾಹ್ನ, ವಿಪರೀತ ಬಿಸಿಲು. ಕಂಟ್ರಾಕ್ಟರ್ ಅವರನ್ನು ಹತ್ತಿರದ ಒಂದು ಮರದ ನೆರಳಲ್ಲಿ ಕೂಡಿಸಿ ಕುಡಿಯಲು ಎಳೆನೀರನ್ನು ತರುತ್ತೇನೆಂದು ಹೋದ. ಅವರು ಜಪ ಮಾಡುತ್ತಾ ಕುಳಿತಿದ್ದರು. "ಮಹಾಪುರುಷ" ಎಂಬ ಧ್ವನಿ ಗಟ್ಟಿಯಾಗಿ ಕೇಳಿಸಿತು. ತಲೆ ಎತ್ತಿ ನೋಡಲು ಎದುರಿಗೆ ಕಪಿನಿ ಮತ್ತು ಕುಲಾವಿ ಧರಿಸಿ ಆ ಕಡೆ ಈ ಕಡೆ ಇಬ್ಬರು ಶಿಷ್ಯರೊಡನೆ ಇದ್ದಂತಹ ಸಾಧುಗಳೊಬ್ಬರು ಕಾಣಿಸಿಕೊಂಡರು. ಅವರು ಮಹಾರಾಷ್ಟ್ರ ಭಾಷೆಯಲ್ಲಿ "ಗೋಂದಾವಲ್ಯಾವೆ" ಎಂದು ಹೇಳಿದರು. ಶ್ರೀ ವೆಂಕಣ್ಣಯ್ಯನವರಿಗೆ ಆಶ್ಚರ್ಯವಾಗಿ ಎದ್ದು ನಮಸ್ಕಾರ ಮಾಡಿ ಮೇಲೆ ಏಳುವುದರಳೊಗಾಗಿ ಸಾಧುಗಳು ಅದೃಶ್ಯರಾಗಿದ್ದರು. ಅವರ ಮಾತಿನ ಅರ್ಠ ತಿಳಿಯದೆ ಅದನ್ನು ತಮ್ಮ ನೋಟು ಬುಕ್ಕಿನಲ್ಲಿ ಬರದುಕೊಂಡು ಆ ರಾತ್ರಿ ತಾವು ವಾಸವಾಗಿದ್ದ ಚಿಕ್ಕನಾಯಕನಹಳ್ಳಿಗೆ ವಾಪಸ್ಸು ಬಂದರು. ಅದೇ ಗುಂಗಿನಲ್ಲೇ ೨-೩ ದಿನಗಳಿದ್ದಾಗ ರಾತ್ರೆ ಸ್ವಪ್ನವಾಗಿ ಗೀತಾ ಓದುತ್ತಿದ್ದ ಒಬ್ಬ ಅಯ್ಯಂಗಾರ್ರವರನ್ನು ತೋರಿಸಿ, "ಅವರನ್ನು ಹಿಡಿದರೆ ತಮ್ಮ ಕೆಲಸವಾಗುತ್ತದೆ" ಎಂದ ಹಾಗೆ ಆಯಿತು. ಮಾರನೇ ದಿನ ಐಯ್ಯಂಗಾರರು ಯಾರಿರಬಹುದೆಂದು ಯೋಚಿಸುತ್ತಾ ಅಡ್ದಾಡುತ್ತಿರುವಾಗ ಎದುರಿಗೆ ಐಯ್ಯಂಗಾರರೊಬ್ಬರು ಎದುರಾದರು. ಅವರನ್ನೇ ಹಿಂಬಾಲಿಸಲು ಅವರು ಒಂದು ಹೋಟೆಲಿಗೆ ಹೋದರು. ಅವರು ಪೋಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದು ಬೇಜಾರಾಗಿ ಕೆಲಸಕ್ಕೆ ರಾಜಿನಾಮೆಯಿತ್ತು ಅದೇ ಹೋಟೆಲನ್ನು ನಡೆಸುತ್ತಿದ್ದರು. ಅವರ ಹೆಸರು ರಂಗಾಚಾರ್ಯರೆಂದು. ಅವರು ಯೋಗಾಭ್ಯಾಸಿಗಳು. ಅವರು ಶ್ರೀ ವೆಂಕಣ್ಣಯ್ಯನವರಿಂದ ಸಮಾಚಾರವನ್ನೆಲ್ಲಾ ತಿಳಿದು ತಾವು ತಮ್ಮ ಯೋಗದೃಷ್ಟಿಯಿಂದ ಕಂಡುದದನ್ನು ಹೀಗೆ ವಿವರಿಸಿದರು. ಬೆಂಗಳೂರು ಪೂನಾ ರೈಲಿನಲ್ಲಿ ಹೋದರೆ ಮೀರಜ್ ಆದ ಮೇಲೆ ಕೋರೆಗಾವ್ ಎಂಬ ಸ್ಟೇಷನ್ ಸಿಗುತ್ತೆ. ಅಲ್ಲಿ ಇಳಿದು ಮುವತ್ತು ಮೈಲಿ ಪೂರ್ವಕ್ಕೆ ಹೋದರೆ ಗೋಂದಾವಳಿ ಎಂಬ ಊರಿದೆ. ಅಲ್ಲಿ ರಾಮ ದೇವರಗುಡಿಯೊಂದಿದೆ.ಆ ರಾಮ ದೇವರು, ’ನಾನು ಈ ಪ್ರದೇಶದ ನಿಜವಾದ ರಾಮನಲ್ಲ, ಮಾತನಾಡುವ ರಾಮ ಎಲ್ಲಿಗೋ ಹೋಗಿದ್ದಾನೆ’ ಎಂದು ಹೇಳಿದರು. ಅಷ್ಟರಲ್ಲಿ ಶ್ರೀ ಬ್ರಹ್ಮಚೈತನ್ಯರೆಂಬ ಸಾಧುಗಳು ಬಂದರು. ಅವರು ’ನೀವೂ ವೆಂಕಣ್ಣಯ್ಯ ಇಬ್ಬರೂ ಇಲ್ಲಿಗೆ ಬನ್ನಿ’ ಎಂದು ಹೇಳಿದರು. ಎಂಬ ಸಮಾಚಾರವನ್ನೆಲ್ಲಾ ವಿವರವಾಗಿ ತಿಳಿಸಿದರು. ಅದನ್ನು ಕೇಳಿ ಶ್ರೀ ವೆಂಕಣ್ಣಯ್ಯನವರಿಗೆ ಆನಂದವಾಗಿ ಕೆಲವೇ ದಿನಗಳಲ್ಲಿ ಇಬ್ಬರೂ ಗೋಂದಾವಲಿಗೆ ಹೊರಟರು. ಶ್ರೀ ಮಹಾರಾಜರು ಇವರಿಗಾಗಿ ಎದುರು ನೋಡುತ್ತಿದ್ದು ಮಾನಗಂಗಾನದಿಯಲ್ಲಿ ಸ್ನಾನ ಮಾಡಿ ಬರಲು ಹೇಳಿದರು. ರಾಮದರ್ಶನವಾದ ಮೇಲೆ ಜೊತೆಯಲ್ಲಿ ಊಟವಾಯಿತು. ಮಾರನೆಯ ದಿನ ಶ್ರೀ ಮಹಾರಾಜರು ವೆಂಕಣ್ಣಯ್ಯನವರಿಗೆ ಉಪದೇಶ ಕೊಟ್ಟು ’ಅಖಂಡ ನಾಮಸ್ಮರಣೆ ಮಾಡು, ಶ್ರೀ ರಾಮ ನಾಮ ಪ್ರಸಾರ ಮಾಡು. ಶ್ರೀ ರಾಮನಿಗಾಗಿ ಒಂದು ಸಣ್ಣ ಮಂದಿರವನ್ನು ಕಟ್ಟಿಸು. ಉಪಾಸನೆಯನ್ನು ಮುಂದುವರಿಸು’. ಎಂದು ಆಜ್ನೆಯಿತ್ತು ಕಳುಹಿಸಿದರು. ಹೀಗೆ ಉತ್ತಮ ಸಂಸ್ಕಾರದಿಂದ ಕೂಡಿದ ವೆಂಕಣ್ಣಯ್ಯನವರಿಗೆ ಸದ್ಗುರು ಕೃಪಾ ಸಹಾ ಆಗಿ ಉಪಾಸನೆಯಲ್ಲಿ ತೊಡಗಿದರು. ಕೆಲಸದಿಂದ ನಿವೃತ್ತರಾದ ಮೇಲೆ ಚಿಂತಾಮಣಿಯಲ್ಲಿ ನೆಲಸಿ ಅಲ್ಲಿ ಗುರುಗಳ ಆಜ್ನೆಯಂತೆ ೧೫-೧೨-೧೯೩೯ರಲ್ಲಿ ಕುಂದಗೋಳದ ಗುರುಭಕ್ತ ಶ್ರೀ ನಾರಣಪ್ಪನವರ ಕೈಲಿ ಶಂಕುಸ್ಥಾಪನೆ ಮಾಡಿಸಿ ಗರ್ಭಗುಡಿಯೊಂದನ್ನು ಕಟ್ಟಿ ಅದರಲ್ಲಿ ಗುರುಗಳ ಫೋಟೋ ಪಾದುಕಾ ಇಟ್ಟು ಉಪಾಸನಾಕ್ರಮ ವಿಸ್ತರಿಸಿದರು. ಶ್ರೀ ಬ್ರಹ್ಮಚೈತನ್ಯರ ಜಯಂತಿ, ಆರಾಧನಾ, ಗುರು ಪೂರ್ಣಿಮಾ, ಶ್ರೀರಾಮನವಮಿ, ನವರಾತ್ರಿ ಮುಂತಾದ ಉತ್ಸವಗಳನ್ನು ನಡೆಸುತ್ತಾ ಬಂದರು. ಭಕ್ತಾದಿಗಳೂ ಜಾಸ್ತಿಯಾಗಿ ಶಾಯವೂ ಒದಗಿ ಜೈಪುರದಿಂದ ಶ್ರೀ ರಾಮ, ಸೀತಾ, ಲಕ್ಶ್ಮಣ, ಮಾರುತಿ ಮತ್ತು ಶ್ರೀ ಬ್ರಹ್ಮಚೈತನ್ಯರ ಸುಂದರ ಮೂರ್ತಿಗಳನ್ನು ಅಮೃತಶಿಲೆಯಲ್ಲಿ ತಯಾರಿಸಿ ತಂದು ೧೩-೦೬-೧೯೪೯ ರಂದು ಶುಭ ಮುಹೂರ್ತದಲ್ಲಿ ಬೊಂಬಾಯಿ ಶ್ರೇಷ್ಟ ಗುರುಭಕ್ತರಾದ ಶ್ರೀ ರಾಮಚಂದ್ರ ಚಿಂತಾಮಣಿ ಕೇತ್ಕರ್ರವರ ಮತ್ತು ಶ್ರೀ ಕುಂದುಗೋಳ್ ನಾರಣಪ್ಪನವರ ನೇತೃತ್ವದಲ್ಲಿ ಅವರುಗಳ ಅಮೃತ ಹಸ್ತದಿಂದ ಪ್ರತಿಶ್ಟಾಪನಾ ಮಹೋತ್ಸ್ಸವವನ್ನು ಅತಿ ವೈಭವದಿಂದ ನಡೆಸಿದರು. ಸಾವಿರಾರು ಮಂದಿ ಭಕ್ತಾದಿಗಳು ಭಗವಹಿಸಿ ವಿಶೇಷ ಅನ್ನದಾನವೂ ನಡೆಯಿತು. ಶ್ರೀ ವೆಂಕಣ್ಣಯ್ಯನವರು ತೀರಿಕೊಂಡ ಮೇಲೆ ಅವರ ತಮ್ಮ ಶ್ರೀ ಹೊನ್ನಪ್ಪನವರು ಅದೇ ರೀತಿ ನಡೆಸಿಕೊಂಡು ಬಂದರು. ಮಂದಿರದ್ದ ಎದುರಿಗೆ ಛತ್ರವೊಂದನ್ನು ಕಟ್ಟಿಸಿದರು. ಪರಸ್ಥಳದ ಬಡಹುಡುಗರಿಗೆ ಇದ್ದು ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಹಾಸ್ತೆಲ್ ಒಂದನ್ನು ನೆಡೆಸುತ್ತಿದ್ದಾರೆ. ಗೋಪುರ ನಿರ್ಮಾಣ ಮತ್ತು ರಜತ ಮಹೋತ್ಸವವನ್ನೂ ವೈಭವದಿಂದ ನಡೆಸಿದರು. ದುರದೃಷ್ಟದಿಂದ ಶ್ರೀ ಹೊನ್ನಪ್ಪನವರು ೨೨-೬-೧೯೭೮ ಗುರುವಾರ ತೀರಿಕೊಂಡರು. ಈಗ ಅವರ ಮಕ್ಕಳು ವೆಂಕಟೇಶಮೂರ್ತಿ ಮತ್ತು ರಘುನಾಥರೆಂಬುವವರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿಯೇ ಎಲ್ಲಾ ಕಾರ್ಯಕ್ರಮಗಳನ್ನೂ ಶ್ರದ್ಧಾಭಕ್ತಿಯಿಂದ ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ. ಶ್ರೀ ವೆಂಕಣ್ಣಯ್ಯನವರು ಚಿಂತಾಮಣಿಯಲ್ಲಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದಮೇಲೆ ಅವರ ಆಪ್ತಮಿತ್ರರು ಕೆಲವರು ಅಂದರೆ ಸರ್ವಶ್ರೀ ಎ.ಪಿ. ಸುಬ್ಬರಾವ್, ಹೆಚ್.ವಿ. ನಂಜಪ್ಪನವರು, ರಂಗರಾಯರು, ಅಸಿಸ್ತೆಂಟ್ ಕಮೀಷನರ್ ಸೂರ್ಯ್ಲನಾರಾಯಣರಾಯರೇ ಮುಂತಾದವರು ಮೈಸೂರಿನವರಿದ್ದರು. ಅವರುಗಳು ಮೈಸೂರಿನಲ್ಲಿ ಶ್ರೀ ಕೇತ್ಕರ್ ಮಹಾರಾಜರನ್ನೂ ಕುಂದಗೋಳ್ ನಾರಣಪ್ಪ್ನವರನ್ನೂ ಬರಮಾಡಿಕೊಂಡು ಭಜನೆ, ಸಪ್ತಾಹಗಳನ್ನು ನಡೆಸಲು ಪ್ರಾರಂಭಿಸಿದರು. ಶ್ರೀ ರಂಗರಾಯರು ಒಂದು ಟೈಪ್ ರೈಟಿಂಗ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು. ಅಲ್ಲಿ ಪ್ರತಿವಾರ ಭಜನೆ ನಡೆಯುತ್ತಿತ್ತು. ಅದರ ಎದುರು ಶ್ರೀ ಹುಚ್ಚೂರಾಯರೆಂಬುವರು ’ಸಾಯಿಸ್ಟೋರ್ಸ್’ ಎಂಬ ಪ್ರಾವಿಷನ್ ಸ್ಟೋರ್ಸ್ ಒಂದನ್ನು ನಡೆಸುತ್ತಿದ್ದರು. ಹುಚ್ಚೂರಾಯರಿಗೆ ಸಣ್ಣ ವಯಸ್ಸಿನಿಂದಲೂ ದೇವರಲ್ಲಿ ಬಹಳ ಭಕ್ತಿ. ತರೀಕೆರೆಯಲ್ಲಿ ಓದುತ್ತಿದ್ದಾಗ ತಮ್ಮ ತಂದೆಯವರ ಮನೆಯಲ್ಲಿ ಶ್ರೀ ಬ್ರಹ್ಮಚೈತನ್ಯರ ಫೋಟೋ ಇದ್ದು ನಿತ್ಯ ಭಜನೆ ಆರತಿ ನಡೆಯುತ್ತಿತ್ತು. ಆಗ ಹೇಳುತ್ತಿದ್ದ ಹಾಡುಗಳೂ ರಂಗರಾಯರ ಇನ್ಸ್ಟಿಟ್ಯೂಟ್ ಭಜನೆಯಲ್ಲಿ ಹೇಳುತ್ತಿದ್ದ ಹಾಡುಗಳೂ ಒಂದೇ ಆಗಿ ಆ ಭಜನೆಯಲ್ಲಿ ಆಸಕ್ತಿ ಹುಟ್ಟಿ ಭಾಗವಹಿಸಲು ಪ್ರಾರಂಭಿಸಿದರು. ಅವರು ಲಗ್ನ ವಾಗಲಿಲ್ಲ. ಚಿಕ್ಕಂದಿನಿಂದಲೂ ಸಾಧುಸಂತರಲ್ಲಿ ಅದರಲ್ಲಿಯೂ ಶ್ರೀ ರಾಮಕೃಷ್ಣ ಪಂಥ ಅತಿ ಪ್ರಿಯವಾಗಿತ್ತು. ಆ ಮಠದ ಅನೇಕ ಸ್ವಾಮಿಗಳ ನಿಕಟ ಪರಿಚಯವಿದ್ದು ಬೇಲೂರು ಮಠದಲ್ಲಿ ಶತಾಬ್ದಿ ಉತ್ಸವದಲ್ಲಿ ಭಾಗವಹಿಸಿಯೂ ಇದ್ದರು. 1949ರ ಡಿಸೆಂಬರ್ ತಿಂಗಳಲ್ಲಿ ಚಿಂತಾಮಣಿಗೆ ಆರಾಧನಾ ಮಹೋತ್ಸವಕ್ಕೆ ಬಂದಿದ್ದ ಶ್ರೀ ನಾರಣಪ್ಪನವರು ಮೈಸೂರಿಗೆ ಬಂದು ಸೂರ್ಯನಾರಾಯಣರಾಯರ ಮನೆಯಲ್ಲಿಳಿದು ಕೊಂಡಿದ್ದರು. ಭಜನೆಗೆ ಭಜನೆಗೆ ಭಕ್ತಾದಿಗಳೆಲ್ಲಾ ಸೇರಿದ್ದರು. ಶ್ರೀ ಹುಚ್ಚೂರಾಯರ ಪರಿಚಯವೂ ಆಗಿತ್ತು. ಶ್ರೀ ನಾರಣಪ್ಪನವರು ’ಮೈಸೂರಲ್ಲಿ ತೇರಾಕೋಟಿ ನಡೆಯುವ ಯೋಗವಿದೆ ನಡೆಸಿರಿ’ ಎಂದರು. ರಂಗರಾಯರ ಮನೆಯಲ್ಲಿ ಚರ್ಚೆಗಳಗಿ ಕೊನೆಗೆ ಶ್ರೀ ಹುಚ್ಚೂರಾಯರ ಮನೆಯಲ್ಲಿ ನಡೆಯುವಂತೆ ಆಯಿತು. ಶ್ರೀ ಹುಚ್ಚೂರಾಯರಿಗೆ ಭಯ, ಅನುಭವವಿಲ್ಲ, ಹೇಗೆ ನಡೆಸುವುದು? ಸಿದ್ಧತೆ ಏನು? ಎಂಬ ಬಗ್ಗೆ ಯೋಚನೆಗಿಟ್ಟುಕೊಡಿತು. ಆಗ ಮಹಾರಾಜರಿಂದ ಸಂದೇಶ ಬಂತು. ’ಅದನ್ನು ನಡೆಸುವವರು ನೀನಲ್ಲ, ಶ್ರೀ ರಾಮ ನಡೆಸುತ್ತಾನೆ. ನೀವುಗಳು ನಿಮಿತ್ತಮಾತ್ರ’ ಎಂದು. 1-1-1950 ಮುಕ್ಕೋಟೇಕಾದಶಿ ದಿನ ಮಹಾಸಂಕಲ್ಪ ಮಾಡಬೇಕೆಂದು ತೀರ್ಮಾನವಾಗಿ, ಶ್ರೀ ನಾರಣಪ್ಪನವರ ಸಮ್ಮುಖದಲ್ಲಿ ಜಪ ಸಂಕಲ್ಪ ಮಾಡಿ ಪ್ರಾರಂಭಿಸಿಬಿಟ್ಟರು. ಮನೆಯವರೆಲ್ಲಾ ಬಹಳ ಆನಂದದಿಂದ ಅದಕ್ಕೆ ಸಹಾಯ ಮಾಡಿದರು. ಸುಮಾಉ ಎರಡು ವರ್ಷಗಳ ಕಾಲ ಜಪ ನಡೆಯಿತು. 19ಕೋಟಿಯವರೆಗೂ ಜಪವಾಯಿತು. 1952ನೆಯ ಮಾರ್ಚಿ 30ನೇಯ ತಾರೀಖು ಮಂಗಳವಾರ ಶ್ರೀ ಕುಂದಗೋಳ್ ನಾರಣಪ್ಪನವರ ನೇತೃತ್ವದಲ್ಲಿ ಅತಿ ವೈಭವದಿಂದ ’ತೇರಾಕೋಟಿ ಸಾಂಗತಾ" ಉತ್ಸವ ವೈದಿಕ ವಿಧಿಗಳಿಗನುಸಾರವಾಗಿ ನಡೆದು ವಿಶೇಷ ಅನ್ನಾದಾನ ನಡೆಯಿತು. ಅದಕ್ಕಾಗಿಯೆ ಇದ್ದರೇನೋ ಎಂಬಂತೆ ಶ್ರೀ ನಾರಣಪ್ಪನವರು ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಶ್ರೀ ಬ್ರಹ್ಮಚೈತನ್ಯರ ಆರಾಧನೆಯ ಮಾರನೇದಿನವೇ ದೇಹ ಬಿಟ್ಟರು. ಇದು ಪಂಥ ಹರಡಲು ಬಹಳ ಪ್ರಾಮುಖ್ಯವಾಯಿತು. ಶ್ರೀ ವೆಂಕಣ್ಣಯ್ಯನವರ ಸಂಬಂಧಿಗಳು ಅರಸೀಕೆರೆ ಬಳಿ ಇರುವ ಬೆನಕನಕೆರೆಯಲ್ಲಿ ಬಹಳ ಜನರಿದ್ದಾರೆ. ಅವರುಗಳೂ ಚಿಂತಾಮಣಿಗೆ ಉತ್ಸವಗಳಿಗೆ ಬಂದು ನೋಡಿ ಬೆನಕನಕೆರೆಯಲ್ಲಿಯೂ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಅವರಲ್ಲಿ ಕೆಲವರು ಬೆಂಗಳೂರಿನಲ್ಲಿ ಕೆಲಸಗಳಲ್ಲಿದ್ದರು. ಅವರುಗಳು ಪ್ರತಿವಾರ ಶ್ರೀ ಬಿ.ವಿ.ಲಕ್ಶ್ಮೀನರಸಿಂಹಯ್ಯನವರ ಮನೆಯಲ್ಲಿ ಭಜನೆ ನಡೆಸುತ್ತಿದ್ದರು. 1951 ಅಕ್ಟೋಬರ್ 28ನೆಯ ತಾರೀಖು ಕುಂದಗೋಳ ಶ್ರೀ ನಾರಣಪ್ಪನವರು ಬಂದಾಗ ಅವರ ಆದೇಶದಂತೆ ಪ್ರತಿ ವರ್ಷವೂ ಆರಾಧನಾ ಉತ್ಸವವನ್ನು ಗವೀಪುರದ ಮಗಜೆ ಧೋಂಡೂಸಾ ಛತ್ರದಲ್ಲಿ ನಡೆಸುತ್ತಿದ್ದರು. ಹೀಗೆಯೇ ನಡೆಯುತ್ತಿರಲು 13-4-1956ರಲ್ಲಿ ಶ್ರೀ ಕೇತ್ಕರ್ ಮಹಾರಾಜರು ಬೆಂಗಳೂರಿಗೆ ಬಂದಿದ್ದಾಗ ಈ ಕಾರ್ಯಕ್ರಮಗಳಿಗೆ ಸ್ವತಂತ್ರವಾದ ಒಂದು ಮಂದಿರವಾಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದರು. ಶ್ರೀ ಲಕ್ಶ್ಮಿನರಸಿಂಹಯ್ಯನವರು ಶ್ರೀನಗರದ ಬಳೀ ಅದಕ್ಕಾಗಿ ಒಂದು ಸೈಟನ್ನು ಕೊಡಲು ತಯಾರಾದರು. ಶ್ರೀ ಕೇತ್ಕರ್ ರವರು ಜಾಗ ನೋಡಿ ಪ್ರಶಸ್ತವಾಗಿದೆ ಎಂದು ಹೇಳಿ ಮೊದಲು ಮೂರೂವರೆಕೋಟಿ ಜಪ ಮಾಡಿ ಮುಗಿಸಲು ಆದೇಶವಿತ್ತರು. ಅದನ್ನು ಹೇಗೆ ಮಾಡಬೇಕು? ಮಾರ್ಗದರ್ಶಕರ್ಯಾರು? ಎಂದು ಯೋಚಿಸುತ್ತಿರುವಾಗ ಧರ್ಮಕರ್ಮ ಸಂಯೋಗದಿಂದ ಶ್ರೀ ಹುಚ್ಚೂರಾಯರ ಸಹವಾಸ ದೊರೆತು ಗವೀಪುರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಶ್ರೀ ಬ್ರಹ್ಮಚೈತನ್ಯರ ಫೋಟೋ ಪಾದುಕೆಗಳನ್ನು ಇಟ್ಟು ಜಪಕ್ಕೆ ಪ್ರಾರಂಭಿಸಿದರು. ಜಪ ಮುಗಿದಮೇಲೆ 1960ರಲ್ಲಿ ಶ್ರೀನಗರದ ಸೈಟಿನಲ್ಲಿ ಮಂದಿರ ಕಟ್ಟಿಸುವ ಪ್ರಯತ್ನ ಪ್ರಾರಂಭವಾಗಿ ಎಲ್ಲ ಕಡೆಯಿಂದಲೂ ಸಹಾಯ ಒದಗಿ ಛೀಫ್ ಇಂಜಿನೀಯರ್ ಶ್ರೀ ಚಿಕೋಡಿಯವರ ಸಲಹೆಗಳೊಡನೆ ಶ್ರೀ ಹುಚ್ಚೂರಾಯರ ನೇತೃತ್ವದಲ್ಲಿ ಭವ್ಯ ಮಂದಿರ ನಿರ್ಮಾಣವಾಯಿತು. ಇದಕ್ಕೆ ಮೊದಲು ಗೋಂದಾವಲಿಯಲ್ಲಿರುವಂತೆಯೇ ಕರಿ ಸಂಗಮವರೀ ಕಲ್ಲಿನ ಪಾದುಕವನ್ನು ಸಾಂಗ್ಲಿಯಬಳಿ ಯಮಕನಮರಡಿಯಲ್ಲಿ ತಯಾರಿಸಿ ತಂದು ಶಮೀರಪುರದ ಮಂದಿರದಲ್ಲಿಟ್ಟು ನಿತ್ಯ ಅಭಿಷೇಕ ಪೂಜಾ ಆರತಿ ನಡೆಸುತ್ತಿದ್ದರು. ನೂತನ ಮಂದಿರ ಪೂರ್ಣವಾದ ಮೇಲೆ ಮೇಲ್ಕಂಡ ಶಿಲಾಪಾದುಕವನ್ನು ವೈಭವದೊಡನೆ ಹಳೇ ಮಂದಿರದಿಂದ ತಂದು ಶಾಸ್ತ್ರ ವಿಧಿಗಳಿಗನುಸಾರವಾಗಿ 1972 ನೇ ಇಸವಿ ಮೇ ತಿಂಗಳು 2ನೇ ತಾರೀಖು ವೈಶಾಖ ಶುದ್ಧ ತ್ರಯೋದಶಿ ದಿನ ಬೊಂಬಾಯಿ ಮುಂತಾದ ಕಡೆಗಳಿಂದ ಸಹಸ್ರಾರು ಮಂದಿ ಭ್ಹಕ್ತಾದಿಗಳು ಬಂದು ಭಾಗವಹಿಸಿದರು. ಕಾರ್ಯಕ್ರಮಗಳು ಬಹಳ ವೈಭವದಿಂದಲೂ ಆನಂದದಿಂದಲೂ ನಡೆಯಿತು. ನಿತ್ಯ ಬೆಲಸರೆಯವರಿಂದ ಪ್ರವಚನವಿರುತ್ತಿತ್ತು. ಬೆಂಗಳೂರಿನ ಭಕ್ತರಿಗೆ ಬಹಳ ಪ್ರಶಾಂತ ವಾತಾವರಣವಿದ್ದು ಸಾಧಕರಿಗೆ ಸಾಧನೆ ಮಾಡಲು ಪ್ರಶಸ್ತವಾದ ಸ್ಥಳವಾಗಿದೆ. ಈ ಪಂಥ ಬೆಳೆಯಲು ಮುಖ್ಯ ಪಾತ್ರ ವಹಿಸಿರುವ ಮತ್ತೊಂದು ಗುಂಪು ಅಶ್ವತ್ಥಪುರದವರದು. 1909 ವರ್ಷ ಸೌಮ್ಯನಾಮ ಸಂವತ್ಸರದ ಚೈತ್ರ ಶುದ್ಧದಲ್ಲಿ ತುಂಗಾತಟದಲ್ಲಿರುವ ಬಿದರಹಳ್ಳಿಯಲ್ಲಿ ಶ್ರೀ ಬ್ರಹ್ಮಾನಂದ ಮಹಾರಾಜರು 13 ಕೋಟಿ ತಾರಕನಾಮ ಜಪದ ಸಾಂಗತಾ ಮಹೋತ್ಸವವನ್ನು ಅತಿ ವೈಭವದೊಡನೆ ಜರುಗಿಸಿದರು. ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಪ್ರತ್ಯಕ್ಷ ಭಾಗವಹಿಸಿದುದರಿಂದ 25-30 ಸಾವಿರ ಜನದವರೆಗೂ ಸೇರಿದ್ದರು. ಆ ಉತ್ಸವದ ಅಡಿಗೆಯ ವ್ಯವಸ್ಠೆಯನ್ನು ಅಶ್ವಥ್ಥಪುರದ ಶ್ರೀಯುತರಾದ ವಂಟಮಾರು ದೊಡ್ಡರಾಮಯ್ಯ, ಗುತ್ತಿ ಸಣ್ಣರಾಮಯ್ಯ, ಫಣಿಯಪ್ಪನವರೇ ಮುಂತಾದ ನೂರಿನ್ನೂರು ಜನರು ವಹಿಸಿಕೊಂಡು ಹಗಲು ರಾತ್ರಿಯೆನ್ನದೆ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಅಡಿಗೆಯವರ ಸಂಭಾವನೆಯೇ ಆರೂವರೆ ಸಾವಿರ ರೂಪಾಯಿಗಳವರೆಗೂ ಆಗಿತ್ತಂತೆ. ಮೊದಲು ಆ ಗುಂಪಿನವರು ಸಾಧಾರಣ ಸ್ಥಿತಿಯಲ್ಲಿದ್ದು ದೇಹ ಕಷ್ಟದಿಂದ ಜೀವಿಸುತ್ತಿದ್ದರು. ಬಿದರಹಳ್ಳಿಯಲ್ಲಿ ಕೊಟ್ಟ ಹಣವನ್ನು ಅಶ್ವತ್ಥಪುರದವರು ಸ್ವೀಕರಿಸದೆ, ’ನಾವೂ ರಾಮ ಸೇವೆಯಲ್ಲಿ ನಿರತರಾಗಬೇಕು. ನಮ್ಮ ಊರಲ್ಲಿ ಒಂದು ದೇವಸ್ಥಾನವಾಗಿ ನಾವೆಲ್ಲಾ ಜಪ, ಉಪಾಸನಾ ಮುಂತಾದುವುಗಳನ್ನು ಮಾಡಿಕೊಂಡಿರುವಂತೆ ಆಶೀರ್ವದಿಸಿ’ ಎಂದು ಶ್ರೀ ಬ್ರಹ್ಮಾನಂದ ಮಹಾರಾಜರನ್ನು ಬೇಡಿಕೊಂಡರು. ಆಗ ಶ್ರೀ ಬ್ರಹ್ಮಾನಂದರು ’ಹೋಗಿರೋ, ಮಹಾರಾಜರ ಪಾದಕ್ಕೆ ಬಿದ್ದು ಬೇಡಿಕೂಳ್ಳಿ, ಹಟ ಹಿಡಿದು ಕೇಳಿಕೊಳ್ಳಿರಿ ನಿಮ್ಮ ಕೆಲಸವಾಗುತ್ತದೆ’. ಎನ್ನಲು ಅದರಂತೆ ಸಮಯ ಸಾಧಿಸಿ ಶ್ರೀ ಮಹಾರಾಜರ ಪಾದದಲ್ಲಿ ಅಷ್ಟು ಜನರೂ ಅಡ್ಡಬಿದ್ದು ಕೇಳಿಕೊಂಡರು. ಶ್ರೀ ಮಹಾರಾಜರು "ನಾನು ಬರುವ ಯೋಗವಿಲ್ಲ. ಬ್ರಹ್ಮಾನಂದ ಬುವಾ ಬಂದು ನಿಮ್ಮ ಕಾರ್ಯ ನೆರವೇರಿಸಿಕೊಡುತ್ತಾರೆ", ಎಂದು ಆಶೀರ್ವದಿಸಿದರು. ಅಶ್ವತ್ಥಪುರದವರು ಒಂದು ಸುಂದರ ಮಂದಿರವನ್ನು ಕಟ್ಟಿಸಿದರು. ಮುಂದೆ ಮಹಾರಾಜರು ದೇಹಬಿಟ್ಟಮೇಲೆ ಶ್ರೀ ಬ್ರಹ್ಮನಂದರೇ ಹೋಗೆ ಪ್ರತಿಷ್ಟಾ ಕಾರ್ಯಗಳನ್ನು 1914 ರಾಕ್ಷಸನಾಮ ಸಂವತ್ಸರ ನಿಜ ವೈಶಾಖ ಶುದ್ಧ ಪಂಚಮಿ ಶಂಕರ ಜಯಂತಿಯ ದಿವಸ ಶ್ರೀ ಸೀತಾ, ರಾಮ, ಲಕ್ಶ್ಮಣ, ಮಾರುತಿಯ ಸುಂದರ ವಿಗ್ರಹ ಗಳನ್ನ್ಲುತಮ್ಮ ಅಮೃತ ಹಸ್ತದಿಂದ ಪ್ರತಿಷ್ಟಾಪನೆ ಮಾಡಿದರು.ಆ ಸಮಯದಲ್ಲಿ ಶ್ರೀ ಬ್ರಹ್ಮಾನಂದ ಮಹಾರಾಜರು ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ "ಶ್ರೀ ರಾಮರ್ರಯನ ಪ್ರತಿಷ್ಠೆ ಮಾಡಿಸಿರುತ್ತೀರಿ. ನಿಜವಾಗಿ ನೀವುಗಳೆಲ್ಲಾ ಭಾಗ್ಯಶಾಲಿಗಳು. ಶ್ರೀ ಮಹಾರಾಜರ ಕೃಪಾ ನಿಮ್ಮಗಳ ಮೇಲೆ ಸಂಪೂರ್ಣ ಆಗಿದೆ. ಶ್ರೀರಾಮನ ಸೇವೆ ಮಾಡಿ ದೇಹ ಸಾರ್ಥಕತೆ ಮಾಡಿಕೊಳ್ಳಿ. ಇನ್ನು ಮುಂದೆ ನಿಮ್ಮ ದಾರಿದ್ರ್ಯಾದಿ ದುಃಖಗಳು ಸಂಪೂರ್ಣ ಹೋಗಿ ಆನಂದದಿಂದ ಇರುವಿರಿ. ರಾಮನಾಮ ಸ್ಮರಣ, ಸೇವಾತಪ್ಪಿಸಬೇಡಿ" ಎಂದರು.
ಶ್ರೀ ಬ್ರಹ್ಮಾನಂದರ ವಾಕ್ಯಸುಳ್ಳಾಗಲಿಲ್ಲ. ಈಗ ಆ ಗುಂಪಿನವರು ಶ್ರೀಮಂತರಾಗಿ ಕರ್ನಾಟಕವೇ ಅಲ್ಲದೇ ಭಾರತದ ಎಲ್ಲೆಡೆಯಲ್ಲಿಯೂ ಹರಡಿ ತಮ್ಮ ಜೀವನಾಧಾರವಾದ ಹೋಟೆಲು ಉದ್ಯಮ ಒಂದೇ ಅಲ್ಲದೆ ಡಾಕ್ಟರುಗಳೂ, ಲಾಯರುಗಳೂ, ಇಂಜಿನಿಯರ್ ಮುಂತಾದ ದೊಡ್ಡ ಹುದ್ದೆಗಳನ್ನೂ ಹೊಂದಿ, ಬಹಳ ಮುಂದುವರೆದಿರುತ್ತಾರೆ. ಇದೂ ಪಂಥ ವ್ಯಾಪಕವಾಗಿ ಬೆಳೆಯಲು ಬಹಳ ಸಹಾಯವಾಗಿದೆ. ಇವೇ ಅಲ್ಲದೆ ವಿದುರಾಶ್ವತ್ಥ, ಕಂಚಿಸಮುದ್ರ, ಕುದೂರು, ದಾವಣಗೆರೆ ಮುಂತಾದ ಸ್ಥಳಗಳಲ್ಲಿಯು ಮಂದಿರವಾಗಿ ಉಪಾಸನಾ ಕ್ರಮಗಳು ನಡೆಯುತ್ತಿವೆ. ಬೆಂಗಳೂರು ರಾಜಾಜಿನಗರದ ಕೆಲವು ಭ್ಕ್ತರು ಭಜನೆ, ಜಪ, ಆರಾಧನೆ ಮುಂತಾದ ಉತ್ಸವಗಳನ್ನ್ಯು ಬಹಳ ಶ್ರದ್ಧೆಯಿಂದ ನಡೆಸುತ್ತಿರುತ್ತಾರೆ.ನನಗೆ ಗೊತ್ತಿಲ್ಲದೇ ಇರುವುದು ಇನ್ನೂ ಎಷ್ಟೋ ವಿಷಯಗಳು ಪಂಥದ ಪ್ರಾಬಲ್ಯಕ್ಕೆ ಕಾರಣವಾಗಿರಬಹುದು
---ಎಸ್. ವೆಂಕಟರಾವ್