Tuesday, October 3, 2017

ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜ್

                                                                                ಶ್ರೀ ರಾಮಸಮರ್ಥ
                                        ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜ್
                                        
ಶ್ರೀ ಬ್ರಹ್ಮಾನಂದರ ಜೀವನ ಎಂದರೆ ಗುರುಗಳಿಗೆ ಶರಣಾಗತಿ. ಶರಣಾಗತಿಯಿಂದಲೇ ಅವರು ಭಗವತ್ಪ್ರಾಪ್ತಿಯನ್ನು ಪಡೆದರು.ಶ್ರೀ ಬ್ರಹ್ಮಚೈತನ್ಯ ಮಹಾರಾಜರು ತಾರಕನಾಮವನ್ನು ಅನೇಕರಿಗೆ ಉಪದೇಶಿಸಿದರು. ಆದರೆ ಅವರ ಉಪದೇಶವನ್ನು ಪೂರ್ಣಪ್ರಮಾಣದಲ್ಲಿ ಆಚರಿಸಿ ಮುಕ್ತಿಯನ್ನು ಪಡೆದವರು ಶ್ರೀ ಬ್ರಹ್ಮಾನಂದರಿಗೆ ಸಮನಾದವರು ಮತ್ತೊಬ್ಬರಿಲ್ಲ. ಗುರುವಿಗೆ ಸಮನಾದ ಸಂತನೆನೆಸಿಕೊಂಡರು. ಮಹಾತ್ಮರ ಜೀವನಚರಿತ್ರೆಯನ್ನು ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ.
ಕರ್ನಾಟಕದ ಗದಗ್ ಬಳಿ ಜಾಲಿಹಾಳ ಎಂಬ ಸಣ್ಣ ಗ್ರಾಮವೊಂದಿದೆ.ಅಲ್ಲಿ ಶ್ರೀ ಬಾಲಂಭಟ್ಟ ಗಾಡಗೋಳಿ ಮತ್ತು ಶ್ರೀಮತಿ ಜೀವೂಬಾಯಿ ರವರ .ಮೂರನೇ ಮಗನಾಗಿ 1859 ಫೆಬ್ರುವರಿ 27 ರಂದು ಒಂದು ಮಗುವಿನ ಜನನವಾಯಿತು. ಅದಕ್ಕೆ ಅನಂತ ಶಾಸ್ತ್ರಿ ಎಂದು ನಾಮಕರಣವಾಯಿತು.ಅಸಾಧಾರಣ ಬುದ್ಧಿಶಕ್ತಿ,ಜ್ಞಾಪಕಶಕ್ತಿಯಿದ್ದ ಬಾಲಕನು ಶೀಘ್ರವಾಗಿ ತನ್ನ ಉಪಾಧ್ಯಾಯರು ಹೇಳಿಕೊಟ್ಟ ಪಾಠಗಳನ್ನು ಕಲಿತು, ನಂತರ ಸ್ನೇಹಿತರ ಜೊತೆ ಆಟಗಳಲ್ಲಿ ಕಾಲ ಕಳೆಯುತ್ತಿದ್ದನು. ಬಾಲಕನ  ಅತಿ ತುಂಟತನವನ್ನು ನೋಡಿ ತಂದೆ ತಾಯಿಗಳಿಗೆ ಬಹಳ ಆತಂಕವಾಯಿತು.
ಒಂದು ದಿನ ಹತ್ತಿರದಲ್ಲೇ ಇದ್ದ ಪುಣ್ಯ ಕ್ಷೇತ್ರವಾದ ಬನಶಂಕರಿಗೆ ಅನಂತ ಮಿತ್ರರೊಡನೆ ಹೋಗಿದ್ದನು. ಅಲ್ಲಿ ಅಂದು ಜಾತ್ರೆ. ಉತ್ಸವ ಮುಗಿಸಿಕೊಂಡು ಹಿಂದಿರುಗುವ ಸಮಯ. ಒಂದು ಎತ್ತಿನಗಾಡಿ ಹೋಗುತ್ತಿತ್ತು. ಅದು ಯಾವಊರಿಗೆ ಹೋಗುವುದೆಂದು ಬಾಲಕರು ವಿಚಾರಿಸಿದರು. ಗಾಡಿಯವ ಜಾಲಿಹಾಳ ಎಂದನು. ಗಾಡಿ ಕಾಲಿಯಿತ್ತು. ಆದರೆ ಗಾಡಿಯವನು ಎತ್ತುಗಳು ಹೊಸದು ಆದ್ದರಿಂದ ಯಾರೂ ಹತ್ತಕೊಡದೆಂದು ಹೇಳುತ್ತಿದ್ದರೂ, ಎಲ್ಲ ಹುಡುಗರೂ ದಬದಬನೆ ಗಾಡಿಯನ್ನು ಹತ್ತಿಬಿಟ್ಟರು. ಇದನ್ನು ನೋಡಿ ಗಾಡಿಯವನಿಗೆ ಕೋಪ ಬಂತು. ಎತ್ತಿಗೆ ಮುಂದೆ ಹೋಗೆಂದು ಚಾಟಿಯಿಂದ ಜೋರಾಗಿ ಹೊಡೆದನು. ಎತ್ತು ಗಾಡಿಯನ್ನೆಳೆದುಕೊಂಡು ಜೋರಾಗಿ ಓಡತೊಡಗಿದವು. ರಸ್ತೆ ಬೇರೆ ಅಡ್ದಾದಿಡ್ಡಿ. ಗಾಡಿಯು ಬಹಳ ಅಲ್ಲಾಡಹತ್ತಿತು. ಗಾಡಿಯಲ್ಲಿ ಕೂತಿದ್ದ ಬಾಲಕರಿಗೆ ಭಯವಾಗಿ ಗಾಡಿಯನ್ನು ನಿಲ್ಲಿಸಲು ಕೇಳಿಕೊಂಡರು. ಆದರೆ ಗಾಡಿಯವನು ನಿಲ್ಲಿಸದೇ ಹಾಗೇ ಓಡಿಸುತ್ತಿದ್ದನು. ಬಾಲಕರಲ್ಲಿ ಹಿರಿಯವನು ಅನಂತ. ಕಿರಿಯರೆಲ್ಲರೂ ಹೆದರಿ ಕಿರುಚಿತ್ತಿದ್ದುದನ್ನು ನೋಡಿ ಗಾಡಿಯನ್ನು ಹೇಗಾದರೂ ನಿಲ್ಲಿಸಬೇಕೆಂದು ಮನಸ್ಸುಮಾಡಿ ತನ್ನ ಕಾಲನ್ನು ಗಾಡಿಯ ಚಕ್ರಕ್ಕೆ ಅಡ್ಡ ಹಿಡಿದನು. ತಕ್ಷಣ ಗಾಡಿ ನಿಂತಿತು. ಗಾಡಿಯವನು ಗಾಡಿಯು ನಿಂತ ಕಾರಣ ತಿಳಿಯಲು ಹಿಂದೆ ತಿರುಗಿ ನೋಡಿ ಗಾಬರಿಯಾದನು. ಅನಂತನ ಕಾಲಿಗೆ ಏನಾಗುವುದೋ ಎಂದು ಭಯಪಟ್ಟು ಬಾಲಕರನ್ನೆಲ್ಲಾ ಕೂಡಲೇ ಇಳಿಸಿಬಿಟ್ಟನು.
ಇಂತಹ ಹಲವಾರು ಘಟನೆಗಳಿಂದ ನೊಂದ ಶ್ರೀ ಬಾಳಂಭಟ್ಟರು, ಮಗನನ್ನು ಕೂರಿಸಿಕೊಂಡು, ಅನಂತ, ನೀನು ವಯಸ್ಸಿನಲ್ಲಿ ಪಾಠ ಕಲಿಯದೆ, ಸದಾ ಆಟ, ಸಂಗಡಿಗರೊಡನೆ ಜಗಳ, ಹೀಗೆ ಕಾಲ ಕಳೆದುಬಿಟ್ಟರೆ, ಏನು ಪ್ರಯೋಜನ. ಆಮೇಲೆ ನಿನ್ನ ಯಾರೂ ಮಾತನಾಡಿಸುವುದೂ ಇಲ್ಲ. ನಿನಗೆ ಊರಿನಲ್ಲಿ ಕಲಿಯಲು ಮನಸ್ಸಿಲ್ಲದಿದ್ದರೆ ಮೆಣಸಿಗಿಯಲ್ಲಿ ಶ್ರೀ ದೋಂಡಭಟ್ಟ ದಾದಾ ರವರಲ್ಲಿದ್ದು ವೇದಾಧ್ಯಯನ ಮಾಡು. ಎಂದು ಹಿತವಚನಗಳನ್ನು ಹೇಳಿದರು.
ತಂದೆ ತಾಯಿಗಳು ತನ್ನ ವಿಷಯದಲ್ಲಿ ಬಹಳ ನೊಂದಿರುವರೆಂದು ಅನಂತನ ಮನಸ್ಸಿಗೆ ನಾಟಿ, ಆತನು ಬಹಳ ಯೋಚಿಸುತ್ತಾ ತಾಯಿತಂದೆಯರಿಗೆ ನೋವು ನೀಡುವ ಮಗ ಏಕಿರಬೇಕೆಂದು ರಾತ್ರಿಯೆಲ್ಲಾ ಆಲೋಚಿಸಿ, ಪ್ರಾಣತ್ಯಾಗ ಮಾಡಬೇಕೆಂದು ತೀರ್ಮಾನಿಸಿ ಬೆಳಗಾಗುವ ಮೊದಲೇ ಮನೆಯಿಂದ ಹೊರಟುಬಿಟ್ಟನು. ಹತ್ತಿರದ ಬನಶಂಕರಿಗೆ ಹೋಗಿ   ಶ್ರೀ ಬನಶಂಕರಿ ದೇವಿಯ ಮುಂದೆ ನಿಂತು ರೀತಿ ಪ್ರಾರ್ಥಿಸಿದನು. ಅಮ್ಮಾ, ತಂದೆ ತಾಯಿಗಳಿಗೂ ಬೇಡವಾದ ನಾನು ಭೂಮಿಯಮೇಲೆ ಏಕಿರಬೇಕು. ವಂಶಕ್ಕೆ ಕಳಂಕ ತರುವವನು ಜೀವಿಸಿರುವುದು ಸರಿಯಲ್ಲ. ಎಂದು ಪ್ರಾರ್ಥಿಸುತ್ತಾ ಸಂಜೆಯವರೆಗೂ ದೇವಸ್ಥಾನದಬಳಿಯಲ್ಲೇ ಕಳೆದನು. ಅರ್ಚಕರು ಆಲಯದ ಬಾಗಿಲು ಹಾಕಿಕೊಂಡು ಹೊರಡುವ ವೇಳೆ ಹುಡುಗನನ್ನು ಜ್ಞಾಪಿಸಿಕೊಂಡು, ಅರಣ್ಯ ಪ್ರದೇಶದಲ್ಲಿ ರಾತ್ರಿ ಬಾಲಕನನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂದು ಆಲಯದ ಹಿಂದೆ ಯಾವುದೋ ಮೂಲೆಯಲ್ಲಿ ಕೂತಿದ್ದ ಅನಂತನನ್ನು ತಮ್ಮ ಜೊತೆ ಬರಲು ಕರೆದರು. ಜಾಗದಲ್ಲಿ ರಾತ್ರಿಹೊತ್ತು ದುಷ್ಟ ಮೃಗಗಳು ತಿರುಗುವುದರಿಂದ ಅಲ್ಲಿರುವುದು ಅಪಾಯವೆಂದು ಹೇಳಿದರೂ, ಅನಂತನು ಅವರಿಗೆ ತಾನು ರಾತ್ರಿಅಲ್ಲೇ ಇದ್ದು ದೇವಿಯನ್ನು ಧ್ಯಾನಿಸಬೇಕೆಂದಿರುವುದರಿಂದ, ಅವನಿಗೆ ಯಾವ ಮೃಗಗಳಿಂದಲೂ ಅಪಾಯವಿಲ್ಲವೆಂದು ಹೇಳಿ, ಅಲ್ಲೇ ಉಳಿದುಕೊಂಡನು. ಎಲ್ಲರೂ ಹೊರ್ಟು ಹೋದ ನಂತರ, ಬಾಗಿಲ ಮುಂದೆ ನಿಂತು ಬನಶಂಕರಿಗೆ ತನ್ನ ತೀರ್ಮಾನವನ್ನು ಅರಿಕೆ ಮಾಡಿಕೊಂಡು, ಹತ್ತಿರದಲ್ಲೇ ಇದ್ದ ಕೊಳದ ಬಳಿ ಹೋಗಿ ನೀರಿಗೆ ಹಾರಲು ಹೋದರೆ ಹಿಂದಿನಿಂದ ಯಾರೋ ಎಳೆದಂತಾಯಿತು. ಹಿಂದೆ ತಿರುಗಿ ನೋಡಿದರೆ, ಯಾರೂ ಇರಲಿಲ್ಲ. ಅದಕ್ಕೆ ಪುನಃ ಹಾರಲು ಉದ್ಯುಕ್ತನಾದನು. ಆದರೆ ಸಲ ಯಾವ ಅನುಮಾನವೂ ಇಲ್ಲದೆ ಯಾವುದೋ ಅಗೋಚರ ಶಕ್ತಿಯು, ಅನಂತನನ್ನು ದರದರನೆ ಎಳೆದು ತಂದು ದೇವಾಲಯದ ಮುಂದೆ ಹಾಕಿತು. ಆಯಾಸದಿಂದ ಹಾಗೆಯೇ ಮಲಗಿರಲು ಸ್ವಪ್ನದಲ್ಲಿ ಜಗನ್ಮಾತೆಯಾದ ಬನಶಂಕರಿ ದೇವಿಯು ಕಾಣಿಸಿಕೊಂಡು "ದೇಹ ತ್ಯಾಗ ಮಾಡಬೇಡ. ನಿನ್ನ ತಂದೆಯ ಇಚ್ಛೆಯಂತೆ ವಿದ್ಯಾಭ್ಯಾಸ ಮಾಡು. ಮುಂದೆ ನಿನ್ನಿಂದ ಅನೇಕ ಸತ್ಕಾರ್ಯಗಳಾಗಬೇಕಾಗಿದೆ" ಎಂದು ಹೇಳಿ ಅದೃಶ್ಯಳಾದಳು. ದೇವಿಯ ದಿವ್ಯ ವಾಣಿಯಿಂದ ಹರ್ಷಿತಗೊಂಡು, ಬೆಳಗಾದ ಮೇಲೆ ಸ್ನಾನ ಸಂಧ್ಯ ಮಾಡಿಕೊಂಡು, ಮತ್ತೆ ದೇವಿಯ ದರ್ಶನ ಪಡೆದು ಅಲ್ಲಿಂದು ಹೊರಟು, ತನ್ನ ತಂದೆಯವರು ಹೇಳಿದ್ದ ಮಣಸಿಗಿ ಗ್ರಾಮಕ್ಕೆ ಬಂದು ಶ್ರೀ ಧೋಂಡಭಟ್ಟ ದಾದಾ ಮೋದಕರೆಂಬ ವಿದ್ವಾಂಸರ ಬಳಿ ವೇದಾಧ್ಯಯನವನ್ನು ಪ್ರಾರಂಭಿಸಿದನು.ಅನಂತಶಾಸ್ತ್ರಿಗಳು ನಾಲ್ಕೈದು ವರ್ಷ ಗಳಲ್ಲಿ ವೇದಾಧ್ಯಯನ ಸಂಪನ್ನರಾಗಿ, ಶಾಸ್ತ್ರಗಳನ್ನು ಅಭ್ಯಾಸಮಾಡಬೇಕೆಂಬ ದೃಷ್ಠಿಯಿಂದ ಮುಳಗುಂದದಲ್ಲಿದ್ದ ವಿದ್ವಾಂಸರಾದ ಶ್ರೀ ಗುರುಮೂರ್ತಿಶಾಸ್ತ್ರಿಗಳ ಬಳಿ ಹೋದರು. ಅಲ್ಲಿ ಮೂರು ನಾಲ್ಕು ವರ್ಷಗಳ ಅಭ್ಯಾಸಮಾಡಿ ತರ್ಕ,ಮೀಮಾಂಸ ಪಾರಂಗತರಾದರು. ಮಧ್ಯೆ ಅವರ ತಂದೆ ದೈವಾದೀನರಾದರು. ಅವರ ಪಾಂಡಿತ್ಯವನ್ನು ಕಂಡು ಅಲ್ಲಿಯ ಜನರೆಲ್ಲಾ ಗೌರವದಿಂದ "ಅನಂತ ಶಾಸ್ತ್ರಿಗಳು" ಎಂದು ಕರೆಯಲಾರಂಭಿಸಿದರು. ಆದರೆ, ಪಾಂಡಿತ್ಯ ಹೆಚ್ಚಿದಂತೆ, ಅನಂತ ಶಾಸ್ತ್ರಿಗಳು ವೈರಾಗ್ಯ ಪ್ರಿಯರಾದರು. ಭಗವತ್ಪ್ರಾಪ್ತಿಯ ಬಯಕೆ ಹೆಚ್ಚಾಯಿತು. ಗದಗು, ಬೆಳದಢಿ, ಬೆಟಗೇರಿ ಮುಂತಾದ ಕಡೆ ಭಾಗವತವನ್ನು ಅತ್ಯಂತ ಭಕ್ತಿಯಿಂದ ಹೇಳುತ್ತಿದ್ದರು.
ಪೂಜ್ಯ ಜೀವೂ ಬಾಯಿಯವರು ಮಗನಿಗೆ ವಿವಾಹ ಮಾಡಬೇಕೆಂಬ ಉದ್ದಿಶ್ಯದಿಂದ ಕನ್ಯೆಯರನ್ನು ನೋಡಲು ಪ್ರಾರಂಭಿಸಿದರು. ವಿಷಯ ಅನಂತಶಾಸ್ತ್ರಿಗಳಿಗೆ ತಿಳಿದು ತನ್ನ ಮಿತ್ರರಲ್ಲಿ ತನಗೆ ಬಿಳಿ ಮಚ್ಚೆ (ತೊನ್ನು) ರೋಗ ಪ್ರಾರಂಭವಾಗಿದೆಯಂದೂ, ಅದಕ್ಕೆ ಲಗ್ನ ಮಾಡಿಕೊಳ್ಳುವುದಿಲ್ಲವೆಂದು ಹೇಳಿ, ರಾತ್ರಿ ಯಾರಿಗೂ ಹೇಳದೆ  ಅರಣ್ಯ ಪ್ರದೇಶದಲ್ಲಿದ್ದ ಉಧ್ಬವ ವೆಂಕಟಪತಿ ಗುಡಿಗೆ ಬಂದು ಅಲ್ಲಿ ಶ್ರೀನಿವಾಸನ ಸೇವೆ ಮಾಡಲಾರಂಭಿಸಿದರು. ಪ್ರಾತ:ಕಾಲದಲ್ಲಿ ದೇವರಿಗೆ ಅಭಿಷೇಕ ಪೂಜಾದಿಗಳನ್ನು  ಮಾಡಿ ಭಗವಂತನ ಧ್ಯಾನ ಮಾಡುತ್ತಾ ಕುಳಿತು ಮಧ್ಯಾಹ್ನದ ಹೊತ್ತಿಗೆ ಹತ್ತಿರದ ಸೊರಟೂರಿಗೆ ಹೋಗಿ ಭಿಕ್ಷಾನ್ನ ಮಾಡಿ ತಂದು ದೇವರಿಗೆ ನೈವೇದ್ಯ ಮಾಡಿ ಊಟಮಾಡುತ್ತಿದ್ದರು. ಮಿಕ್ಕಿದ ವೇಳೆಯಲ್ಲೆಲ್ಲಾ ಅನುಷ್ಥಾನ ಮಾಡುತ್ತಿದ್ದರು. ಕ್ರಮೇಣ ಅನುಷ್ಠಾನ ಮಾಡಲು ಸಮಯ ಸಾಲದೆಂದು, ಭಿಕ್ಷಾಟನೆಗೆ ಹೋಗುವುದನ್ನೂ ನಿಲ್ಲಿಸಿ, ಬೇವಿನ ರಸ, ಕರಕಿ ಸೊಪ್ಪಿನ ರಸ ಸೇವಿಸಲು ಪ್ರಾರಂಭಿಸಿದರು. ಹೀಗಾದರೂ ಭಗವತ್ಪ್ರಾಪ್ತಿಯಾಗಲಿಲ್ಲವೆಂಬ ದುಃಖದಿಂದ ಭಗವಂತನನ್ನು ಪ್ರಾರ್ಥಿಸುತ್ತಿರಲು, ಒಂದು ದಿನ ಸ್ವಪ್ನದಲ್ಲಿ ಸಾಕ್ಷಾತ್ ವೆಂಕಟೇಶ್ವರನು ಕಾಣಿಸಿಕೊಂಡು ನಿನ್ನ ಅತ್ಮೋದ್ಧಾರವಾಗಬೇಕಾದರೆ, ಸದ್ಗುರುಗಳನ್ನು ಆಶ್ರಯಿಸಬೇಕು." ಅಂತ ಹೇಳಿದನುಅನಂತಶಾಸ್ತ್ರಿಗಳು ಸಂತೋಷದಿಂದ ಸದ್ಗುರುವನ್ನು ಹುಡುಕಿಕೊಂಡು ಉತ್ತರದ ಕಡೆಗೆ ಪ್ರಯಾಣ ಬೆಳಸಿದರು. ದಾರಿಯಲ್ಲಿ ಪುಣೆಯಲ್ಲಿ ಅನೇಕ ಪಂಡಿತರನ್ನು ಸಂದರ್ಶಿಸಿದರು. ತಮ್ಮ ಪಾಂಡಿತ್ಯದಿಂದ ಅನೇಕ ಸನ್ಮಾನಗಳನ್ನು ಪಡೆದರು. ಆದರೆ ಅವರಿಗೆ ಸಮಾಧಾನ ಸಿಗಲಿಲ್ಲ. ಅವರಿಗೆ ಬಂದಿದ್ದ ವಸ್ತ್ರ, ಕಾಣಿಕೆಗಳನ್ನು ಬಡವರಿಗೆ ಹಂಚಿ, ಅಲ್ಲಿಂದ ಹೊರಟರು. ಮುಂದೆ ಕಾಶೀನಗರಕ್ಕೆ ಹೋಗಿ ಅಲ್ಲಿಯ ವಿದ್ವಾಂಸರನ್ನು ಭೇಟಿ ಮಾಡಿದರು.ಹೀಗೆ, ಹೋದ ಕಡೆಯಲ್ಲೆಲ್ಲಾ ಗೌರವ ಸನ್ಮಾನಗಳನ್ನು ಪಡೆದು,ಬಂದದ್ದನ್ನು ಬಡಬಗ್ಗರಿಗೆ ಹಂಚಿದರು. ಕೊನೆಗೆ ಇನ್ನು ಮುಂದೆ ಯಾವ ವಿದ್ವಾಂಸರೊಂದಿಗೆ ವಾದವಿವಾದ ಮಾಡಬಾರದೆಂದು ತೀರ್ಮಾನಿಸಿ, ಹಿಂದಿರುಗುತ್ತಾ ಇಂದೂರಿಗೆ ಬಂದರು. ಅಲ್ಲಿ ಸಂಜೆಯಾದ್ದರಿಂದ ಮಾರುತಿ ಮಂದಿರವೊಂದರಲ್ಲಿ ಉಳಿದುಕೊಂಡರು.ಮಾರುತಿಯ ದರ್ಶನ ಪಡೆಯಲು ಬಂದ ವರಲ್ಲಿ ಭಯ್ಯಾ ಸಾಹೇಬ್ ಮೋದಕ್ ಎಂಬ ಶ್ರೀಮಂತರೊಬ್ಬರು, ಅಲ್ಲಿದ್ದ ಅನಂತಶಾಸ್ತ್ರಿಗಳನ್ನು  ಮಾತನಾಡಿಸಿ ಅವರ ಜ್ಞಾನ, ವೈರಾಗ್ಯಗಳನ್ನು ಮೆಚ್ಚಿ ತಮ್ಮ ಮನೆಗೆ ಆಹ್ವಾನಿಸಿದರು. ಅದಕ್ಕೆ ಅನಂತಶಾಸ್ತ್ರಿಗಳು ಮೊದಲು, ಬರುವುದಿಲ್ಲವೆಂದು ಎಷ್ಟು ಹೇಳಿದರೂ ಕೊನೆಗೆ ಮೋದಕರವರ ಇಛ್ಛೆಯಂತೆ ಅವರ ಮನೆಗೆ ಹೋದರು. ಮೋದಕ್ ರವರು ಅವರ ಮನೆಯಲ್ಲಿ ಉಳಿಯಲಿಕ್ಕೆ ಜಾಗ ಕೊಟ್ಟು, ಫಲಹಾರ ನೀಡಿ, "ಹತ್ತಿರದಲ್ಲೇ ಸಂತರೊಬ್ಬರು ಬಂದಿರುವರು, ಅವರ ಆಶೀರ್ವಚನ ಕೇಳಲು ಹೋಗುತ್ತೇನೆ. ನೀವು ವಿಶ್ರಾಂತಿ ಪಡೆಯಿರಿ", ಎಂದು ಹೇಳಿ ಹೊರಟರು. ಮೋದಕ್ ರವರು ಹೊರಟಮೇಲೆ, ಅನಂತಶಾಸ್ತ್ರಿಯವರಿಗೆ ತಾವೂ ಸಂತರನ್ನು ನೋಡಲು ಹೋಗಬೇಕಿತ್ತು, ಎಂದೆನಿಸಿತು.
ಮಾರನೆಯ ಬೆಳಿಗ್ಗೆ, ಅವರು ತಮ್ಮ ಇಛ್ಛೆಯನ್ನು ಮೋದಕ್ ರವರಿಗೆ ಹೇಳಿ, ಅವರ ಜೊತೆ, ಗೋಂದಾವಳಿಯ ಸಂತ ಶ್ರೀ ಬ್ರಹ್ಮಚೈತನ್ಯ ಮಹಾರಾಜರನ್ನು ನೋಡಲು ಹೋದರು. ಒಂದು ದೊಡ್ಡ ಕೊಠಡಿಯಲ್ಲಿ ಕೇವಲಕೌಪೀನ ಧಾರಿಯಾಗಿ ಕುರ್ಚಿಯೊಂದರ ಮೇಲೆ ಶ್ರೀ ಬ್ರಹ್ಮಚೈತನ್ಯರು ಕುಳಿತಿದ್ದಾರೆ. ಬಹಳ ಜನ ಸೇರಿದ್ದ ಅಲ್ಲಿ, ಸ್ತ್ರೀಯರೇ ಬಹಳ ಜನರಿದ್ದಾರೆ. ಕೆಲವು ಸ್ತ್ರೀಯರು ಗುರುಗಳ ಕಾಲುಗಳನ್ನು ಒತ್ತುತ್ತಿದ್ದಾರೆ. ದೃಷ್ಯ ನೋಡಿ ಅನಂತ ಶಾಸ್ತ್ರಿಯವರಿಗೆ ಗುರುಗಳ ಮೇಲೆ ಭಕ್ತಿ ಬರದೆ, ನಮಸ್ಕಾರವೂ ಸಹ ಮಾಡದೆ, ಅಲ್ಲಿಂದ ಹೊರಟುಬಿಟ್ಟರು.
  ಪ್ರಯಾಣ ಮಾಡುತ್ತಾ, ಬೇರೆ ಬೇರೆ ಕ್ಷೇತ್ರಗಳನ್ನು ಸಂದರ್ಷಿಸುತ್ತಾನರಸಿಂಹವಾಡಿಗೆ ಬಂದರು. ನರಸಿಂಹವಾಡಿ ಶ್ರೀ ದತ್ತಾತ್ರೇಯರ ಕ್ಷೇತ್ರ. ಅಲ್ಲಿ ದತ್ತಾತ್ರೇಯರ ಸೇವೆ ಮಾಡುತ್ತಾ  ಎಷ್ಟೆಲ್ಲಾ ಪ್ರಯತ್ನಪಡುತ್ತಿದ್ದರೂ ತನಗೆ ಸದ್ಗುರು ದರ್ಶನ ಪ್ರಾಪ್ತಿಯಾಗಲಿಲ್ಲ ಎಂದು ಬಹಳ ನೋವಿನಿಂದ ಪ್ರಾರ್ಥಿಸಿದರು. ಅಂದು ರಾತ್ರಿ ಕನಸಿನಲ್ಲಿ ಶ್ರೀ ದತ್ತಾತ್ರೇಯರು ದರ್ಶನ ನೀಡಿ, "ನೀನು ಇಂದೂರಿನಲ್ಲಿ ನಿನ್ನ ಸದ್ಗುರುವಿನ ಬಳಿ ಹೋದರೂ, ನೀನು ಹಾಗೇ ಹಿಂದಿರುಗಿ ಬಂದುಬಿಟ್ಟೆಯಲ್ಲಾ.. ಅವರಲ್ಲಿಗೇ ಹೋಗು" ಎಂದು ಆದೇಶ ನೀಡಿದರು. ಇದನ್ನು ಕೇಳಿ ಶಾಸ್ತ್ರಿಗಳು ತಮ್ಮ ಅಚಾತುರ್ಯಕ್ಕೆ ಮನನೊಂದು, ತಕ್ಷಣ ಇಂದೂರಿಗೆ ಹೊರಟರು. ಇಂದೂರಿನಲ್ಲಿ ಮೊದಲು ಶ್ರೀ ಭಯ್ಯಾಸಾಹೇಬ್ ಮೋದಕ್ ಅವರಲ್ಲಿಗೆ ಹೋಗಿ ಶ್ರೀ ಬ್ರಹ್ಮಚೈತನ್ಯರು ಇದ್ದಾರೆಯೇ, ನಾನು ಅವರನ್ನು ಈಗಲೇ ನೋಡಬೇಕು ಎಂದು ಹೇಳಿದರು. ಅವರ ತವಕವನ್ನು ಗಮನಿಸಿದ ಭಯ್ಯಾಸಾಹೇಬ್ ರವರು ಶ್ರೀ ಮಹಾರಾಜರಲ್ಲಿಗೆ ಕರೆದುಕೊಂಡು ಹೋದರು. ಸಲ ಅನಂತಶಾಸ್ತ್ರಿಗಳು, ಸದ್ಗುರುವನ್ನು ನೋಡಿದ ತಕ್ಷಣ ದೀರ್ಘ ದಂಡ ಪ್ರಣಾಮ ಮಾಡಿ ಆನಂದ ಬಾಷ್ಪ ಸುರಿಸುತ್ತಾ ಕೈಮುಗಿದುಕೊಂಡು ಗುರುಗಳ ಪಾದಗಳ ಬಳಿ ಕುಳಿತರು. ಅವರ ದೀನ ಅವಸ್ಥೆಯನ್ನು ಕಂಡು ಕರುಣಾಳುವಾದ ಶ್ರೀ ಮಹಾರಾಜರು ಕರುಣೆಯಿಂದ ಅವರನ್ನು ಅಪ್ಪಿಕೊಂಡು ತಲೆಯಮೇಲೆ ಕೈ ಇಟ್ಟು , ಶಿಷ್ಯನನ್ನು ಸ್ವೀಕರಿಸಿದರುಮಾರನೆಯ ದಿನ  ಶಿಷ್ಯರೊಡಗೂಡಿ ಗೋಂದಾವಳಿಗೆ ಹೊರಟರು.

ಅನಂತಶಾಸ್ತ್ರಿಗಳ ಗುರುಗಳು ಯಾರು ಎಂದು ನಿಮಗೆ ಹೇಳಬೇಕಿಲ್ಲ. ಸಮ್ಮ ಸದ್ಗುರುಗಳೇ ಆದ ಶ್ರೀ ಬ್ರಹ್ಮಚೈತಸ್ಯ ಮಹಾರಾಜರು ಗೋಂದವಳಿಯಲ್ಲಿ ನೆಲೆಸಿ ಜನರನ್ನು ಸನ್ಮಾರ್ಗಕ್ಕೆಳೆಯುತ್ತಿದ್ದರು. ತಮ್ಮ ಹಿಂದಿನ ಜನ್ಮದಲ್ಲಿ ಲಗ್ನ ಮಂಟಪದಿಂದ ಓಡಿಹೋಗಿ ಸ್ವಯಂ ಶ್ರೀ ರಾಮಚಂದ್ರ ಪ್ರಭುವಿನಿಂದ ಅನುಗ್ರಹ ಪಡೆದು, ಶ್ರೀ ರಾಮನಾಮ ಪ್ರಸಾರದ ಜೊತೆಯಲ್ಲೇ ಶಿವಾಜಿಗೆ ಚೈತನ್ಯನೀಡಿ ಧರ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ ದೇಶೋದ್ದಾರಕ ಸಮರ್ಥ ರಾಮದಾಸರು. ಗೃಹಸ್ಥನಾಗಬೇಕೆಂಬ ಅವರ ತಾಯಿಯ ಕೊನೆಯ ಆಸೆಗೆ, ತಾವು ಮುಂದಿನ ಜನ್ಮದಲ್ಲಿ ಅವರ ಗರ್ಭದಲ್ಲೇ ಜನಿಸಿ ಗೃಹಸ್ಥನಾಗುವೆನೆಂದು ನೀಡಿದ್ದ ಆಶ್ವಾಸನೆಯಮೇರೆಗೆ ಗೋಂದಾವಳಿಯಲ್ಲಿ ಗೃಹಸ್ಥಾಶ್ರಮದಲ್ಲಿದ್ದು, ಅನೇಕ ಜನರನ್ನು ಉದ್ಧಾರ ಮಾಡುತ್ತಿದ್ದರು. ಅವರ ಮನೆಯೇ ಶ್ರೀರಾಮ ಮಂದಿರವಾಗಿತ್ತು. ಪ್ರತಿ ದಿನ ಸುಮಾರು ೨೦೦-೩೦೦ ಜನಕ್ಕೆ ಊಟೋಪಚಾರ ನೆಡುಯುತ್ತಿತ್ತುಕಸಾಯಿಖಾನೆಗೆ ಹೋಗುವಂತಹ ಗೋವುಗಳನ್ನು ಕೊಂಡುತಂದು ಅವುಗಳನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದರು.ಇವರ ಪ್ರೀತಿ, ಆರೈಕೆಯಿಂದ ಅಂತಹ ಗೋವುಗಳೂ ಸಹ ಕರುಗಳನ್ನು ನೀಡುತ್ತಿದ್ದವು.
ಅನಂತಶಾಸ್ತ್ರಿಗಳು ಗುರುವಿಗಾಗಿ ಹಂಬಲಿಸಿ ದೊರೆತ ಗುರುವಿನ ಸೇವೆಯಲ್ಲಿ ತಮ್ಮನ್ನು ಪೂರ್ಣ ತೊಡಗಿಸಿಕೊಂಡರು. ವೇದ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದ ಅನಂತಶಾಸ್ತ್ರಿಗಳು ರೀತಿ ಗುರು ಸೇವಾ ಕಾರ್ಯದಲ್ಲಿ ತಲ್ಲೀನರಾಗಿರುವುದು ಸಾಮಾನ್ಯ ಜನರಿಗೆ ಆಶ್ಚರ್ಯವಾಗದೇ ಇರದು..ಅನಂತಶಾಸ್ತ್ರಿಗಳು ಶ್ರೀ ಮಹಾರಾಜರು ಏಳುವುದಕ್ಕೆ ಮೊದಲೇ ಎದ್ದು ಗೋಶಾಲೆಯನ್ನು ಶುದ್ಧಮಾಡಿ ಹಸುಗಳಿಗೆ ಹುಲ್ಲು, ನೀರನ್ನು ಒದಗಿಸುತ್ತಿದ್ದರು. ಶ್ರೀ ಮಹಾರಾಜರ ದಿನ ನಿತ್ಯದ ಅಗತ್ಯಗಳನ್ನು ಪೂರೈಸಲು ಸದಾ ತಯಾರಾಗಿರುತ್ತಿದ್ದರು ಮತ್ತು ಶ್ರೀ ಮಹಾರಾಜರು ಉಪದೇಶಿಸಿದ ತಾರಕನಾಮವನ್ನು ಸದಾ ಜಪಿಸುತ್ತಿದ್ದರು. ಅನಂತಶಾಸ್ತ್ರಿಗಳು ರೀತಿ ಗುರುಸೇವೆಯಲ್ಲಿ ನಿರತರಾಗಿರುವುದನ್ನು ಕಂಡು ಇಂದೂರಿನ ಭಯ್ಯಾಸಾಹೇಬ್ ಮೋದಕ್ ರವರು , "ಶಾಸ್ತ್ರಿಗಳೇ, ಇಂದೂರಿನಲ್ಲಿ ಶ್ರೀ ಗುರುಗಳನ್ನು ಮೊದಲ ಸಲ ನೋಡಿದಾಗ ನಮಸ್ಕಾರವನ್ನೂ ಸಹ ಮಾಡದೇ ಹೊರಟುಬಿಟ್ಟಿದ್ದರಲ್ಲಾ", ಎಂದು ಕೇಳಲು, ಶಾಸ್ತ್ರಿಗಳು "ಮಾಝೇ ಸದ್ಗುರು ರಾವೋ ಮಾರುತಿ ಅವತಾರ, ಕೋಣೇಹೊ ಸಂದೇಹ ಧಾರೂನಯೇ|| ''' ಎಂದು ಗದ್ಗದ ಕಂಠದಿಂದ ಹೇಳಿದಾಗ ಭಯ್ಯಾ ಸಾಹೇಬ್ ಮೋದಕ್ ರವರು ಇವರು ಶ್ರೀ  ಮಹಾರಾಜರ ನಿಜ ಸ್ವರೂಪ ಕಂಡಿರುವಿರೆಂಬುದನ್ನು ಮನಗಂಡರು.
ಒಂದು ಸಲ ಮಾನಗಂಗಾನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ಶ್ರೀ ಮಹಾರಾಜರು ಕೂಗಿದ ದ್ವನಿ ಕೇಳಿ, ತಕ್ಷಣ ಹಾಗೇ ಒದ್ದೆ ಬಟ್ಟೆಯಲ್ಲೇ ಮಹಾರಾಜರ ಬಳಿಗೆ ಓಡಿದ್ದು ನೋಡಿದ ಜನ ಬೆರಗಾದರು.
ಮತ್ತೊಮ್ಮೆ, ಹಸುಗಳಿಗೆ ಹುಲ್ಲು ತೆಗೆಯಲು, ಮಾಳಿಗೆಮೇಲೆ ಹತ್ತಿದ್ದರು. ಮಹಾರಾಜರು ಇವರನ್ನು ಕೊಗಿದಕೂಡಲೆ, ಅನಂತಶಾಸ್ತ್ರಿಗಳು, ಮೇಲಿನಿಂದ ಹಾಗೇ ಜಿಗಿದು ಶ್ರೀ ಮಹಾರಾಜರ ಬಳಿ ಬಂದು ನಿಂತರು. ರೀತಿ ಗುರುಗಳ ಸೇವೆಯಲ್ಲಿ ಸದಾ ನಿರತರಾದ ಶಾಸ್ತ್ರಿಗಳಿಗೆ, ಒಂದು ದಿನ ಮಹಾರಾಜರು ತಾವು ಪಂಡರಾಪುರಕ್ಕೆ ಕುದುರೆಯ ಮೇಲೆ ಹೋಗುವುದಾಗಿ ತಿಳಿಸಿ, ಅವರನ್ನೂ ಬರಲು ಹೇಳಿದರು. ಕೂಡಲೆ, ಅನಂತಶಾಸ್ತ್ರಿಗಳು ಮಹಾರಾಜರಿಗೆ ಬೇಕಾದ ವಸ್ತುಗಳನ್ನು ಒಂದು ಗಂಟಿನಲ್ಲಿ ಕಟ್ಟಿ, ತಲೆಯಮೇಲೆ ಇಟ್ಟುಕೊಂಡು, ಕುದುರೆಯ ಹಿಂದೆ ಓಡತೊಡಗಿದರು. ಸುಮಾರು ೬೦-೭೦ ಕಿ.ಮೀ. ದೂರ. ಬರಿಗಾಲಿನಲ್ಲಿ ಮಹಾರಾಜರನ್ನು ಹಿಂಬಾಲಿಸಿದರು. ಶ್ರೀ ಮಹಾರಾಜರು ಪಂಡರಾಪುರದ ಶ್ರ್ಸೀ ರಾಮಮಂದಿರಕ್ಕೆ ಹೋಗಿ, ಕುದುರೆಯಿಂದ ಇಳಿದು ಮಂದಿರದ ಒಳಕ್ಕೆ ಹೋದರು. ಹಿಂಬಾಲಿಸಿ ಬಂದ ಅನಂತ ಶಾಸ್ತ್ರಿಗಳು ಕುದುರೆಯನ್ನು ಕಟ್ಟಿ, ಅದಕ್ಕೆ ನೀರು ಇಟ್ಟು ಹುಲ್ಲನ್ನು ಹಾಕಿದರು. ಅಷ್ಟರಲ್ಲಿ ಹೊರಕ್ಕೆ ಬಂದ ಶ್ರೀ ಮಹಾರಾಜರು ಶಾಸ್ತ್ರಿಗಳಿಗೆ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿ ಬರಲು ಹೇಳಿದರು. ಅದರಂತೆಯೇ ಶಾಸ್ತ್ರಿಗಳು ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿ ಆಹ್ನಿಕಗಳನ್ನು ತೀರಿಸಿಕೊಂಡು ಬರುವ ವೇಳೆಗೆ ಶ್ರೀ ಮಹಾರಾಜರು ಊಟಕ್ಕೆ ಕುಳಿತಿದ್ದರು. ಅನಂತಶಾಸ್ತ್ರಿಗಳನ್ನು ನೋಡಿದೊಡನೆಯೇ, "ಇವತ್ತು ನನ್ನಿಂದ ಒಂದು ಲೋಪವಾಗಿದೆ. ಯಾವಾಗಲೂ, ನಾನು ಪಂಡರಪುರ ವನ್ನು ಪ್ರದಕ್ಷಿಣೆ ಮಾಡಿಕೊಂಡು ಬಂದ ಮೇಲೆ ಊಟಕ್ಕೆ ಕೂಡುತ್ತಿದ್ದೆ. ದಿನ ಮರೆತು ಊಟಕ್ಕೆ ಕುಳಿತುಬಿಟ್ಟೆನು. ಆದರಿಂದ ನನ್ನ ಪರವಾಗಿ ನೀನು ಹೋಗಿ ಪಂಡರಾಪುರವನ್ನು ಒಂದು ಪ್ರದಕ್ಷಿಣೆ ಮಾಡಿಕೊಂಡು ಬಾ", ಎಂದು ಹೇಳಿದರು. ಅನಂತಶಾಸ್ತ್ರಿಗಳು, ಸುಮಾರು ೭೦ ಕಿ.ಮೀ. ದೂರ ಓಡಿಬಂದಾದ ದಣಿವನ್ನೂ ಲೆಕ್ಕಿಸದೆ, ಮರು ಮಾತಿಲ್ಲದೆ, ಪ್ರದಕ್ಷಿಣೆ ಮಾಡಲು ಹೊರಟು ಬಿಟ್ಟರು.. ಊರನ್ನು ಪ್ರದಕ್ಷಿಣೆ ಮಾಡಿ , ಹಿಂದಿರುಗಿದಾಗ, ಮಹಾರಾಜರು ಪ್ರೀತಿಯಿಂದ" ನಿನಗೆ ಬಹಳ ಆಯಾಸವಾಗಿರಬೇಕು,ಊಟಮಾಡು" ಎಂದು ಹೇಳಿ ಅವರ ತಲೆಯಮೇಲೆ ಕೈ ಇಟ್ಟರು. ದಿವ್ಯ ಹಸ್ತದಿಂದ ಅವರ ಮೈಮೇಲೆಲ್ಲಾ ಸವರಿದರು. ಕ್ಷಣವೇ, ಅನಂತಶಾಸ್ತ್ರಿಗಳಿಗೆ ಎಲ್ಲಾ ನೋವುಗಳೂ ಪರಿಹಾರವಾಗಿ ಹೊಸ ಚೈತನ್ಯ ಬಂದಂತಾಯಿತು.ಎರಡು ದಿನಗಳ ನಂತರ ಗೋಂದಾವಳಿಗೆ ಹಿಂತಿರುಗಿದರು.
ಶ್ರೀ ಮಹಾರಾಜರು ಅನಂತಶಾಸ್ತ್ರಿಗಳ ಗುರು ಸೇವೆಯನ್ನೂ, ಪೂರ್ಣ ವೈರಾಗ್ಯವನ್ನೂ, ಗಮನಿಸಿ ಈತನು ಸ್ವಾನಂದಾನುಭವವನ್ನು ಹೊಂದಿ ಶ್ರೀ ರಾಮ ಕಾರ್ಯವನ್ನು ಮಾಡಲು ಅರ್ಹನಿರುವನೆಂದು ಗಮನಿಸಿ ಇವರನ್ನು ನರ್ಮದಾ ನದೀ ತೀರದಲ್ಲಿರುವ ಓಂಕಾರೇಶ್ವರ ದೇವಸ್ಥಾನಕ್ಕೆ ಹೋಗಿ ಶ್ರೀ ರಾಮ ತಾರಕ ಮಂತ್ರದ ಅನುಷ್ಠಾನ ಮಾಡಬೇಕೆಂದು ಹೇಳಿ ಕಳುಹಿಸಿದರು.ಓಂಕಾರೇಶ್ವ್ರರ ದೇವಲಯವು, ಬಹಳ ಪುರಾತನವೂ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಅದು ಘೋರ ಅರಣ್ಯದಲ್ಲಿದ್ದು ಹತ್ತಿರದಲ್ಲಿಯೇ ನರ್ಮದಾ ನದಿಯು ಹರಿಯುತ್ತದೆ. ಗುರುವಾಕ್ಯವನ್ನು ಶಿರಸಾ ವಹಿಸಿದ ಆನಂತಶಾಸ್ತ್ರಿಗಳು ನಿರ್ಜನ ಪ್ರದೇಶದಲ್ಲಿದ್ದ ದೇವಾಲಯಕ್ಕೆ ಹೋಗಿ , ಆನಂದದಿಂದ ಶ್ರೀ ರಾಮನಾಮದ ಪುರಶ್ಚರಣೆಯನ್ನು ಪ್ರಾರಂಭಿಸಿದರುಪ್ರತಿದಿನವೂ, ಪ್ರಾತಃಕಾಲದಲ್ಲಿ ಎದ್ದು, ಭಕ್ತಿಭಾವದಿಂದ ಪರಮೇಶ್ವರನನ್ನು ಸ್ತೊತ್ರ ಮಾಡಿ ನಮಿಸಿ ಕುಳಿತುಕೊಂಡು, ಹೃದಯದಲ್ಲಿ ಸದ್ಗುರುವನ್ನು ಕೂರಿಸಿ, ಮಾನಸಪೂಜೆಯನ್ನು ಮಾಡುತ್ತಿದ್ದರು. ನಂತರ  ಸೂರ್ಯೋದಯಕ್ಕೆ ಮೊದಲೇ ನದಿಗೆ ಹೋಗಿ ಸ್ನಾನಾಹ್ನಿಕ ಗಳನ್ನು ತೀರಿಸಿಕೊಂಡು, ಶಿವಾಲಯಕ್ಕೆ ಬಂದು ಷೋಡಶೋಪಚಾರಗಳಿಂದ ಶಿವನನ್ನು ಪೂಜಿಸಿ, ತಾರಕಮಂತ್ರವನ್ನು ಸಂಜೆಯವರೆಗೂ ಜಪಿಸುತ್ತಾ ಕುಳಿತಿರುತ್ತಿದ್ದರು. ಸಂಜೆ, ಎದ್ದು ಗಿಡದಿಂದ ಉದುರಿದ ಎಲೆಗಳನ್ನು ತಿಂದು ನರ್ಮದೆಯ ನೀರನ್ನು ಕುಡಿಯುತ್ತಿದ್ದರು. ಅಲ್ಲಿ ಇನ್ಯಾರೂ ಇಲ್ಲದಿದ್ದರಿಂದ ಎಲೆಗಳೇ ಅವರ ಆಹಾರವಾಗಿದ್ದವು. ಹಗಲು ರಾತ್ರಿ ಶ್ರೀ ರಾಮಮಂತ್ರವನ್ನು ಬಿಡದೇ ಜಪಿಸುತ್ತಿದ್ದರು. ಒಂದು ದಿನ ರಾತ್ರಿ ಜಪ ಮಾಡುತ್ತಾ ಕುಳಿತಿದ್ದಾಗ ಒಂದು ದೊಡ್ಡ ಹುಲಿ ದೇವಾಲಯದ ಮುಂದೆ ನಿಂತು ಭಯಂಕರವಾಗಿ ಘರ್ಜಿಸಿತು. ನಂತರ ಗುಡಿಯೊಳಕ್ಕೆ ನುಗ್ಗಿತು. ರಾಮನಾಮ ಜಪದಲ್ಲಿ ಕುಳಿತಿದ್ದ ಅನಂತ ಶಾಸ್ತ್ರಿಗಳು ಕದಲಲಿಲ್ಲ. ಹುಲಿಯು ದೇವಾಲಯದೊಳಗೆ ಸುತ್ತಲೂ ಓಡಾಡಿ ಬಂದು ಇವರ ಬಳಿಯೇ ಕುಳಿತಿತು. ಕಣ್ತೆರೆದು ನೋಡಿದ ಶಾಸ್ತ್ರಿಗಳು ಭಯಂಕರ ಹುಲಿಯನ್ನು ನೋಡಿ, "ನಾನು ಹುಲಿಯ ಆಹಾರವಾದರೆ, ಶ್ರೀ ಗುರುವಾಜ್ಜೆಯನ್ನು ಪೂರ್ಣ ಮಾಡುವುದಕ್ಕಾಗುವುದಿಲ್ಲ" ಎಂದು ಮನಸ್ಸಿನಲ್ಲಿ ನೊಂದು, ನಂತರ, " ನನಗೇಕೆ ಇದರ ಚಿಂತೆ, ಎಲ್ಲೆಡೆಯೂ ವ್ಯಾಪಿಸಿರುವ ನನ್ನ ಸದ್ಗುರುವೇ ಘೋರಾರಣ್ಯದಲ್ಲಿ ನನ್ನ ಕಾಪಾಡಲು ವ್ಯಾಘ್ರರೂಪದಲ್ಲಿ ಬಂದಿರಬಹುದು" ಎಂದು ಚಿಂತಿಸಿ ಕಣ್ಣು ಮುಚ್ಚಿ ಜಪವನ್ನು ಮುಂದುವರೆಸಿದರು. ಸ್ವಲ್ಪ ಹೊತ್ತಿನ ಮೇಲೆ ಹುಲಿಯ ಅದಾಗದೆ ಹೊರಟುಹೋಯಿತು. ಹೀಗೆ ಹಲವಾರು ಬಾರಿ ಶ್ರೀ ಗುರುನಾಥನು ಪರೀಕ್ಷೆಮಾಡಿದರೂ, ಅವರು ತಮ್ಮ ಧೃಢನಿಶ್ಚಯವನ್ನು ಬಿಡಲಿಲ್ಲ. ತಮ್ಮ ಜಪಾನುಷ್ಟಾನವನ್ನು ತದೇಕಚಿತ್ತದಿಂದ ಮುಂದುವರೆಸಿದರು.ಹೀಗೆ ಸುಮಾರು - ತಿಂಗಳು ಕಳೆಯಲು ಒಂದು ದಿನ ಇವರು ಧ್ಯಾನದಲ್ಲಿ ಮಗ್ನರಾಗಿರುವಾಗ, ಅವರ ಮೈಮೇಲೆ ಹಲವಾರು ಸರ್ಪಗಳು ಓಡಾಡುತ್ತ ಬುಸ ಬುಸ ಶಬ್ದ ಮಾಡುತ್ತಾ ಅವರನ್ನು ಸುತ್ತಿ ಹಿಸುಕಲಾರಂಭಿಸಿದವು. ಶಾಸ್ತ್ರಿಗಳಾದರೋ, ನೋವಿನಿಂದ ಅತ್ಯಂತ ಬಾಧೆ ಪಡುತ್ತಿದ್ದರೂ, ಮನಸ್ಸಿನಲ್ಲಿ ಸದ್ಗುರು ಚರಣಗಳನ್ನು ಧ್ಯಾನಿಸುತ್ತಾ ಶ್ರೀ ರಾಮಜಪವನ್ನು ನಿಲ್ಲಿಸದೇ ಮಾಡಹತ್ತಿದರು. ಕ್ಷಣದಲ್ಲಿ  ಸದ್ಗುರು ಬ್ರಹ್ಮಚೈತನ್ಯರು ಶಿವಲಿಂಗದಿಂದಲೇ ಪ್ರಕಟವಾಗಿ, ರಾಮನಾಮವನ್ನು ಉಚ್ಚರಿಸುತ್ತಾ, ತಮ್ಮ ವರದಹಸ್ತವನ್ನು ಶಾಸ್ತ್ರಿಗಳ ತಲೆಯಮೇಲೆ ಇಟ್ಟರು. ಕೂಡಲೆ, ಹಿಂಸೆ ಕೊಡುತ್ತಿದ್ದ ಎಲ್ಲ ಸರ್ಪಗಳೂ ಮಾಯವಾದವು. ಕಣ್ಣುತೆರೆದು ನೋಡಿದರೆ, ತೇಜೋಮಯನಾದ ತಮ್ಮ ಸದ್ಗುರುನಾಥನೇ ಮುಂದೆ ನಿಂತಿದ್ದಾನೆ. ಆನಂದಾಶ್ಚರ್ಯದಿಂದ, ಬಹಳ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರಮಾಡಿ ಆನಂದಾಶ್ರುಗಳನ್ನು ಸುರಿಸುತ್ತಾ, ಗುರುಗಳ ಪಾದಗಳಮೇಲೆ ತಲೆಯಿಟ್ಟರು..ಶ್ರೀ ಮಹಾರಾಜರು ಕರುಣೆಯಿಂದ ಇವರನ್ನು ಮೇಲಕ್ಕೆಬ್ಬಿಸಿ ಗಟ್ಟಿಯಾಗಿ ಆಲಂಗಿಸಿದರು. ಸಮಯದಲ್ಲಿ ಶಾಸ್ತ್ರಿಗಳು, ಬಹಳ ದುರ್ಲಭವಾದ ಅನಿರ್ವಚನೀಯ ಬ್ರಹ್ಮಾನಂದದಲ್ಲಿ ತಲ್ಲೀನರಾಗಿ ಸಕಲ ವಿಶ್ವವನ್ನೇ ಶ್ರೀ ರಾಮಮಯವಾಗಿ ಕಂಡರು. ಸ್ವಲ್ಪ ಹೊತ್ತಿನ ಮೇಲೆ, ಶ್ರೀ ಗುರುಗಳು ಮತ್ತೆ ತಮ್ಮ ವರದ ಹಸ್ತವನ್ನು ಇವರ ತಲೆಯಮೇಲಿಟ್ಟು ವೃತ್ತಿಯಿಂದ ಮತ್ತೆ ಪ್ರಪಂಚದಕಡೆ ತಿರುಗಿಸಿ, ಮೃದು ವಚನದಿಂದ ಹೇಳಿದರು: " ಶಿಷ್ಯೋತ್ತಮನೇ,, ನಿನ್ನ ದೃಢನಿಶ್ಚಯ ಮತ್ತು ಉಗ್ರ ತಪಸ್ಸಿಗೆ ಮೆಚ್ಚಿ ನಿನ್ನ ಮೇಲೆ ಪೂರ್ಣಾನುಗ್ರಹ ಮಾಡಿರುವೆನು. ಇಂದು ನೀನು ಕೃತಾರ್ಥನಾದೆ. ನನ್ನ ದೃಢಾಲಿಂಗನದಿಂದ ಯಾವ ಬ್ರಹ್ಮಾನಂದ ಸುಖವನ್ನನುಭವಿಸಿದೆಯೋ ಅದೇ ಸುಖವನ್ನು ನಿರಂತರ ಅನುಭವಿಸುತ್ತಾ ಜಗದುದ್ಧಾರ ಕಾರ್ಯವನ್ನು ಮಾಡು. ಶ್ರೀ ರಾಮ ತಾರಕಮಂತ್ರವನ್ನು  ಉಪದೇಶಿಸುತ್ತಾ ಜನರನ್ನು ಭಕ್ತಿಮಾರ್ಗಕ್ಕೆ ಹಚ್ಚು.. ಇಂದಿನಿಂದ ನೀನು "ಬ್ರಹ್ಮಾನಂದ" ಎಂಬ ಹೆಸರಿನಿಂದ ಪ್ರಖ್ಯಾತನಾಗು, ಇನ್ನೆರಡುದಿನಗಳಲ್ಲಿ ಜಪವನ್ನು ಮುಗಿಸಿಕೊಂಡು ಇಂದೂರಿಗೆ ಹೊರಟು ಬಾ " ಎಂದು ಆಜ್ಞಾಪಿಸಿದರು. ಅವರ ಅಮೃತವಾಣಿಯನ್ನು ಕೇಳಿ ರೋಮಾಂಚನದಿಂದ, ಆನಂದಾಶ್ರುಗಳನ್ನು ಸುರಿಸುತ್ತಾ  ಗುರುಗಳನ್ನು ಸ್ತುತಿಸತೊಡಗಿದರು:
" ಬ್ರಹ್ಮೇಂದ್ರ ಮುಖ್ಯಾ ಮರ ದುರ್ಲಭಂ ಶ್ರೀ ರಾಮಸ್ಯ ನಾಮ ಪ್ರತಿಪಾದಯಂತಂ | ಭಕ್ತಾಯ ರಾಮಾರ್ಪಿತ ಚಿತ್ತ ವೃತ್ತಿಂ ಶ್ರೀ ಸದ್ಗುರುಂ ನಿತ್ಯಮಹಂ ನಮಾಮಿ || ...........
ಸ್ತೋತ್ರವನ್ನು ಹೇಳಿ ಮತ್ತೆ ಸಾಷ್ಟಾಂಗ ನಮಸ್ಕಾರ ಮಾಡಿ ಏಳುವ ಹೊತ್ತಿಗೆ, ಶ್ರೀ ಮಹಾರಾಜರು ಅದೃಶ್ಯರಾಗಿದ್ದರು.
ಆನಂದದಿಂದ ಶ್ರೀ ಬ್ರಹ್ಮಾನಂದರು ಶ್ರೀ ಮಹಾರಾಜರು ಅಪ್ಪಣೆ ಕೊಟ್ಟಂತೆ ತಮ್ಮ ಅನುಷ್ಟಾನವನ್ನು ಮುಗಿಸಿ ಇಂದೂರಿಗೆ ಹೊರಟರು.
ಆದರೆ, ಮಹಾರಾಜರು ಇಂದೂರಿನಲ್ಲಿರಲಿಲ್ಲ. ಇಂದೂರಿನ ಶ್ರೀ ಮಹಾರಾಜರ ಭಕ್ತರು ಇವರನ್ನು ಅತ್ಯಂತ ಆತ್ಮೀಯತೆಯಿಂದ ಸತ್ಕರಿಸಿ ಗೋಂದಾವಳಿಗೆ ಕಳುಹಿಸಿಕೊಟ್ಟರು.
ಶ್ರೀ ಬ್ರಹ್ಮಾನಂದರು ಗೋದಾವಳಿಗೆ ಬಂದು ಶ್ರೀ ಗುರುದೇವನ ದರ್ಶನ ಪಡೆದು ಪ್ರೇಮಾಶ್ರುಗಳನ್ನು ಸುರಿಸುತ್ತಾ ಭಾವಪೂರಿತರಾಗಿ ಸ್ತೊತ್ರಮಾಡಿದರು:
ಸಾಷ್ಟಾಂಗವಂದೂನಿ ಸದ್ಗುರುರಾಯಾಚಿ | ಚಿಂತಾವೆ ಮನಾಸಿ ಗುರುಮೂರ್ತಿ||
ಗುರುರಾವ ಮಾಝೆ ಬ್ರಹ್ಮ ಚಿ ಸಾಕಾರ | ಕೇಲಾ ಉಪಕಾರ ಧರೂನಿ ದೇಹ ||
- - - - - - - - - -
ಗುರುವಾಜ್ಞೆಯಂತೆ ಆತ್ಮಾನುಭವ ಹೊಂದಿ ಬ್ರಹ್ಮಾನಂದದಲ್ಲಿದ್ದರೂ, ಅಭಿಮಾನರಹಿತರಾಗಿ ಗುರುಸೇವೆಯನ್ನು ಕೈಗೊಂಡು ಮೊದಲಿಗಿಂತಲೂ ಹೆಚ್ಚು ಉತ್ಸಾಹದಿಂದ ಗುರುಸೇವೆಯಲ್ಲಿ ತತ್ಪರರಾದರು.ಸದ್ಗುರು ಮಹಾರಾಜರು ತಮ್ಮ ಶಿಷ್ಯರಾದ ಬ್ರಹ್ಮಾನಂದರಿಗೆ ಲೋಕಸಂಗ್ರಹದ ಸಂಪೂರ್ಣ ಶಿಕ್ಷಣವನ್ನು ಕೊಟ್ಟರು. ನಂತರ ಹೇಳಿದರು: "ಬ್ರಹ್ಮಾನಂದ, ಕಲಿ ಪ್ರಾಬಲ್ಯದಿಂದ ಅಧರ್ಮವು ಹೆಚ್ಚಾಗುತ್ತಿದೆ. ಸತ್ಯ, ನೀತಿ, ನ್ಯಾಯ ಕಡಿಮೆಯಾಗಿ ಭಕ್ತಿಮಾರ್ಗ ನಶಿಸುತ್ತಿದೆ. ಆದ್ದರಿಂದ ನೀನು ನಿನ್ನ ಜನ್ಮಭೂಮಿಯಾದ ಕರ್ನಾಟಕದ ನಿನ್ನ ಪ್ರಾಂತ್ಯಕ್ಕೆ ಹೋಗಿ ಅಲ್ಲಿನ ಜನರಲ್ಲಿ ಶ್ರೀ ರಾಮ ಭಕ್ತಿಯನ್ನು ಪ್ರಸಾರ ಮಾಡಿ ಶ್ರೀರಾಮ ನಾಮದ ಮಹಿಮೆಯನ್ನು ಎಲ್ಲರಿಗೂ ತಿಳಿಸು. ತಾರಕನಾಮವನ್ನು ಉಪದೇಶಿಸುತ್ತಾ, ಜನರಿಗೆ ಸನ್ಮಾರ್ಗವನ್ನು ತೋರಿಸು, ನೀನು ನಾಳೆಯ ದಿನವೇ ಪ್ರಯಾಣ ಮಾಡು ಎನ್ನುತ್ತಾ ತಮ್ಮ ಪಾದುಕೆಯನ್ನು, ತಾವು ಧರಿಸತಕ್ಕ ಒಂದು ಜರತಾರಿ ಕಫನಿಯನ್ನು, ತಮ್ಮ ಟೋಪಿಯನ್ನು ಮತ್ತು ಲಕ್ಷ್ಮೀ ಪ್ರಸಾದವೆಂದು ಒಂದು ನಾಣ್ಯವನ್ನೂ ಇವರಿಗೆ ಕೊಟ್ಟರು. ರೀತಿ ಗುರುವಿನ ಆಜ್ಞೆಯಿಂದ , ಆಗುವ ಗುರುವಿನಗಲಿಕೆಯನ್ನು ನೆನೆದು ಬಹಳ ದುಃಖಪಟ್ಟರು. ಸದ್ಗುರುವಿನ ಪ್ರಾಪ್ತಿಗಾಗಿ ಅನೇಕ ವರ್ಷಗಳಿಂದ ಹಂಬಲಿಸಿ ದೊರೆತ ಗುರುವಿನಿಂದ ಮತ್ತೆ ದೂರ ಹೋಗಬೇಕಲ್ಲಾ ಎಂದು ಪರಿತಪಿಸಿದರು. ಏಕಾಂತದಲ್ಲಿ ಕುಳಿತು ಸದ್ಗುರುವಿನ ಧ್ಯಾನ ಮಾಡಹತ್ತಿದರು.
ಸಂಜೆಯಾದರೂ ಬ್ರಹ್ಮಾನಂದರೂ ಯಾರಿಗೂ ಕಾಣಲಿಲ್ಲವೆಂದು ತಿಳಿದು, ಶ್ರೀ ಮಹಾರಾಜರು ತಾವೇ ಹುಡುಕಿಕೊಂಡು ಬ್ರಹ್ಮಾನಂದರಿದ್ದಲ್ಲಿಗೆ ಬಂದರು. ನಂತರ ಅವರಿಗೆ ಅನೇಕ ರೀತಿಯಲ್ಲಿ ಭೋಧನೆಮಾಡಿ, ಅವರಿಗೆ ಅಗತ್ಯವಿದ್ದಾಗ ತಾನು ಬರುವೆನೆಂದು ಆಶ್ವಾಸನೆ ನೀಡಿ, ಶ್ರೀ ಬ್ರಹ್ಮಾನಂದರನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟರು.
ಶ್ರೀ ಬ್ರಹ್ಮಾನಂದರು ಮೊದಲು ಅವರ ಜನ್ಮಸ್ಥಳವಾದ ಜಾಲಿಹಾಳಕ್ಕೆ ಬಂದರು. ಸಂಜೆಯಾಗಿತ್ತು. ತಮ್ಮ ಮನೆಯ ಹತ್ತಿರವೇ ಇರುವ ವಿಟ್ಠಲಮಂದಿರದಲ್ಲಿ ಉಳಿದುಕೊಂಡರು. ಸ್ನಾನ ಸಂಧ್ಯಾವಂದನೆಗಳನ್ನು ತೀರಿಸಿಕೊಂಡು ಶ್ರೀ ಮಹಾರಾಜರ ಚಿತ್ರವನ್ನೂ, ಪಾದುಕೆಗಳನ್ನೂ ಮುಂದಿಟ್ಟುಕೊಂಡು ಮಾನಸ ಪೂಜೆಯನ್ನು ಮಾಡಿ, ಭಜನೆ ಮಾಡಹತ್ತಿದರು. ಅವರ ಮಧುರ ಧ್ವನಿಯ ಭಜನೆಯನ್ನು ಕೇಳಿ ಸುತಮುತ್ತಲಿನ ಜನರೆಲ್ಲಾ ಬಂದು ಸೇರಿದರು. ಇವರ ಅಣ್ಣತಮ್ಮಂದಿರೂ ಸಹ ಬಂದಿದ್ದರು. ಆದರೆ ಯಾರೂ ಗುರುತು ಹಿಡಿಯಲ್ಲಿಲ್ಲ. ಮನೆ ಬಿಟ್ಟು ೧೨ ವರ್ಷಗಳಾಗಿದ್ದವು. ಉದ್ದನೆಯ ಗಡ್ಡ ಮೀಸೆ ಬಂದಿದೆ. ತಲೆಯಕೂದಲು ಉದ್ದಕ್ಕೆ ಇದ್ದು ಜಟೆ ಕಟ್ಟಿದೆ.ಕೌಪೀನಧಾರಿಯಾಗಿ ಒಂದು ತುಂಡು ಪಂಚೆ ಉಟ್ಟಿದ್ದಾರೆ. ಮಹರಾಜರು ಕೊಟ್ಟ ಟೋಪಿ, ಕಫನಿ, ಧರಿಸಿದ್ದಾರೆ.. ಮರಾಠಿ ಮತನಾಡುತ್ತಾರೆ. ಯಾರಿಗೂ ಗುರುತು ಸಿಗಲಿಲ್ಲ. ಭಜನೆ, ಆರತಿ ಮುಗಿಸಿ ನೆರೆದಿರುವವರನ್ನು ಊರಿನ ಬಗ್ಗೆ ವಿಚಾರಿಸಿಕೊಂಡರು. ಬಂದವರಲ್ಲಿ ಹಲವಾರು ಜನರು ಸಾಯಂಕಾಲದ ಫಲಹಾರಕ್ಕೆ ತಮ್ಮ ಮನೆಗೆ ಬರಬೇಕೆಂದು ಕರೆದರು. ಆದರೆ, ಅವರ ಅಣ್ಣಂದಿರು ಕರೆದಾಗ ಮಾತ್ರ ಒಪ್ಪಿ, ಅವರ ಜೊತೆಯಲ್ಲಿ ಮನೆಗೆ ಬಂದರು. ಅವರ ತಾಯಿ ಬಳಿ ಹೋಗಿ "ಮಾಯಿ", ಎಂದು ನಮಸ್ಕಾರ ಮಾಡಿದರು. ಯಾರೊ ಮಹಾರಾಷ್ತ್ರದ ಸಾಧು ಇರಬೇಕೆಂದು ಅವರಿಗೆ ಊಟ ಬಡಿಸಲು ಸೊಸೆಗಳಿಗೆ ಹೇಳಿದರು. ಆಗ, ಸಾಧುವು ತಾಯೀ, ನೀವೆ ಬಡಿಸಿ, ಎಂದು ಹೇಳಿ ತಾಯಿ ಬಡಿಸಿದ್ದನ್ನು ಊಟಮಾಡಿ, ಮತ್ತೊಮ್ಮೆ ತಾಯಿಗೆ ನಮಸ್ಕಾರ ಮಾಡಿ ವಿಟ್ಠಲಮಂದಿರಕ್ಕೆ ಹೊರಟುಬಿಟ್ಟರು. ಯಾರಿಗೂ ಅವರ ಗುರುತು ಸಿಗಲಿಲ್ಲ, ಅವರೊ ಅವರ ಪರಿಚಯ ಯಾರಿಗೂ ಹೇಳಲಿಲ್ಲ.
ಮಾರನೆಯ ದಿನ, ಸೂರ್ಯೋದಯಕ್ಕೆ ಮೊದಲೇ ಹೊರಟು, ಬನಶಂಕರಿಗೆ ಹೋಗಿ, ನಂತರ ವೆಂಕಟಾಪುರಕ್ಕೆ ಹೋದರು. ವೆಂಕಟಾಪುರದಲ್ಲಿರುವಾಗ ಹತ್ತಿರದ ಬೆಳದಢಿಯವರು ಬಂದು ನೋಡಿ ಇವರನ್ನು ಗುರುತಿಸಿ, ಬೆಳದಢಿಯಲ್ಲೇ ಇರಲು ಕರೆದರು. ಅವರಿಗೆಲ್ಲ ಭಾಗವತ ಹೇಳುತ್ತಿದ್ದ ಅನಂತಶಾಸ್ತ್ರಿಗಳ ಪರಿಚಯವಿತ್ತು. ಆದರೆ ಶ್ರೀ ಬ್ರಹ್ಮಾನಂದರು ತಕ್ಷಣ ಹೋಗಲಿಲ್ಲ. ದಿನ ಶ್ರೀ ಮಹಾರಾಜರು ಕನಸಿನಲ್ಲಿ ಕಾಣಿಸಿಕೊಂಡು ಬೆಳದಢಿಗೆ ಹೋಗುವಂತೆ ಹೇಳಿದರು. ಅದರಂತೆ ಮಾರನೆಯದಿನ ಆವರು ಬೆಳದಢಿಗೆ ಹೋದರು. ಊರಿನ ಜನರು ಸಂತೋಷದಿಂದ ಅವರಿಗೆ ಇಳಿದುಕೊಳ್ಳಲು ಜಾಗ ಕೊಟ್ಟರು.
ಅವರ ದಿನಚರಿ ಹೀಗಿತ್ತು. ಪ್ರಾತಃಕಾಲ ಎದ್ದು ಆಹ್ನಿಕಗಳನ್ನು ಮುಗಿಸಿ, ಎಲ್ಲೋ ಏಕಾಂತ ಪ್ರದೇಶದಲ್ಲಿ ಸಂಜೆಯವರೆಗೂ ಜಪಾನುಷ್ಟಾನ ಮಾಡುವುದು. ಸಂಜೆ ಹಿಂದಿರುಗಿ - ಮನೆಗಳಲ್ಲಿ ಭಿಕ್ಷಾನ್ನ ತಂದು ಶ್ರೀ ಮಹಾರಾಜರಿಗೆ ನೈವೇದ್ಯ ಮಾಡಿ ನಂತರ ತಾವು ತಿನ್ನುತ್ತಿದ್ದರು. ನಂತರ ಸಂಧ್ಯಾದಿ ಕರ್ಮಗಳನ್ನು ಮುಗಿಸಿಕೊಂಡು, ಶ್ರೀ ಮಹಾರಾಜರ ಭಾವ ಚಿತ್ರ, ಪಾದುಕೆಗಳನ್ನು ಮುಂದಿಟ್ಟುಕೊಂಡು ಸುಶ್ರಾವ್ಯವಾಗಿ ಭಜನೆ ಮಾಡುತ್ತಿದ್ದರು. ಕೆಲವು ಗಂಟೆ ಭಜನೆ ಮಾಡಿ , ಆರತಿ ಮಾಡುತ್ತಿದ್ದರು. ನಂತರ ರಾಮ ರಾಮ ಎನ್ನುತ್ತಾ ಮಧ್ಯ ರಾತ್ರಿಯವರೆಗೆ ಕೂಡುತ್ತಿದ್ದರು. ಸಮಯದಲ್ಲಿ ಯಾರೊಡನೆಯೂ ಮಾತನಾಡುತ್ತಿರಲಿಲ್ಲ, ಮೌನವಾಗಿರುತ್ತಿದ್ದರು.ಇವರ ತೇಜಸ್ಸು, ಇವರ ನಡೆವಳಿಕೆ ನೋಡಿ ಅಲ್ಲಿನ ಭಾವುಕ ಜನರು ಇವರನ್ನು ಭಕ್ತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದರು. ಇವರು ಮಾಡುತ್ತಿದ್ದ ಭಜನೆಗೆ ತಪ್ಪದೇ ಬರುತ್ತಿದ್ದರು. ಇವರು ಮಾಡುತ್ತಿದ್ದ ಭಜನೆಗಳಿಂದ ಗೋಂದಾವಲೇಕರ್ ಮಹಾರಾಜರೆಂಬ ಒಬ್ಬರು ಸತ್ಪುರುಷರಿದ್ದಾರೆ. ಇವರು ಅವರ ಶಿಷ್ಯರು ಎಂದು ಅರ್ಥವಾಯಿತು. ಅಲ್ಲಿಯ ಜನರಿಗೆ ಇವರ ಮೇಲೆ ಭಕ್ತಿಭಾವ ಹುಟ್ಟಿ ಇವರನ್ನು "ಗುರುಗಳು" ಎಂದು ಕರೆಯಲಾರಂಭಿಸಿದರು.
ಶ್ರೀ ಬ್ರಹ್ಮಾನಂದರು ಪ್ರಾತಃಕಾಲ ಅನುಷ್ಟಾನಕ್ಕೆಂದು ಏಕಾಂತ ಸ್ಥಳಕ್ಕೆ ಹೋದವರು, ಒಂದೆರಡು ದಿನ ಹಿಂತಿರುಗುತ್ತಲೇ ಇರಲಿಲ್ಲ. ಧ್ಯಾನದಲ್ಲೇ ಕುಳಿತು ಬಿಡುತ್ತಿದ್ದರು. ಸಮಯದಲ್ಲಿ ಅವರು ಉನ್ಮನಿ ಅವಸ್ಥೆಯಲ್ಲಿದ್ದರು ಎಂದು ತಿಳಿದವರು ಹೇಳುವರು. ಅವರು ಹೀಗೆ ದಿನಗಟ್ಟಲೆ ಉಪವಾಸವಿರುವುದನ್ನು ನೋಡಿ, ಊರಿನ ಭಾವಿಕ ಜನರು ಇವರನ್ನು ಹುಡುಕಿ ಕರೆದುಕೊಂಡು ಬಂದು ಸ್ನಾನಮಾಡಿಸಿ ಊಟಕ್ಕೆ ಕೂಡಿಸುತ್ತಿದ್ದರು. ಅವರಲ್ಲಿ ರಂಗರಾವ್ ಇನಾಂದಾರ್ ರವರ ಪತ್ನಿ ಶ್ರೀಮತಿ ದ್ವಾರಕಾಬಾಯಿ ರವರು ವಿಶೇಷ ಭಕ್ತಿ, ವಿಶ್ವಾಸ ಉಳ್ಳವರಾಗಿ ಆದರದಿಂದ ಅವರ ಸೇವೆ ಮಾಡುತ್ತಿದ್ದರುಶ್ರೀ ಬ್ರಹ್ಮಾನಂದರು ಇವರನ್ನು ಮಾತೃಭಾವದಿಂದ ಕಂಡು ಕಾಕೀ ಎಂದು ಕರೆಯುತ್ತಿದ್ದರು. ಇವರ ಮುಂದೆ ಮಾತ್ರ ಶ್ರೀ ಮಹಾರಾಜರ ಅಮಾನುಷ ಲೀಲೆಗಳನ್ನು ಹೇಳುತ್ತಿದ್ದರು.
ಹೀಗೆ ಉನ್ಮನಿ ಸ್ಥಿತಿಯಲ್ಲಿ ಸುಮಾರು ಆರುತಿಂಗಳು ಇದ್ದರುಕೆಲವು ಕಾಲ ಗದುಗಿನ ಭೀಷ್ಮ ಕೆರೆಯ ಹತ್ತಿರವಿದ್ದ ತೋಟದಲ್ಲಿರುತ್ತಿದ್ದರು. ಸಮಯದಲ್ಲಿ ಗೋಂದಾವಲಿ ಕಡೆಯ ಮಹಾರಾಜರ ಶಿಷ್ಯರೊಬ್ಬರು ಗೋಕರ್ಣ ಕ್ಷೇತ್ರಕ್ಕೆ ಹೊರಟಿದ್ದು, ಅಕಸ್ಮಾತ್ ಗದುಗಿಗೆ ಬಂದರು. ಅಲ್ಲಿಯೇ ತೋಟದಲ್ಲಿ ಬ್ರಹ್ಮಾನಂದರಿರುವರೆಂದು ತಿಳಿದು ಅವರ ದರ್ಶನಕ್ಕೆ ಬಂದು, ಗೋಕರ್ಣಕ್ಕೆ ಹೋಗುತ್ತಿರುವುದಾಗಿ ತಿಳಿಸಿದರು. ಆಗ ಗುರುಗಳು ಮುಗುಳ್ನಕ್ಕು  "ಜೇಥೆ ದಿಸೇ ಸದ್ಗುರು ಚರಣ ತೇಚೀ ಆಮ್ಹಾ ಗೋಕರ್ಣ ತೇಚೀ ಆಮ್ಹಾ ಗೋಕರ್ಣ|| ಗೋಕರ್ಣಾಚೇ ಮಹೇಶ್ವರ ಸದ್ಗುರುನಾಥ ಖರೋಖರ ||..
....ಎಂಬ ಅಭಂಗವನ್ನು ನುಡಿದರು.
ಮುಂದೆ ಕೆಲವು ದಿನಗಳ ನಂತರ ಬೆಳದಢಿಯಲ್ಲಿ ಶ್ರೀ ರಾಮಮಂದಿರ ಸ್ಥಾಪಿಸಬೇಕೆಂದು ಶ್ರೀ ಇನಾಮದಾರ್ ರವರಿಗೆ ಹೇಳಲುಅವರು ತಮ್ಮ ಮನೆಯ ಹತ್ತಿರವೇ ರಾಮ ಮಂದಿರ ಕಟ್ಟಲಿಕ್ಕೆ ಸ್ಥಳಕೊಟ್ಟು ಇನ್ನೂ ಹೆಚ್ಚಿನ ಅನುಕೂಲತೆಯನ್ನು ಒದಗಿಸಿಕೊಡುವುದಾಗಿ ಹೇಳಿದರು. ಗುರುಗಳು ಆನಂದದಿಂದ ತಾವೇ ತಲೆಯಮೇಲೆ ಕಲ್ಲುಗಳನ್ನು ಹೊತ್ತಿ ತರಲಾರಂಭಿಸಿದರುಆದರೆ ಕಾರ್ಯ ಪ್ರಾರಂಭಿಸುವ ಮೊದಲು ಶ್ರೀ ಮಹಾರಾಜರನ್ನು  ಕರೆತರಬೇಕೆಂಬ ಇಚ್ಚೆಯಿಂದ ಮತ್ತೆ ಮೌನಧಾರಿಗಳಾಗಿ ಊರ ಹತ್ತಿರುವಿರುವ ತೋಟದಲ್ಲಿದ್ದ ಒಂದು ಸಣ್ಣ ಗುಡಿಯಲ್ಲಿ ಕುಳಿತು ಹಗಲಿರುಳೂ ಅನುಷ್ಟಾನ ಮಾಡಲಾರಂಭಿಸಿದರುಅನುಷ್ಠಾನ ಪ್ರಾರಂಭಿಸಿದ ೧೦ನೇ ದಿನವೇ, ಶ್ರೀ ಸಮರ್ಥ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರು ಅಕಸ್ಮಾತಾಗಿ ತಮ್ಮ ಶಿಷ್ಯರೊಡನೆ ಬಂದು ಊರಮುಂದಿರುವ ಮಾರುತಿ ಗುಡಿಯಲ್ಲಿ ಇಳಿದುಕೊಂಡರು. ಯಾರಿವರು ಎಂದು ಕುತೂಹಲದಿಂದ ನೋಡಲು ಬಂದ ಜನರೊಡನೆ "ಬ್ರಹ್ಮಾನಂದರು ಎಲ್ಲಿರುವರು?" ಎಂದು ಕೇಳಿದರು. ಆದರೆ ಊರಿನಜನರಿಗೆ ಬ್ರಹ್ಮಾನಂದರು ಯಾರು ಎಂದು ಗೊತ್ತಿರಲಿಲ್ಲ. ಆಗ ಶ್ರೀ ಮಹಾರಾಜರ ಶಿಷ್ಯರೊಬ್ಬರು, ಅನಂತಶಾಸ್ತ್ರಿಗಳು ಎಂದ ಕೂಡಲೆ ಅವರಿಗೆಲ್ಲ ಅರ್ಥವಾಯಿತು. ಆಗ ಮಹಾರಾಜರು ಗೋಂದವಲೇಕರ್ ಮಹಾರಾಜರು ಬಂದಿರುವಿರೆಂದು ತಿಳಿಸಲು ಹೇಳಿದರು. ತಕ್ಷಣವೇ ಕೆಲವರು ಓಡಿಹೋಗಿ ತೋಟಿದ ಗುಡಿಯಲ್ಲ್ಲಿದ್ದ ಬ್ರಹ್ಮಾನಂದರಿಗೆ ತಿಳಿಸಿದರು. ತಕ್ಷಣ, ಓಂದೇ ಉಸಿರಿಗೆ ತೋಟದ ಬೇಲಿಯನ್ನು ಹಾರಿಕೊಂಡು ಓಡಿಬಂದು ಮನ ಮೋಹಕ ಮೂರ್ತಿಯಾದ ಶ್ರೀ ಮಹಾರಾಜರ ಕಾಲಮೇಲೆ ತಲೆಯನ್ನಿಟ್ಟರು. ಶ್ರೀ ಮಹಾರಾಜರು "ಯಾಕೆ ಇಷ್ಟೊಂದು ಶ್ರಮ ವಹಿಸಿದೆ" ಎಂದು ಪ್ರೇಮದಿಂದ ಅಭಯ ಹಸ್ತವನ್ನು ತಲೆಯಮೇಲಿಟ್ಟರು. ಸಮಯದಲ್ಲಿ ಶ್ರೀ ಬ್ರಹ್ಮಾನಂದರಿಗಾದ ಆನಂದವು ವರ್ಣನಾತೀತ. ಸಾಷ್ಟಾಂಗ ನಮಸ್ಕಾರ ಮಾಡಿ, ಆನಂದ ಬಾಷ್ಪ ಸುರಿಸುತ್ತಾ, ಕೈ ಜೋಡಿಸಿ ನಿಂತರು. ಶ್ರೀ ಮಹಾರಾಜರ ಅಪ್ರತಿಮ ತೇಜಸ್ಸನ್ನೂ ಶ್ರೀ ಬ್ರಹ್ಮಾನದರು ಅವರಿಗೆ ತೋರಿಸುತ್ತಿದ್ದ  ಶಿಷ್ಯವಾತ್ಸಲ್ಯವನ್ನೂ ಕಂಡು ನೆರೆದ ಜನರಿಗೆ ಆಶ್ಚರ್ಯ ವಾಯಿತು. ಆಗ ಬ್ರಹ್ಮಾನಂದರು, ಇವರೇ ನಮ್ಮ ಗುರುಗಳಾದ ಬ್ರಹ್ಮಚೈತನ್ಯ ಮಹಾರಾಜರೆಂದು ತಿಳಿಸಲು, ನೆರೆದಿದ್ದವರೆಲ್ಲರೂ" ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜ್ ಕೀ ಜೈ" ಎಂದು ಜಯಘೋಷ ಮಾಡಿದರು. ನಂತರ ಶ್ರೀ ಇನಾಮ್ದಾರರು ಶ್ರೀ ಮಹಾರಾಜರನ್ನು ವೈಭವದಿಂದ ತಮ್ಮ ಮನೆಗೆ ಕರೆದುಕೊಂಡು ಹೋಗಿ ಆದರಾತಿಥ್ಯವನ್ನು ಮಾಡಹತ್ತಿದರು.
ಶ್ರೀ ರಾಮಕಾರ್ಯಕ್ಕೆ ವಿಘ್ನಗಳು ಬಂದಲ್ಲಿ ತಾನೇ ಸ್ವತಃ ಬಂದು ನಿವಾರಿಸುವೆನೆಂದು ಹೇಳಿದ್ದ ಶ್ರೀ ಮಹಾರಾಜರು ತಮ್ಮ ದಿವ್ಯ ದೃಷ್ಟಿಯಿಂದ ಅಲ್ಲಿಯ ಸಂಧರ್ಭವನ್ನು ತಿಳಿದು, ವಚನಕೊಟ್ಟಂತೆ ಆಗಮಿಸಿರುವಿರೆಂದು ಶ್ರೀ ಬ್ರಹ್ಮಾನಂದರು ಅಲ್ಲಿಯ ಜನರಿಗೆ ತಿಳಿಸಿದರು.
ಶ್ರೀ ಮಹಾರಾಜರು ಬೆಳಧಡಿಯಲ್ಲಿದ್ದಷ್ಟು ದಿನ ತಮ್ಮ ಬೊಧಾಮೃತವಾದ ತಮ್ಮ ಪ್ರವಚನ ನೀಡುತ್ತಿದ್ದರು. ಊರಿನ ಎಲ್ಲ ಗೃಹಸ್ಥರೂ, ಒಂದೊಂದು ದಿನ ಒಬ್ಬೊಬ್ಬರು ತಮ್ಮ ಮನೆಗೆ ಆಹ್ವಾನಿಸಿ ಮಹಾರಾಜರ ಜೊತೆ ಬಂದ ಎಲ್ಲರಿಗೂ ಊಟೋಪಚಾರ ಮಾಡುತ್ತಿದ್ದರು. ಊರಿನ ಒಬ್ಬರು ಮಾತ್ರ ಅಷ್ಟೇನೂ ಅನುಕೂಲವಿಲ್ಲದಿದ್ದರೊ ಶ್ರೀ ಮಹಾರಾಜರನ್ನು ತಮ್ಮ ಮನೆಗೆ ಕರೆಯಬೇಕೆಂಬ ಆಸೆಯನ್ನು ಶ್ರೀ ಬ್ರಹ್ಮಾನಂದರ ಮುಂದೆ ಆರಿಕೆ ಮಾಡಿದರು. ಆಗ, ಅವರು ನೀವು ಶ್ರೀ ಮಹಾರಾಜರನ್ನು ಅವರು ಊರಿಗೆ ಹೋಗುವ ದಿನ ಕರೆಯಿರಿ. ಆಗ ಬಹಳ ಜನ ಇರುವುದಿಲ್ಲ. ಕೇವಲ ೧೦-೧೨ ಜನರಿರುತ್ತಾರೆ. ಆವಾಗ ನಿಮಗೆ ಸುಲಭವಾಗುವುದು ಎಂದು ಹೇಳಿದರು. ಅದರಂತೆ ಗೃಹಸ್ಥರು ಶ್ರೀ ಮಹಾರಾಜರನ್ನು ಊರಿಗೆ ಹೊರಡುವ ದಿನಕ್ಕೆ ತಮ್ಮ ಮನೆಗೆ ಆಹ್ವಾನಿಸಿದರು. ಕೊನೆಯ ದಿನ, ಅವರ ಮನೆಯ ಮುಂದೆ ಎಂದಿನಂತೆ ಶ್ರೀ ಮಹಾರಾಜರ ಪ್ರವಚನ. ಅವತ್ತು ನೋಡಿದರೆ ಎಂದಿಗಿಂತ ಜಾಸ್ತಿ ಜನ ಇರುವರು. ಅಡಿಗೆ ತಯಾರಾದಮೇಲೆ, ಗೃಹಸ್ಥರು ಶ್ರೀ ಮಹಾರಾಜರಲ್ಲಿ ಬಂದು ಅಡಿಗೆ ತಯಾರಾಗಿರುವ ವಿಷಯ ತಿಳಿಸಿದರು.. ಆಗ ಶ್ರೀ ಮಹಾರಾಜರು ದಿನ ಕೊನೆಯ ದಿನವಾದದ್ದರಿಂದ ಅಲ್ಲಿ ನೆರೆದಿರುವವರೆಲ್ಲಾ ಅವರೊಂದಿಗೇ ಊಟಮಾಡಬೇಕೆಂದು ಹೇಳಿದರು. ಮಾತನ್ನು ಕೇಳಿದ ಗೃಹಸ್ಥರಿಗೆ ಜಂಘಾ ಬಲವೇ ಉಡುಗಿಹೋಯಿತು. ಅವರು ಶ್ರೀ ಬ್ರಹ್ಮಾನಂದರಿಗೆ ಹೇಳಿದರು- "ಸ್ವಾಮಿ, ನಾನು ಕೇವಲ ೧೨ ಜನಗಳಿಗೆ ಮಾತ್ರ ಅಡಿಗೆ ಮಾಡಿಸಿರುವೆನು" ಎಂದು ನಡುಗುತ್ತಾ ಹೇಳಿದರು ಆಗ ಶ್ರೀ ಬ್ರಹ್ಮಾನಂದರು, ಯೊಚಿಸಬೇಡಿ, ಸಾಕ್ಷಾತ್ ಸಮರ್ಥರೇ ಇಲ್ಲಿರುವಾಗ ಯಾವುದಕ್ಕೂ ಕೊರತೆಯಾಗುವುದಿಲ್ಲ ಎಂದು ಧೈರ್ಯ ಹೇಳಿದರು.
ಶ್ರೀ ಮಹಾರಾಜರು ಪ್ರವಚನ ಮುಗಿಸಿ ಅಡುಗೆ ಮನೆಗೆ ಹೋಗಿ ಒಂದು ಸಲ ಅಡುಗೆಯಮೇಲೆ ದೃಷ್ಟಿಹಾಯಿಸಿ ನೋಡಿ ಸ್ನಾನಕ್ಕೆ ಹೋದರು.. ತಮ್ಮ ಆಹ್ನಿಕಗಳನ್ನು ತೀರಿಸಿ ಮಾಡಿರುವ ಆಡುಗೆಯನ್ನು ನೈವೇದ್ಯ ಮಾಡಿ, ಎಲ್ಲರಿಗೂ ಬಡಿಸಲು ಹೇಳಿದರು. ಶ್ರೀ ಬ್ರಹ್ಮಾನಂದರೂ ಬಡಿಸಲು ನಿಂತರು. ಸುಮಾರು ೩೦೦ ಜನಕ್ಕೆ ಯಥೇಚ್ಚವಾಗಿ ಊಟಕ್ಕೆ ಬಡಿಸಿದರು. ನಂತರ ನೋಡಿದರೆ ೧೦-೧೨ ಜನಕ್ಕಾಗುವಷ್ಟು ಆಹಾರ ಇನ್ನೂ ಉಳಿದಿದೆ. ಇಂತಹ ಚಮತ್ಕಾರಗಳನ್ನು ನೋಡಿಯೇ ಶ್ರೀ ಬ್ರಹ್ಮಾನಂದರು "ಒಂದು ಪಾವಿನ ಅನ್ನವ ಸಾವಿರ ಮಂದಿಗುಣಿಸಿದವನೇ" ಎಂದು ಹಾಡಿದರು.
ಶ್ರೀ ಮಹಾರಾಜರು ಬೆಳದಢಿಯಲ್ಲಿರುವಾಗ ಶ್ರೀ ಬ್ರಹ್ಮಾನಂದರ ತಾಯಿ ಗದುಗಿನಲ್ಲಿದ್ದಾರೆಂದು ತಿಳಿದು ಅವರಿಗಾಗಿ ಎತ್ತಿನ ಗಾಡಿಯನ್ನು ಕಳುಹಿಸಿ ಅವರನ್ನು ಕರೆಸಿದರು. ಅವರನ್ನು ಕೂರಿಸಿ ಒಂದು ಸೀರೆ ಕೊಟ್ಟು ಸನ್ಮಾನಿಸಿ ದೀರ್ಘ ದಂಡ ನಮಸ್ಕಾರ ಮಾಡಿದರು. ಅವರು ಹೇಳಿದರು: ಬ್ರಹ್ಮಾನಂದರಂತಹ ಮಗನನ್ನು ಪ್ರಪಂಚಕ್ಕೆ ನೀಡಿರುವ ನೀವು ಧನ್ಯರು. ನಿಮ್ಮ ಉಪಕಾರವು ಅಪರಿಮಿತವಾದದ್ದು. ಎಂದು ಹೇಳಿ ಕಳುಹಿಸಿಕೊಟ್ಟರಂತೆ.
ವಿಜಯ ನಾಮ ಸಂವತ್ಸರದ ಮಾಘ ಶುಕ್ಲ ಅಷ್ಟಮಿಯ ದಿನ ಶುಭ ಮುಹೂರ್ತದಲ್ಲಿ ಶ್ರೀ ರಾಮ ಮಂದಿರಕ್ಕೆ ಮಹಾರಾಜರು ತಮ್ಮ ಸ್ವಹಸ್ತದಿಂದ ಶಂಕುಸ್ಥಾಪನೆ ಮಾಡಿದರು. ಆಗ ಅವರು ಹೇಳಿದರು: " ಶ್ರೀ ರಾಮಚಂದ್ರನು ದಂಡಕಾರಣ್ಯದಿಂದ ಜಾನಕಿಯನ್ನು ಶೋಧಮಾಡುತ್ತಾ ಋಷ್ಯಮೂಕ ಪರ್ವತಕ್ಕೆ ಹೋಗುವ ಮುಂಚೆ ಇದೇ ಸ್ಥಳದಲ್ಲಿಯೇ ಒಂದು ದಿವಸವಿದ್ದು ಪ್ರಯಾಣ ಬೆಳಸಿದ್ದರು. ಪ್ರದೇಶವು ಭಗವಂತನ ಪಾದ ಸ್ಪರ್ಶದಿಂದ ಪವಿತ್ರವಾಗಿರುವುದರಿಂದಲೇ, ಇಲ್ಲಿ ರಾಮ ಸ್ಥಾಪನೆ ಮಾಡಲು ಹೇಳಿದ್ದೇನೆ". ಎಂದರು  ಅಲ್ಲಿದ್ದ ಜನರೆಲ್ಲಾ ಹರ್ಷದಿಂದ ಜೈಕಾರ ಮಾಡಿದರುಮಾರನೆಯ ದಿನವೇ ಶ್ರೀ ಮಹಾರಾಜರು ಅಲ್ಲಿಂದ ಹೊರಟರು. ಹೊರಡುವ ಮುಂಚೆ " ಧನ್ಯ ಬೆಳದಡಿ ಗ್ರಾಮ, ಘೋಶ ಹೋಯ ರಾಮನಾಮ|| ಎಂಬ ಅಭಂಗವನ್ನು ಹಾಡಿ " ಬ್ರಹ್ಮಾನಂದರ ಸ್ವಾರ್ಥ ತ್ಯಾಗವನ್ನೂ,ಅವರಲ್ಲಿದ್ದ ಅಗಾಧ ಜ್ಞಾನ ವೈರಾಗ್ಯಗಳನ್ನೂ ವಿಶದವಾಗಿ ತಿಳಿಸಿ,ನೀವೆಲ್ಲರೂ ಬ್ರಹ್ಮಾನಂದರು ಹೇಳಿದಂತೆ ನಡೆದುಕೊಂಡರೆ ನಿಮ್ಮ ಕಲ್ಯಾಣವಾಗುವುದರಲ್ಲಿ  ಸಂಶಯವಿಲ್ಲ . ಬೇಗ ಶ್ರೀ ರಾಮರಾಯನ ಪ್ರತಿಷ್ಟೆಗೆ ತಯಾರಿ ಮಾಡಿನಾನೇ ಬಂದು ಶ್ರೀ ರಾಮಮೂರ್ತಿಯ ಪ್ರತಿಷ್ಟಾಪನೆಯನ್ನು ಮಾಡುವೆನೆಂದು ಹೇಳಿ, ಅಲ್ಲಿಂದ ಹೊರಟರು.
ಗದುಗಿನಲ್ಲಿ ನ್ಯಾಯಾಧೀಶ ಸ್ಥಾನದಲ್ಲಿದ್ದ ಫ಼ಡಕೇ ಎಂಬ ಸದ್ಗೃಹಸ್ಥರಿದ್ದರು.. ಅವರು ಶ್ರೀ ಬ್ರಹ್ಮಾನಂದ ಗುರುಗಳಲ್ಲಿ ಭಕ್ತಿ ಶ್ರದ್ಧೆಯುಳ್ಳವರಾಗಿದ್ದರು. ಗುರುಗಳು ಗದುಗಿಗೆ ಬಂದಾಗ ಇವರ ಮನೆಯಲ್ಲಿ ಒಂದು ರಾತ್ರಿ ತಂಗಿ ಹೋಗುತ್ತಿದ್ದರುಗುರುಗಳು ಹೇಳುತ್ತಿದ್ದ್ದ ಭಜನೆ, ರಾಮನಾಮದ ಮಹಿಮೆ, ಇವುಗಳನ್ನು ಕೇಳುತ್ತಿದ್ದ ಫ಼ದಕೆ ರವರು, ಶ್ರೀ ಬ್ರಹ್ಮಾನಂದರನ್ನು ರಾಮ ಮಾಂತ್ರ ಉಪದೇಶಮಾಡಿರೆಂದು ಕೇಳಿಕೊಂಡರು. ಅದಕ್ಕೆ ಗುರುಗಳು ನೀನು ಗೋಂದಾವಳಿಗೆ ಹೋಗಿ ಶ್ರೀ ಮಹಾರಾಜರಲ್ಲಿ ಉಪದೇಶ ತೆಗೆದುಕೊಂಡು ಬಾ ಎಂದು ಹೇಳಿದರು. ಅದಕ್ಕೆ ಗೃಹಸ್ಥರು, ಗುರುಗಳೇ, ನೀವು ಶ್ರೀ ಮಹಾರಾಜರ ಅಗಾಧ ಮಹಿಮೆಗಳನ್ನು ಹೇಳುತ್ತಿರುತ್ತೀರಿ. ಅವರಲ್ಲಿ ಅಂತಹ ಶಕ್ತಿ ಇದ್ದರೆ ಅವರೇ ನಾನಿದ್ದಲ್ಲಿಗೇ ಬಂದು ಅನುಗ್ರಹ ಕೊಡಬೇಕು, ಎಂದರು. ಗುರುಗಳು ಮಂದಹಾಸದಿಂದ, ನೀನು ಮಹಾರಾಜರಲ್ಲಿ ಅಂತಹ ಭಕ್ತಿ ಮಾಡಿದರೆ, ನಿಶ್ಚಯವಾಗಿ ಅವರು ನಿನ್ನ ಮನೋರಥವನ್ನು ಈಡೇರಿಸುವರು. ನೀನು ಶ್ರೀ ಮಹಾರಾಜರ ಪಾದುಕೆಯನ್ನು ನಿತ್ಯವೂ ಪೂಜಿಸುತ್ತಾ, ಅಖಂಡವಾಗಿ ರಾಮ ರಾಮ ಎನ್ನುತ್ತಾ, ಪ್ರ್ರತಿ ಗುರುವಾರ ಉಪವಾಸ ಮಾಡು. ಶ್ರೀ ಮಹಾರಾಜರು ನಿನ್ನ ಮನೋರಥವನ್ನು ಈಡೇರಿಸುವರು, ಎಂದರು. ಫ಼ದಕೆಯವರು ಅಂದಿನಿಂದಲೇ ಅದೇ ರೀತಿ ನಡೆಯಲಾರಂಭಿಸಿದರು.
 ಹೀಗೆ ಒಂದೆರಡು ತಿಂಗಳು ಕಳೆದಿರಬಹುದು. ಒಂದು ಗುರುವಾರ ಅಕಸ್ಮಾತಾಗಿ ಶ್ರೀ ಬ್ರಹ್ಮಾನಂದರು ಫ಼ಡಕೆ ಯವರ ಮನೆಗೆ ಬಂದರು. ಮನೆಯವರೆಲ್ಲರೂ ಸಂತೋಷದಿಂದ ಅವರಿಗೆ ನಮಸ್ಕರಿಸಿ, ಮಧ್ಯಾಹ್ನದ ಊಟ ತಮ್ಮಲ್ಲಿಯೇ ಆಗಬೇಕೆಂದು ಪ್ರಾರ್ಥಿಸಿಕೊಂಡರು. ಆಗ ಶ್ರೀ ಬ್ರಹ್ಮಾನಂದರು ದಿನ ಗುರುವಾರವಾದ್ದರಿಂದ ನಾನು ಮಧ್ಯಾಹ್ನ ಊಟ ಮಾಡುವುದಿಲ್ಲಸಾಯಂಕಾಲ ಶ್ರೀ ಮಹಾರಾಜರಿಗೆ ಪೂಜೆ ಮಾಡಿ ನೈವೇದ್ಯ ತೋರಿಸಿ ಊಟಮಾಡುವೆನೆಂದು ಹೇಳಿದರು. ಅದನ್ನು ಕೇಳಿ ಮನೆಯವರೆಲ್ಲರೂ ತಾವೂ ಮಧ್ಯಾಹ್ನ್ದ ಊಟ ಬಿಟ್ಟು, ರಾತ್ರಿ ಶ್ರೀ ಗುರುಗಳ ಜೊತೆಯಲ್ಲಿ ಊಟಮಾಡಲು ನಿಶ್ಚಯಿಸಿದರು. ಶ್ರೀ ಬ್ರಹ್ಮಾನಂದರು ಹತ್ತಿರದ ಬೆಟಗೇರಿಗೆ ಹೋಗಿ ಸೂರ್ಯ ಮುಳುಗುತ್ತಿದ್ದಂತೆ, ಫ಼ಡ್ಕೆಯವರ ಮನೆಗೆ ಬಂದರು. ಬಂದವರೇ, ಫ಼ಡ್ಕೆಯವರಿಗೆ ಸ್ನಾನ ಮಾಡಲು ಹೇಳಿ , ತಾವು ಗುರು ಪೀಠವನ್ನು ಹಾಕಿ ಪೂಜೆಗೆ ತಯಾರುಮಾಡಿದರು. ನಂತರ ಫ಼ಡಕೆಯವರು ಮಡಿಉಟ್ಟಿಕೊಂಡು ಬಂದಮೇಲೆ ಮನೆಯವರೆಲ್ಲರನ್ನೂ ಕೂರಿಸಿಕೊಂಡು ಶ್ರೀರಾಮ ಶ್ರೀರಾಮ ಎಂದು ಗಟ್ಟಿಯಾಗಿ ನಾಮಸ್ಮರಣೆ ಮಾಡಲಾರಂಭಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ಪಾದುಕೆಗಳ ಶಬ್ದವಾಯಿತು. "ಜಯ ಜಯ ರಘುವೀರ ಸಮರ್ಥ" ಎಂದು ಮಧುರ ದ್ವನಿಯೊಂದು ಕೇಳಿಸಿತು.. ಗೃಹಸ್ಥರು ಅತ್ತ ನೋಡುವಷ್ಟರಲ್ಲಿ ಆಜಾನುಬಾಹುವಾದ ಬಹಳ ತೇಜಸ್ಸಿನಿಂದ ಕೂಡಿದ ಭವ್ಯ ಸುಂದರಮೂರ್ತಿಯು ಮನೆಯೊಳಗೆ ಬಂದರು. ಶ್ರೀ ಮಹಾರಾಜರ ದಿವ್ಯ ಸುಂದರ ಮೂರ್ತಿಯು ಕಣ್ಣಿಗೆ ಬಿದ್ದೊಡನೆ, ಗೃಹಸ್ಥರು ಹರ್ಷದಿಂದ ಶ್ರೀ ಮಹಾರಾಜರ ಚರಣಕಮಲಗಳಿಗೆ ನಮಸ್ಕರಿಸಿದರು. ಅದೇರೀತಿ ಶ್ರೀ ಬ್ರಹ್ಮಾನಂದರೂ, ಮತ್ತು ಮನೆಯವರೆಲ್ಲಾ ಸಾಷ್ಟಾಂಗ ನಮಸ್ಕಾರ ಹಾಕಿದರು.
ಶ್ರೀ ಮಹಾರಾಜರು ಅವರಿಗಾಗಿ ಹಾಕಿದ್ದ ಆಸನದಮೇಲೆ ಕುಳಿತರು. ಫ಼ಡಕೆಯವರು ಶ್ರೀ ಮಹಾರಾಜರ ಪಾದಗಳನ್ನು ತೊಳೆದು ಆರತಿ ಮಾಡಿ , ಪಾದ ತೀರ್ಥವನ್ನು ತೆಗೆದುಕೊಂಡರು. ಶ್ರೀ ಮಹಾರಾಜರು ಪ್ರೇಮದಿಂದ ಫ಼ದಕೆಯವರಿಗೆ ರಾಮತಾರಕಮಂತ್ರವನ್ನು ಉಪದೇಶಮಾಡಿದರು. ನಂತರ, ಎಲ್ಲರಿಗೂ ಭೋಜನವಾಯಿತು..ಶ್ರೀ ಬ್ರಹ್ಮಾನಂದರ ಸೂಚನೆಯ ಮೇರೆಗೆ ಒಂದು ಕೊಠಡಿಯಲ್ಲಿ ಶ್ರೀ ಮಹಾರಾಜರಿಗೆ ಮಲಗಲು ಏರ್ಪಾಡಾಯಿತು.ಶ್ರೀ ಬ್ರಹ್ಮಾನಂದರಿಗೆ ಪ್ರತ್ಯೇಕ ಕೊಠಡಿ ಕೊಡಲಾಯಿತು. ಫ಼ದಕೆಯವರು ಶ್ರೀ ಮಹಾರಾಜರಿಗೆ ನಿದ್ದೆ ಹತ್ತುವವರೆಗೂ ಕಾಲು ಒತ್ತುತ್ತಿದ್ದರು. ಮಾರನೆಯದಿನ ಸೂರ್ಯೋದಯಕ್ಕೆ ಮುಂಚೆಯೇ ಫ಼ದಕೆಯವರು ಶ್ರೀ ಮಹಾರಾಜರು ಎದ್ದು ಬರುವರೆಂದು ಕಾಯುತ್ತಿದ್ದರು. ಆದರೆ,ಸೂರ್ಯೋದಯವಾದರೂ ಎದ್ದು ಬರಲಿಲ್ಲವಾದ್ದರಿಂದ, ಕೋಣೆಗೆ ಹೋಗಿ ನೋಡಿದರೆ ಅಲ್ಲಿ ಮಹಾರಾಜರು ಇರಲಿಲ್ಲ. ಆಶ್ಚರ್ಯದಿಂದ ಶ್ರೀ ಬ್ರಹ್ಮಾನಂದರಿದ್ದ ಕೋಣೆಗೆ ಹೋದರೆ, ಅವರೂ ಅಲ್ಲಿರಲಿಲ್ಲ.
ಗುರುಗಳು ಎಲ್ಲಿಗಾದರೂ ಹೋಗಿರಬಹುದೆಂದು ಗದುಗಿನ ಇತರ ಭಕ್ತರ ಮನೆಗೆಲ್ಲಾ ಹೋಗಿ ನೋಡಿ ಬಂದರು.ಅಲ್ಲೆಲ್ಲ್ಲಿಗೂ ಅವರು ಹೋಗಿರಲಿಲ್ಲ..
ದುಃಖದಿಂದ ಗುರುಗಳ ದರ್ಶನವಾಗುವವರೆಗೂ ಆಹಾರ ಸ್ವೀಕರಿಸುವುದಿಲ್ಲವೆಂದು ಧೃಡ ನಿಶ್ಚಯಮಾಡಿ ಉಪವಾಸಮಾಡಲರಂಬಿಸಿದರು.. ಆದರೆ ಎರಡನೇ ದಿವಸವೇ ಮುಂಜಾನೆ ಶ್ರೀ ಬ್ರಹ್ಮಾನಂದರು ಬಂದು ದರ್ಶನವಿತ್ತು , ಅವರನ್ನು ಸಮಾಧಾನ ಮಾಡಿ, ಮಹಾ ಮಹಿಮಾವಂತರಾದ ಶ್ರೀ ಮಹಾರಾಜರಿಗೆ ನಿನ್ನಂತಹ ಭಕ್ತರ ಕೋರಿಕೆ ಈಡೇರಿಸುವುದು ಕಷ್ಟವಲ್ಲ. ಸದಾ ಶ್ರೀ ರಾಮನಾಮಜಪವನ್ನು ಮಾಡುತ್ತಿರಿ. ಶ್ರೀ ರಾಮನು ನಿಮಗೆ ಕಲ್ಯಾಣಮಾಡುವನು ಎಂದು ಹೇಳಿದರು.
ಶ್ರೀ ಬ್ರಹ್ಮಾನಂದರು ಒಂದು ಸಲ ಕುರ್ತಕೋಟಿ ಎಂಬ ಗ್ರಾಮಕ್ಕೆ ಹೋದಾಗ, ಅಲ್ಲಿನ ಯುವಕ ವಿದ್ವಾಂಸ ಲಿಂಗನಗೌಡರ ಪರಿಚಯವಾಯಿತು. ಲಿಂಗನಗೌಡರು ಶ್ರೀ ಬ್ರಹ್ಮಾನಂದರನ್ನು "ನೀವು ವೇದಪಾರಂಗತರೆಂದು ಕೇಳಿದ್ದೀನಿ, ಎಂದು ಹೇಳಿ ತರ್ಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು.ಆಗ ಗುರುಗಳು," ಶ್ರೀ ಮಹಾರಾಜರು ನನಗೆ ಅನುಗ್ರಹ ಮಾಡಿದಾಗಿನಿಂದ ನಾನು ನನ್ನ ನಾಲಿಗೆಯನ್ನು ರಾಮನಾಮಕ್ಕೆ ಮಾರಿಕೊಂಡುಬಿಟ್ಟಿದ್ದೀನಿ" ಎಂದರು. ಇವರ ನಡೆನುಡಿಗಳಿಂದ ಪ್ರಭಾವಿತರಾದ ಲಿಂಗನಗೌಡರು ಗುರುಗಳನ್ನು ತಾರಕ ಮಂತ್ರೆ ಅನುಗ್ರಹಿಸಬೇಕೆಂದು ಕೇಳಿಕೊಂಡರು. ಆಗ ಗುರುಗಳು ಶ್ರೀ ಮಹಾರಾಜರು ಇನ್ನೊಂದೆರಡು ತಿಂಗಳಿನಲ್ಲಿ ಪ್ರಾಂತ್ಯಕ್ಕೆ ಬರುವವರಿದ್ದಾರೆ. ಅವರಿಂದಲೇ ಅನುಗ್ರಹ ಪಡೆಯಿರಿ" ಎಂದರು. .ಅದರಂತೆ ಶ್ರೀ ಮಹಾರಾಜರು ಬೆಳಧಡಿಗೆ ಬಂದಾಗ ಅವರು ಅನುಗ್ರಹ ತೆಗೆದುಕೊಂಡರು. ಬೆಳದಡಿಯಲ್ಲಿರುವಾಗ ಪ್ರತಿ ದಿನ ಭಾಗವತ ಪ್ರವಚನ ಹೇಳುತ್ತಿದ್ದರು. ಅದನ್ನು ಕೇಳಿ ಶ್ರೀ ಮಹಾರಾಜರು ಅವರನ್ನು ಮಹಾಭಾಗವತ ಎಂದು ಕರೆದರು. ಮಹಾಭಾಗವತರು ಶ್ರೀ ಮಹಾರಾಜರಿಗೆ ಶರಣಾಗಿ ಹಲವಾರು ವರ್ಷ ಮಹಾರಾಜರ ಬಳಿ ಇದ್ದುಬಿಟ್ಟರು.
ಬೆಳದಢಿಯಲ್ಲಿ ರಾಮಮಂದಿರದ ಕಟ್ಟಡ ತಯಾರಾಗಿ ದಿವ್ಯ ಮೂರ್ತಿಗಳನ್ನೂ ತರಿಸಲಾಯಿತು. ಪ್ರತಿಷ್ಟಾಪನೆಗೆ ಶ್ರೀ ಮಹಾರಾಜರನ್ನು ಆಹ್ವಾನಿಸಲು ಬೆಳದಢಿಯ ಕೆಲವು ಭಕ್ತರನ್ನು ಗೋಂದಾವಳಿಗೆ ಕಳುಹಿಸಿದರುಶ್ರೀ ಮಹಾರಾಜರು ತಮ್ಮ ಶಿಷ್ಯರೊಂದಿಗೆ  ಬೆಳದಢಿಗೆ ಬಂದು ಶುಭ ಮಹೂರ್ತದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಶ್ರೀ ಸಮರ್ಥ ಸದ್ಗುರು ಮಹಾರಾಜರ ಅಮೃತಹಸ್ತದಿಂದ  ಶ್ರೀ ಸೀತಾ,ರಾಮ,ಲಕ್ಷ್ಮಣ, ಮಾರುತಿಯ ಮೂರ್ತಿಗಳ ಪ್ರತಿಷ್ಠಾಪನೆಯನ್ನು, ವಿದ್ವಾಂಸರ ವೇದಘೋಷ ಗಳೊಡನೆ ಬಹಳ ವಿಜೃಂಭಣೆಯಿಂದ ಜರುಗಿತು.
ಸಾವಿರಾರು ಪರಸ್ಥಳದ ಜನರು ಸೇರಿದ್ದರಿಂದ ಅವರಿಗೆಲ್ಲಾ ಉಳಿದುಕೊಳ್ಳಲು ವ್ಯವಸ್ಥೆ, ಯಾವ ತರಹದ ಕುಂದು ಕೊರತೆಯಾಗದಂತೆ ಸ್ನಾನಕ್ಕೆ ಬಿಸಿನೀರು, ಎಣ್ಣೆ,ಸೀಗೆಕಾಯಿ ಮೊದಲುಗೊಂಡು ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದರು. ಕೇವಲ ಕೌಪೀನಧಾರಿಗಳಾದ ಬ್ರಹ್ಮಾನಂದ ಗುರುಗಳು, ರೀತಿ ರಾಜಮಹಾರಾಜರಿಗೂ ಸಾಧ್ಯವಾಗದ ರೀತಿಯಲ್ಲಿ ಶ್ರೀ ರಾಮ ಪ್ರತಿಷ್ಠಾಪನೆಯ ಕಾರ್ಯವನ್ನು ನೆರವೇರಿಸಿದರು.
ಶ್ರೀ ಮಹಾರಾಜರು ಬೆಳದಢಿ ಗ್ರಾಮದಲ್ಲಿದ್ದ ಎಲ್ಲಾ ಗುಡಿಗಳನ್ನೂ ಜೀರ್ಣೋದ್ಧಾರ ಮಾಡಲು ಹೇಳಿದರು. ನಂತರ ಗೋಂದಾವಳಿಗೆ ಹಿಂದಿರುಗಿದರು.
ಶ್ರೀ ಬ್ರಹ್ಮಾನಂದ ಮಹಾರಾಜರು ಬೆಳದಡಿಯಲ್ಲಲ್ಲದೆ ಅನೇಕ ಸ್ಥಳಗಳಲ್ಲಿದ್ದ ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದರು. ಶ್ರೀ ರಾಮನಾಮದ ಸಪ್ತಾಹಗಳನ್ನು ಅನೇಕ ಕಡೆ ಮಾಡಿಸಿದರು. ಆದರೆ ಪ್ರತಿಸಲ ಮಹರಾಜರಿಗೆ ಪತ್ರ ಬರೆದು ಆಶೀರ್ವಾದ ಪಡೆದು ಪ್ರಾರಂಭಿಸುತ್ತಿದ್ದರು. ನಂತರ ಸಾಂಗತಾ ಯಜ್ಞಕ್ಕೆ ಮಹಾರಾಜರನ್ನು ಅಹ್ವಾನಿಸುತ್ತಿದ್ದರು. ಶ್ರೀ ಮಹಾರಾಜರು ಅನೇಕ ಕಡೆ ಬ್ರಹ್ಮಾನಂದರ ಅಹ್ವಾನದ ಮೇರೆಗೆ ಬಂದಿದ್ದರು.

ಶ್ರೀ ಮಹಾರಾಜರ ಇಚ್ಚೆಯಮೇರೆಗೆ ಅವರ ಜೊತೆಯಲ್ಲಿ, ಪಂಡರಾಪುರ, ವಾರಣಾಸಿ ಮುಂತಾದ ತೀರ್ಥಯಾತ್ರೆಗಳಿಗೆ ಹೋಗಿದ್ದರು.
ಹೀಗಿರಲು ಒಂದು ದಿನ ಗದುಗಿನಲ್ಲಿದ್ದವರು ಮುಂಜಾನೆ ತಮ್ಮ ಕೇಶಮುಂಡನ ಮಾಡಿಸಿಕೊಂಡವರು ಒಂದು ಘಂಟೆ ಧ್ಯಾನಕ್ಕೆ ಕುಳಿತಿದ್ದರು. ನಂತರ ಏಕೋ ಖಿನ್ನರಾಗಿ ಮೌನದಿಂದ ಇದ್ದರು. ಸ್ವಲ್ಪ ಹೊತ್ತಾದಮೇಲೆ  ಬೆಳದಡಿಗೆ ಹೋಗುವೆನೆಂದು ಹೇಳಿ ನಡೆದುಕೊಂಡು ಹೊರಟರು. ಅವರು ಹೊರಟಮೇಲೆ ಗದುಗಿಗೆ  ಗೋಂದಾವಳಿಯಿಂದ ಶ್ರೀ ಮಹಾರಾಜರು ದೇಹ ಬಿಟ್ಟ ವಾರ್ತೆ ತಂತಿ ಮುಖಾಂತರ ತಿಳಿಯಿತು. ತಕ್ಷಣ, ಸಮಾಚಾರವನ್ನು ಒಬ್ಬ ಯುವ ಭಕ್ತ ನಾಗಪ್ಪನವರ ಕೈಲಿ ಕಳುಹಿಸಿದರು. ನಾಗಪ್ಪನವರು ಓಡುತ್ತಾ  ಹೋಗಿ ದಾರಿಯಲ್ಲಿದ್ದ ಶ್ರೀ ಬ್ರಹ್ಮಾನಂದರ ಬಳಿಗೆ ಹೋದರು. ಸಮಾಚಾರ ತಿಳಿದ ಕೂಡಲೇ  ಶ್ರೀ ಬ್ರಹ್ಮಾನಂದರು " ಮಾತೋಡೋ ರಾಮ ಹೋಗಿಬಿಟ್ಟನಲ್ಲೋ, ಎರಡು ರೂಪಾಯಿ ಟಿಕೆಟ್ ಕೊಂಡರೆ ಯಾವಾಗ ಬೇಕಾಗಿದ್ದರೂ ನೋಡಬಹುದಾಗಿತ್ತಲ್ಲೋ" ಎಂದು ಅಳುತ್ತಾ, ಬಹಳ ದುಃಖದಿಂದ ಕೂತುಬಿಟ್ಟರು. ನಂತರ ಮೂರು ದಿವಸ ಯಾರಿಗೂ ಕಾಣಲಿಲ್ಲ. ಎಲ್ಲೋ ಏಕಾಂತದಲ್ಲಿದ್ದುಬಿಟ್ಟರು. ಆಮೇಲೆ, ಬೆಳದಢಿಗೆ ಆಗಮಿಸಿ, ಶ್ರೀ ಮಹಾರಾಜರು ದೇಹ ಬಿಟ್ಟ ಐದನೇದಿನದಿಂದ ಹನ್ನೆರಡನೇ ದಿವಸದವರೆಗೂ ನಾಮ ಸಪ್ತಾಹ, ಕೀರ್ತನ,ಅನ್ನ ಸಂತರ್ಪಣೆಯನ್ನು ಮಾಡಿದರು.
ಇತ್ತ ಗೋಂದಾವಳಿಯಲ್ಲಿ ಮಹಾರಾಜರು ದೇಹ ಬಿಟ್ಟಮೇಲೆ, ಶ್ರೀ ಬ್ರಹ್ಮಾನಂದರಿಗೆ ತಂತಿ ಸಮಾಚಾರ ಕಳುಹಿಸಿ, ಅವರ ಬರುವಿಕೆಗಾಗಿ ಕಾದರು..ಆದರೆ ಎರಡನೆಯದಿನವೂ ಅವರು ಬರುವಂತೆ ಕಾಣಲಿಲ್ಲ.ಆದ್ದರಿಂದ ಎರಡನೆಯ ದಿನ ಮಧ್ಯಾಹ್ನದ ಮೇಲೆ, ಗೋಶಾಲೆಇದ್ದ ಜಾಗದಲ್ಲಿ ಶ್ರೀ ಮಹಾರಾಜರ ದೇಹಕ್ಕೆ ಅಗ್ನಿಸ್ಪರ್ಶ ಮಾಡಿದರು.
ಶ್ರೀ ಮಹಾರಾಜರು ದೇಹ ಬಿಡುವುದಕ್ಕೆಎರಡು ವರ್ಷಗಳ ಮುಂಚೆಯೇ ಒಂದು ಉಯಿಲನ್ನು ಬರೆದು, ತಮ್ಮ ಪಿತ್ರಾರ್ಜಿತ ಆಸ್ತಿಗಳನ್ನು ತಮ್ಮ ದಾಯಾದಿಗಳಿಗೆ ನೀಡಿ, ಸ್ವಯಾರ್ಜಿತ ಆಸ್ತಿಯನ್ನು " ಶ್ರೀ ರಾಮ ದೇವರ ಸಂಸ್ಥಾನ, ಗೋಂದಾವಳಿ" ಎಂಬ ಖಾಸಗಿ ಟ್ರಸ್ಟ್ ಮಾಡಿದ್ದರು. ಅದರಲ್ಲಿ ಬ್ರಹ್ಮಾನಂದರು ಮುಖ್ಯ ಪಂಚರು. ಅವರಿಗೆ ಸರ್ವಾಧಿಕಾರವನ್ನೂ ಕೊಟ್ಟಿದ್ದರು. ಶ್ರೀ ಬ್ರಹ್ಮಾನಂದರು ಗೋಂದಾವಳಿಗೆ ಹೋಗಿ ಅಲ್ಲಿನ ಎಲ್ಲ ವ್ಯವಹಾರಗಳನ್ನೂ ಸರಿಪಡಿಸಿದರು. ವರ್ಷ ಶ್ರೀ ರಾಮನವಮಿಯನ್ನು ಅಲ್ಲೇ ಆಚರಿಸಿದರು. ನಂತರ, "ತಾವು ದೂರ ಬೆಳಧಡಿಯಲ್ಲಿದ್ದು, ಇಲ್ಲಿನ ವ್ಯವಹಾರ  ಸರಿಯಾಗಿ ನೋಡಿಕೊಳ್ಳಲಾಗುವುದಿಲ್ಲ. ಆದ್ದರಿಂದ ನಾನು ರಾಜಿನಾಮೆನೀಡುವನೆಂದು ಹೇಳಿ, ಪಂಡರಪುರದ ಅಪ್ಪಾಸಾಹೇಬ್ ಭಡಗಾಂವ್ ಕರ್ ರವರನ್ನು ಮುಖ್ಯ ಪಂಚರನ್ನಾಗಿ ಮಾಡಿ ಅವರಿಗೆ ಸರ್ವಾಧಿಕಾರವನ್ನು ನೀಡಿದರು. ನಂತರ ಶ್ರೀ ಮಹಾರಾಜರ ಮೊದಲ ವರ್ಷದ ಆರಾಧನೆಯ ಹೊತ್ತಿಗೆ ಸಮಾಧಿ ಮಂದಿರ ಕಟ್ಟಿಸಬೇಕೆಂದು ಹೇಳಿದರು.
 ಶ್ರೀ ಮಹಾರಾಜರಿಗೆ  ಎಷ್ಟೋ ಜನರು ತಮ್ಮಲ್ಲಿದ್ದ ಹಣವನ್ನು ಸುರಕ್ಷತೆಗಾಗಿ ಮಹಾರಾಜರ ಬಳಿ ಇಟ್ಟಿರುತ್ತಿದ್ದರು..ಮಹಾರಾಜರು ಯಾರು ಯಾರು ಎಷ್ಟು ಕೊಟ್ಟಿದ್ದರೆಂದು ಲೆಕ್ಕ ಪತ್ರವನ್ನೇನೂ ಬರೆದಿಟ್ಟಿರಲಿಲ್ಲ. ಆದ್ದರಿಂದ ಎಷ್ಟೊಜನರು ಇದರ ದುರ್ಲಾಭ ಪಡೆಯುತ್ತಿದ್ದರು. ಮಹಾರಾಜರು ಕೆಲವು ತಿಂಗಳಿನಿಂದ "ನಾನು ಎಷ್ಟುದಿನ ಇರುವೆನೆಂದು ಗೊತ್ತಿಲ್ಲ, ಆದ್ದ್ರಿಂದ ನಿಮ್ಮ ನಿಮ್ಮ ಹಣ ಹಿಂತಿರುಗಿ ಪಡೆಯಿರಿ" ಎಂದು ಹೇಳಿದರೂ, ಕೆಲವರು ಹಿಂದಿರುಗಿ ತೆಗೆದುಕೊಂಡಿರಲಿಲ್ಲಈಗ ಶ್ರೀ ಮಹಾರಾಜರು ದೇಹ ಬಿಟ್ಟಮೇಲೆ ಎಲ್ಲರೂ ತಾವಿಟ್ಟ ಹಣವನ್ನು ಕೇಳಲಾರಂಭಿಸಿದರು. ಕೆಲವರು ಸುಳ್ಳು ಸುಳ್ಳೇ ಕೇಳಹತ್ತಿದರು. ಅಪ್ಪಾಸಾಹೇಬ್ ಬಡಗಾಂವಕರ್ ರವರು ಹಣ ಕೊಡಲು ಒಪ್ಪಲಿಲ್ಲಆಗ ಜನರು ಶ್ರೀ ಬ್ರಹ್ಮಾನಂದರಲ್ಲ್ಲಿ ಅರಿಕೆ ಮಾಡಿಕೊಂಡರು. ಆಗ ಶ್ರೀ ಬ್ರಹ್ಮಾನಂದರು , ಅಪ್ಪಾಸಾಹೇಬರನ್ನು ಕರೆದು, ಏನಪ್ಪ, ತಂದೆಯು ತೀರಿಕೊಂಡ ಬಳಿಕ ಮಕ್ಕಳು ತಂದೆ ಮಾಡಿದ ಸಾಲವನ್ನು ತೀರಿಸಬೇಕಲ್ಲ್ಲವೇಕೇಳುವವನು ನಿಜವೇ ಹೇಳಲಿ, ಸುಳ್ಳೇ ಹೇಳಲಿ. ಶ್ರೀ ಮಹಾರಾಜರ ಹೆಸರಲ್ಲಿ ಕೇಳ್ತಾರೆ, ಅಂದ ಮೇಲೆ ಶ್ರೀ ಮಹಾರಾಜರೇ ಅದನ್ನು ನೋಡಿಕೊಳ್ಳಲಿ. ಬೇಡಿದವರ ಹಣವನ್ನು ನಾವು ಕೊಡುವುದು ಮಾತ್ರ ನಮ್ಮ ಕರ್ತವ್ಯ. ಎಂದು ತೋಗೋ ನಾನು ಐನೂರು ರೊಪಾಯಿಗಳನ್ನು ಕೊಡುತ್ತೀನಿ, ನೀವೂ ಒಬ್ಬೊಬ್ಬರೂ ಸ್ವಲ್ಪ ಸ್ವಲ್ಪ ರೂಪಾಯಿಗಳನ್ನು ಕೊಡಿರಿ ಎಂದರು. ಗುರುಗಳು ಕೊಟ್ಟಿದ್ದನ್ನು ನೋಡಿ ಬೇರೆಯವರೂ ತಮ್ಮ ಕೊಡುಗೆಯನ್ನು ಕೊಟ್ಟರು. ಸ್ವಲ್ಪ ಹೊತ್ತಿನಲ್ಲೇ ಅವರು ಕೊಡಬೇಕಾದ ೩೦೦೦ ಜಮಾ ಆಯಿತು. ಹಣ ಕೇಳುತ್ತಿದ್ದ ಜನರನ್ನೆಲ್ಲ ಕರೆಯಿಸಿ ಅವರಿಗೆ ಹಣವನ್ನು ಹಿಂತಿರುಗಿಸಿದರು.
ಮೊದಲ ವರ್ಷದ ಆರಾಧನೆಗೆ ಎಲ್ಲ ಭಕ್ತರಿಗೂ ಪತ್ರಿಕೆ ಗಳನ್ನು ಕಳುಹಿಸಿದರು. ಹಿಂದೆ ಮಹಾರಾಜರು ಕುರ್ತಕೋಟಿಗೆ ಹೋಗಿದ್ದಾಗ ಒಬ್ಬರು ಗ್ರಾನೈಟ್ನಲ್ಲಿ ಮೂರು ಪಾದುಕೆಗಳನ್ನು ಮಾಡಿ ತಂದಿದ್ದರು. ಭಕ್ತರ ಆಸೆಯ ಮೇರೆಗೆ  ಮೂರು ಪಾದುಕೆಗಳ ಮೇಲೂ ನಿಂತು ಪಾದಪೂಜೆ ಮಾಡಿಸಿಕೊಂಡಿದ್ದರು. ಆಗ ಪ್ರತಿಷ್ಟೆ ಮಾಡೋಣ ಎಂದು ಮಹಾಭಾಗವತರು ಕೇಳಲು, ಮಹಾರಾಜರು, ಬೇಡ, ಅದಕ್ಕೆ ಸಮಯ ಬರುವುದು ಎಂದು ಹೇಳಿದ್ದರು. ಈಗ ಶ್ರೀ ಬ್ರಹ್ಮಾನಂದರು, ಮತ್ತು ಮಹಾಭಾಗವತರು ಕುರ್ತಕೋಟಿಗೆ ಹೋಗಿ ಮೂರು ಶಿಲಾ ಪಾದುಕೆಗಳಲ್ಲಿ ಅತಿ ಸುಂದರವಾದ ಪಾದುಕೆಯನ್ನು ಗೋಂದಾವಳಿಗೆ ತಂದರು. ಮಾರ್ಗಶಿರ ಭಹುಳ ಪಾಡ್ಯಮಿಯಂದು  ಶುಭ ಮುಹೂರ್ತದಲ್ಲಿ ಮಹಾರಾಜರ ಸಮಾಧಿಯಮೇಲೆ , ಶಾಸ್ತ್ರದಂತೆ ಹೋಮಹವನಾದಿ, ಜಲಾಧಿವಾಸಾದಿ ವಿಧಿಗಳು ಮುಗಿದ ನಂತರ ತಮ್ಮ ಅಮೃತ ಹಸ್ತದಿಂದ ಪಾದುಕೆಗಳ ಪ್ರತಿಷ್ಠೆಯನ್ನು ಮಾಡಿದರು. ಸಮಯದಲ್ಲಿ ಜನಸ್ತೋಮವು ಆನಂದೋತ್ಸಾಹದಿಂದ "ಅನಂತ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಸಚ್ಚಿದಾನಂದ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಕೀ ಜೈ " ಎಂದು ಜಯಘ್ಹೋಷ ಮಾಡಿದರು.
ಶ್ರೀ ಬ್ರಹ್ಮಾನಂದರು ಭಾವ ಪರವಶರಾಗಿ ನುಡಿದರು. "ನಮ್ಮ ಸದ್ಗುರುನಾಥನು ತನ್ನ ಜಡದೇಹವನ್ನು ತ್ಯಾಗ ಮಾಡಿ ನಮ್ಮ ಕಣ್ಣಿಗೆ ಕಾಣದ ಹಾಗೆ ಆದನೆಂದು ಯಾರೂ ನಿರುತ್ಸಾಹಿಗಳಾಗಬೇಡಿರಿ. ಇಂದು ಪುನಃ ಮಹಾಮಹಿಮನ ಜನ್ಮವಾಯಿತೆಂದುತಿಳಿಯಿರಿ. ಹಿಂದೆ ಗೋಂದಾವಳಿಯಲ್ಲಿ ಮಾತ್ರ ದೇಹಧಾರಿಯಾಗಿವಾಸವಾಗಿದ್ದು ತನ್ನ ಭಕ್ತರ ಅಭೀಷ್ಟಗಳನ್ನು ಚಿಂತಿಸುತ್ತಿದ್ದನು. ಆದರೆ ಈಗ ನಿರ್ಗುಣಸ್ವರೂಪವನ್ನು ಧರಿಸಿ ಜಗತ್ತಿನ ತುಂಬಾ ವ್ಯಾಪಿಸಿ ಭಕ್ತರಕ್ಷಣೆಗಾಗಿ ಎಲ್ಲ ಭಾವಿಕರ ಹೃದಯದಲ್ಲಿಯೇ ನಿರಂತರ ವಾಸಿಸುತ್ತಿರುವನು.. ... ಎಂದುಹೇಳಿ
ಮಹಾರಾಜರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ , "ರಘುಪತಿ ರಾಘವರಾಜಾರಾಮ| ಪತಿತ ಪಾವನ ಸೀತಾ ರಾಮ|| ಎಂದು ಅಖಂಡ ನಾಮಸ್ಮರಣೆಯನ್ನು ಪ್ರಾರಂಭಿಸಿದರುಹೀಗೆ ಮಾರ್ಗಶಿರ ಬಹುಳ ಪಾಡ್ಯಮಿಯಿಂದ ದಶಮಿಯವರೆಗೂ ನಾಮಸ್ಮರಣೆ, ಪುರಾಣ, ಪಾರಾಯಣ, ಪ್ರವಚನ, ಕೀರ್ತನ , ಮೊದಲಾದ ಕಾರ್ಯಕ್ರಮಗಳೊಂದಿಗೆ  ಆರಾಧನಾ ಉತ್ಸವವು ಪ್ರಾರಂಭವಾಯಿತು.
 ಅರಾಧನೆ ಉತ್ಸವದ ನಂತರ  ಬೆಳದಡಿಗೆ ಹಿಂತಿರುಗಿ ವೆಂಕಟಪುರದಲ್ಲಿ ಉದ್ಭವ ವೆಂಕಟೇಶ್ವರ ಸ್ವಾಮಿಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು
. ಶ್ರೀ ಬ್ರಹ್ಮಾನಂದರು ಮಾಡಿಸುವ ಸಮಾರಾಧನೆಗಳಿಗೆ ಮಂಗಳೂರು ಬಳಿಯ ಪಿಂಪಳದಿಂದ ಅಡುಗೆಯವರು ಬರುತ್ತಿದ್ದ್ದರು. ಅವರಲ್ಲಿ ಮುಖ್ಯರಾದವರು ಗುತ್ತೀ ರಾಮಯ್ಯನವರು. ಶ್ರೀ ರಾಮಯ್ಯನವರು ಶ್ರೀ ಬ್ರಹ್ಮಾನಂದರು ಮಾಡಿಸುತ್ತಿದ್ದ ನಾಮ ಸಪ್ತಾಹ, ಶ್ರೀ ರಾಮ ಮಂದಿರಗಳ ಸ್ಥಾಪನೆಯಿಂದ ಪ್ರಭಾವಿತರಾಗಿ ತಮ್ಮ ಊರಿನಲ್ಲೂ ರಾಮ ಮಂದಿರ ಕಟ್ಟಿಸಬೇಕೆಂದು ಇಷ್ಟಪಟ್ಟರು. ಬ್ರಹ್ಮಾನಂದರು ಶ್ರೀ ಮಹಾರಾಜರು ಬೀದರಹಳ್ಳಿಗೆ ಸಾಂಗತಾಯಜ್ಞಕ್ಕೆ ಬರಲಿದ್ದಾರೆ. ಅವರ ಅನುಮತಿ ಪಡೆಯಿರಿ ಎಂದು ಹೇಳಿದರು. ಶ್ರೀ ಮಹಾರಾಜರು ಬೀದರಹಳ್ಳಿಗೆ ಬಂದಾಗ , ಮೆರೆವಣಿಗೆಯಲ್ಲಿ ಬರುತ್ತಿರುವಾಗ ಅಶ್ವತ್ಥಪುರದ ಅಡುಗೆಯವರು ಉರಿಬಿಸಿಲಿನಲ್ಲೂ ಮರಳಿನ ಮೇಲೆ ಬಿದ್ದು ಉರುಳುಸೇವೆ ಮಾಡಿದರು. ಆಗ ಶ್ರೀ ಬ್ರಹ್ಮಾನಂದರು , ಶ್ರೀ ಮಹಾರಾಜರಿಗೆ ಅಶ್ವತ್ಥಪುರದವರ ಇಚ್ಚೆ ತಿಳಿಸಲು, ಅವರು, ಶ್ರೀ ರಾಮಯ್ಯ ಮೊದಲಾದವರನ್ನು ಕರೆಸಿ ಆಶೀರ್ವಾದ ರೂಪವಾಗಿ ಫಲ ಮಂತ್ರಾಕ್ಷತೆಯನ್ನು ನೀಡಿದರು. ಪ್ರತಿಷ್ಠಾಪನೆಗೆ ತಾವು ಬರಬೇಕೆಂಬ ಕೋರಿಕೆಗೆ ಮಾತ್ರ ಅವರು ಉತ್ತರಿಸಲಿಲ್ಲ. ರಾಮ ಮಂದಿರಕ್ಕೆ ಸ್ಥಳ ಆರಿಸಲಾಯಿತು. ಶ್ರೀ ಬ್ರಹ್ಮಾನಂದರು ಬರೀ ಅಶ್ವಥ್ಥ ಮರಗಳಿದ್ದ ಸ್ಥಳವನ್ನು ನೋಡಿ, ಅದಕ್ಕೆ ಅಶ್ವಥ್ಥಪುರವೆಂದು ಕರೆದರು.
ರಾಮ ಮಂದಿರದ ಕಟ್ಟಡ ತಯಾರಾಯಿತು, ಮೂರ್ತಿಗಳನ್ನ್ನೂ ತರಿಸಿಟ್ಟರು, ಆದರೆ ಶ್ರೀ ಮಹಾರಾಜರಿಗೆ ಅನಾರೋಗ್ಯದಿಂದ ಅವರು ಬರಲಿಲ್ಲ ಶ್ರೀ ಬ್ರಹ್ಮಾನಂದರು ತಾವೇ ಪ್ರತಿಷ್ಟಾಪಿಸಲು ಒಪ್ಪಲಿಲ್ಲ. ಶ್ರೀ ಮಹಾರಾಜರು ದೇಹವನ್ನು ತ್ಯಜಿಸಿದರು. ಅಶ್ವಥಪುರದವರ ರಾಮಮಂದಿರದ ಆಸೆ ತೀರದೆ ಹಾಗೇ ಉಳಿಯಿತು.. ಕೊನೆಗೆ ಶ್ರೀ ರಾಮಯ್ಯನವರು ಬಹಳ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳ್ಳಬೇಕೆಂದಿರಲು, ಶ್ರೀ ಬ್ರಹ್ಮಾನಂದರು ಜ್ಞಾನ ದೃಷ್ಟಿಯಿಂದ ತಿಳಿದು  ಅವರಿಗೆ ಹೇಳಿಕಳಿಸಿ, ಅವರಿಗಾಗಿ ಮೂರು ದಿನಗಳ ಜಪಾನುಷ್ಟಾನ ನೆಡೆಸಿ, ಶ್ರೀ ರಾಮಯ್ಯನವರಿಗೆ ಫಲ ಪ್ರಸಾದವನ್ನು  ನೀಡುತ್ತಾ ಆಶೀರ್ವದಿಸಿದರು. ನಂತರ ಹೇಳಿದರು " ನೀವು ತರಿಸಿರುವ ಮೂರ್ತಿಗಳು ಸರಿಯಾಗಿಲ್ಲ, ಮುಂಬೈನಿಂದ ಬೇರೆ ವಿಗ್ರಹಗಳನ್ನು ತರಿಸು".ಎಂದರು. ಆಗ ಶ್ರೀ ರಾಮಯ್ಯನವರು ಬಹಳ ಸಂತೋಷದಿಂದ ತಮ್ಮ ಊರಿನವರಿಗೆ ಪತ್ರ ಬರೆದು ತಿಳಿಸಿದರು. ನಂತರ ಮುಂಬೈಗೆ ಹೋಗಿ ಸೀತಾ, ರಾಮ ಲಕ್ಷ್ಮಣ, ಮತ್ತು ಮಾರುತಿಯ ಸುಂದರ ವಿಗ್ರಹಗಳನ್ನು ಅಶ್ವಥ್ಥಪುರಕ್ಕೆ ತಂದರು..
ರಾಕ್ಷಸ ನಾಮ ಸಂವತ್ಸರದ ವೈಶಾಖ ಶುದ್ಧ ಪಂಚಮಿಯ ದಿನ ಮಧ್ಯಾಹ್ನ ಹನ್ನೆರಡು ಘಂಟೆಗೆ ಸರಿಯಾಗಿ ಸದ್ಗುರು ಬ್ರಹ್ಮಾನಂದರ ನೇತೃತ್ವದಲ್ಲಿ ದಿವ್ಯ ಮೂರ್ತಿಗಳ ಪ್ರತಿಷ್ಟಾಪನೆಯಾಯಿತು.
ಆಗ ಮಾತನಾಡುತ್ತಾ, ರಾಮಯ್ಯನವರಕಡೆ ಮುಖ ತಿರುಗಿಸಿ " ನಿಮ್ಮೂರಾಗ ಹಲಸಿನಕಾಯಿ ಬಹಳ ಅಲ್ವಾ? ಅವನ್ನ ಕೊಚ್ಚಬೇಕಾದರೆ ಕೈಗೇನು ಹಚ್ಚುಕೋತೀರ? ಆಗ ರಾಮಯ್ಯನವರು ಎಣ್ಣೆ ಹಚ್ಕೋತೀವಿ ಎಂದರು. ಅದಕ್ಕೆ ಶ್ರೀ ಬ್ರಹ್ಮಾನಂದರು ಅದನ್ಯಾಕ ಹಚ್ಕೋ ಬೇಕು? ಎಂದರು. ಎಣ್ಣೆ ಹಚ್ಚಿಕೊಳ್ಳದಿದ್ದರೆ  ಕೈಗೆಲ್ಲಾ ಅಂಟಿಕೊಂಡು ಬಿಡುತ್ತ್ದದೆ" ಎಂದರು ರಾಮಯ್ಯನವರು.. ಆಗ ಶ್ರೀ ಗುರುಗಳು ಹಸನ್ಮುಖರಾಗಿ " ಅದರ ಹಂಗ ನೋಡು. ಸಂಸಾರದೊಳಗ ನುಗ್ಗಬೇಕಾದರೆ ಮೊದಲಿಗೆ ಮನಸ್ಸಿಗೆ ಭಗವದ್ಭಕ್ತಿ ಎಂಬ ಎಣ್ಣೆ ಹಚ್ಚಿಕೋಬೇಕು., ಅಂದರ ನಮಗ ಅಂಟಿಕೊಳ್ಳೋದಿಲ್ಲ. ಪರಮಾರ್ಥ ಮಾಡುವವರು ಮೊದಲು ನಮ್ರನಾಗಲು ಕಲಿಯಬೇಕು. ಭೂತದಯಾ, ಸದ್ವಿವೇಕ, ಪಾಪಭೀತಿ  ಇವು ಪೂರ್ಣವಿರಬೇಕುಮುಂತಾಗಿ ಉಪದೇಶಿಸಿದರು.
ಶ್ರೀ ಬ್ರಹ್ಮಾನಂದರು ಯಾವ ಪುಸ್ತಕಗಳನ್ನೂ ಬರೆಯಲಿಲ್ಲ . ಆದರೆ, ಅವರು ಭಕ್ತರಿಗೆ ಬರೆದ ಪತ್ರಗಳಲ್ಲಿ,ಅವರು ಬರೆದ ಭಜನೆಗಳಲ್ಲಿ ಅವರ ಭೋಧಾಮೃತವು ತುಂಬಿದೆ. ಅವರು ಬರೆದ ಮರಾಠೀ ಭಜನೆಗಳು, ಪ್ರಾಂತ್ಯದ ಜನರಿಗೆ ಅರ್ಥವಾಗುವುದಿಲ್ಲವೆಂದು ಕನ್ನಡದಲ್ಲಿ ಭಜನೆಗಳನ್ನು ಬರೆದರು.ಇವರು ಬರೆದ ಮೋಕ್ಷ ಪ್ರಾಪ್ತಿಯ ಗುಟ್ಟು, ಮಾನಸ ಪೂಜೆ, ಇವು ಎಂತಹ ಮನುಷ್ಯನಿಗೂ ಮಾರ್ಗ ದರ್ಶಕವಾಗಿವೆ..
ಇವರು ಪ್ರತಿವರ್ ರಾಮನವಮಿಯನ್ನು ದಿನಗಳ ಕಾಲ ವಿಜೃಂಭ್ಹಣೆಯಿಂದ ಮಾಡುತ್ತಿದ್ದರು೧೯೧೮ರಲ್ಲಿ ಶ್ರೀ ರಾಮೋತ್ಸವವನ್ನು ಅತಿ ವಿಜೃಂಬಣೆಯಿಂದ, ಅಮೋಘವಾಗಿ ಜರುಗಿಸಿದರು. ಇಡೀ ಭಾರತದಲ್ಲಿರುವ ಎಲ್ಲ ಶ್ರೀ ಮಹಾರಾಜರ ಭಕ್ತರಿಗೂ ಪತ್ರಿಕೆಗಳನ್ನು ಕಳುಹಿಸಿ, ಪತ್ರಗಳನ್ನು ಬರೆದು ಅಹ್ವಾನಿಸಿದ್ದರು. ಹಾಗೆಯೇ ಮಂದಿರದ ಸ್ಥಾಪಕರಾದ ಪೂಜ್ಯ ವೆಂಕಣ್ಣಯ್ಯನವರನ್ನೂ ಅಹ್ವಾನಿಸಿದ್ದರು. ವೆಂಕಣ್ಣಯ್ಯನವರು ಶ್ರದ್ಧಾ ಭಕ್ತಿಯಿಂದ ದಿನಗಳೂ ಉತ್ಸವಕ್ಕೆ ಹೋಗಬೇಕೆಂಬ ಆಸೆಯಿಂದ, ೧೦ ದಿನಗಳ ರಜಾ ಗೆ ಅರ್ಜಿ ಹಾಕಿದ್ದರು.. ಆದರೆ ಬೆಳದಡಿಗೆ ಹೊರಡುವ ದಿನ ಹತ್ತಿರ ಬಂದರೂ, ರಜಾ ಅನುಮೋದನಾ ಪತ್ರ ಬರಲಿಲ್ಲ. ರಜಾಗೆ ಅನುಮೋದನೆ ಇಲ್ಲ. ಶನಿವಾರ, ಭಾನುವಾರ ಇದ್ದುದರಿಂದ  ಒಂದೆರಡು ದಿನವಾದರೂ ಹೋಗಿ ಬರೋಣ ಅಂತ ಬೆಳದಡಿಗೆ ಹೊರಟು ಬಿಟ್ಟರು. ಬೆಳದಡಿಯಲ್ಲಿ ಇವರನ್ನು ಶ್ರೀ ಬ್ರಹ್ಮಾನಂದ ಮಹಾರಾಜರು ಪ್ರೀತಿಯಿಂದ ಬರಮಾಡಿಕೊಂಡು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ವೆಂಕಣ್ಣಯ್ಯನವರನ್ನು ಬ್ರಹ್ಮಾನಂದರು, ಮೈಸೂರು ಬುವಾ, ಮೈಸೂರು ಬುವಾ ಎಂದು ಕರೆಯುತ್ತಿದ್ದರುಶ್ರೀ ವೆಂಕಣ್ಣಯ್ಯನವರು ರಾಮೋತ್ಸವದ ಮೊದಲ ದಿನ ಭಜನೆ, ಜಪಾನುಷ್ಠಾನಗಳಲ್ಲಿ ಹರ್ಷವಾಗಿ ಕಳೆದರು. ಮಾರನೆಯ ದಿನ ಹೊರಡಬೇಕೆಂದು ಗುರುಗಳಲ್ಲಿ ಅಪ್ಪಣೆ ಪಡೆಯಲು ಹೋದರೆ, ಹೋಗ ಬೇಡ, ಇಲ್ಲೇ ಇರು ಎಂದರು. ಗುರುಗಳ ಮಾತನ್ನು ಮೀರಬಾರದೆಂದು, ಮತ್ತೆರಡು ದಿನ ಉಳಿದರು. ಈಗ ಆಫೀಸಿನ ಯೋಚನೆ ಬೇರೆ. ಮತ್ತೆ ಹೊರಡಲು ತಯಾರಾಗಿ ಗುರುಗಳ ಬಳಿಗೆ ಹೋದರೆ, ಮತ್ತೆ ಅದೇ ಮಾತು. ಶ್ರೀ ಬ್ರಹ್ಮಾನಂದರು ಪೂರ್ತಿ ಕಾರ್ಯಕ್ರಮ ಮುಗಿಸಿಕೊಂಡು ಹೋಗಬೇಕೆಂದರುಅವರ ಮಾತು ಕೇಳದೆ ವಿಧಿಯಿಲ್ಲ. ಗುರುಗಳು ಮಹಾ ಸಿದ್ಧಿಪುರುಷರು. ಶ್ರೀ ಮಹಾರಾಜರೇ, "ಬ್ರಹ್ಮಾನಂದ ಬೇರೆ ಅಲ್ಲ, ನಾನು ಬೇರೆ ಅಲ್ಲ" ಅಂತ ಹೇಳಿದ್ದರು. ಅದಕ್ಕೆ ವೆಂಕಣ್ಣಯ್ಯನವರು ಅಲ್ಲೇ ಉಳಿದುಬಿಟ್ಟರು. ಆಶ್ಚರ್ಯವೇನೆಂದರೆ, ಮಾರನೆಯ ದಿನವೇ ಮುಖ್ಯ ಕಚೇರಿಯಿಂದ ಬಂದ ರಜಾ ಅನುಮೋದನಾ ಪತ್ರವನ್ನು ಅವರ ಮಿತ್ರರೊಬ್ಬರು ಬೆಳದಡಿಗೇ ಕಳುಹಿಸಿದ್ದರು. ಅದನ್ನು ನೋಡಿ ವೆಂಕಣ್ಣಯ್ಯನವರಿಗೆ ಬಹಳ ಆನಂದ ವಾಯಿತು. ರಾಮೋತ್ಸವದ ಮುಂದಿನ ದಿನಗಳನ್ನು ಆನಂದದಿಂದ ಕಳೆದರು. ಗುರುಗಳ ಮಾತು ಮೀರಿ ಅವರು ಊರಿಗೆ ಹೊರಟಿದ್ದರೆಅಂತಹ ಶ್ರೇಷ್ಟ ಸತ್ಸಂಗ, ದೈವಿಕ ವಾತವರಣ ಅವರಿಗೆ ತಪ್ಪಿಹೋಗುತ್ತಿತ್ತು..
 ೧೯೧೮ರಲ್ಲಿ ಗುರುಗಳಿಗೆ ಆಗಾಗ ಜ್ವರ ಬರುತ್ತಿತ್ತುಪಿತೃಪಕ್ಷ ಬಂತು . ಒಂದು ದಿನ ಊರಿನ ಎಲ್ಲಾ ಮನೆಗಳಿಗೂ ಹೋಗಿ ಮಾತನಾಡಿಸ್ಕೊಂಡು ಬಂದರು. ವೆಂಕಟಾಪುರದ ಶ್ರೀಪಾದ ಭಟ್ಟರಿಗೆ "ನಮಗ ವ್ಯವಹಾರ ಬ್ಯಾಸರಕಿ ಬಂದದೋ, ಅದಕ್ಕ ರಾಮ ರಾಮ ಅಂತಾ ಏಕಾಂತ ಮಾಡತೀವಿ". ಎಂದು ಅಂದರು. ಹಾಗೂ ಕೂಡಲೆ ತಿರುಗಿ "ನಾನು ಮತ್ತೆ ಬರತೀನಿ, ಘಾಬರಿ ಆಗಬ್ಯಾಡಾ" ಎಂದು ಹೇಳಿ ಹುಬ್ಬಳ್ಳಿಗೆ ಹೊರಟರು. ಬೆಳದಡಿಯಿಂದ
ಇವರ ಜೊತೆ ಮೂಡಲಪ್ಪ ಎಂಬುವರು ಪ್ರಯಾಣ ಮಾಡಿದರು. ಹುಬ್ಬಳ್ಳಿಯಲ್ಲಿ ಶ್ರೀ ಮಹಾರಾಜರು ಸ್ಥಾಪಿಸಿದ ಶ್ರೀ ರಾಮಮಂದಿರದಲ್ಲಿ ಉಳಿದುಕೊಂಡು ಪಿತೃತರ್ಪಣದ ಕಾರ್ಯಕ್ರಮ ಮುಗಿಸಿದರು. ನಂತರ ಕಾಗವಾಡಕ್ಕೆ ಹೊರಟರು. ಅಲ್ಲಿಂದ ನವಭಾಗ್ ಗೆ ಎತ್ತಿನ ಗಾಡಿಯಲ್ಲಿ ಹೋಗಬೇಕಿತ್ತು. ಗಾಡಿಗೆ ಕಾಯುತ್ತಿರುವ ಸಮಯದಲ್ಲಿ, ಜೊತೆಯಲ್ಲಿ ಬಂದಿದ್ದ ಮೂಡಲಪ್ಪನವರನ್ನು ಬೆಳದಡಿಗೆ ಹಿಂದಿರುಗಲು ಹೇಳಿದರು. ನವಭಾಗ್ ನಲ್ಲಿ ಪ್ಲೇಗ್ ಇದೆಯಂತೆ, ನೀನು ಮಕ್ಕಳಂದಿಗ, ಹಿಂದಿರುಗಿ ಹೋಗು, ಎಂದು ಒಪ್ಪಿಸಿದರು. ಮೂಡಲಪ್ಪನವರು ಗುರುಗಳ ಚೀಲ ಕಾಲಿ ಇರುವದನ್ನು ಗಮನಿಸಿ ನೂರು ರೂಪಾಯಿ ನೋಟು ಕೊಡಲಿಕ್ಕೆ ಹೋದರೆ , ನಗುತ್ತಾ ನನ ಹತ್ತಿರ ದುಡ್ಡಿಲ್ಲ ಅಂತ ಅನ್ಕೊಂಡ್ಯಾ. ನೋಡು ಎಂದು ಚಿಕ್ಕ ಚೀಲದಿಂದ ನೂರಾರು ನಾಣ್ಯಗಳನ್ನು ಸುರಿದರು.. ಇನ್ನೇನೂ ಮಾತನಾಡಲಾಗದ ಮೂಡಲಪ್ಪನವರು,ಹಿಂದಕ್ಕೆ ಹೊರಟರು. ಕೊನೆಯಲ್ಲಿ ಗುರುಗಳು "ತಿರುಕಂಭಟ್ಟರ ಮಗಳ ವಿವಾಹ ಇದೆ. ನಾನು ಬರುವುದು ತಡ ಆದರೆ ವಿವಾಹವನ್ನು ಮುಂದಕ್ಕೆ ಹಾಕಬೇಡ ಅಂತ ಹೇಳು. ವಿವಾಹ ಸಮಯಕ್ಕೆ ಸರಿಯಾಗಿ ನಡೆಯಲಿ" ಎಂದರು.
ಕಾಗವಾಡದಲ್ಲಿ ಇವರಿಗೆ ಅನೇಕ ಭಕ್ತರಿದ್ದರು. ಕೆಲವರು ಇವರ ಜೊತೆ ಎತ್ತಿನ ಗಾಡಿಯಲ್ಲಿ ನವಭಾಗ್ ಗೆ ಬಂದರು. ಪಕ್ಕದಲ್ಲೇ  ಕೃಷ್ಣಾ ನದಿ ಹರಿಯುತ್ತಿತ್ತು. ಹರಿಬಾವು ಎಂಬುವರೊಂದಿಗೆ,ನದಿಯನ್ನು ನೋಡುತ್ತಾ , ತಮಾಷೆಯಿಂದ, "ನಾನೇನಾದರೂ ಸತ್ತರೆ ಏನೂ ಕರ್ಮ ಮಾಡಬೇಕಾಗಿಲ್ಲ. ತಾವು ನಿಷ್ಠಾವಂತ ಬ್ರಹ್ಮಚಾರಿಯಾದ್ದ್ರರಿಂದ ಕರ್ಮಗಳ ಅಗತ್ಯವಿಲ್ಲ. ದೇಹಕ್ಕೆ ಸಮಾಧಿಯಾಗಲೀ, ಸುಡುವುದಾಗಲೀ ಮಾಡಬೇಡಿ. ನಾಲಕ್ಕು ಕಲ್ಲುಗಳನ್ನು ಕಟ್ಟಿ ನದಿ ಆಳವಿರುವ ಜಾಗದಲ್ಲಿ ಬಿಟ್ಟುಬಿಡಿ ಎಂದರು.
ಮಾರನೆಯದಿನ ಬೆಳಿಗ್ಗೆ ಹಲವರ ಜೊತೆ ನದಿಗೆ ಸ್ನಾನಕ್ಕೆ ಹೋದಾಗತಮ್ಮ ಪುಟ್ಟ ಚೀಲವನ್ನು ತೊಳಸಿ, ಇದರ ಕೆಲಸ ಇನ್ನು ಆಯಿತೆಂದು ನೀರು ತುಂಬಿ ತಮ್ಮ ಅಕ್ಷಯ ಚೀಲವನ್ನು ನೀರಿನಲ್ಲಿ ಮುಳುಗಿಸಿ ಬಿಟ್ಟರು..ನದಿಯಲ್ಲಿ ಈಜುತ್ತಿರುವಾಗ , ಸುಳಿ ಎಲ್ಲಿಂದ ಪ್ರಾರಂಭವಾಗತ್ತೆ ನೋಡು, ಎಂದು ಒಬ್ಬರಿಗೆ ಹೇಳಿದರು. ಮತ್ತೆ ತಾವೇನಾದರೂ ಕಾಲರಾ ಬಂದು ಸತ್ತರೆ, ಮಡುವಿನಲ್ಲಿ ಬಿಡಬೇಕು. ನಾಲಕ್ಕು ಗಡಿಗೆಗಳನ್ನು ತಂದು ನಾಲ್ಕೂ ಮೂಲೆಗಳಿಗೆ ಕಟ್ಟಿ ನೀರಿನಲ್ಲಿ ಬಿಡಬೇಕು. ಗಡಿಗೆಗಳಲ್ಲಿ ನೀರು ತುಂಬಿದ ಕೂಡಲೆ, ಮಡುವಿನವರೆಗೂ ಎಳತಂದು ನೂಕಿಬಿಡಬೇಕು.. ಮುಂದೆ ನೂಕಿದರೆ ದೇಹ ತಳಕ್ಕೆ ಹೋಗುತ್ತದೆ. ಅದು ತಳ ಮುಟ್ಟಿದ ಕೂಡಲೇ ಗುಳ್ಳೆಗಳು ಬರುತ್ತವೆ.ಎಂದು ಹೇಳಿ, ಸ್ನಾನ ಮಾಡಲಿಕ್ಕೆಹತ್ತಿದರು. ಜೊತೆಯಲ್ಲಿದ್ದ ವರು ಇದನ್ನು ಗುರುಗಳು ವಿನೋದಕ್ಕಾಗಿ ಮಾತನಾಡುತ್ತಿದ್ದಾರೆ, ಎಂದು ಕೊಂಡರು.
ಆದಿನ ಭಜನೆ, ಜಪಾನುಷ್ಠಾನ ಗಳೊಂದಿಗೆ ದಿನ ಕಳೆಯಿತು. ಮಾರನೆಯ ದಿನ ಅಮಾವಾಸ್ಯೆ. ಗುರುಗಳು ಮುಂಜಾನೆ ಬೇಗ ಎದ್ದು, ಆಹ್ನಿಕಗಳನ್ನು
ತೀರಿಸಿಕೊಂಡು ಹಾಸಿಗೆಯಮೇಲೆ ಸ್ವಲ್ಪ ಹೊತ್ತು ಅನುಷ್ಟಾನ ಮಾಡಿ, ಮಲಗಿದರು. ಬೆಳಗಾಯಿತು. ಗುರುಗಳು ಏಳಲಿಲ್ಲ. ಭಕ್ತರು ಏಳುಗಂಟೆಯಾದರೂ ಏಳದಿದ್ದರಿಂದ  ಅನುಮಾನ ಬಂದು ಎಬ್ಬಿಸಿದರು. ಗುರುಗಳು ಏಳಲಿಲ್ಲ. ತಕ್ಷಣ ಪಕ್ಕದ ಊರಿನಲ್ಲಿದ್ದ ವೈದ್ಯರಿಗೆ ಹೇಳಿಕಳುಹಿಸಿದರು. ವೈದ್ಯರು ಬಂದು ನೋಡಿ, ಪ್ರಾಣ ಹೋಗಿದೆ ಎಂದು ಹೇಳಿದರು. ಅಲ್ಲಿದ್ದವರು ಗೊಳೋ ಎಂದು ಅಳಲಿಕ್ಕೆ ಪ್ರಾರಂಭಿಸಿದರುಗದಗು, ಹುಬ್ಬಳ್ಳಿ, ಗೋಂದಾವಳಿ ಮುಂತಾದ ಸ್ಥಳಗಳಿಗೆ ತಂತಿ ಸಮಾಚಾರ ಕಳುಹಿಸಿದರು.
ಸುಮಾರು ೧೦.೩೦ . ಯಾಯಿತು. ಗುರುಗಳು ಇದ್ದಕ್ಕಿದ್ದಂತೆ ಕಣ್ಣುಬಿಟ್ಟು ಸುತ್ತಲೂ ನೋಡಿದರುಸುತ್ತಲೂ ಇದ್ದ ಜನರು ಹರ್ಷೋದ್ಗಾರ ಮಾಡಿದರು. ಆಗ ಗುರುಗಳು ಶ್ರೀ ರಾಮ್, ಶ್ರೀ ರಾಮ್ ಎನ್ನುತ್ತಾ ಬಾಯಿ, ಕಣ್ಣು ಮುಚ್ಚಿದರು.. ಪ್ರಾಣ ವಾಯು ಹೊರಟು ಹೋಯ್ತು.
ಗುರುಗಳ ಇಚ್ಚೆಯಂತೆ ಅವರ ದೇಹವನ್ನು ಜಲ ಸಮಾಧಿ ಮಾಡಿದರು. ಹೀಗೆ ಒಬ್ಬ ಅವತಾರ ಪುರುಷನ ಅಂತ್ಯವಾಯಿತು.
 ಅವರು ಬರೆದ ಒಂದು ಬೋಧಕ ಭಜನೆಯನ್ನು ಹೇಳಿ ಮುಕ್ತಾಯ ಮಾಡೋಣ.
  ರಾಮ ರಾಮ ರಾಮ ಸೀತಾ ರಾಮ ರಾಮ ಅನ್ನಿರಿ| ರಾಮಸ್ಮರಣೆಯ ಹೊರತು ಕಾಲ ವ್ಯರ್ಥ ಕಳೆಯ ಬೇಡಿರಿ||
ಸ್ನಾನ ಸಂಧ್ಯ ನಿತ್ಯ ನೇಮ ಜಪವ ತಪವನು ಮಾಡಿರಿ| ಸಾಯೊ ಸಂಕಟ ಬಂದರೂ ಪರಧರ್ಮ ಹಿಡಿಯ ಬೇಡಿರಿ||
ತಂದೆ ತಾಯಿ ಹೆಂಡ್ರು ಮಕ್ಕಳು ಮಿಥ್ಯವೆಂದು ತಿಳಿಯಿರಿ| ಕಾಯಾ ವಾಚಾ ಮನಸಿನಿಂದ ಗುರುವಿಗೇ ಶರಣ್ಹೋಗಿರಿ||
ಭಕ್ತಿ ಭಾವದಿಂದ ಸದ್ಗುರು ಹರಿಯು ಹರನೆಂದರಿಯಿರಿ| ಗುರುವಿನಪ್ಪಣೆಯಂತೆ ನಡೆದರೆ ಮುಕ್ತಿ ಎಂದು ನಂಬಿರಿ||
ಕಾಮಕ್ರೋಧಾ ಮೋಹ ಬಿಟ್ಟು ಮನಸು ಝಳ ಝಳ ಮಾಡಿರಿ| ಚಿಂತೆ ಇಲ್ಲದೆ ರಾಮ ಚಿಂತಿಸಿ ಜನನ ಮರಣವ ನೀಗಿರಿ||
ಪರರ ದ್ರವ್ಯಾ ಪರರ ನಾರೀ  ನರಕವೆಂದು ತಿಳಿಯಿರಿ| ನಂದು ನಾನೆಂದೆಂಬ ಮೋಹವ ಬಿಟ್ಟು ರಾಮನ ಭಜಿಸಿರಿ.|
ದಿವಸ ರಾತ್ರಿ ಸಾಧು ಸಂತರ ಸಂಗವನ್ನೇ ಬಯಸಿರಿ| ಬ್ರಹ್ಮಾನಂದರು ಸಾರಿಹೇಳುವ ರಾಮನಾಮವ ಭಜಿಸಿರಿ||
                                      ಜೈಜೈ ರಘುವೀರ ಸಮರ್ಥ