Saturday, June 27, 2020

ಚಿಂತಾಮಣಿಯಲ್ಲಿ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರ ಏಕೆ, ಹೇಗೆ ಬಂತು - ಪೂಜ್ಯ ವೆಂಕಣ್ಣಯ್ಯನವರ ಸಂಕ್ಷಿಪ್ತ ಪರಿಚಯ

                                                                       ಶ್ರೀ ರಾಮ ಸಮರ್ಥ         
                                                       ಶ್ರೀ ಬ್ರಹ್ಮಚೈತನ್ಯ ಮಹಾರಾಜ ಕೀ ಜೈ

                   ಚಿಂತಾಮಣಿಯ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರ,  ಹಾಗೂ ಅದರ ಸಂಸ್ಥಾಪಕರಾದ ಶ್ರೀ ಗಂಜೂರು ವೆಂಕಣ್ಣಯ್ಯನವರ ಸಂಕ್ಷಿಪ್ತ ಪರಿಚಯ
ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದ ಪರಿಚಯಕ್ಕೆ ಮೊದಲು, ಅದಕ್ಕೆ ಮೂಲ ಕಾರಣರಾದ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ದಿವ್ಯ ಚರಿತ್ರೆಯನ್ನು ಕೆಲವೇ ವಾಕ್ಯಗಳಲ್ಲಿ ಹೇಳಬೇಕಾದದ್ದು ಅವಶ್ಯವೆನಿಸುವುದು. ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಹೆಸರು ಕೇಳದವರು ವಿರಳ.  ಶ್ರೀ ಬ್ರಹ್ಮಚೈತನ್ಯ ಮಹಾರಾಜರು (1845-1913) ಮಹಾರಾಷ್ಟ್ರದ ಗೋಂದಾವಳಿಯಲ್ಲಿ 19 ಫೆಬ್ರುವರಿ 1845, ಮಾಘ ಶುದ್ಧ ದ್ವಾದಶಿಯಂದು ಜನಿಸಿದರು. ಶಿಶುವಾಗಿದ್ದಾಗಿನಿಂದಲೇ ವೈರಾಗ್ಯ ಮೂರ್ತಿಯಾಗಿದ್ದ ಅವರು ತಮ್ಮ 13 ನೇ ವಯಸ್ಸಿನಲ್ಲೇ ಭಗವಂತನ ದರ್ಶನಾಪೇಕ್ಷೆಯಿಂದ ತಮ್ಮ ಸದ್ಗುರುವನ್ನು ಹುಡುಕಿಕೊಂಡು ಮನೆ ಬಿಟ್ಟು ಹೊರಟರು. ಭಾರತಾದ್ಯಂತ ಚಲಿಸಿ  ಅನೇಕ ಸಂತ, ಯೋಗಿಗಳನ್ನು ಸಂದರ್ಶಿಸಿ, ಕೊನೆಗೆ ಎಹಳೆಗಾವ್ ನ ಶ್ರೀ ತುಕಾರಾಮ ಚೈತನ್ಯ ರವರಲ್ಲಿ ತಮ್ಮ ಸದ್ಗುರುವನ್ನು ಕಂಡರು. ಒಡನೆಯೇ, ಅವರು ಗುರುಗಳಿಗೆ ಶರಣಾದರು. ಶ್ರೀ ತುಕಾರಾಮರು ಮೇಲ್ನೋಟದಲ್ಲಿ ಒರಟಾಗಿ ಕಂಡರೂ, ಅತ್ಯಂತ ಮೃದು ಹೃದಯಿ. ಆ ಊರಿನ ಜನರು ಅವರನ್ನು "ತುಕಾ ಮಾಯಿ" (ಮಾಯಿ ಎಂದರೆ ತಾಯಿ ಎಂದರ್ಥ) ಎಂದೇ ಕರೆಯುತ್ತಿದ್ದರು. ಶ್ರೀ ತುಕಾರಾಮರು  ಬಾಲಕ ಗಣಪತಿಯನ್ನು ಅನೇಕ ರೀತಿಯಲ್ಲಿ ಪರೀಕ್ಷಿಸಿದರು. ಕೊನೆಗೆ , ತಾರಕ ಮಂತ್ರ "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಎಂಬ ಶ್ರೇಷ್ಟವಾದ ಮಂತ್ರವನ್ನು  ಉಪದೇಶಿಸಿ, ಹರಸಿ ಕಳುಹಿಸಿದರು.  ಸದ್ಗುರುಗಳ ಉಪದೇಶ ,ಒಂದು ಹೊಸ ಜನ್ಮದ ಉದಯವಾದಂತಾಯಿತು. ಅದಕ್ಕೆ ಶ್ರೀ ತುಕಾಮಾಯಿಯು ಬಾಲಕನಿಗೆ,  "ಶ್ರೀ ಬ್ರಹ್ಮಚೈತನ್ಯ" ಎಂದು ನಾಮಕರಣ ಮಾಡಿದರು. ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಉತ್ತರ  ಭಾರತದ ಅರಣ್ಯಗಳಲ್ಲಿ ತಪಶ್ಚರ್ಯ ನಡೆಸಿ , ತಮ್ಮ ಇಪ್ಪತ್ತನೆಯ ವಯಸ್ಸಿಗೇ ಪರಿಪೂರ್ಣ ಸಂತರಾದರು. ಅಲ್ಲಲ್ಲಿ ತಮ್ಮ ಮಹಿಮೆಗಳನ್ನು ತೋರುತ್ತಾ ಅನೇಕರನ್ನು  ಶ್ರೀ ರಾಮನಾಮದಿಂದ ಸನ್ಮಾರ್ಗಕ್ಕೆಳೆದರು. ಅನೇಕ ಶ್ರೀ ರಾಮ ಮಂದಿರಗಳನ್ನು ಕಟ್ಟಿಸಿದರು. ಕೊನೆಗೆ  ತಮ್ಮ ಸ್ವಸ್ಥಾನವಾದ ಗೋಂದಾವಳಿಗೆ ಬಂದು ನೆಲೆಸಿದರು. ಗೋಂದಾವಳಿ ಒಂದು ಯಾತ್ರಾ ಸ್ಥಳವಾಯಿತು. ಭಗವಂತನ ನೆಲೆಯಾಯಿತು. ಅನೇಕರನ್ನುಅನುಗ್ರಹಿಸಿದರು.  ರಾಮನಾಮದ ರುಚಿ ಎಲ್ಲೆಡೆ ಪಸರಿಸುವಂತಾಯಿತು. ಕೊನೆಗೆ, ಮಾರ್ಗಶಿರ ಬಹುಳ ದಶಮಿ ತಾ: 22 ಡಿಸೆಂಬರ್ 1913 ಸೋಮವಾರ ಸೂರ್ಯೋದಯದ ಹೊತ್ತಿಗೆ ತಮ್ಮ ಇಹದೇಹವನ್ನು ತ್ಯಜಿಸಿದರು. ಆದರೆ, ಅವರು ವಿಶ್ವವ್ಯಾಪಿಯಾಗಿ ಭಕ್ತರನ್ನೆಲ್ಲಾ ಸದಾಕಾಲವೂ ಅನುಗ್ರಹಿಸುತ್ತಲೇ ಇರುವರು. 
ಮಾರುತಿ  ಅಂಶವೆಂದೂ, ಸಮರ್ಥ ರಾಮದಾಸರ ಅವತಾರವೆಂದೂ, ಭಕ್ತ ಜನರಿಂದ ಪೂಜಿಸಲ್ಪಡುತ್ತಿರುವ ಗೋಂದಾವಲೇಕರ್ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಅಸಂಖ್ಯ ಮಹಿಮೆಗಳಲ್ಲಿ  ಇದು ಅವರ ಒಂದು ಮಹಿಮೆಯ ಚರಿತ್ರೆ ಮಾತ್ರ. ಹೇಗೆ, ಅವರು ತಮ್ಮ ಕೊನೆ ಕೊನೆಯ ಕಾರ್ಯಗಳಲ್ಲಿ ಒಂದಂತೆ, ಜ್ಞಾಪಿಸಿಕೊಂಡಂತೆ , ಮೈಸೂರು ರಾಜ್ಯದಲ್ಲಿದ್ದ ಶ್ರೀ ವೆಂಕಣ್ಣಯ್ಯನವರನ್ನು ಕರೆಸಿಕೊಂಡು ಉಪದೇಶವಿತ್ತು ತಮ್ಮ ಮಹಿಮೆಯಿಂದ ಚಿಂತಾಮಣಿಯಲ್ಲಿ ನೆಲೆಸಿದ ವೃತ್ತಾಂತ. ಗುರುವೇ ಶಿಷ್ಯನನ್ನು ತನ್ನ ಯೋಗಶಕ್ತಿಯಿಂದ ಗುರುತಿಸಿ ತನ್ನ ಸಮೀಪಕ್ಕೆ ಸೆಳೆದುಕೊಂಡ ವೃತ್ತಾಂತ.

ಚಿಂತಾಮಣಿ ಸಮೀಪದಲ್ಲಿರುವ ಗಂಜೂರು ಗ್ರಾಮದಲ್ಲಿ ವಾಸವಾಗಿದ್ದ ಶ್ರೀ ತಿಮ್ಮಪ್ಪಯ್ಯ ಮತ್ತು ಶ್ರೀಮತಿ ವೆಂಕಟಲಕ್ಷಮ್ಮ ದಂಪತಿಗಳ ಹಿರಿಯ ಮಗನಾಗಿ ವೆಂಕಣ್ಣಯ್ಯನವರು ತಾ|| 4-5-1883, ಚೈತ್ರ ಬಹುಳ ದ್ವಾದಶಿಯಂದು ಜನಿಸಿದರು. ತಿಮ್ಮಪ್ಪಯ್ಯನವರು ಉಪಾಧ್ಯಾಯ ವೃತ್ತಿಯಲ್ಲಿದ್ದರು. ಮಗನನ್ನು ಓದಿಸಲು ರಾಜಧಾನಿಯಾದ ಮೈಸೂರಿಗೆ ಕಳುಹಿಸಿದರು. ಅಲ್ಲಿ ವೆಂಕಣ್ಣಯ್ಯನವರು ಎಂಜಿನೀಯರಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಎರಡು ವರ್ಷಗಳ ನಂತರ ಅವರ ತಮ್ಮ   ಶ್ರೀ ಆದಿನಾರಾಯಣ ಶಾಸ್ತ್ರಿರವರೂ ಅದೇ ಸ್ಕೂಲಿಗೆ ಸೇರಿದರು. ಇಬ್ಬರೂ ಸಣ್ಣ ಮನೆಯೊಂದನ್ನು ಬಾಡಿಗೆಗೆ ಪಡೆದು ಜೊತೆಯಲ್ಲೇ ಇರುತ್ತಿದ್ದರು. 
ಎಂಜಿನೀಯರಿಂಗ್ ಸ್ಕೂಲಿನ ಕೊನೆಯ ವರ್ಷ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದರೂ ಸಹ ಫಲಿತಾಂಶದಲ್ಲಿ ಅನುತ್ತೀರ್ಣರಾಗಿರುವ ವಿಷಯ ತಿಳಿದು ವೆಂಕಣ್ಣಯ್ಯನವರಿಗೆ ಬಹಳ ದುಃಖವಾಯಿತು. ಅವರನ್ನು ನೋಡಿ ಅವರ ಮನೆಯ ಮುಂದಿನ ಮನೆಯಲ್ಲಿದ್ದ ವೃದ್ಧ ಮಹಿಳೆಯೊಬ್ಬರು "ಏಕಪ್ಪಾ, ಬಹಳ ಖಿನ್ನನಾಗಿರುವೆ. ತೊಗೋ ಈ ಪುಸ್ತಕ. ಪಾರಾಯಣ ಮಾಡು, ಒಳ್ಳೆಯದಾಗುವುದು ." ಎಂದು ಹೇಳಿ ಒಂದು ಸುಂದರ ಕಾಂಡ  ರಾಮಾಯಣದ ಪುಸ್ತಕವನ್ನು  ಕೊಟ್ಟರು.   ಅವರ ಮಾತಿನಂತೆ ವೆಂಕಣ್ಣಯ್ಯನವರು ಸುಂದರಕಾಂಡವನ್ನು ಓದಲು ಪ್ರಾರಂಭಿಸಿದರು. ಆಶ್ಚರ್ಯವೇನೆಂದರೆ ಒಂದು ವಾರದೊಳಗೇ ಗೆಜೆಟ್ ನೋಟಿಫಿಕೇಷನ್ ನಲ್ಲಿ "ಈಗಾಗಲೇ ನೀಡಿದ ಉತ್ತೀರ್ಣರಾದವರ ಪಟ್ಟಿಯ   ಜೊತೆ ಕೆಳಕಂಡ ಇನ್ನಿಬ್ಬರು ವಿದ್ಯಾರ್ಥಿಗಳೂ ಉತ್ತೀರ್ಣರಾಗಿರುವರು" ಎಂದು ಪ್ರಕಟಿಸಲಾಗಿತ್ತು. ಅವರಲ್ಲಿ ಮೊದಲನೇ ಹೆಸರೇ ವೆಂಕಣ್ಣಯ್ಯನವರದಾಗಿತ್ತು. ಚಿಕ್ಕಂದಿನಿಂದಲೂ ಭಗವದ್ಭಕ್ತಿಯಿದ್ದ ವೆಂಕಣ್ಣಯ್ಯನವರಿಗೆ ಈ ಘಟನೆ ಭಗವಂತನ ಮೇಲಿದ್ದ ನಂಬಿಕೆಯನ್ನು ಇನ್ನೂ ಹೆಚ್ಚಿಸಿತು. ಎಂಜಿನೀಯರಿಂಗ್ ಪದವಿ ಪಡೆದಮೇಲೆ ಮೈಸೂರು ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಬ್ ಓವರ್ಸೀಯರ್ ಕೆಲಸಕ್ಕೆ ಸೇರಿದರು. ಅವರು ಬೆನಕನಕೆರೆಯ ಶ್ರೀ ನರಸಿಂಹಯ್ಯನವರ ಮಗಳಾದ ಶ್ರೀಮತಿ ಭಾಗೀರಥಿಯವರನ್ನು ಲಗ್ನವಾಗಿ ಇಬ್ಬರು ಹೆಣ್ಣುಮಕ್ಕಳಾದರು. ಆದರೆ, ಚಿಕ್ಕಮಗಳು ಕೇವಲ ಒಂದು ವರ್ಷದವಳೂ ಆಗುವ ಮುನ್ನವೇ ಭಾಗೀರಥಿ ತೀರಿಕೊಂಡರು.    ಮಕ್ಕಳು ಇನ್ನೂ ಚಿಕ್ಕವರಾದುದರಿಂದ ಮತ್ತು ತಂದೆ ತಾಯಿಯರ ಒತ್ತಾಯದ ಮೇರೆಗೆ ಶ್ರೀಮತಿ ಭಾಗೀರಥಿಯವರ ತಂಗಿ ಶ್ರೀಮತಿ ಲಕ್ಷ್ಮಿದೇವಮ್ಮನವರನ್ನು ವಿವಾಹವಾದರು.   
ಅವರು ಬಿಡುವಿನವೇಳೆಯಲ್ಲಿ ಭಗವತ್ ಚಿಂತನೆಯಲ್ಲಿರುತ್ತಿದ್ದರು. ರಾಮನಾಮದ ಉಪಾಸನೆ ಚಿಕ್ಕಂದಿನಿಂದ ಅಭ್ಯಾಸವಾಗಿತ್ತು.ಒಬ್ಬ ಸಂತ ಗುರುವಿನ ಅನುಗ್ರಹಕ್ಕಾಗಿ ಹಂಬಲಿಸುತ್ತಿದ್ದರು. ಹೀಗಿರಲು ಅವರಿಗೆ ಚಿಕ್ಕನಾಯಕನಹಳ್ಳಿಗೆ ವರ್ಗವಾಯಿತು. ಕಛೇರಿ ಚಿಕ್ಕನಾಯಕನಹಳ್ಳಿಯಲ್ಲಿದ್ದು ಸುತ್ತಮುತ್ತಲಿನ ಕೆರೆಕಟ್ಟೆ, ರಸ್ತೆ ಮುಂತಾದ ಕಾಮಗಾರಿ ಕೆಲಸಗಳ ಮೇಲ್ವಿಚಾರಣೆ  ವೆಂಕಣ್ಣಯ್ಯನವರ ಪಾಲಿಗೆ ಬಿದ್ದಿತ್ತು. 

ಆದ್ದರಿಂದ ಮನೆ ಚಿಕ್ಕನಾಯಕನಹಳ್ಳಿಯಲ್ಲಿ ಮಾಡಿದ್ದರು. ಪ್ರತಿದಿನವೂ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಹಿಂತಿರುಗುತ್ತಿದ್ದರು.

ಚಿಕ್ಕನಾಯಕನ ಹಳ್ಳಿಯ ಸಮೀಪದಲ್ಲಿರುವ ಮಲ್ಲಿಗೆರೆ ಗ್ರಾಮದಲ್ಲಿ ಕೆರೆ ಕಟ್ಟೆ ಕಾಮಗಾರಿಕೆ ನಡೆಯುತ್ತಿತ್ತು. 1913ನೇ ಇಸವಿ ನವಂಬರ್ ತಿಂಗಳು ಮಧ್ಯಾಹ್ನ ಊಟದ ವಿರಾಮದ ಸಮಯ. ತಂದಿದ್ದ ಬುತ್ತಿಯಲ್ಲಿದ್ದ ಲಘು ಉಪಹಾರ ಮಾಡಿ , ಒಂದು ಮರದ ಕೆಳಗೆ ಭಗವಂತನ ಧ್ಯಾನ ಮಾಡುತ್ತಾ ಕಣ್ಣು ಮುಚ್ಚಿಕೊಂಡು  ಕುಳಿತಿದ್ದಾಗ "ಮಹಾ ಪುರುಷ, ಮಹಾ ಪುರುಷ " ಎಂಬ ಶಬ್ಧ ಕೇಳಿಸಿತು. ಕಣ್ಣು ಬಿಟ್ಟು ನೋಡಿದರೆ ಎದುರಿಗೆ  ಆಜಾನುಬಾಹು ಸಂತರೊಬ್ಬರು ನಿಂತಿದ್ದಾರೆ. ಅವರ ಎರಡು ಪಕ್ಕದಲ್ಲೂ ಒಬ್ಬೊಬ್ಬ ಶಿಷ್ಯರಿದ್ದಾರೆ. ಯಾರೋ ಮಹಾ ಪುರುಷರಿರಬೇಕೆಂದು ವೆಂಕಣ್ಣಯ್ಯನವರು ದೀರ್ಘದಂಡ ನಮಸ್ಕಾರ ಮಾಡಿದರು. ನಮಸ್ಕಾರ ಮಾಡುವಾಗ "ಗೋಂದಾವಳ್ಯಾವೆ" ಎಂಬ ಶಬ್ಧ ಕೇಳಿಸಿತು.  ನಮಸ್ಕಾರ ಮಾಡಿ ಏಳುವಷ್ಟರಲ್ಲಿ ಸಂತರು ಅಂತರ್ಧಾನರಾಗಿದ್ದರು. ಈ ಆಶ್ಚರ್ಯದ ಘಟನೆಯಿಂದ ವಿಸ್ಮಿತರಾದ ವೆಂಕಣ್ಣಯ್ಯನವರು ತಮಗೆ "ಗೋಂದಾವಳ್ಯಾವೆ " ಪದದ ಅರ್ಥ ಗೊತ್ತಿರಲಿಲ್ಲವಾದುದರಿಂದ ಆ ಪದವನ್ನು  ತಮ್ಮ ಡೈರಿಯಲ್ಲಿ ಬರೆದುಕೊಂಡರು.ಸಂಜೆ ಕೆಲಸ ಮುಗಿದಮೇಲೆ ಚಿಕ್ಕನಾಯಕನಹಳ್ಳಿಗೆ ಹಿಂತಿರುಗಿದರು.  

ದೇಶಸ್ಥ (ಮರಾಠಿ ಮಾತನಾಡುವ) ಮಿತ್ರರೊಬ್ಬರು "ಗೋಂದಾವಳ್ಯಾವೆ" ಎಂದರೆ "ಗೋಂದಾವಳಿಗೆ ಬಾ" ಎಂದು ಹೇಳಿದರು. ಆದರೆ ಗೋಂದಾವಳಿ ಎಲ್ಲಿದೆ ಎಂಬ ವಿಷಯ ಅವರಿಗೂ ತಿಳಿದಿರಲಿಲ್ಲ.
ಒಂದೆರಡು ದಿನಗಳಲ್ಲಿ ಬೆಳಗಿನಝಾವ ಒಂದು ಕನಸು  ಬಿತ್ತು. ಕನಸಿನಲ್ಲಿ ಶ್ರೀ ವೈಷ್ಣವರೊಬ್ಬರು ಗೀತಾ ಪಾರಾಯಣ ಮಾಡುತ್ತಾ ಕುಳಿತಿದ್ದಾರೆ. ಮತ್ತೊಬ್ಬ ಶ್ರೀ ವೈಷ್ಣವರು ಗೀತಾ ಪಾರಾಯಣ ಮಾಡುತ್ತಿದ್ದವರ ಕಡೆಗೆ ಕೈ ತೋರಿಸಿ ಅವರ ಬಳಿಗೆ ಹೋದರೆ ಎಲ್ಲಾ ತಿಳಿಯುವುದೆಂದು ಹೇಳಿದರು. ಬೆಳಿಗ್ಗೆ ಎದ್ದು ಅವರ ಕನಸಿನ ಬಗ್ಗೆ ಯೋಚಿಸುತ್ತಾ ಎಂದಿನಂತೆ ಸ್ವಲ್ಪ ದೂರ ಅಡ್ಡಾಡಲು ಹೋಗಿ ಹಿಂತಿರುಗುತ್ತಿರುವಾಗ ತಾವು ಕನಸಿನಲ್ಲಿ ಕಂಡ ಶ್ರೀ ವೈಷ್ಣವರೇ ಮುಂದೆ ಬರುತ್ತಿರುವುದನ್ನು ಕಂಡರು. ಹರ್ಷಾಶ್ಚರ್ಯದಿಂದ ಅವರ ಕಡೆ ನೋಡಲು, ಅವರೇ ಮಾತನಾಡಿಸಿ, "ಬನ್ನಿ. ಇಲ್ಲೇ ನಮ್ಮ ಮನೆ" ಎಂದು ಕರೆದುಕೊಂಡು ಹೋದರು.
ಆ ಶ್ರೀ ವೈಷ್ಣವರ ಹೆಸರು ಶ್ರೀ ರಂಗಾಚಾರ್. ಅವರು ಪೋಲಿಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದು ಅಲ್ಲಿನ ವ್ಯವಹಾರಗಳಿಗೆ ಬೇಸರಗೊಂಡು ಕೆಲಸಕ್ಕೆ ರಾಜಿನಾಮೆ ನೀಡಿ ಚಿಕ್ಕನಾಯಕನಹಳ್ಳಿಯಲ್ಲಿ ಒಂದು ಸಣ್ಣ ಹೋಟೆಲ್ (ಮನೆಯಲ್ಲೇ) ನಡೆಸುತ್ತಿದ್ದರು. ಅಲ್ಲಿದ್ದ ಗಿರಾಕಿಗಳು ಹೋದ ಮೇಲೆ ಶ್ರೀ ರಂಗಾಚಾರ್ಯರು ಹೋಟೆಲ್ ಬಾಗಿಲು ಮುಚ್ಚಿಬಿಟ್ಟರು. ಆಗ ಆವರಿಗೆ ವೆಂಕಣ್ಣಯ್ಯನವರು ತಮಗೆ ಆದ ಸಂತ ದರ್ಶನ ಹಾಗೂ ಕನಸಿನ ವಿಷಯ ತಿಳಿಸಿದರು. ಶ್ರೀ ರಂಗಾಚಾರ್ಯರು ಸ್ವತಃ ಯೋಗಿಗಳಾಗಿದ್ದರು. ಅವರು ವೆಂಕಣ್ಣಯ್ಯನವರಿಗೆ ಅಲ್ಲೇ ಕುಳಿತಿರಲು ಹೇಳಿ ದೇವರ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ಸುಮಾರು ಒಂದು ಘಂಟೆಯ ನಂತರ ಹೊರಗೆ ಬಂದು ವೆಂಕಣ್ಣಯ್ಯನವರಿಗೆ ಹೇಳಿದರು, "ಬೆಂಗಳೂರಿನಿಂದ  ಪೂನಾಗೆ ಹೋಗುವ ರೈಲು ಮಾರ್ಗದಲ್ಲಿ ಕೋರೆಗಾಂವ್ ಎಂಬ ನಿಲ್ದಾಣವಿದೆ. ಅಲ್ಲಿಂದ ರಸ್ತೆ ಮಾರ್ಗದಲ್ಲಿ ಹೋದರೆ ಗೋಂದಾವಳಿ ಎಂಬ ಸಣ್ಣ ಗ್ರಾಮವೊಂದಿದೆ. ಅಲ್ಲಿ ರಾಮಮಂದಿರವೊಂದರಲ್ಲಿ ಶ್ರೀ 


ಬ್ರಹ್ಮಚೈತನ್ಯ ಮಹಾರಾಜರೆಂಬ ಸಂತರಿದ್ದಾರೆ. ಅವರೇ ನಿಮಗೆ ದರ್ಶನವಿತ್ತವರು. ಅವರು ನಮ್ಮಿಬ್ಬರಿಗೂ ಅಲ್ಲಿಗೆ ಬರಲು ಹೇಳಿರುವರು" ಎಂದರು. 

ಇದಾದ ಎಂಟು ದಿನಗಳಲ್ಲೇ ಶ್ರೀ ವೆಂಕಣ್ಣಯ್ಯನವರು ಶ್ರೀ ರಂಗಾಚಾರ್ಯರ ಜೊತೆ ಗೋಂದಾವಳಿಗೆ ಹೊರಟರು. ಗುರುದರ್ಶನದ ಉತ್ಕಟ ಇಚ್ಛೆಯಿದ್ದ ಶ್ರೀ ವೆಂಕಣ್ಣಯ್ಯನವರಿಗೆ ಏನೋ ಒಂದು ಹರ್ಷ, ವೈರಾಗ್ಯ ಆವರಿಸಿತ್ತು. ದಾರಿಯಲ್ಲಿ ಬೇಡುತ್ತಾ ಬಂದ ಭಿಕ್ಷುಕರಿಗೆಲ್ಲಾ ಧಾರಾಳವಾಗಿ ಚಿಲ್ಲರೆ ಕಾಸು ಹಾಕುತ್ತಿದ್ದರು. ಅದನ್ನು ನೋಡಿ ಶ್ರೀ ರಂಗಾಚಾರ್ಯರು, "ಇಲ್ಲಿ ತನ್ನಿ, ನಿಮ್ಮಲ್ಲೇ ಇದ್ದರೆ ಬರುವಾಗ ಪ್ರಯಾಣಕ್ಕೆ ಹಣ ಇರುವುದಿಲ್ಲ" ಎಂದು ಕೈಚಾಚಿ ಹಣದ ಚೀಲವನ್ನು ಪಡೆದು ತಮ್ಮ ಬಳಿ ಇರಿಸಿಕೊಂಡರು. ಪ್ರಯಾಣ ಮುಂದುವರೆಸಿ ಸಂಜೆಯ ಹೊತ್ತಿಗೆ ಗೋಂದಾವಳಿಯನ್ನು ತಲಪಿದರು.              ಶ್ರೀ ವೆಂಕಣ್ಣಯ್ಯನವರು ಶ್ರೀ ಗುರುದರ್ಶನದಿಂದ ಪುಳಕಿತರಾದರು. ಅವರಿಗಾದ ಆ ಆನಂದಾನುಭವವು ವರ್ಣನಾತೀತ.
ಶ್ರೀ ಮಹಾರಾಜರು ಆ ದಿನ ಯಾವುದೋ ಊರಿಗೆ ಹೋಗಬೇಕಾಗಿತ್ತು. ದೂರದಿಂದ ಇಬ್ಬರು ಭಕ್ತರು ಬರುತ್ತಿದ್ದಾರೆಂದು ತಮ್ಮ ಪ್ರಯಾಣವನ್ನು ರದ್ದು ಮಾಡಿದರೆಂದು ಇವರನ್ನು ನೋಡಿ ಅಲ್ಲಿನ ಕೆಲವರು ಹೇಳಿದರು.
ಶ್ರೀ ಮಹಾರಾಜರನ್ನು ಕಂಡ ಮೇಲೆ ಇವರಿಗೆ ತಂಗಲು ಒಂದು ಕೊಠಡಿಯನ್ನು ನೀಡಿ ಸ್ನಾನ ಮಾಡಿ ಬರಲು ಹೇಳಿದರು. ನಂತರ ಆರತಿ, ಭಜನೆಗಳಾದ ಮೇಲೆ ಊಟದ ಏರ್ಪಾಡಾಗಿತ್ತು. ನೂರಾರು ಜನ ಊಟ ಮಾಡಿದರು. ಅಲ್ಲಿಯ ದಿನಚರಿಯೇ ಹಾಗೆ. ಹಲವಾರು ಕಡೆಗಳಿಂದ ಅನೇಕ ಭಕ್ತರುಗಳು ಶ್ರೀ ಮಹಾರಾಜರ ದರ್ಶನ ಪಡೆಯಲು ಬರುತ್ತಿದ್ದರು. ಅವರಿಗೆಲ್ಲಾ ಇಳಿದುಕೊಳ್ಳಲು ಸ್ಥಳ, ಊಟೋಪಚಾರಗಳೆಲ್ಲಾ ನಡೆಯುತ್ತಿದ್ದವು. ಅವರಲ್ಲಿ ಅನೇಕ ಮಂದಿ ಅಲ್ಲೇ ಉಳಿದು ಬಿಡುತ್ತಿದ್ದರು. ಅವರನ್ನೆಲ್ಲಾ ಅತಿಥಿಗಳಂತೆ ಪ್ರೀತಿ ಆದರಗಳಿಂದ ನೋಡಿಕೊಳ್ಳಲಾಗುತ್ತಿತ್ತು. ಹೋಗಿ ಸೇರಿದ ದಿನ, ರಾತ್ರಿ ಊಟದ ನಂತರ ನಡೆದ ಭಜನೆಗಳಲ್ಲಿ ಭಾಗವಹಿಸಿ ಕೊಠಡಿಗೆ ಹಿಂತಿರುಗಲು ಹೋದಾಗ ಶ್ರೀ ರಂಗಾಚಾರ್ಯರ ಬಳಿಯಿದ್ದ ಕೊಠಡಿಯ ಬೀಗದ ಕೈ ಕಾಣಲಿಲ್ಲ. ಅವರು ಕೂತಿದ್ದ ಜಾಗ, ಓಡಾಡಿದ್ದ ಸ್ಥಳಗಳಲ್ಲೆಲ್ಲಾ ಹುಡುಕಿದ್ದಾಯಿತು. ಅಷ್ಟರಲ್ಲಿ ಯಾರೋ ಬೀಗದಕೈ ಕಳೆದುಹೋಗಿರುವ ವಿಷಯವನ್ನು ಶ್ರೀ ಮಹಾರಾಜರ ಗಮನಕ್ಕೆ ತಂದರು. ಆಗ ಮಹಾರಾಜರು ಅವರು ಊಟ ಮಾಡಿದ ತಟ್ಟೆಯಲ್ಲಿ ನೋಡಬೇಕೆಂದು ಹೇಳಿದರು. ಆಗ, ಊಟದ ಸ್ಥಳಕ್ಕೆ ಹೋಗಿ ನೋಡಿದರೆ, ಅಲ್ಲಿ ತಟ್ಟೆಗಳನ್ನೆಲ್ಲಾ ತೊಳೆದು ಸಕ್ರಮವಾಗಿ ಇಟ್ಟಿದ್ದರು.  ಆದರೂ ಶ್ರೀ ಮಹಾರಾಜರು ಹೇಳಿರುವುದರಿಂದ ತಟ್ಟೆಗಳನ್ನು ತೆಗೆದು ನೋಡಿದಾಗ ಮಧ್ಯದ ಒಂದು ತಟ್ಟೆಯಲ್ಲಿ ಬೀಗದ ಕೈ ಸಿಕ್ಕಿತು.
ಶ್ರೀ ಮಹಾರಾಜರ ವ್ಯಕ್ತಿತ್ವ, ನಡೆ ನುಡಿಗಳಿಂದ ಆಕರ್ಷಿತರಾದ ಶ್ರೀ ವೆಂಕಣ್ಣಯ್ಯನವರ ಆನಂದಕ್ಕೆ ಪಾರವೇ ಇರಲಿಲ್ಲ.ಮಾರನೆಯ ದಿನ ಮುಂಜಾನೆ ಬೇಗನೆದ್ದು ಮಾನಗಂಗಾ ನದಿಯಲ್ಲಿ ಸ್ನಾನ ಮಾಡಿ, ಆಹ್ನಿಕಗಳನ್ನು ಮುಗಿಸಿ ಶ್ರೀ ರಾಮ ಮಂದಿರಕ್ಕೆ ಹೋದರೆ, ಅಲ್ಲಿ ಶ್ರೀ ಮಹಾರಾಜರ ಸುತ್ತಲೂ ಜನ ನೆರೆದಿದ್ದಾರೆ. ವೆಂಕಣ್ಣಯ್ಯನವರು ಹಿಂದಿನಿಂದಲೇ, ಕುಳಿತಿದ್ದ ಶ್ರೀ ಮಹಾರಾಜರನ್ನು 
4
ನೋಡುತ್ತಿರುವಾಗಲೇ, ಶ್ರೀ ಮಹಾರಾಜರು  ಕೈ ತೋರಿಸಿ ಇವರನ್ನು ಕರೆದರು. ಹತ್ತಿರ ಕೂರಿಸಿಕೊಂಡು ಇವರ ಬಲ ಕಿವಿಯಲ್ಲಿ ಶ್ರೀ ರಾಮ ತಾರಕ ನಾಮವನ್ನು ಉಪದೇಶಿಸಿದರು. ನಂತರ ಹೇಳಿದರು: 

೧) ತಡೆಯಿಲ್ಲದೇ ನಾಮಸ್ಮರಣೆಯನ್ನು ಮಾಡು.
೨) ರಾಮನಾಮವನ್ನು ಹರಡು- ಪ್ರಚಾರ ಮಾಡು
೩)ಸಣ್ಣ ರಾಮ ಮಂದಿರವೊಂದನ್ನು ಕಟ್ಟಿಸು
೪) ಉಪಾಸನೆಯನ್ನು ಮುಂದುವರೆಸು

ಒಂದೆರಡು ದಿನ ಗೋಂದಾವಳಿಯಲ್ಲಿ ಮಹಾರಾಜರ ಸಾನ್ನಿಧ್ಯದಲ್ಲಿದ್ದು ತಮ್ಮ ಜಪಾನುಷ್ಠಾನವನ್ನು ಜರುಗಿಸಿದರು. ನಂತರ ಶ್ರೀ ಮಹಾರಾಜರ ಅಪ್ಪಣೆ ಪಡೆದು, ಅವರಿಂದ ಆಶೀರ್ವಾದ ಪೂರ್ವಕವಾಗಿ ಪಾದುಕೆಯನ್ನು ಪಡೆದು ಚಿಕ್ಕನಾಯಕನಹಳ್ಳಿಗೆ ಹಿಂದಿರುಗಿದರು. ಸದ್ಗುರುಗಳ ಪಾದುಕೆಯನ್ನು ಪಡೆದು ಗೋಂದಾವಳಿಯಿಂದ ಹೊರಟಾಗ ಶ್ರೀ ಮಹಾರಾಜರು ಮಂದಿರ ಕಟ್ಟಿಸಲು ಮೂಲ ಧನವಾಗಿ ಒಂದು ರೂಪಾಯಿ ನಾಣ್ಯವನ್ನು ಪ್ರಸಾದವಾಗಿ ಕೊಟ್ಟರು. ಮನೆಯಲ್ಲಿ, ಶ್ರೀ ಮಹಾರಾಜರ ಚಿತ್ರ, ಪಾದುಕೆಗಳನ್ನು ದೇವರ ಮನೆಯಲ್ಲಿಟ್ಟು ಪೂಜಿಸುತ್ತಾ ತಮ್ಮ ಅನುಷ್ಠಾನವನ್ನು ಮುಂದುವರೆಸಿದರು. ಆದರೆ, ಶ್ರೀ ಮಹಾರಾಜರನ್ನು ಮತ್ತೆ ನೋಡುವ ಅವಕಾಶ ಇವರಿಗೆ ಲಭ್ಯವಿರಲಿಲ್ಲ. ಗೋಂದಾವಳಿಯಿಂದ ಹಿಂತಿರುಗಿದ ಒಂದು ತಿಂಗಳಿನಲ್ಲೇ  ಶ್ರೀ ಮಹಾರಾಜರವರು ದೇಹ ಬಿಟ್ಟ ವಾರ್ತೆ ಇವರಿಗೆ ಟೆಲಿಗ್ರಾಮ್ ಮೂಲಕ ಬಂ ಬಂದಿತು . ಕೇಳಿ ಬಹಳ ದುಃಖಪಟ್ಟು ಗೋಂದಾವಳಿಗೆ ಮತ್ತೆ ಹೋಗಿ ಬಂದರು. ಸದ್ಗುರುವು ತಂದೆಗೆ ಸಮಾನವೆಂದು ತಮ್ಮ ಕೇಶ ಮುಂಡನ ಮಾಡಿಸಿಕೊಂಡು ಧರ್ಮೋದಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಮಹಾರಾಜರು ದೇಹ ಬಿಡುವ ಸ್ವಲ್ಪದಿನ ಮೊದಲು ಶ್ರೀ ವೆಂಕಣ್ಣಯ್ಯನವರಿಗೆ ದರ್ಶನ ನೀಡಿ ಗೋಂದಾವಳಿಗೆ ಕರೆಯಿಸಿಕೊಂಡು ಉಪದೇಶ ನೀಡಿ ಕಳುಹಿಸಿದುದು ಒಂದು ರೋಚಕ ವಿಷಯ. 
ಶ್ರೀ ಮಹಾರಾಜರು ಅವರ ಜೀವಿತ ಕಾಲದಲ್ಲಿ ಅನೇಕ ರಾಮಮಂದಿರಗಳನ್ನು ಕಟ್ಟಿಸಿದ್ದರು. ಕಟ್ಟುವಂತೆ ಪ್ರೇರೇಪಿಸಿದ್ದರು. ಅನೇಕ ಜನರಿಗೆ ರಾಮನಾಮವನ್ನು ಅನುಗ್ರಹಿಸಿ ಅವರನ್ನು ಉದ್ಧರಿಸಿದ್ದರು. ಆದರೆ, ಅಂದಿನ ಮೈಸೂರು ರಾಜ್ಯದ ಯಾವುದೋ ಪ್ರದೇಶದಲ್ಲಿದ್ದ ಶ್ರೀ ವೆಂಕಣ್ಣಯ್ಯನವರನ್ನು ಜ್ಞಾಪಿಸಿಕೊಂಡಂತೆ ತಮ್ಮ ಜೀವಿತಾವಧಿಯ ಕೊನೆ ಕೊನೆಯಲ್ಲಿ ಅವರನ್ನು ಕರೆಯಿಸಿಕೊಂಡದ್ದು ಮೈಸೂರು ರಾಜ್ಯದ ಅನೇಕ ಜನರಿಗೆ ರಾಮನಾಮದ ಸವಿ ಹತ್ತುವಂತಾಯಿತು. ಸಚ್ಚಾರಿ ತ್ರ್ಯ ಬೆಳೆಸಲು ನೆರವಾಯಿತು. 
ಗೋಂದಾವಳಿಯಿಂದ ಹಿಂತಿರುಗಿದ ಕೆಲವೇ ದಿನಗಳಲ್ಲಿ ಅವರಿಗೆ ಪ್ರಮೋಷನ್ ಮೇಲೆ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಗೆ ವರ್ಗವಾಯಿತು. ಚಿಕ್ಕನಾಯಕನಹಳ್ಳಿಯಲ್ಲಿ ಇವರೊಡನಿದ್ದ ಹಲವಾರು ಮಿತ್ರರು ಶ್ರೀ ಮಹಾರಾಜರ ಅನನ್ಯ ಭಕ್ತರಾಗಿಬಿಟ್ಟರು.
5
ಗುಂಡ್ಲುಪೇಟೆಯಲ್ಲಿ ಇವರ ಕಛೇರಿಯಲ್ಲಿ ಮುಖ್ಯ ಗುಮಾಸ್ತರಾಗಿದ್ದ ಶ್ರೀ ಏ.ಪಿ. ಸುಬ್ಬರಾಯರೊಡನೆ ಮನೆ ಮಾಡಿಕೊಂಡಿದ್ದರು. ನಿತ್ಯವೂ ಮುಂಜಾನೆ ೪ ಘಂಟೆಗೇ ಎದ್ದು ಆಹ್ನಿಕಗಳನ್ನು ತೀರಿಸಿ    ಬೆಳ ಗಾ ಗುವವರೆಗೂ ಜಪಾನುಷ್ಠಾನ ಮಾಡುತ್ತಿದ್ದರು.

ಗುಂಡ್ಲುಪೇಟೆಯಲ್ಲಿರುವಾಗ ರಸ್ತೆ ಕಾಮಗಾರಿಕೆಗಾಗಿ ಶ್ರೀ ವೆಂಕಣ್ಣಯ್ಯನವರು ಸೈಕಲ್ಮೇಲೆ ಕಾಡಿನಲ್ಲಿ ಗಾ ಹೋಗಬೇಕಾಗುತ್ತಿತ್ತು. ಒಂದು ಸಂಜೆ, ಮನೆಗೆ ಹಿಂತಿರುಗುತ್ತಿರುವಾಗ ಒಂದು ಹುಲಿ ಅತಿ ಸಮೀಪದಲ್ಲಿ ಕುಳಿತಿರುವುದು ಅವರ ಗಮನಕ್ಕೆ ಬಂದಿತು. ಎಂತಹ ಸಂಧರ್ಭ! ಅವ ರಿಗೆ ಹಿಂತಿರುಗಲೂ ಭಯ, ಮುಂದೆ ಹೋಗಲೂ ಭಯ. ಆಗ ಶ್ರೀ ಮಹರಾಜರನ್ನು ನೆನೆಯುತ್ತಾ, "ಗುರು ಮಹರಾಜ್, ಗುರೂ ಜೈ ಜೈ ಪರಬ್ರಹ್ಮ ಚೈತನ್ಯ ಸದ್ಗುರೂ" ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಸೈಕಲ್ಲನ್ನು ಜೋರಾಗಿ ತುಳಿಯುತ್ತಾ ಮುಂದೆ ಹೊರಟು ಹೋದರು. ಹುಲಿಯು ನೋಡುತ್ತಾ ಕುಳಿತಿತ್ತು. ಏನೂ ಮಾಡಲಿಲ್ಲ. ಇದೇ ರೀತಿ ಮುಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಹ ಒಂದು ಹುಲಿಯ ಹತ್ತಿರ ಹಾದು ಹೋಗುವಂತಾಯಿತು. ಕಾಡಿನಲ್ಲಿ ರಸ್ತೆ ಮಾಡಿಸುತ್ತಿದ್ದ ಸಮಯ. ಕೆಲಸಕ್ಕೆ ಹೋಗಿಬರಲು ಕುದುರೆ ಸವಾರಿ ಮಾಡುತ್ತಿದ್ದರು. ಒಂದು ಸಂಜೆ ಕೆಲಸ ಮುಗಿಸಿ ಹಿಂತಿರುಗುತ್ತಾ ಇರುವಾಗ ಕುದುರೆಯು ಅಪಾಯ ಸೂಸುವಂತೆ ಮುಂದೆಹೋಗದೆ, ಹಿಂದೆ ಹಿಂದೆ ಹೆಜ್ಜೆ ಹಾಕಲು ಪ್ರಾರಂಭಿಸಿತು. ಆಗ ಏನು ಕಾರಣವಿರಬೇಕೆಂದು ಸ್ವಲ್ಪ ಗಮನಿಸಲು, ಮುಂದೆ ಹೋಗುವ ಕಾಲುದಾರಿಗೆ ಅನತಿದೂರದಲ್ಲಿ ಒಂದು ಹುಲಿ ಕುಳಿತಿರುವುದನ್ನು ನೋಡಿದರು. ಹಿಂದಿರುಗೋಣ, ಎಂದರೆ ಈಗಾಗಲೇ  ಸಂಜೆಯಾಗಿದೆ. ರಾತ್ರಿ ಅರಣ್ಯದಲ್ಲಿ ಕಳೆಯಬೇಕಾಗುವುದು. ಅದು ಇನ್ನೂ ಅಪಾಯ. ಆದ್ದರಿಂದ ಧೈರ್ಯ ಮಾಡಿ ಶ್ರೀ ಮಹಾರಾಜರನ್ನು ಧ್ಯಾನಿಸುತ್ತಾ ಕುದುರೆಯನ್ನು ಹುರಿದುಂಬಿಸಿ ಮುಂದಕ್ಕೆ ಓಡಿಸಿದರು. ಹುಲಿಯು ಇವರನ್ನು ಗಮನಿಸಿದರೂ ಏನೂ ಮಾಡಲಿಲ್ಲ.
ಗುಂಡ್ಲುಪೇಟೆಯಲ್ಲಿ ನೆಡೆದ ಮತ್ತೆರಡು ಘಟನೆಗಳನ್ನು ಇಲ್ಲಿ ಹೇಳಬೇಕಾದ್ದು ಅವಶ್ಯ.
ಶ್ರೀ ಮಹಾರಾಜರ ಅನುಗ್ರಹ ಪಡೆದು ಹಿಂದಿರುಗಿದ ಮೇಲೆ ಮೊದಲ ಶ್ರೀ ರಾಮ ನವಮಿಯನ್ನು ಗುಂಡ್ಲುಪೇಟೆಯಲ್ಲಿ ಆಚರಿಸಿದರು.ಪೂಜೆಯ ನಂತರ ಮಧ್ಯಾಹ್ನ ಪ್ರಸಾದ ಹೆಸರುಬೇಳೆ ಕೋಸಂಬರಿ, ಪಾನಕ. ಬಂದಿದ್ದವರಿಗೆಲ್ಲಾ ಕೂಡಿಸಿ ಬಡಿಸುತ್ತಿದ್ದರು. ಶ್ರೀ ರಾಮನವಮಿಯ ದಿನ ಉಪವಾಸದ ದಿನ, ಬೇರೆ ಏನೂ  ಊಟ ಮಾಡುವ ಹಾಗಿಲ್ಲ. ಬಂದವರೆಲ್ಲಾ ಹೊಟ್ಟೆಯ ತುಂಬ ತಿನ್ನಬೇಕೆಂಬ ಉದ್ದೇಶದಿಂದ ಮತ್ತೆ ಮತ್ತೆ ಕೇಳಿ ಬಡಿಸುತ್ತಿದ್ದರು. ಆಗ ಸಾಲಿನಲ್ಲಿ ಕುಳಿತಿದ್ದ ಒಬ್ಬ ಬ್ರಾಹ್ಮಣ ಏನೂ ತಿನ್ನದೆ ಹಾಗೇ ಕುಳಿತಿದ್ದನ್ನು ಗಮನಿಸಿ, ತಿನ್ನಲು ಪ್ರಾರ್ಥಿಸಿದರು. ಆಗ ಆ ಬ್ರಾಹ್ಮಣನು, ಮೂರು ದಿನಗಳಿಂದ  ಹೆಂಡತಿ ಮಕ್ಕಳು ಉಪವಾಸವಿರುವರೆಂದೂ, ಮನೆಗೆ ತೆಗೆದುಕೊಂಡು ಹೋಗಿ ಅವರಿಗೆ ಕೊಟ್ಟು ತಾನೂ ತಿನ್ನುವೆನೆಂದು ಹೇಳಿದನು. ಅದನ್ನು ಕೇಳಿ ವೆಂಕಣ್ಣಯ್ಯನವರು ಮರುಕ ಪಟ್ಟು ಆತನಿಗೆ ಅಲ್ಲೇ ತಿನ್ನಲು ಹೇಳಿ, ನಂತರ ಮನೆಯವರಿಗಾಗುವಷ್ಟು ಕೋಸಂಬರಿ, ಪಾನಕ ಕೊಟ್ಟು ಕಳುಹಿಸಿ ಸಂಜೆ ಪುನಃ ಬರಲು ಹೇಳಿದರು. ಆ ಬ್ರಾಹ್ಮಣನು ಸಂಜೆ ಬಂದಾಗ ವಿಚಾರಿಸಿದರೆ, ಅವರು ಸರ್ಕಾರಿ ರೆವೆನ್ಯೂ ಇಲಾಖೆಯಲ್ಲಿ ಶೇಕ್ದಾರ್ ಆಗಿ ಕೆಲಸ ಮಾಡುತ್ತಿದ್ದು, ಏನೋ ಒಂದು ತಪ್ಪಿಗಾಗಿ ಅವರನ್ನು ಮೂರುವರ್ಷಗಳ ಕೆಳಗೆ ಅಮಾನತ್ತು ಗೊಳಿಸಿದ್ದರು. ಮೂರು ವರ್ಷಗಳಿಂದ  ಆತನು ಭಿಕ್ಷೆಬೇಡುತ್ತಾ ಜೀವಿಸುತ್ತಿರುವೆನೆಂದು ಹೇಳಿದನು. ಆಗ ಶ್ರೀ ವೆಂಕಣ್ಣಯ್ಯನವರು ಎರಡು ಸೇರು ಅಕ್ಕಿ, ತೊಗರಿಬೇಳೆ, ಎರಡು ರೂಪಾಯಿಗಳನ್ನು ಕೊಟ್ಟು, ಇನ್ನು ಯಾವಾಗಲಾದರೂ ಅತ್ಯವಶ್ಯಕವಾದಾಗ ಪುನಃ ಬರಲು ಹೇಳಿದರು.


ಇದಾಗಿ 4-5 ದಿನಗಳು ಕಳೆದಿರಬಹುದು. ಎಂದಿನಂತೆ ಪ್ರಾತಃಕಾಲ ನಾಲ್ಕು ಗಂಟೆಗೆ ಎದ್ದು ದೇವರ ಪೂಜೆಮುಗಿಸಿ ಜಪಾನುಷ್ಠಾನ ಮಾಡುತ್ತ ಕುಳಿತಿರುವಾಗ ಶ್ರೀಮಹಾರಾಜರು ಕಾಣಿಸಿಕೊಂಡು, "ಶ್ರೀ ರಾಮನವಮಿಯ ದಿನ ಬಂದಿದ್ದ ಆ ಬಡ ಬ್ರಾಹ್ಮಣನಿಗೆ ನಾನು ನಿನಗೆ ಕೊಟ್ಟಿದ್ದ ರೂಪಾಯಿ ನಾಣ್ಯವನ್ನು ಕೊಟ್ಟು ಬಿಡು" ಎಂದು ಹೇಳಿದಂತಾಯಿತು. ತಕ್ಷಣ ಬೆಚ್ಚಿಬಿದ್ದ ವೆಂಕಣ್ಣಯ್ಯನವರು ಪಕ್ಕದಲ್ಲೇ ಇದ್ದ ಮಿತ್ರ ಏ.ಪಿ.ಸುಬ್ಬರಾಯರಿಗೆ ಈ ವಿಷಯ ತಿಳಿಸಿದರು.
ಇದಾದ ಸ್ವಲ್ಪ ಹೊತ್ತಿನಲ್ಲೇ ಮನೆಗೆ ಯಾರೋ ಬಂದಂಥಾಗಿ,ಬಾಗಿಲು ತೆಗೆದು ನೋಡಿದರೆ, ಆ ಬಡ ಬ್ರಾಹ್ಮಣನು ನಿಂತಿದ್ದನು. ವಿಚಾರಿಸಲು ಆತನು ಹೇಳಿದನು, "ಈ ದಿನ ಬೆಳಗಿನ ಝಾವ ಒಂದು ಕನಸು ಬಿತ್ತು. ಅದರಲ್ಲಿ ಒಬ್ಬ ಸಧೃಡ ರಾಗಿದ್ದ ಒಬ್ಬ ಬ್ರಾಹ್ಮಣರು ಕಾಣಿಸಿಕೊಂಡು," ನೀನು ಶ್ರೀರಾಮ ನವಮಿಯ ದಿನ ಹೋಗಿದ್ದವರ ಬಳಿಗೆ ಹೋಗು, ನಿನಗೆ ಒಳ್ಳೆಯದಾಗುವುದು", ಎಂದು ಹೇಳಿದರು.  ಇದನ್ನು ನಿಮಗೆ ಹೇಳಲು ಸಂಕೋಚವಾಗುತ್ತದೆ ಎಂದು ಆತನು ಹೇಳಿದನು. ಅದಕ್ಕೆ ವೆಂಕಣ್ಣಯ್ಯನವರು, ಏನೂ ಸಂಕೋಚ ಪಡಬೇಕಾದ್ದಿಲ್ಲ, ನನಗೂ ಗುರು ಆಜ್ಞೆಯಾಗಿದೆ, ಅಂತ ಹೇಳಿ ಒಳಗೆ ಕರೆದು ಕುಳ್ಳಿರಿಸಿ ಆತನಿಗೆ  ತಾಂಬೂಲದಲ್ಲಿ ಶ್ರೀ ಮಹಾರಾಜರು ಕೊಟ್ಟಿದ್ದ, ಪೂಜೆಗಿಟ್ಟಿದ್ದ ರೂಪಾಯಿ ಜೊತೆಗೆ ಮತ್ತೊಂದು ರೂಪಾಯಿ ಸೇರಿಸಿ ಅವರಿಗೆ ಕೊಟ್ಟರು.
ಇದಾದ ಸುಮಾರು ಒಂದೂವರೆ ತಿಂಗಳಿಗೆ ಆತನಿಗೆ ತನ್ನ ಕೆಲಸಕ್ಕೆ ಮತ್ತೆ ಕರೆ ಬಂದು ಆತನ ಜೀವನ ಉತ್ತಮವಾಯಿತು.
ಗುಂಡ್ಲುಪೇಟೆಯಲ್ಲಿರುವಾಗ ಆದ ಮತ್ತೊಂದು ಘಟನೆ,  ಶ್ರೀ ಮಹಾರಾಜರು ಶ್ರೀ ವೆಂಕಣ್ಣಯ್ಯನವರನ್ನು ಸದಾ ಕಾಯುತ್ತಿದ್ದರೆಂದು ಮನದಟ್ಟಾಗುವುದು.
ಅವರು ಸಬ್-ಓವರ್ಸೀಯರ್ ಆಗಿದ್ದು ಪ್ರವಾಸೀ ಕಟ್ಟಡದ ಬಡಾವಣೆ ಕೆಲಸ ಮಾಡಿಸುತ್ತಿದ್ದರು. ಕೆಲಸ ನಡೆದ ಹಾಗೆಲ್ಲಾ ಅಳತೆಮಾಡಿ ಕಂಟ್ರಾಕ್ಟರಿಗೆ ಆರೇಳು ಬಿಲ್ಲುಗಳ ಮೊಬಲಗು ಸಂದಾಯವಾಗಿತ್ತು. ನಿಯಮದಂತೆ ಅಲ್ಲಿನ ಸಬ್ ಡಿವಿಶನಲ್ ಆಫೀಸರ್ ಶ್ಯಾಮರಾಯರೇ ಕೊನೆಯ ಅಳತೆ ಮಾಡಿದಾಗ ಬಿಲ್ಲಿಗಿಂತ 4೦೦ ರೂಪಾಯಿ ಗಳಷ್ಟು ಹೆಚ್ಚು, ಕಂಟ್ರಾಕ್ಟರ್ ಗೆ ಸಂದಾಯವಾಗಿತ್ತು. ಇದರಿಂದ ಶ್ರೀ ವೆಂಕಣ್ಣಯ್ಯನವರು ಕಂಟ್ರಾಕ್ಟರನ ಜೊತೆ ಶಾಮೀಲಾಗಿ ಸುಳ್ಳು ಅಳತೆಯನ್ನು ಕೊಟ್ಟು ಸರ್ಕಾರಕ್ಕೆ ಮೋಸಮಾಡಿದಂತಾಯಿತು. ಆಫೀಸರ್ ಶ್ಯಾಮರಾಯರು ದೋಷಾರೋಪಗಳೊಂದಿಗೆ ಬಿಲ್ಲನ್ನು ಮೇಲಿನ ಆಫೀಸರಿಗೆ ಕಳುಹಿಸಿದರು. ಈ ಅಚಾತುರ್ಯಕ್ಕೆ ಆ ಕೆಲಸದ ಕಂಟ್ರಾಕ್ಟರೇ ಕಾರಣ. ಅವನೇ ಒಂದು ಕಡೆ ಟೇಪನ್ನು ಹಿಡಿದುಕೊಂಡು ಇವರಿಗೆ ಅಳತೆ ಕೊಟ್ಟಿದ್ದ ಪರಿಣಾಮ. ಶ್ರೀ ವೆಂಕಣ್ಣಯ್ಯನವರಿಗೆ ಬಹಳ ಸಂಕಟವಾಯಿತು. ಅವರ ಸ್ಥಿತಿ ಶೋಚನೀಯವಾಗಿತ್ತು. ಹೀಗೆ, ಆರೇಳು ದಿನ ಕಳೆಯಿತು.ಮೇಲಿನ ಆಫೀಸರಿಂದ ಅಳತೆ ಪುಸ್ತಕ ಕಳುಹಿಸುವಂತೆ ಕರೆ ಬಂದಿತು. ಈ ಪುಸ್ತಕವೂ ಶ್ರೀ ವೆಂಕಣ್ಣಯ್ಯನವರಲ್ಲೇ ಇತ್ತು. ಆದರೆ, ಈ ಕರೆ ಬಂದಮೇಲೆ, ಮನೆಯಲ್ಲಿಯೂ, ಅಫೀಸಿನಲ್ಲಿಯೂ ಪುಸ್ತಕಕ್ಕಾಗಿ ಹುಡುಕಲಾಯಿತು. ಪುಸ್ತಕ ಸಿಗಲಿಲ್ಲ. ಆರೇಳು ದಿನಗಳ ನಂತರ ಈ ಪುಸ್ತಕಕ್ಕಾಗಿ ತಂತಿ ಕರೆ ಬಂದಿತು. ಆಗ ಶ್ರೀ ವೆಂಕಣ್ಣಯ್ಯನವರೂ, ಆಫೀಸ್ ನಲ್ಲಿದ್ದ ಸಹೋದ್ಯೋಗಿಗಳೂ ಈ ಪುಸ್ತಕಕ್ಕಾಗಿ ಹುಡುಕಿದರೂ ಸಿಗಲಿಲ್ಲ. ಶ್ಯಾಮರಾಯರು  ಪುನಃ  ರಿಪೋರ್ಟ್ ಮಾಡಲು ಉದ್ಯುಕ್ತರಾದರು.


ಆ ದಿನ ಮಧ್ಯಾಹ್ನ ಎರಡು ಘಂಟೆ ಸಮಯದಲ್ಲಿ ಟೇಬಲ್ಲಿನ ಪಕ್ಕದಲ್ಲಿ ವೆಂಕಣ್ಣಯ್ಯನವರು ಕುರ್ಚಿಯಲ್ಲಿ ಕುಳಿತಿದ್ದಾಗ ಏಕೋ ಜಂಪು ಬಂದಂತಾಯಿತು. ಶ್ರೀ ಗುರುನಾಥನು ಕಾಣಿಸಿಕೊಂಡು "ಹೆದರಬೇಡವೋ" ಎಂದು ಹೇಳಿ ಬೆನ್ನಿನ ಮೇಲೆ ಹೊಡೆದಂತಾಯಿತು. ಇದಾಗಿ ಸುಮಾರು ಹತ್ತು ನಿಮಿಷಗಳು ಕಳೆದಿದೆ. ಒಬ್ಬ ಮುದುಕನಾದ ಹಳ್ಳಿಯ ರೈತನು ಕಿಟಕಿ ಹತ್ತಿರ ಬಂದು ಅಲ್ಲಿ ಕೆಲಸ ಮಾಡುತ್ತಿದ್ದ ಪುಟ್ಟೂರಾಯರೆಂಬ ಗುಮಾಸ್ತರನ್ನು "ಒಂದು ಕಾರ್ಡ್ ಕೊಡಿ" ಎಂದು ಕಿಟಕಿಯೊಳಗೆ ಮೂರು ಕಾಸು ಇಟ್ಟನು. ಅದಕ್ಕೆ ಪುಟ್ಟೂರಾಯರು,"ಇದು ಪೋಸ್ಟ್ ಆಫೀಸ್ ಅಲ್ಲ. ಹಿಂದುಗಡೆ ಪಕ್ಕದಲ್ಲಿದೆ. ಅಲ್ಲಿಗೆ ಹೋಗಿ ಕೇಳು" ಎಂದರು. ಆಗ ಆ ರೈತನು , "ಬುದ್ಧಿ,ದಾರಿಯಲ್ಲಿ ಈ ಪುಸ್ತಕ ಸಿಕ್ಕಿತು. ನನ್ನ ಮಗನಿಗೆ ಬರೆಯೋಕ್ಕಾಗ್ತದಾ ನೋಡಿ" ಎಂದು ಅವರ ಕೈಗೆ ಒಂದು ಪುಸ್ತಕ ಕೊಟ್ಟನು. ಆಶ್ಚರ್ಯ! ಅದೇ ಕಳೆದು ಹೋಗಿದ್ದ ಅಳತೆ ಪುಸ್ತಕ. ಆಗ ಪುಟ್ಟೂರಾಯರು, "ಇದು ಸರ್ಕಾರದ ಪುಸ್ತಕ. ನಿನ್ನ ಮಗ ಇದರಲ್ಲಿ ಬರೆದರೆ ಅವನನ್ನು ಜೈಲಿಗೆ  ಹಾಕುತ್ತಾರೆ" ಎಂದು ಹೇಳಿದರು.ಅಗ ರೈತನು, "ಬುದ್ಧಿ, ಹಾಗಾದರೆ ನೀವೇ ಇಟ್ಟುಕೊಳ್ಳಿ" ಎಂದು ಹೇಳಿ ಹೊರಟು ಹೋದನು.
ಕೂಡಲೇ, ಆ ಗುಮಾಸ್ತರು, "ವೆಂಕಣ್ಣಯ್ಯನವರೇ, ನಿಮ್ಮ ಪುಸ್ತಕ ಸಿಕ್ಕಿತು" ಎಂದರು. ಶ್ರೀ ವೆಂಕಣ್ಣಯ್ಯನವರು ಆನಂದ ಪರವಶರಾಗಿ ಎಲ್ಲರಿಗೂ ತೋರಿಸಿ   ಆಫೀಸರಿಗೆ ಕೊಟ್ಟರು .ಅವರು ಆ ಪುಸ್ತಕವನ್ನು ಮೈಸೂರು ಅಫೀಸ್ ಗೆ ಕಳುಹಿಸಿದರು.ಆ ಸಮಯಕ್ಕೆ ಸರಿಯಾಗಿ ಈ ಕಂಟ್ರಾಕ್ಟರ್ ಮಾಡಿದ ಮೂರು ನಾಲ್ಕು ಕೆಲಸಗಳ ಬಿಲ್ಲು ಬಟವಾಡೆಗೆ  ಸಿದ್ಧವಾಗಿತ್ತು. ಈ ಹೆಚ್ಚು ಕೊಟ್ಟ ಮೊಬಲಗನ್ನು ಆ ಬಿಲ್ಲುಗಳಲ್ಲಿ ವಜಾ ಮಾಡುವಂತೆ  ಮೇಲಿನ ಆಫೀಸರು ಅಪ್ಪಣೆ ಮಾಡಿದರು. ಮುಂದೆ ಆ ವಿಷಯದ ಪ್ರಸ್ತಾಪವೇ  ಬರಲಿಲ್ಲ.
ಇದಾದ ಮೇಲೆ ಶ್ರೀ ವೆಂಕಣ್ಣಯ್ಯನವರಿಗೆ ಬಹಳ ಬೇಜಾರಾಗಿತ್ತು. ಸ್ವಲ್ಪ ದಿನಗಳ ನಂತರ ಇವರ ಸ್ವಪ್ನದಲ್ಲಿ ಶ್ರೀ ಮಹಾರಾಜರು ಕಾಣಿಸಿಕೊಂಡು, "ಯೋಚನೆ ಮಾಡಬೇಡ, ಇನ್ನೊಂದೆರಡು ತಿಂಗಳೊಳಗೆ ನಿನಗೆ ಅನುಕೂಲವಾಗುತ್ತೆ" ಎಂದುಹೇಳಿದರು. ಇದರಂತೆಯೇ, ಒಂದು ತಿಂಗಳೊಳಗೆ ಅವರಿಗೆ ಟಿ.ನರಸೀಪುರಕ್ಕೆ ವರ್ಗವಾಯಿತು. ಅವರಿಗೆ ಮುಂದೆ ಯಾವ ತೊಂದರೆಯೂ ಆಗಲಿಲ್ಲ.

ಗೋಂದಾವಳಿಯಲ್ಲಿ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಪ್ರಥಮ ವರ್ಷದ ಆರಾಧನೋತ್ಸವವು ಸಮಾಧಿಮಂದಿರದ ಉದ್ಘಾಟನೆ, ಶಿಲಾ ಪಾದುಕಾ ಸ್ಥಾಪನೆಯೊಂದಿಗೆ ಪ್ರಾರಂಭಿಸಲಾಯಿತು.  ಶ್ರೀ ವೆಂಕಣ್ಣಯ್ಯನವರು ಕಾರ್ಯಕ್ರಮಕ್ಕೆ ಕೆಲವು ಮಿತ್ರರೊಡನೆ  ಹೋಗಿದ್ದರು. ಅಲ್ಲಿ ಸಹಸ್ರಾರು ಮಂದಿ ಭಕ್ತಿ ಭಾವದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಾರ್ಥರಾದರು. ಅಲ್ಲಿ ಶ್ರೀ ವೆಂಕಣ್ಣಯ್ಯನವರಿಗೆ ಶ್ರೀ ಮಹಾರಾಜರ ಅನನ್ಯ ಭಕ್ತರಾದ ಭಾವೂ ಸಾಹೇಬ್ ಕೇತ್ಕರ್, ತಾತ್ಯಾ ಸಾಹೇಬ್ ಕೇತ್ಕರ್ ಮುಂತಾದ ಅನೇಕ ಸಜ್ಜನರ ಸಂಪರ್ಕ ಬೆಳೆಯಿತು. ಅಲ್ಲಿ ಅವರಿಗಾದ ಮತ್ತೊಬ್ಬ ಸಂತರ ಪರಿಚಯವೆಂದರೆ ಶ್ರೀ ಮಹಾರಾಜರ ಪ್ರಮುಖ ಶಿಷ್ಯರಾದ  ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರದು.
       1917 ರಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರು ಶ್ರೀ ರಾಮ ನವಮಿ ಉತ್ಸವಕ್ಕೆ ಶ್ರೀ ವೆಂಕಣ್ಣಯ್ಯನವರನ್ನುಆಹ್ವಾನಿಸಿದ್ದರು. ಒಂಬತ್ತು ದಿನಗಳ ಕಾರ್ಯಕ್ರಮ. ಶ್ರೀ  ವೆಂಕಣ್ಣಯ್ಯನವರು ಹತ್ತು ದಿನಗಳ ರಜಾ ಸಲುವಾಗಿ ಆಫೀಸಿಗೆ ಅರ್ಜಿ ಹಾಕಿದರು. ಕಾರ್ಯಕ್ರಮದ ದಿನಗಳು ಹತ್ತಿರ ಬಂದರೂ, ಮುಖ್ಯ ಕಛೇರಿಯಿಂದ  ರಜಾ ಅನುಮೋದಿಸುವ ಪತ್ರ ಬರಲಿಲ್ಲ. ರಜಾ ಸಿಗಲಿಲ್ಲ ಅಂತಾ ಭಾವಿಸಿ, 

ಒಂದೆರಡು ದಿನವಾದರೂ ಹೋಗಬೇಕೆಂದು ಸಂಕಲ್ಪಿಸಿ ಶನಿವಾರ, ಭಾನುವಾರ ರಜಾ ಇದ್ದುದರಿಂದ ಶನಿವಾರ ಬೆಳದಢಿಗೆ ಹೋಗಿಬಿಟ್ಟರು. ಅಲ್ಲಿ ಪೂಜ್ಯ ಶ್ರೀ ಬ್ರಹ್ಮಾನಂದರು ಸಂತೋಷದಿಂದ ಬರಮಾಡಿಕೊಂಡು ಇರಲು ವ್ಯವಸ್ಥೆ ಮಾಡಿಕೊಟ್ಟರು. ಶ್ರೀ ಬ್ರಹ್ಮಾನಂದ ಮಹಾರಾಜರು ಶ್ರೀ ವೆಂಕಣ್ಣಯ್ಯನವರನ್ನು "ಮೈಸೂರು ಬುವಾ" ಎಂದು ಕರೆಯುತ್ತಿದ್ದರು. ಅಲ್ಲಿನ ದಿವ್ಯ ವಾತಾವರಣದಲ್ಲಿ ಒಂದು ದಿನ ಕಳೆದು ಮಾರನೆಯ ದಿನ ಊರಿಗೆ ಹಿಂತಿರುಗಲು ತಯಾರಾಗಿ ಸದ್ಗುರುಗಳ ಬಳಿ ಅಪ್ಪಣೆಗಾಗಿ ಹೋದರು. ಆದರೆ, ಶ್ರೀ ಬ್ರಹ್ಮಾನಂದರು "ಈಗ ಹೋಗಬೇಡ, ಇಲ್ಲೇ ಇರು" ಅಂತ ಹೇಳಿದರು. ಶ್ರೀ ಬ್ರಹ್ಮಾನಂದ ಮಹಾರಾಜರ ವಾಕ್ಯ ಮೀರುವಂತಿಲ್ಲ, ಇದ್ದು ಬಿಟ್ಟರು. ಇನ್ನೆರಡು ದಿನಗಳಾಗುತ್ತಲೇ, ಮತ್ತೆ ಪ್ರಯಾಣಕ್ಕೆ ಹೊರಟು ಅಪ್ಪಣೆ ಪಡೆಯಲು ಹೋದರೆ, ಮತ್ತೆ ಅದೇ ಉತ್ತರ, "ಬೇಡ, ಇರು". ಸದ್ಗುರುಗಳ ಮಾತು ಮೀರುವಂತಿಲ್ಲ. ಆದರೆ ಕೆಲಸದ ಯೋಚನೆ. ಅಳುಕಿನಿಂದಲೇ ಇದ್ದುಬಿಟ್ಟರು. ಆದರೆ, ಮಾರನೆಯ ದಿನವೇ,  ಮುಖ್ಯ ಕಛೇರಿಯಿಂದ ಬಂದ ರಜಾ ಅನುಮೋದನಾ ಪತ್ರ ವನ್ನು ಇವರ ಮಿತ್ರರೊಬ್ಬರು ಬೆಳದಢಿಗೇ ಕಳುಹಿಸಿದ್ದು, ಕೈ ಸೇರಿತು. ಶ್ರೀ ವೆಂಕಣ್ಣಯ್ಯನವರು ಸಂತೋಷದಿಂದ ಶ್ರೀ ಬೆಳದಢಿಯ ರಾಮೋತ್ಸವದ ಪೂರ್ತಿ ಅಲ್ಲಿದ್ದು ಶ್ರೀ ಗುರು ಕೃಪೆಗೆ ಪಾತ್ರರಾದರು.

ಶ್ರೀ ಮಹಾರಾಜರು ಭೌತಿಕ ದೇಹವನ್ನು ಕಳಚಿಕೊಂಡಿದ್ದು ಅನೇಕರಿಗೆ ತಡೆಯಲಾರದ ದುಃಖವಾಗಿಬಿಟ್ಟಿತು. ಅವರಲ್ಲಿ ಶ್ರೀ ಭಾವೂ ಸಾಹೇಬರ ಮಕ್ಕಳಾದ ಶ್ರೀ ಚಿಂತಾಮಣಿ ರಾಮಚಂದ್ರ ಕೇತ್ಕರ್ (ತಾತ್ಯಾ ಸಾಹೇಬ್) ಅತ್ಯಂತ ಭಾವುಕ ಭಕ್ತರಾಗಿದ್ದರು. ಅವರು ಉಪವಾಸವಿದ್ದು ಮಹಾರಾಜರ ದರ್ಶನಕ್ಕಾಗಿ ಬೇಡುತ್ತಿದ್ದರು, ಗೋಳಾಡುತ್ತಿದ್ದರು . ಆಗ ಶ್ರೀ ಮಹಾರಾಜರು ದರ್ಶನ ನೀಡಿ, ಅವರ ಬಳಿ ಸದಾ ಇರುವರೆಂದೂ, ಪ್ಲಾಂಚೆಟ್ (ಒಂದು ತರಹ ಪೆಟ್ಟಿಗೆ, ಅದರ ಮೂಲಕ ಕೆಲವರು ಕೆಲವು ದಿವ್ಯಾತ್ಮಗಳೊಡನೆ ಸಂಪರ್ಕ ಬೆಳೆಸುವರು) ಮೂಲಕ ಮಾತನಾಡುವರೆಂದೂ ಅನುಗ್ರಹಿಸಿದರು. ಅಂತೆಯೇ, ಕುಂದಗೋಳದ ನಾರಾಯಣಪ್ಪನವರಿಗೂ ಸಹ ಪ್ಲಾಂಚೆಟ್ ಮೂಲಕ ಮಾತನಾಡುವ ಅನುಗ್ರಹವ ನ್ನಿತ್ತರು. ಈ  ಇಬ್ಬರು ಮಹಾಶಯರೂ ದೇಶವೆಲ್ಲಾ ಪರ್ಯಟನ ಮಾಡಿ ಶ್ರೀ ಮಹಾರಾಜರ ಭಕ್ತರಿಗೆಲ್ಲಾ ಶ್ರೀ ಮಹಾರಾಜರು ಭೌತಿಕ ದೇಹದಲ್ಲಿಲ್ಲದ ಕೊರತೆಯನ್ನು ತುಂಬಿಬಿಟ್ಟರು. 
ಶ್ರೀ ವೆಂಕಣ್ಣಯ್ಯನವರು ಅನೇಕ ವಿಷಯಗಳಿಗೆ ಈ ಮಹಾಪುರುಷರಿಬ್ಬರ ಮೂಲಕ ಶ್ರೀ ಮಹಾರಾಜರಿಂದ ಮಾರ್ಗ ದರ್ಶನ ಪಡೆಯುತ್ತಿದ್ದರು.

     ವರ್ಗಾವಣೆಗಳಾಗುತ್ತಿದ್ದುದರಿಂದ ಒಂದು ಕಡೆ ನಿಂತು ಶ್ರೀ ಗುರುವಾಜ್ಞೆಯಂತೆ ಶ್ರೀ ರಾಮ ಮಂದಿರ ಕಟ್ಟಿಸಲು ಆಗಲಿಲ್ಲ. ಅದಕ್ಕಾಗಿ ಪರಿತಪಿಸಿ, ಕೆಲಸದಿಂದ ನಿವೃತ್ತರಾಗಲು ಬಯಸಿದರು. ಆದರೆ, ಈ ಮಧ್ಯೆ ಅವರ ತಂದೆಯವರ ನಿಧನವಾಗಿ ಸಂಸಾರದ ಪೂರ್ಣ ಜವಾಬ್ದಾರಿ ಇವರ ಮೇಲಿತ್ತು. ಗಂಜೂರಿನ ಮನೆಯಲ್ಲಿ ಸುಮಾರು ಹತ್ತು ವಯಸ್ಸಿನ ತಮ್ಮ ಮತ್ತು ತಮ್ಮ ತಾಯಿ ಇಬ್ಬರೇ. ಅವರ ಜೊತೆಗೋಸ್ಕರ ತಮ್ಮ ಕುಟುಂಬವನ್ನು ಗಂಜೂರಿನಲ್ಲೇ ಬಿಟ್ಟು ತಾವೊಬ್ಬರೇ ಕೆಲಸದ ಮೇಲೆ ಓಡಾಡಲು ತೀರ್ಮಾನಿಸಿದರು. ಮೊದಲನೇ ಪುತ್ರಿ ಸುಂದರಮ್ಮನವರಿಗೆ ಅವರ ಹನ್ನೆರಡನೇ ವಯಸ್ಸಿನಲ್ಲಿ ಬೆನಕನಕೆರೆಯ ಶ್ರೀ ಸೂರ್ಯನಾರಾಯಣಪ್ಪನವರೊಂದಿಗೆ ವಿವಾಹ ಮಾಡಿದರು. 1922 ರಲ್ಲಿ ಕಿರಿಯ ಮಗಳು ಸುಬ್ಬಲಕ್ಷ್ಮಿಯ ಜನನ. ಮಗು ಕೇವಲ ಹನ್ನೊಂದು ತಿಂಗಳವಳಿದ್ದಾಗ ತಾಯಿ ಲಕ್ಷ್ಮೀ ದೇವಿಯವರು ಬಟ್ಟೆ ಒಗೆಯಲು ತನ್ನ ಅಕ್ಕನ ಕಿರಿಯ ಮಗಳ ಜೊತೆ ನೆಲಭಾವಿಗೆ ಹೋಗಿದ್ದರು. ಹುಡುಗಿ 

ಕಾಲು ಜಾರಿ ನೀರಿನಲ್ಲಿ ಬಿದ್ದಳು. ಅವಳನ್ನು ಹಿಡಿಯಲು ಪ್ರಯತ್ನಿಸಿದ ಲಕ್ಶ್ಮೀ ದೇವಿಯವರೂ ಸಹ ನೀರಿನಲ್ಲಿ ಮುಳಗಿ ಇಬ್ಬರೂ ಕೃಷ್ಣಾರ್ಪಣರಾದರು.  ಈಗ ಅವರ ಸಂಸಾರದಲ್ಲಿ, ಹನ್ನೊಂದು ತಿಂಗಳ ಮಗಳು ಸುಬ್ಬಲಕ್ಷ್ಮಿ, ತಾಯಿ, ಕಿರಿಯ ತಮ್ಮ ಹೊನ್ನಪ್ಪನವರು, ಇಷ್ಟೇ. ಹಿರಿಯ ತಮ್ಮ ಶ್ರೀ ಆದಿನಾರಾಯಣ ಶಾಸ್ತ್ರಿಗಳು ತಮ್ಮ ಸಂಸಾರದ ಜೊತೆ ಪುಣೆಯಲ್ಲಿದ್ದರು. ತಮ್ಮ, ಹೊನ್ನಪ್ಪನವರು ಚಿಂತಾಮಣಿಯಲ್ಲಿ ಒಂದು ಸಣ್ಣ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದರು. ದಿನವೂ ಸೈಕಲ್ ನಲ್ಲಿ ಹೋಗಿ ಬರುತ್ತಿದ್ದರು. ಹೀಗಾಗಿ, ಗಂಜೂರಿನ ವಾಸ ಕಷ್ಟವಾಗಿ ಪರಿಣಮಿಸಿತು.  ಸಂಸಾರವನ್ನು ಹತ್ತಿರದ ಚಿಂತಾಮಣಿ ನಗರಕ್ಕೆ ಬದಲಾಯಿಸಿದರು.  

ಕೊನೆಗೆ, ಭಗವಂತನ ದಯದಿಂದ 1930ರ ಸುಮಾರಿನಲ್ಲಿ ಶ್ರೀ ವೆಂಕಣ್ಣಯ್ಯನವರಿಗೆ ಚಿಂತಾಮಣಿಗೇ ವರ್ಗವಾಯಿತು. ಸುತ್ತಮುತ್ತಲಿನ ಊರಿನ ಕೆರೆ ಕಟ್ಟೆ, ರಸ್ತೆ ಮುಂತಾದ ಸರ್ಕಾರಿ ಕಾಮಗಾರಿಕೆಯ ಮೇಲ್ವಿಚಾರಣೆ ಮಾಡಾಬೇಕಾಗಿದ್ದರಿಂದ . ಹಿಂಡಿಗನಾಳ್, ಜಂಗಮಕೋಟೆ, ಬೆಟ್ಟಹಳ್ಳಿ, ದಿಬ್ಬೂರಹಳ್ಳಿ, ಸಿಡ್ಲಘಟ್ಟ ವಿಜಯಪುರ (ಒಡಗೇನ ಹಳ್ಳಿ) ಮುಂತಾದ ಪ್ರದೇಶಗಳಿಗೆ ಕೆಲಸದ ಸಲುವಾಗಿ ಹೋಗಿಬರುತ್ತಿದ್ದರು.  ಓಡಾಡಲು, ಸರ್ಕಾರ, ಅವರಿಗೆ ಒಂದು ಕುದುರೆ ಗಾಡಿ, ಅದಕ್ಕೆ ಸಾರಥಿ ಒದಗಿಸಿದ್ದರು. ಹೀಗೆ, ಆ ಪ್ರದೇಶಗಳ ಹಾಗೂ ಅವುಗಳ ಹತ್ತಿರವಿದ್ದ ಅನೇಕ ಗ್ರಾಮಗಳ ಜನರ ಪರಿಚಯವಾಯಿತು. ಅವರಲ್ಲಿ ಅನೇಕರು ಶ್ರೀ ವೆಂಕಣ್ಣಯ್ಯನವರ ನಡತೆ, ಅವರು ಮಾಡುವ ಭಜನೆ ಮುಂತಾದುದರಿಂದ ಪ್ರಭಾವಿತರಾಗಿ, ಶ್ರೀ ಬ್ರಹ್ಮಚೈತನ್ಯ ಮಹಾರಾಜರ  ಭಕ್ತರಾದರು. ಅವರುಗಳಲ್ಲಿ ಶ್ರೀ ವೈ. ಸುಬ್ರಹ್ಮಣ್ಯ ಐಯ್ಯರ್, ಶ್ರೀ ಹೆಚ್.ವಿ. ನಂಜಪ್ಪನವರು, ಶ್ರೀ ಬೆಟ್ಟಹಳ್ಳಿ ರಾಮಶೇಷಯ್ಯನವರು, ಕವಿ ಶ್ರೀ ವೈ.ಎಸ್. ಗುಂಡಪ್ಪನವರು, ಶ್ರೀ ಹಿಂಡಿಗನಾಳ್ ಗುಂಡಪ್ಪನವರು ಮುಂತಾದ ಕೆಲವರು ವಿಶೇಷ ಮಿತ್ರರಾದರು.  ಶ್ರೀ ವೆಂಕಣ್ಣಯ್ಯನವರ ಮಿತ್ರರಾದ ಶ್ರೀ ಪಯ್ಯಲೂರು ನಾರಾಯಣ ಐಯ್ಯರ್ ಮತ್ತು ಮೈಸೂರಿನ ಶ್ರೀ ಏ.ಪಿ. ಸುಬ್ಬರಾಯರು ಚಿಕ್ಕನಾಯಕನಹಳ್ಳಿಯಲ್ಲಿದ್ದಾಗಿನಿಂದ ಇವರ ಸಂಪರ್ಕದಲ್ಲಿದ್ದು ಅವರುಗಳ ಕೊನೆಯವರೆಗೂ, ಅವರು ಎಲ್ಲಿದ್ದರೂ ಮಂದಿರಕ್ಕೆ ಬಂದು ಹೋಗುತ್ತಿದ್ದರು.

ಶ್ರೀ ವೆಂಕಣ್ಣಯ್ಯನವರು ಎಲ್ಲಿದ್ದರೂ ಪ್ರತಿ ವರ್ಷ ಆರಾಧನೆಗೆ ಗೋಂದಾವಳಿಗೆ ಹೋಗಿ ಬರುತ್ತಿದ್ದರು. ಒಂದು ಸಲ 1935 ರಲ್ಲಿ  ತಮ್ಮ ತಾಯಿ ಮತ್ತು ಹಲವಾರು ಮಿತ್ರರೊಡನೆ ಆರಾಧನೆಗಾಗಿ ಗೋಂದಾವಳಿಗೆ ಹೊರಟಿದ್ದರು. ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಒಂದು ಘಂಟೆಯ ಮೊದಲೇ ಹೋಗಿ ರೈಲಿಗಾಗಿ ಕಾಯುತ್ತಿದ್ದರು. ರೈಲು ಹೊರಡುವ ವೇಳೆ ಬದಲಾಗಿದ್ದುದು ಗಮನಿಸಿರಲಿಲ್ಲ. ಅಲ್ಲಿದ್ದ ಒಂದು ರೈಲು ವಿಷಲ್ ಹಾಕಿ ಹೊರಡುವುದರಲ್ಲಿತ್ತು. ತಕ್ಷಣ ಶ್ರೀ ಮಹಾರಾಜರು ವೆಂಕಣ್ಣಯ್ಯನವರಿಗೆ ಕಾಣಿಸಿಕೊಂಡು, "ದಡ್ಡರಾ, ನೀವು ಹೋಗಬೇಕಾಗಿರುವ ರೈಲು ಇದೇ. ಆಮೇಲೆ ದುಃಖ ಪಡಬೇಡಿ" ಎಂದು ಹೇಳಿ ಅದೃಶ್ಯರಾದರು. ಅವರನ್ನು ಕಂಡ ವೆಂಕಣ್ಣಯ್ಯನವರು ಅವರ ತಾಯಿಗೆ ತೋರಿಸುವ ಸಲುವಾಗಿ, "ಅಮ್ಮಾ, ಮಹಾರಾಜರು" ಎಂದು ಕೂಗಿದರು. ಆದರೆ ಶ್ರೀ ಮಹಾರಾಜರು ಕ್ಷಣಾರ್ಧದಲ್ಲಿ ಅದೃಶ್ಯರಾಗಿದ್ದರು. ಅವರಿಗಾಗಿ ಸುತ್ತಲೆಲ್ಲ ನೋಡಿದರೂ ಮತ್ತೆ ಕಾಣಲಿಲ್ಲ.ಸುಖ ದುಃಖ ಮಿಶ್ರಿತ ಮನದಿಂದ ಆತುರವಾಗಿ ಹತ್ತಿದ ಕೂಡಲೇ ರೈಲು ಹೊರಟಿತು. ಈ ಘಟನೆಯಿಂದ  ಶ್ರೀ ಮಹಾರಾಜರು  ವೆಂಕಣ್ಣಯನವರನ್ನು ಸದಾ ಕಾಪಾಡುತ್ತಿದ್ದರೆಂಬ ಅಂಶ ಗಮನಕ್ಕೆ ಬರುವುದು.



ಅವರು ಚಿಂತಾಮಣಿಗೆ ಬಂದಮೇಲೆ, ಅಲ್ಲಿ ಹೊಸ ಬಡಾವಣೆ ತಯಾರಾದ ಸಮಯದಲ್ಲಿ ಶ್ರೀ ರಾಮ ಮಂದಿರಕ್ಕಾಗಿ ಒಂದು ದೊಡ್ಡ ನಿವೇಶನವನ್ನು ಖರೀದಿಸಿದರು.
ಈ ಮಧ್ಯೆ ಶ್ರೀ ವೆಂಕಣ್ಣಯ್ಯನವರು ಪೂಜ್ಯ ತಾತ್ಯಾ ಸಾಹೇಬ್ ಕೇತ್ಕರ್ ಮಹಾರಾಜ್ ಮತ್ತು ಪೂಜ್ಯ ಕುಂದಗೋಳ್ ನಾರಾಯಣಪ್ಪ ಮಹಾರಾಜ್ ರವರ ಸಂಪರ್ಕದಲ್ಲಿರುತ್ತಿದ್ದರು. ಆ ಇಬ್ಬರು ಪೂಜ್ಯರೂ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಅನನ್ಯ ಭಕ್ತರಾಗಿದ್ದು ಅವರ ಮೂಲಕ ಶ್ರೀ ಮಹಾರಾಜರು ವಾಣಿ ಸ್ವರೂಪದಲ್ಲಿ ಭಕ್ತರ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನೆಲ್ಲಾ ಅನುಗ್ರಹಿಸುತ್ತಿದ್ದರು, ಸಮಾಧಾನ ನೀಡುತ್ತಿದ್ದರು. 
ಕೊನೆಗೆ, 1939 ರಲ್ಲಿ, ಮಂದಿರಕ್ಕಾಗಿ ಮೊದಲೇ ಕೊಂಡಿದ್ದ ಜಾಗದಲ್ಲಿ ಪೂಜ್ಯ ಕುಂದಗೋಳ್ ನಾರಾಯಣಪ್ಪ ಮಹಾರಾಜರಿಂದ ಶಂಕುಸ್ಥಾಪನೆ ಮಾಡಿಸಿ, ಒಂದು ಸಣ್ಣ ಗರ್ಭಗುಡಿ ಕಟ್ಟಿಸಿ ಅದರಲ್ಲಿ ಶ್ರೀ ರಾಮಚಂದ್ರ ಪ್ರಭುವಿನ, ಹಾಗೂ ಶ್ರೀ ಮಹಾರಾಜರ ಫೋಟೋ ಮತ್ತು ಪಾದುಕೆಗಳನ್ನಿರಿಸಿ ನಿತ್ಯ ಪೂಜೆ ಮಾಡಲು ಪ್ರಾರಂಭಿಸಿದರು. ಹಲವಾರು ಮಿತ್ರರೊಡಗೂಡಿ ಅನುಷ್ಠಾನ ಪ್ರಾರಂಭಿಸಿದರು. ಆಗ ಹದಿಮೂರು ಕೋಟಿ ತಾರಕ ನಾಮದ ಸಂಕಲ್ಪವಾಯಿತು. ಶ್ರೀ ಮಹಾರಾಜರ ವಾಣಿ ರೂಪದಲ್ಲಿ ಜನರನ್ನು ಉದ್ಧರಿಸುತ್ತಿದ್ದ ಶ್ರೀ ತಾತ್ಯಾ ಸಾಹೇಬ್ ಕೇತ್ಕರ್ ಮಹಾರಾಜರನ್ನು ಮತ್ತು ಶ್ರೀ ಕುಂದಗೋಳ್ ನಾರಾಯಣಪ್ಪ ಮಹರಾಜರನ್ನು ಹಲವಾರು ಸಲ ಚಿಂತಾಮಣಿಗೆ ಬರಮಾಡಿಕೊಂಡರು. 
ಮಂದಿರದಲ್ಲಿ ಪ್ರತಿಷ್ಥಾಪನೆ  ಮಾಡಲು ದಿವ್ಯ ಮೂರ್ತಿಗಳನ್ನು ಮಾಡಿಸಲು ಜೈಪುರಕ್ಕೆ ಹೋಗಲು ಆದೇಶವಾಯಿತು. ಅದರಂತೆ ಮಿತ್ರರಾದ ಶ್ರೀ ವೈ.ಸುಬ್ರಹ್ಮಣ್ಯ ಐಯರ್ ಮತ್ತು ಶ್ರೀ ಚೀಮಸಂದ್ರದ ಸುಬ್ಬರಾಯಪ್ಪನವರ ಜೊತೆ ಜೈಪುರಕ್ಕೆ ಹೋಗಿ ಅಮೃತಶಿಲಾ ಮೂರ್ತಿಗಳನ್ನು, ತಮ್ಮ ನಿರ್ದೇಶನದಂತೆ ತಯಾರಿಸಲು ಆಜ್ಞಾಪಿಸಿ ಹಿಂತಿರುಗಿದರು.  ದಿವ್ಯ ಮೂರ್ತಿಗಳು ತಯಾರಾದಮೇಲೆ, ಶ್ರೀ ವೆಂಕಣ್ಣಯ್ಯನವರ ತಮ್ಮ ಶ್ರೀ ಹೊನ್ನಪ್ಪನವರು ಮತ್ತು ಶ್ರೀ ವೆಂಕಣ್ಣಯ್ಯನವರ ಅಳಿಯಂದಿರಾದ  ಶ್ರೀ ಹೆಚ್.ಎನ್.ಸುಬ್ಬರಾಯರು ಜೈಪುರಕ್ಕೆ ಹೋಗಿ ಸ್ವತಃ ರೈಲಿನಲ್ಲಿ ದಿವ್ಯ ಮೂರ್ತಿಗಳನ್ನು ಸುರಕ್ಷಿತವಾಗಿ ತಂದರು.
ಮಂದಿರದ ಕಟ್ಟಡ ತಯಾರಾಯಿತು. 13-6-1949, ಜ್ಯೇಷ್ಟ ಬಹುಳ ತದಿಗೆಯಂದು ಶ್ರೀ ತಾತ್ಯಾ ಸಾಹೇಬ್ ಕೇತ್ಕರ್ ಮಹಾರಾಜ್ ಮತ್ತು ಶ್ರೀ ಕುಂದಗೋಳದ ನಾರಾಯಣಪ್ಪ ಮಹಾರಾಜರ ಸಮ್ಮುಖದಲ್ಲಿ ಸಹಸ್ರಾರು ಭಕ್ತಾಭಿಮಾನಿಗಳು ನೆರೆದಿರಲು, ಶ್ರೀ ರಾಮಚಂದ್ರಮೂರ್ತಿ, ಶ್ರೀ ಸೀತಾ ದೇವಿ, ಶ್ರೀ ಲಕ್ಶ್ಮಣಮೂರ್ತಿ, ಶ್ರೀ ಮಾರುತಿ ಮತ್ತು ಶ್ರೀ ಬ್ರಹ್ಮಚೈತನ್ಯ ಸದ್ಗುರುಗಳ ದಿವ್ಯ ಅಮೃತಶಿಲಾಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.  ಆ ಸಮಯದಲ್ಲಿ ಶ್ರೀ ಮಹಾರಾಜರು ಶ್ರೀ ಕೇತ್ಕರ್ ಮಹಾರಾಜರ ವಾಣಿಯ ಮೂಲಕ ಭಗವಂತನನ್ನು ಕುರಿತು , "ಬಾರೋ ಬಾರೋ ರಘುನಾಥ" (ಯೇರೇ ಯೇರೇ ರಘುನಾಥ) ಎಂಬ ಅಭಂಗ ಹಾಡಿ ಶ್ರೀ ರಾಮನನ್ನು ಇಲ್ಲೇ ಇರುವಂತೆ ಪ್ರಾರ್ಥಿಸಿದರು ಮತ್ತು ತಾವು ಸದಾ ಇಲ್ಲಿರುವುದಾಗಿ ಹೇಳಿದರು.
ಪ್ರತಿಷ್ಟಾಪನಾ ಮಹೋತ್ಸವಕ್ಕೆ ಸ್ಥಳೀಯರಲ್ಲದೆ ಅನೇಕ ಸ್ಥಳಗಳಿಂದ ಭಕ್ತರು ಆಗಮಿಸಿ ಆನಂದೋತ್ಸಾಹದಿಂದ ಭಾಗವಹಿಸಿದರು. ಶ್ರೀ ವೆಂಕಣ್ಣಯ್ಯನವರ ಇಚ್ಚೆ, ಸದ್ಗುರುಗಳ ಆಜ್ಞೆ, ಕೊನೆಗೂ ನೆರವೇರಿತು.


ಮಂದಿರದಲ್ಲಿ ಸದಾ ರಾಮ ನಾಮಸ್ಮರಣೆ, ಜಪಾನುಷ್ಠಾನ, ಅನ್ನದಾನಕ್ಕೆ ಏರ್ಪಾಟಾಯಿತು. ಭಕ್ತರಾದ ಶ್ರೀ ಭಾಸ್ಕರರಾಯರನ್ನು ಅರ್ಚಕಸ್ಥಾನಕ್ಕೂ, ಶ್ರೀ ಸುಬ್ಬರಾಯಪ್ಪನವರನ್ನು ಬೇರೆ ಉಸ್ತುವಾರಿ ಕೆಲಸಗಳಿಗೂ ಗೊತ್ತು ಮಾಡಿಕೊಂಡರು. ಮಂದಿರದ ಆವರಣದಲ್ಲೇ ಸಿಬ್ಬಂದಿಯ ವಾಸಕ್ಕೆ ಮನೆಗಳನ್ನು ಕಟ್ಟಿಸಿದರು.
ಮಂದಿರದ ಖರ್ಚು ನಿಭಾಯಿಸುವ ಸಲುವಾಗಿ ಶ್ರೀ ಮಹಾರಾಜರು ರಾಮದಾಸೀ ಭಿಕ್ಷೆ ಪ್ರಾರಂಭಿಸುವಂತೆ ವೆಂಕಣ್ಣಯ್ಯನವರಿಗೆ ಹೇಳಿದರು. ಈ ಕಾರ್ಯದಲ್ಲಿ ಆಸಕ್ತಿ ತೋರಿಸಿದುದರಿಂದ ಪ್ರತಿ ಗುರುವಾರ ರಾಮದಾಸೀ ಭಿಕ್ಷೆ ಮಾಡಲು ಶ್ರೀ ರಾಮಶೇಷಯ್ಯನವರಿಗೆ ಒಪ್ಪಿಸಿದರು.
ಪರ ಊರಿನ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ  ಸಲುವಾಗಿ ಪ್ರತಿದಿನ ವಾರಾನ್ನವನ್ನು ನೀಡಲು ಏರ್ಪಡಿಸಿದರು. ಇದೇ  ಮುಂದೆ, ಇವರ ಜೀವಿತ ಕಾಲದಲ್ಲೇ, ಇವರ ತಮ್ಮ ಶ್ರೀ ಹೊನ್ನಪ್ಪನವರಿಂದ ಒಂದು ವಿದ್ಯಾರ್ಥಿ ನಿಲಯವಾಗಿ ರೂಪಗೊಂಡಿತು. ಮಂದಿರದ ಮುಂದಿನ ನಿವೇಶನದಲ್ಲಿ ಮಂದಿರದವಿಶೇಷ ಕಾರ್ಯಕ್ರಮಗಳಲ್ಲಿ ದೊಡ್ಡ ಅಡುಗೆ ಮನೆ ಮತ್ತು ಬಚ್ಚಲಮನೆಗಳ ಅವಶ್ಯಕತೆಗೋಸ್ಕರ ಪ್ರಾರಂಭವಾದ ಕಟ್ಟಡ ಮುಂದೆ ಒಂದು ಕಲ್ಯಾಣಮಂಟಪವಾಯಿತು.
ಶ್ರೀ ವೆಂಕಣ್ಣಯ್ಯನವರಿಗೆ ವಯಸ್ಸಾದಂತೆ ಮಂದಿರದ ಕೆಲಸಗಳ ಬಗ್ಗೆ ಹೆಚ್ಚು ಶ್ರಮವಹಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಶ್ರೀ ಮಹಾರಾಜರು ಅವರಿಗೆ ಶ್ರೀ ಬಾಬಾ ಬೆಲಸರೆ ರವರ ಕೈಯಲ್ಲಿ ಬರೆಸಿದ ಒಂದು ಪತ್ರದ ಅನುವಾದ.
ನೀನು ಸಾಕಷ್ಟು ಸಾಧನೆಯನ್ನು ಮಾಡಿರುವೆ. ಇನ್ನು ಮಂದಿರವನ್ನು ನನಗೆ ಬಿಡು. ನಿನಗೆ ಸುಲಭವಾಗಿ ಸಾಧ್ಯವಾದಷ್ಟು ಜಪವನ್ನು ನೀನು ಮಾಡು.
ರಾಮನು ದೊಡ್ಡವನು. ನೀನು ಬಯಸಿದುದನ್ನು ಅವನು ನೆರವೇರಿಸುವನು. ನೀನು ಯಾವುದೇ ಸಂಕಲ್ಪ ಮಾಡಬೇಡ.
ಮಂದಿರಕ್ಕೆ ಉಪಾಸನೆಯು ಸೌಂದರ್ಯವನ್ನು ನೀಡುತ್ತದೆ. ನಿಷ್ಠೆಯಿಂದ ಮಾಡಿದ ರಾಮನಾಮದ ಜಪವೇ ಉಪಾಸನೆ. ಉಪಾಸನೆಗೆ ಧಕ್ಕೆಯಾಗದಂತೆ ನೋಡಿಕೋ (ಪ್ರಯತ್ನಿಸು). ಮಹಾತ್ಮರು ಮಂದಿರಕ್ಕೆ ಭೇಟಿ ನೀಡುವರು.
ಭಯಪಡಪೇಡ. ನೀನು ಕೂಗಿದಾಗ ನಾನು ಸದಾ ನಿನ್ನ ಬಳಿಯಿರುವೆನು.

ಶ್ರೀ ವೆಂಣ್ಣಯ್ಯನವರು ಪ್ರತಿ ನಿತ್ಯ ಪ್ರಾತಃಕಾಲ  4 . ಘಂಟೆ ಗೆ ಎದ್ದು ಒಂದು ಘಂಟೆ ಜಪ ಮಾಡಿ ನಂತರ ಮಂದಿರಕ್ಕೆ ಕಾಕಡಾರತಿಗೆ ಹೋಗುತ್ತಿದ್ದರು. ಕಾಕಡಾರತಿಯ ನಂತರ ಮನೆಗೆ ಬಂದು ಸ್ನಾನ ಮಾಡಿ ದೇವರ ಪೂಜೆ, ಶ್ರೀ ಗುರು ಚರಿತ್ರೆ ಪಾರಾಯಣ ಮಾಡಿ ಮಂದಿರಕ್ಕೆ ಹೋಗಿ, ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ನಂತರ ಮನೆಗೆ ಬಂದು ಉಪಹಾರ ಸ್ವೀಕರಿಸಿ ಮತ್ತೆ ಮಂದಿರಕ್ಕೆ ಹೋಗಿ ಆಫೀಸಿನಲ್ಲಿ 12 ಘಂ. ಯವರೆಗೂ ಕುಳಿತು ಜಪ ಮಾಡುತ್ತಾ ಮಂದಿರದ ವ್ಯ ವಹಾರಗಳನ್ನು ಗಮನಿಸುತ್ತಿದ್ದರು. ಮತ್ತೆ, ಮಧ್ಯಾಹ್ನ 3 ಘಂ.ಗೆ ಸದ್ಗ್ರಂಥ ಪಠನ,  ನಾಲ್ಕು. ಘಂಟೆ ಗೆ ಮಂದಿರದಲ್ಲಿ ಧ್ಯಾನ, ಜಪ. ಮತ್ತೆ ಮನೆಯಲ್ಲಿ 

ರಾತ್ರಿ ಪೂಜೆ, ಫಲಹಾರದ ನಂತರ ಆರತಿ,ಮಂಗಳಾರತಿ ಗೆ ಮಂದಿರಕ್ಕೆ ಭೇಟಿ. ಮನೆಗೆ ಬಂದು ಮತ್ತೆ ಜಪ, ನಿದ್ದೆ ಬರುವವರೆಗೂ.ಹೀಗಿತ್ತು ಅವರ ದಿನಚರಿ.
ವಯಸ್ಸಾದಂತೆ, ಕಣ್ಣು ಕಾಣಿಸದಿದ್ದರೂ ಬೇರೊಬ್ಬರ ಸಹಾಯದಿಂದ ನಿತ್ಯ ಮಂದಿರಕ್ಕೆ ಹೋಗಿ ಕಾಕಡಾರತಿಯಿಂದ ಮೊದಲಗೊಂಡು ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದರು. ಮನೆಯಲ್ಲಿ ನಿತ್ಯ ಪೂಜೆ, ಪಾರಾಯಣ, ಮಂದಿರದ ಆಫೀಸ್ನಲ್ಲಿ ಕುಳಿತು  ಜಪಾನುಷ್ಟಾನ, ಕಛೇರಿ ವ್ಯವಹಾರ, ಪರಸ್ಥಳಗಳಿಂದ ಬಂದ ಭಕ್ತಾದಿಗಳಿಗೆ ಆತಿಥ್ಯ. ಎಲ್ಲವನ್ನೂ ಶ್ರಧ್ಧೆಯಿಂದ ಪಾಲಿಸುತ್ತಿದ್ದರು.

ಶ್ರೀ ವೆಂಕಣ್ಣಯ್ಯನವರು ಗೋಂದಾವಳಿಗೆ ಪ್ರಥಮ ಬಾರಿ ಹೋದಾಗ ಶ್ರೀ ಮಹಾರಾಜರು ಸ್ನಾನ ಮಾಡುವ ಮೊದಲು ಬಚ್ಚಲು ಉಜ್ಜಲು ಹೇಳಿದ್ದರಂತೆ. ಅವರು ಪ್ರತಿ ದಿನ ಸ್ನಾನ ಮಾಡುವ ಮುನ್ನ ಬಚ್ಚಲು ಉಜ್ಜಿ ತೊಳೆದು ಸ್ನಾನ ಮಾಡುತ್ತಿದ್ದರು. ತಮ್ಮ ಗುರುಗಳ ಆದೇಶವನ್ನು ಕೊನೆಯವರೆಗೂ ಪಾಲಿಸಿದರು. 

ಶ್ರೀ ವೆಂಕಣ್ಣಯ್ಯನವರು ಶ್ರೀ ರಾಮನಾಮದ ಪ್ರಚಾರ ಮಾಡುತ್ತಾ ಮಂದಿರದ ಶ್ರೇಯಸ್ಸಿಗಾಗಿ ದುಡಿಯುತ್ತಾ , ದಿನಾಂಕ  13-4- 1969 ರಲ್ಲಿ ಚೈತ್ರ ಬಹುಳ ದ್ವಾದಶಿ, ಅವರ ಹುಟ್ಟು ಹಬ್ಬದಂದೇ ಭಗವಂತನಲ್ಲಿ ಐಕ್ಯರಾದರು.

ಶ್ರೀ ಮಹಾರಾಜರ ಅನುಗ್ರಹದಿಂದ ಶ್ರೀ ವೆಂಕಣ್ಣಯ್ಯನವರ ತಮ್ಮಂದಿರಾದ ಶ್ರೀ ಹೊನ್ನಪ್ಪನವರು ಮೊದಲಿನಿಂದಲೂ ಶ್ರೀ ವೆಂಕಣ್ಣಯ್ಯನವರಿಗೆ ಸಹಕಾರನೀಡುತ್ತಾ ಮಂದಿರದ ಕಾರ್ಯಗಳಿಗೆ ತಮ್ಮ ಸೇವಾ ಹಸ್ತವನ್ನು ನೀಡಿದರು.  ಅವರ ಮೇಲ್ವಿಚಾರಣೆಯಲ್ಲಿ ಮಂದಿರವು ಹಲವಾರು ರೀತಿಯಲ್ಲಿ ಅಭಿವೃದ್ಧಿ ಪಡೆಯಿತು. ಆವರು ಮಂದಿರದ ಆಗು ಹೋಗುಗಳನ್ನು ನೋಡಿಕೊಳ್ಳಲು ಒಂದು ಟ್ರಸ್ಟ್ ಮಾಡಿ, ಅದುವರೆಗೂ ಅವರ ಹೆಸರಿನಲ್ಲೇ ಇದ್ದ ಮಂದಿರದ ಆಸ್ತಿ ಪಾಸ್ತಿಗಳನ್ನೆಲ್ಲಾ ಟ್ರಸ್ಟಿಗೆ ಒಪ್ಪಿಸಿದರು.
ಅವರು ಸದಾಕಾಲ ಭಗವಂತನ ಚಿಂತನೆಯಲ್ಲಿದ್ದು 1978 ಜೂನ್  22 ರಂದು ಭಗವದರ್ಪಣರಾದರು.
ಅವರ ನಂತರ ಹೊನ್ನಪ್ಪನವರ ಮಕ್ಕಳು ಮಂದಿರದ ಕಾರ್ಯಗಳನ್ನು ಆಸಕ್ತಿಯಿಂದ, ಭಕ್ತಾದಿ ಮಿತ್ರರ ನೆರವಿನಿಂದ, ಮುಂದುವರೆಸಿಕೊಂಡು ಬರುತ್ತಿದ್ದಾರೆ. 
ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಮಹಿಮೆ ಎಷ್ಟು ಅಂತ ವರ್ಣಿಸಲಾಗುವುದಿಲ್ಲ. ಎಲ್ಲೋ ದೂರದ ಗೋಂದಾವಳಿಯಲ್ಲಿದ್ದುಕೊಂಡೇ ಈ ಪ್ರಾಂತ್ಯದ ಜನರನ್ನು ಅನುಗ್ರಹಿಸಿ, ಭಕ್ತಿಪಂತಕ್ಕೆ ತರುವ ಸಲುವಾಗಿ ಶ್ರೀ ವೆಂಕಣ್ಣಯ್ಯನವರಿಗೆ ದರ್ಶನವಿತ್ತು ರಾಮನಾಮ ಬೋಧಿಸಿದ ಅವರ ಕರುಣೆ ಅಪಾರವಾದದ್ದು.ಅವರು ಚಿಂತಾಮಣಿಯ ಮಂದಿರದಲ್ಲಿ ಸದಾ ವಾಸಿಸುವೆನೆಂದು ಹೇಳಿ, ಶ್ರೀ ರಾಮಚಂದ್ರ ಮೂರ್ತಿಯೊಡನೆ ವಿಜೃಂಭಿಸುತ್ತಿರುವರು.
                                                                                                                      ಜೈ ಜೈ ರಘುವೀರ ಸಮರ್ಥ   

No comments: