ಜಯಾಚಾ ಮುಖೀ ಸರ್ವದಾ ನಾಮ ಕೀರ್ತಿ । ನಮಸ್ಕಾರ ತ್ಯಾ ಬ್ರಹ್ಮಚೈತನ್ಯ ಮೂರ್ತಿ ।।
ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಸಚಿತ್ರ ಸಂಕ್ಷಿಪ್ತ ಚರಿತ್ರೆ
(ಚಿತ್ರ ಕಾರರು : ಶ್ರೀ ಸೂರ್ಯ ಪ್ರಕಾಶ್ ಮತ್ತು ಶ್ರೀ ಅಶೋಕ್ ಭಂಡಾರೆ )
ಮಾರುತಿ ಅವತಾರಿಯೆಂದು ಭಕ್ತರಿಂದ ಪೂಜಿಸಲ್ಪಡುವ , ಸಮರ್ಥ ರಾಮದಾಸರ ಪುನರಾವತಾರಿಯಾದ ಗೋಂದವಲೇಕರ್ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಗುರುಭಕ್ತರಾದ ಶ್ರೀ ಸೂರ್ಯ ಪ್ರಕಾಶ್ ತಮ್ಮ ಮಿತ್ರರೊಡನೆ ತಮ್ಮದೇ ಆದ ಶೈಲಿಯಲ್ಲಿ ಚಿತ್ರಗಳಲ್ಲಿ ರಚಿಸಿದ್ದಾರೆ . ಇದು ಶ್ರೀ ಮಹಾರಾಜರ ಒಂದು ಸಣ್ಣ ಪರಿಚಯ ಲೇಖನವಷ್ಟೇ . ಅವರ ಆಧ್ಯಾತ್ಮಿಕ ಸಾಧನೆ, ಬೋಧನೆ, ಪವಾಡಗಳು, ದಿನ ದಿನವೂ ಹೆಚ್ಚುತ್ತಿರುವ ಅವರ ಭಕ್ತರ ಅಪಾರ ಸ್ತೋಮ , ಅವರುಗಳಿಂದ ನಡೆಯುತ್ತಿರುವ ಅಖಂಡ ಸೇವಾ ಕಾರ್ಯಗಳು ಇವುಗಳೆಲ್ಲವನ್ನೂ ತಿಳಿಸುವ ಪ್ರಯತ್ನ ಇಲ್ಲಿಲ್ಲ . ವಿಶದವಾಗಿ ತಿಳಿಯ ಬಯಸುವವರು ಪೂಜ್ಯ ಬೆಲ್ಸರೆ ಬಾಬಾರವರು ಮರಾಠಿಯಲ್ಲಿ ಬರೆದು , ಹೆಬ್ಬಳ್ಳಿಯ ಪೂಜ್ಯ ಶ್ರೀ ದತ್ತಾವಧೂತರು ಕನ್ನಡಕ್ಕೆ ಅನುವಾದಿಸಿರುವ , ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಚರಿತ್ರೆ ಪುಸ್ತಕವನ್ನು, ಅಥವಾ ಚಿಂತಾಮಣಿ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದಿಂದ ಪ್ರಕಟಿಸಲ್ಪಟ್ಟಿರುವ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಚರಿತ್ರೆಯನ್ನು ಓದಿ ತಿಳಿಯಬಹುದು.
ಬಾಲ್ಯ
ಮಗು ಗಣಪತಿ ಬೆಳೆಯುತ್ತಾ ತಾತ ಅಜ್ಜಿಯರನ್ನು ಹೊಂದಿಕೊಂಡು, ತಾತ ದಿನವೂ ಹೇಳಿಕೊಳ್ಳುತ್ತಿದ್ದ ಶ್ಲೋಕಗಳನ್ನೆಲ್ಲಾ ಸ್ವಚ್ಛವಾಗಿ ಹೇಳತೊಡಗಿದನು. ಅವರು ಮಾಡುತ್ತಿದ್ದ ಭಜನೆಗಳನ್ನು ತಾನೂ ಹೇಳುತ್ತಾ ಕುಣಿಯತೊಡಗುವನು . ಗಣಪತಿಯು ಅತಿಶಯ ಜ್ಞಾಪಕ ಶಕ್ತಿ ಮತ್ತು ಬುದ್ಧಿವಂತ ಶಿಶು ಎಂದು ಎಲ್ಲರಿಗೂ ಮನವರಿಕೆಯಾಗುತ್ತಿತ್ತು.
ಗಣಪತಿಯನ್ನು ಅಣ್ಣಾ ಕರ್ಶಿಕರರು ನಡೆಸುತ್ತಿದ್ದ ಪಾಠಶಾಲೆಗೆ ಸೇರಿಸಿದರು . ಅಲ್ಲಿ ಗಣಪತಿಯು ಬಹುಬೇಗ ಉಪಾಧ್ಯಾಯರು ಹೇಳಿಕೊಟ್ಟದ್ದನ್ನೆಲ್ಲಾ ಕಲಿತುಬಿಟ್ಟನು . ಉಪಾಧ್ಯಾಯರಿಗೆ ಕಲಿಸಲು ಮತ್ತೇನೂ ಉಳಿದಿರಲಿಲ್ಲ .
ಅವರ ಮನೆಯ ಬಳಿ ಒಂದು ಸಣ್ಣ ಮಾರುತಿ ಗುಡಿ ಇತ್ತು . ಅಲ್ಲಿಗೆ ಆಗಾಗ ದಾರಿಹೋಕ ಸಾಧುಗಳು ಬಂದಿದ್ದು ಹೋಗುತ್ತಿದ್ದರು . ಗಣಪತಿಯು ಅವರೊಡನೆ ಭಗವಂತನ ವಿಷಯ ಚರ್ಚೆ ಮಾಡುವನು . ಒಂದು ಸಲ ಒಬ್ಬ ಸಾಧುವನ್ನು ನೀವು ಭಗವಂತನನ್ನು ನೋಡಿದ್ದೀರಾ ಎಂದು ಕೇಳಿದನು. ಆಗ ಆ ಸಾಧುವು ದುಃಖಪೂರಿತನಾಗಿ " ಇಲ್ಲ . ಗುರುವಿನ ಅನುಗ್ರಹವಾಗದೇ ಭಗವಂತನನ್ನು ನೋಡಲು ಸಾಧ್ಯವಿಲ್ಲ .ಆದ್ದರಿಂದಲೇ ಗುರುವನ್ನು ಹುಡುಕಿಕೊಂಡು ಹೊರಟಿರುವೆನು ." ಎಂದು ಹೇಳಿದನು . ಇದಾದಮೇಲೆ ಗುರುವನ್ನು ತಾನೂ ಹುಡುಕಬೇಕೆಂಬ ಆಸೆ ಗಣಪತಿಯ ಮನದಲ್ಲಿ ಮನೆಮಾಡಿತು.
ಆಗ ಗಣಪತಿಯು ಸಂಗಡಿಗರನ್ನು ಸೇರಿಸಿಕೊಂಡು ಆಟವಾಡಲು ತೊಡಗಿದನು . ರಾಮ, ಲಕ್ಷ್ಮಣ, ಸೀತಾ, ಮಾರುತಿ ಎಂದು ಕಲ್ಲುಗಳನ್ನು ಜೋಡಿಸಿ ಆಡುತ್ತಾ ಭಜನೆ ಮಾಡುವನು. ಈಜಲು ಹೋಗುವನು ಅಥವಾ ಇನ್ನೇನಾದರೂ ಆಟವಾಡುವನು . ಅದರಿಂದ ಉಪಾಧ್ಯಾಯರಿಗ ಕಿರುಕುಳ ಆಗತೊಡಗಿತು. ಬಾಲಕರೆಲ್ಲಾ ಗಣಪತಿ ಆಡುತ್ತಿದ್ದ ಸ್ಥಳಕ್ಕೆ ಹೋಗಿಬಿಡುತ್ತಿದ್ದರು. ಹೀಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳೇ ಇಲ್ಲದ ಹಾಗಾಯ್ತು. ಹಾಗಾಗಿ ಅಣ್ಣಾ ಕರ್ಶಿಕರರು ಊರು ಬಿಟ್ಟು ಹೋಗಬೇಕಾಯಿತು. ಆದರೆ ಊರು ಬಿಡುವ ಮೊದಲು ಗಣಪತಿಯು ಅವರ ಬಳಿಗೆ ಹೋಗಿ ಅವರಿಂದ "ಶ್ರೀ ರಾಮ ಶ್ರೀ ರಾಮ " ಎಂದು ಹೇಳಿಸಿದನು.
ಒಂದು ರಾತ್ರಿ ಶ್ರೀ ಲಿಂಗೊಪಂತರು ಎದ್ದು ನೋಡಿದಾಗ ಗಣಪತಿಯು ಮಲಗಿದ್ದ ಸ್ಥಳದಲ್ಲಿರಲಿಲ್ಲ. ಮನೆಯಲ್ಲಿ ಎಲ್ಲಿಯೂ ಕಾಣಲಿಲ್ಲ . ಮನೆಯವರೆಲ್ಲಾ ಸುತ್ತಮುತ್ತಲೂ ನೋಡಿದರು. ಎಲ್ಲೂ ಕಾಣಲಿಲ್ಲ . ಆಗ ಶ್ರೀ ರಾವುಜಿಪಂತರು ಕೆಲವರ ಜೊತೆ ನದಿಯತೀರದಲ್ಲಿ ಹುಡುಕುತ್ತಾ ಹೋದಾಗ ಸಣ್ಣ ಗುಹೆಯೊಂದರಲ್ಲಿ ಗಣಪತಿಯು ಧ್ಯಾನಮಾಡುತ್ತಾ ಕುಳಿತಿದ್ದನು . ಆಗ ರಾವೂಜಿ ಪಂತರು ಮಗನನ್ನು ಅಲ್ಲಿಂದ ಎಬ್ಬಿಸಿ ಮನೆಗೆ ಕರೆತಂದರು . ಅವನನ್ನು "ಮಗೂ, ಏಕೆ ನೀನು ಈ ಮಧ್ಯ ರಾತ್ರಿಯಲ್ಲಿ ಅಲ್ಲಿ ಹೋಗಿ ಕುಳಿತಿದ್ದೆ, ಭಯವಾಗಲಿಲ್ಲವೇ ?" ಎಂದಾಗ ಗಣಪತಿಯು "ಇಲ್ಲ, ಏಕಾಂತದಲ್ಲಿ ಕುಳಿತು ಧ್ಯಾನಮಾಡುವುದೆಂದರೆ ನನಗೆ ಇಷ್ಟ" ಎಂದನು.
ಗುರುವನ್ನು ಹುಡುಕಬೇಕೆಂಬ ತವಕದಿಂದ ತನ್ನ ಇಬ್ಬರು ಗೆಳೆಯರಾದ ದಾಮೋದರ ಮತ್ತು ವಾಮನರೊಂದಿಗೆ ಗಣಪತಿಯು ಒಂದು ಮಧ್ಯರಾತ್ರಿ ಮನೆ ಬಿಟ್ಟು ಹೊರಟನು. ಎಲ್ಲರೂ ನಡೆದುಕೊಂಡು ಹೋಗುತ್ತಾ ಕೊಲ್ಹಾಪುರ ಸೇರಿದರು . ಅಲ್ಲಿ ಲಕ್ಷ್ಮೀ ದೇವಾಲಯದಲ್ಲಿ ಕೆಲವು ದಿನ ತಂಗಿದ್ದರು . ದೇವಾಲಯಕ್ಕೆ ಬಂದ ಹಲವಾರು ಭಕ್ತರು ಆಕರ್ಷಕ ಬಾಲಕ ಗಣಪತಿಗೆ ಹಣ್ಣು ,ತಿನಿಸುಗಳನ್ನು ಕೊಡುತ್ತಿದ್ದರು. ಮೂರು ಜನರೂ ತಿನ್ನುತ್ತಿದ್ದರು . ಆದರೆ ಈ ರೀತಿಯ ಜೀವನ ದಾಮೋದರನಿಗೆ ಹಿಡಿಸಲಿಲ್ಲ . ಆದ್ದರಿಂದ ಮನೆಗೆ ಹೋಗುತ್ತೇನೆಂದು ಹೇಳಿ ಅವನು ಗೊಂದಾವಳಿಗೆ ಹೊರಟುಬಿಟ್ಟನು .
ದಾಮೋದರನು ಹೊರಟಮೇಲೆ ಇಬ್ಬರು ಮಿತ್ರರೂ ಮುಂದೆ ಪ್ರಯಾಣಮಾಡಲು ಹೊರಟರು . ದಾರಿಯಲ್ಲಿ ಒಬ್ಬ ಭಿಕ್ಷುಕನು ಅವರನ್ನು ಭಿಕ್ಷೆ ಬೇಡಿದನು . ಕೊಡಲು ಅವರ ಬಳಿ ಏನೂ ಇಲ್ಲವೆಂದು ಹೇಳಿದರೂ ಅವನು ಬಿಡದೆ ಅವರನ್ನೇ ಹಿಂಬಾಲಿಸುತ್ತಿದ್ದನು . ಆಗ ಗಣಪತಿಯು ತನ್ನ ಕಿವಿಯಲ್ಲಿದ್ದ ಚಿನ್ನದ ಒಂದು ಒಂಟಿಯನ್ನು ಕಿತ್ತು ಕೊಟ್ಟುಬಿಟ್ಟನು. ಹಾಗೆ ಕಿತ್ತಾಗ ಗಾಯವಾಗಿ ಅವನ ಕಿವಿಯಿಂದ ರಕ್ತ ಬರುತ್ತಿರುವುದು ಕೂಡ ಅವನಿಗೆ ಪರಿವೆಯೇ ಇರಲಿಲ್ಲ .
ಹೀಗೆ ಹೋಗುತ್ತಿರಲು ಒಂದು ಕುದುರೆ ಗಾಡಿಯಲ್ಲಿ ಎದುರಿಗೆ ಬರುತ್ತಿದ್ದ ರಾಜಪುರೋಹಿತರಾದ ಶ್ರೀ ಸಿದ್ಧೇಶ್ವರರು ಈ ಬಾಲಕರನ್ನು ನೋಡಿ ಗಾಡಿಯನ್ನು ನಿಲ್ಲಿಸಿ ಇವರ ಬಗ್ಗೆ ವಿಚಾರಿಸಿದರು . ನಂತರ ಇವರನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಅವರ ಮನೆಗೆ ಕರೆದುಕೊಂಡು ಹೋದರು. ಮಕ್ಕಳಿಲ್ಲದ ಶ್ರೀ ಸಿದ್ಧೇಶ್ವರ ದಂಪತಿಗಳು ಗಣಪತಿಯನ್ನು ನೋಡಿ ಆಕರ್ಷಿತರಾಗಿ ಅವನನ್ನು ದತ್ತು ತೆಗೆದುಕೊಳ್ಳಬೇಕೆಂದು ತೀರ್ಮಾನಿಸಿದರು . ಗಣಪತಿಗೆ ಹೆಚ್ಚಿನ ಉಪಚಾರ ಶುರುವಾಯಿತು . ವಾಮನನ ಮೇಲೆ ಅವರಿಗೆ ಅಷ್ಟೇನೂ ಗಮನವಿರಲಿಲ್ಲ . ಇದರಿಂದ ನಿರಾಸಕ್ತನಾದ ವಾಮನನು ಗಣಪತಿಗೆ ಹೇಳಿ ಗೋಂದಾವಳಿಗೆ ಹಿಂದಿರುಗಿದನು .
ಇತ್ತ ಗೋಂದಾವಳಿಯಲ್ಲಿ ಮಕ್ಕಳು ಕಾಣದಾದಮೇಲೆ ಊರಿನಲ್ಲಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಅವರಿಗಾಗಿ ಹುಡುಕಿ ಕಾಣಲಿಲ್ಲವೆಂದು ಸುಮ್ಮನಾಗಿದ್ದರು. ದಾಮೋದರನು ಊರಿಗೆ ಹಿಂತಿರುಗಿದಮೇಲೆ ಎಲ್ಲ ವಿಷಯವನ್ನು ತಿಳಿದು ಶ್ರೀ ರಾವುಜಿಪಂತರು ಕೆಲವು ಸಂಗಡಿಗರೊಂದಿಗೆ ಕೊಲ್ಹಾ ಪುರಕ್ಕೆ ಹೋದರು . ದಾರಿಯಲ್ಲಿ ವಾಮನನೂ ಸಿಕ್ಕಿ ಗಣಪತಿಯು ಎಲ್ಲಿರುವನೆಂದು ತಿಳಿಸಿದನು. ಶ್ರೀ ರಾವುಜಿಪಂತರು ರಾಜ ಪುರೋಹಿತರ ಮನೆಗೆ ಹೋದಾಗ ಗಣಪತಿಯು ಅಲ್ಲಿದ್ದನು . ಆದರೆ ಶ್ರೀ ಸಿದ್ಧೇಶ್ವರ ದಂಪತಿಗಳು ಗಣಪತಿಯನ್ನು ಕಳುಹಿಸಲು ಒಪ್ಪಲಿಲ್ಲ. ಆದರೆ ಶ್ರೀ ರಾವುಜಿ ಪಂತರು ಅವರಿಗೆ ಅನೇಕ ರೀತಿಯಲ್ಲಿ ಹೇಳಿ ಒಪ್ಪಿಸಿ ತಮ್ಮ ಪ್ರೀತಿಯ ಮಗನನ್ನು ಮನೆಗೆ ಕರೆತಂದರು. .
ಶ್ರೀ ಲಿಂಗೋಪಂತರು ಮೊಮ್ಮಗನಿಗೆ ವಿವಾಹ ಮಾಡಿದರೆ ಅವನು ಎಲ್ಲಿಗೂ ಹೋಗುವುದಿಲ್ಲವೆಂದು ಯೋಚಿಸಿ ಸರಸ್ವತೀ ಬಾಯಿ ಎಂಬ ಕನ್ಯೆಯೊಡನೆ ಅದ್ಧೂರಿಯಿಂದ ಲಗ್ನ ಮಾಡಿದರು .ಗಣಪತಿಗೆ ಹನ್ನೆರಡು ವರ್ಷ ವಯಸ್ಸು. ವಿವಾಹ ಮಹೋತ್ಸವವು ಒಂದು ವಾರದಕಾಲ ಗೋಂದಾವಳಿಯಲ್ಲೇ ವಿಜೃಂಭಣೆಯಿಂದ ನಡೆಯಿತು. ಸರಸ್ವತೀ ಬಾಯಿ ಇನ್ನೂ ಚಿಕ್ಕವರಾಗಿದ್ದರಿಂದ ಅವರು ತಾಯಿಯ ಮನೆಯಲ್ಲಿಯೇ ಇದ್ದರು.
ವಿವಾಹವಾದ ಕೆಲವು ತಿಂಗಳಲ್ಲಿ ಶ್ರೀ ಲಿಂಗೋಪಂತರು ಮತ್ತು ಅವರ ಪತ್ನಿ ಇಬ್ಬರೂ ತೀರಿಕೊಂಡರು .
ಸದ್ಗುರುವಿಗಾಗಿ ಹುಡುಕಾಟ, ಅಲೆದಾಟ ,ಸದ್ಗುರು ಪ್ರಾಪ್ತಿ .
ಭಗವದ್ಪ್ರಾಪ್ತಿಯ ತವಕದಿಂದಿರುವ ಗಣಪತಿಗೆ ಇನ್ನೂ ಮನೆಯಲ್ಲೇ ಉಳಿದಿರಲು ಸಾಧ್ಯವಾಗಲಿಲ್ಲ. ತಾಯಿಗೆ, " ಅಮ್ಮಾ, ನನಗೆ ಈ ಪ್ರಪಂಚದ ಮೇಲೆ ಜಿಗುಪ್ಸೆ ಇಲ್ಲ . ಆದರೆ, ಭಗವದ್ದರ್ಶನ ಪಡೆಯಬೇಕೆಂಬ ಬಯಕೆ ಇರುವುದರಿಂದ ನಾನು ಈಗ ಹೋಗಲೇಬೇಕಾಗಿದೆ . ದಯವಿಟ್ಟು ನನ್ನನ್ನು ತಡೆಯಬೇಡಿ ಮತ್ತು ಹುಡುಕಿಸಬೇಡಿ .ಕಾರ್ಯ ಸಾಧನೆಯ ನಂತರ ನಾನೇ ಬರುವೆನು ."
ಎಂದು ಹೇಳಿ ಮನೆ ಬಿಟ್ಟು ಹೊರಟನು . (ಇನ್ನುಮುಂದೆ ನಾವು ಗಣಪತಿಯನ್ನು ಮಹಾರಾಜರು ಎಂದು ಸಂಬೋಧಿಸೋಣ .)
ಮಹಾರಾಜರು ಗುರುವನ್ನು ಹುಡುಕಿಕೊಂಡು ಹಲವಾರು ಮಠಗಳಿಗೆ , ಯಾತ್ರಾ ಸ್ಥಳಗಳಿಗೆ ಹೋದರು. ಅನೇಕ ಸಾಧು ಸಂತರನ್ನು ಸಂಧಿಸಿದರು ಮಹಾರಾಜರಿಗೆ ತಾವು ಸಂಧಿಸಿದ ವ್ಯಕ್ತಿಗಳ ಆಧ್ಯಾತ್ಮಿಕ ಮಟ್ಟ ನೋಡಿದಕೂಡಲೇ ತಿಳಿಯುತ್ತಿತ್ತು . ಹಾಗಾಗಿ ಅವರು ಗುರುವನ್ನು ಶೋಧಿಸಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಹೋದರು . ಹಲವಾರು ಉನ್ನತ ಮಟ್ಟದ ಸಾಧುಗಳು , "ನಾನಲ್ಲ ನಿನ್ನ ಗುರು , ನಿನ್ನ ಗುರು ಬೇರೆಡೆ ಇರುವರು " ಎಂದು ಹೇಳಿ ಆಶೀರ್ವದಿಸಿ ಕಳುಹಿಸಿದರು .
ಮಹಾರಾಜರು ಉತ್ತರ ಭಾರತದಲ್ಲಿ ಸಂಚರಿಸುತ್ತ ಕಲ್ಕತ್ತೆಗೆ ಬಂದರು. ಅಲ್ಲಿ ದಕ್ಷಿಣೇಶ್ವರಕ್ಕೆ ಹೋಗಿ ಶ್ರೀ ರಾಮಕೃಷ್ಣ ಪರಮಹಂಸರನ್ನು ಬೇಟಿ . ಮಾಡಿದರು. ಶ್ರೀ ರಾಮಕೃಷ್ಣರು ಬಾಲಕನಿಗೆ "ನಿನ್ನನ್ನು ನೀನು ಕೊಲ್ಲು." ಎಂದು ಹೇಳಿ ಆಶೀರ್ವದಿಸಿ ಕಳುಹಿಸಿದರು .
ಪ್ರಯಾಣಮಾಡುತ್ತಾ ಗೋದಾವರಿ ನದೀತೀರದಲ್ಲಿ ಕುಳಿತಿದ್ದಾಗ ಒಬ್ಬ ಸಂತರು ಕಾಣಿಸಿಕೊಂಡು , " ಏಹಳೆ ಗಾವ್ ಗೆ ಹೋಗು . ನಿನಗೆ ಗುರುದರ್ಶನ ವಾಗುವುದು "ಎಂದು ಹೇಳಿ ಅದೃಶ್ಯರಾದರು. ಮಹಾರಾಜರು ಏಹಳೇಗಾವನ್ನು ಕುರಿತು ಹೊರಟರು.
ಒಂದು ದಿವಸ ಗುರು ಶಿಷ್ಯರು ನದೀ ತೀರದಲ್ಲಿಕುಳಿತಿದ್ದಾಗ ಮೂರು ಮಕ್ಕಳು ಮರಳಿನಲ್ಲಿ ಆಡುತ್ತಿದ್ದರು. . ಗುರುಗಳು ಶಿಷ್ಯನಿಗೆ ದೊಡ್ಡ ಹಳ್ಳ ತೋಡಲು ಹೇಳಿದರು . ಆ ಮೂರು ಮಕ್ಕಳನ್ನೂ ಹಿಡಿದು ಎಳೆದು ಆ ಹಳ್ಳದೊಳಗೆ ದಬ್ಬಿ ಮರಳು ಮುಚ್ಚಲು ಶಿಷ್ಯನಿಗೆ ಹೇಳಿದರು. ನಂತರ ಶಿಷ್ಯನಿಗೆ ಆ ಮಣ್ಣಿನ ಗುಡ್ಡೆಯ ಮೇಲೆ ಸಿದ್ಧಾಸನ ಹಾಕಿ ಮೌನವಾಗಿ ಕುಳಿತುಕೊಳ್ಳುವಂತೆ ಹೇಳಿದರು . ಏನೇ ಆದರೂ ಜಾಗ ಬಿಟ್ಟು ಕದಲಬಾರದು ಮತ್ತು ಮಾತನಾಡಬಾರದು ಎಂದು ಹೇಳಿದರು . ನಂತರ ಅವರು ದೂರ ಹೋಗಿ ಒಂದು ಮರದ ಕೆಳಗೆ ಕುಳಿತರು.
ಕಾಶಿಯಲ್ಲಿ ಕಣ್ಮರೆಯಾದವರು ಇಂದೂರಿನಲ್ಲಿ ಕಾಣಿಸಿಕೊಂಡರು. ಅಲ್ಲಿನ ಶ್ರೀಮಂತ ವ್ಯಕ್ತಿ ಯೊಬ್ಬರ ಹೊಲದ ಮಧ್ಯೆ ಒಂದು ಕಲ್ಲು ಮಂಟಪವಿತ್ತು . ಅಲ್ಲಿ ಬಿಡಾರ ಮಾಡಿದರು . ಆ ಶ್ರೀಮಂತ ವ್ಯಕ್ತಿಯು ಆದರದಿಂದ ಮಾತನ್ನಾಡಿಸಿ ತಮ್ಮ ಜಾಗದಲ್ಲಿ ಬಂದಿರುವುದಕ್ಕೆ ಸಂತೋಷ ಪಟ್ಟರು . ಮನೆಯಲ್ಲಿ ಪತ್ನಿ ಜೀಜಾಬಾಯಿಗೆ ಹೇಳಿದರು , " ನಮ್ಮ ಹೊಲದ ಮಂಟಪದಲ್ಲಿ ಒಬ್ಬ ಯುವ ಸಾಧು ಬಂದಿರುವನು . ಅವನಿಗೆ ಊಟವನ್ನು ಕಳುಹಿಸು. " ಜೀಜಾಬಾಯಿಗೆ ಸಾಧುಗಳನ್ನು ಕಂಡರೆ ಅಷ್ಟೇನೂ ಗೌರವವಿರಲಿಲ್ಲ . ಸೋಮಾರಿಗಳು ಕೆಲಸಮಾಡದೆ ಸಾಧುಗಳ ವೇಷದಲ್ಲಿ ತಿರುಗುತ್ತಿರುತ್ತಾರೆ ಅಂದು ಅವಳ ಅನಿಸಿಕೆ . ಅದಕ್ಕೆ ಮಹಾರಾಜರನ್ನು ಪರೀಕ್ಷಿಸಬೇಕೆಂದು ತೀರ್ಮಾನಿಸಿದಳು . ಮೆಣಸಿನಕಾಯಿ ಪುಡಿಯಲ್ಲಿ ದೊಡ್ಡ ದೊಡ್ಡ ಎರಡು ಉಂಡೆಗಳನ್ನು ಮಾಡಿ ತಂದು ಶ್ರೀ ಮಹಾರಾಜರಿಗೆ ಊಟಕ್ಕೆ ಬಡಿಸಿದಳು . ಶ್ರೀ ಮಹಾರಾಜರು ಅವನ್ನು ಸಂತೋಷದಿಂದ ತಿಂದು ಉಂಡೆ ಬಹಳ ಚೆನ್ನಾಗಿವೆ ಎಂದರು . ಜೀಜಾಬಾಯಿಗೆ ಆಶ್ಚರ್ಯವಾದರೂ ಕೆಲವು ಜನರು ಖಾರವನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುವರೆಂದು ಯೋಚಿಸಿ ಮಾರನೆಯ ದಿನ ಊಟಕ್ಕೆ ನಿಗಿ ನಿಗಿ ಕೆಂಡವನ್ನು ಬಡಿಸಿದಳು . ಶ್ರೀ ಮಹಾರಾಜರು ಅದನ್ನು ನೋಡಿ ನಕ್ಕು ಒಂದೊಂದೇ ಕೆಂಡವನ್ನು ಬಾಯಿಯಲ್ಲಿ ಹಾಕಿಕೊಂಡು ತಿಂದರು . ಆಗ ಜೀಜಾಬಾಯಿ ಆಶ್ಚರ್ಯಚಕಿತಳಾಗಿ ಈ ಮನುಷ್ಯ ಯಾರೋ ಮಹಾತ್ಮನಿರಬೇಕಂಬ ಅರಿವಾಗಿ ಭಯದಿಂದ ಶ್ರೀ ಮಹಾರಾಜರ ಕಾಲಮೇಲೆ ಬಿದ್ದಳು . ತನ್ನ ತಪ್ಪಿಗೆ ಕ್ಷಮಾಪಣೆ ಬೇಡಿದಳು. ಆಗ ಶ್ರೀ ಮಹಾರಾಜರು " ತಾಯೀ , ಸಂತರನ್ನು ಪರೀಕ್ಷಿಸುವುದು ಈ ರೀತಿಯಲ್ಲ . ಆದರೆ ಭಯ ಪಡಬೇಡ . ಭಗವಂತನ ನಾಮಸ್ಮರಣೆ ಮಾಡು , ಎಲ್ಲಾ ಒಳ್ಳೆಯದಾಗುವುದು ," ಎಂದರು. ಆಗ ಜೀಜಾಬಾಯಿಯು ಶ್ರೀ ಮಹಾರಾಜರನ್ನು ಮನೆಗೆ ಕರೆದುಕೊಂಡು ಹೋಗಿ ರಾಜೋಚಿತ ಮರ್ಯಾದೆ ಮಾಡಿ ಮನೆಯಲ್ಲೇ ಉಳಿಸಿಕೊಂಡಳು . ಇಂದೂರಿನಲ್ಲಿರುವಾಗ ಅನೇಕರು ಇವರ ಭಕ್ತರಾದರು . ಎಲ್ಲರಿಗೂ ಇವರು ರಾಮನಾಮವನ್ನು ಉಪದೇಶಿಸಿ ಸನ್ಮಾರ್ಗಕ್ಕೆಳೆದರು.
ಏಹಳೆಗಾವ್ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಒಂದು ಹಳ್ಳಿ. ಅಲ್ಲಿ ಸಂತರಂತಿದ್ದ ಶ್ರೀ ಕಾಶೀನಾಥ ಪಂತರು ಮತ್ತು ಶ್ರೀಮತಿ ಪಾರ್ವತಿಯವರ ಮಗನಾಗಿ 1813 ರ ಮಾರ್ಚ್ ತಿಂಗಳಿನಲ್ಲಿ ಶ್ರೀ ತುಕಾರಾಮ ಚೈತನ್ಯರ ಜನನವಾಯಿತು . ಶಿಶುವು ಬಹಳ ತೇಜಸ್ವಿಯಾಗಿತ್ತು . ಮಗುವು 3-4 ವರ್ಷದವರಿದ್ದಾಗ ಅವರ ತಾಯಿ ತೀರಿಕೊಂಡರು . ಶ್ರೀ ಕಾಶೀನಾಥರು ಮೊದಲೇ ವಿರಕ್ತರು . ಜೊತೆಗೆ ಅವರ ಜಮೀನಿನಲ್ಲಿ ವ್ಯವಸಾಯ ಮಾಡುವುದು ಅವರ ಕರ್ತವ್ಯವಾಗಿತ್ತು . ಆದ್ದರಿಂದ ಬಾಲಕ ತುಕಾರಾಮರು ದಿನವೆಲ್ಲಾ ಆಟವಾಡುತ್ತಾ ಮನೆಯ ಹೊರಗೆ ಕಾಲ ಕಳೆಯುತ್ತಿದ್ದರು .ಯಾರ ಮನೆಯಲ್ಲೋ ಊಟವಾಗುವುದು . ರಾತ್ರಿ ಮನೆಗೆ ಬರುತ್ತಿದ್ದರು .ಹೀಗಿರಲು ಒಂದು ದಿನ ಮಧ್ಯಾಹ್ನ ಕೆಲವು ಹುಡುಗರ ಜೊತೆ ನದಿಯ ತೀರದಲ್ಲಿ ಆಟವಾಡಲು ಹೋಗಿದ್ದರು . ಮರಳಿನಲ್ಲಿ ಹಳ್ಳ ತೋಡಿ ಅದರಲ್ಲಿ ಕುಳಿತುಕೊಳ್ಳುವ ಆಟ . ಶ್ರೀ ತುಕಾರಾಮರು ದೊಡ್ಡ ಹಳ್ಳ ತೋಡಿ ಅದರಲ್ಲಿ ಕುಳಿತಿದ್ದರು . ಅಷ್ಟರಲ್ಲಿ ನದಿಯ ನೀರು ಪ್ರವಾಹದಂತೆ ಉಕ್ಕಿ ಬಂದಿತು. ಹಳ್ಳಗಳಿಗೆ ನೀರು ಬರುತ್ತಿರಲು ಹುಡುಗರೆಲ್ಲಾ ಎದ್ದು ಓಡಿದರು . ಮನೆ ಸೇರಿದರು . ಸಂಜೆ ಶ್ರೀ ಕಾಶೀನಾಥರು ಮನೆಗೆ ಬಂದಾಗ ಮಗ ಕಾಣಲಿಲ್ಲ . ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದರು. ಅವರ ಮನೆಯ ಮಕ್ಕಳೆಲ್ಲ ಮನೆಗಳಿಗೆ ಬಂದಿದ್ದರು . ಆಗ ನದಿಯ ತೀರದ ಬಳಿ ಆಡುತ್ತಿದ್ದ ವಿಷಯ ತಿಳಿಯಿತು. ಕತ್ತಲಾಗುತ್ತ ಬಂದಿತ್ತು. ಕೆಲವರೊಡನೆ ನದೀ ತೀರಕ್ಕೆ ಹೋಗಿ ನೋಡಿದರು.ಕಾಣಲಿಲ್ಲ ಜೋರಾಗಿ "ತುಕಾ" ಎಂದು ಕೂಗುತ್ತಲೇ , " ಓ! ಎನ್ನುತ್ತಾ ಹಳ್ಳದಿಂದ ಎದ್ದು ತುಕಾರಾಮರು ಓಡಿ ಬಂದರು. ಎಲ್ಲರಿಗೂ ಬಹಳ ಆಶ್ಚರ್ಯವಾಯಿತು . ಶ್ರೀ ಕಾಶೀನಾಥರು ಕೇಳಿದರು " ಮಗೂ, ನೀರು ನುಗ್ಗಿದಾಗ ನಿನಗೆ ಭಯವಾಗಲಿಲ್ಲವೇ ". " ಇಲ್ಲ ಅಪ್ಪಾ , ಉಸಿರು ಬಿಗಿ ಹಿಡಿದಿದ್ದರಿಂದ ನನಗೇನೂ ತೊಂದರೆಯಾಗಲಿಲ್ಲ, ಭಯವೂ ಆಗಲಿಲ್ಲ. " ಈ ಒಂದು ಘಟನೆಯಿಂದ ಶ್ರೀ ತುಕಾರಾಮರ ಧ್ಯಾನ ಸಮಾಧಿಯ ಶಕ್ತಿಯನ್ನು ಊಹಿಸಬಹುದು .
ಏಹಳೆಗಾವ್ ಸಮೀಪದಲ್ಲೇ ಉಮರಖೇಡ ಎಂಬ ಊರಿದೆ .ಅಲ್ಲಿ ಶ್ರೀ ಚಿನ್ಮಯಾನಂದರೆಂಬ ಸತ್ಪುರುಷರಿದ್ದರು . ಒಂದು ಸಲ ಅವರು ಪಂಡರಾಪುರ ಯಾತ್ರೆ ಮುಗಿಸಿಕೊಂಡು ಹಿಂದಿರುಗುವಾಗ ದಾರಿಯಲ್ಲಿ ಏಹಳೇಗಾವ್ ನಲ್ಲಿ ಒಂದು ರಾತ್ರಿ ತಂಗಿದ್ದರು . ಬೆಳಗಿನಜಾವ ನದಿಯಲ್ಲಿ ಸ್ನಾನಮಾಡುತ್ತಿರುವಾಗ ನದಿಯ ದಡದಲ್ಲಿ ಒಬ್ಬ ಯುವಕ ಕಣ್ಣುಮುಚ್ಚಿ ಧ್ಯಾನ ಮಾಡುತ್ತಿರುವುದನ್ನು ಕಂಡರು. ಸ್ನಾನ ಮುಗಿಸಿ ಆ ಯುವಕನ ಹತ್ತಿರ ಹೋದಾಗ ಆ ಯುವಕ , ತುಕಾರಾಮ್ , ಕಣ್ಣು ತೆಗೆದನು . ಇಬ್ಬರಲ್ಲೂ ಏನೋ ಒಂದು ಪರಸ್ಪರ ಆದರ ಭಾವದಿಂದ ಕಣ್ಗಳಲ್ಲಿ ನೀರು ಹರಿಯತೊಡಗಿತು . ಶ್ರೀ ಚಿನ್ಮಯಾನಂದರು ತುಕಾರಾಮರ ಹತ್ತಿರ ಹೋಗಿ ತಲೆಯಮೇಲೆ ಕೈ ಇಟ್ಟು ತಾರಕನಾಮವನ್ನು ಅನುಗ್ರಹಿಸಿ "ತುಕಾರಾಮ ಚೈತನ್ಯ "ಎಂದು ಹೆಸರಿಟ್ಟರು. ಸದ್ಗುರುಗಳ ಅನುಗ್ರಹವಾದಮೇಲೆ ಒಂದು ದಿವ್ಯ ಚೈತನ್ಯ ಅವರನ್ನು ಆವರಿಸಿತು. ಅವರಲ್ಲಿ ಒಂದು ದಿವ್ಯ ತೇಜಸ್ಸು ಮೂಡಿತು .
ಸದ್ಗುರುಗಳ ಅನುಗ್ರಹವಾಯಿತೆಂದು ತಿಳಿದಕೂಡಲೇ ಅನೇಕ ಜನರು ತಮ್ಮ ಸಮಸ್ಯೆಗಳ ನಿವಾರಣೆಗಳಿಗೆ ಶ್ರೀ ತುಕಾರಾಮರ ಬಳಿಗೆ ಬರತೊಡಗಿದರು . ಅವರೇನಾದರೂ ನಿನ್ನ ಕಾರ್ಯ ಆಗುತ್ತೆ ಎಂದು ಹೇಳಿದರೆ ಸಾಕು ಅವರ ಕಾರ್ಯ ಆಶ್ಚರ್ಯಕರ ರೀತಿಯಲ್ಲಿ ಆಗುತ್ತಿತ್ತು . ಇದನ್ನು ಕಂಡು ಜನರು ಅವರ ಎಲ್ಲ ಸಮಸ್ಯೆಗಳಿಗೆ ಅವರ ಬಳಿ ಬರುತ್ತಿದ್ದರು .ಇದರಿಂದ ಶ್ರೀ ತುಕಾರಾಮರಿಗೆ ತೊಂದರೆಯಾಗುತ್ತಿತ್ತು . ಆದ್ದರಿಂದ ಅವರು ಜನರನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಪ್ರಾತಃಕಾಲದಲ್ಲೇ ಮನೆಬಿಟ್ಟು ಹೊರಟುಹೋಗುತ್ತಿದ್ದರು . ಯಾವುದೋ ಹೊಲದಲ್ಲೋ , ನದೀ ತೀರದಲ್ಲೋ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರು. ರಾತ್ರಿ ಮನೆಗೆ ಹಿಂತಿರುಗುತ್ತಿದ್ದರು . ಕೆಲವು ಸಲ ದಿನಗಟ್ಟಲೆ ಧ್ಯಾನದಲ್ಲೇ ಇದ್ದು ಮನೆಗೆ ಬರುತ್ತಿರಲಿಲ್ಲ. ಶ್ರೀ ತುಕಾರಾಮರಿಗೆ ದೀನ ದಲಿತರು , ಕಷ್ಟದಲ್ಲಿರುವವರನ್ನು ಕಂಡರೆ ಬಹಳ ಅನುಕಂಪವಿತ್ತು .ಅವರ ಪ್ರೀತಿ, ಆದರ, ಸಹೃದಯತೆಯನ್ನು ಕಂಡು ಆ ಊರಿನ ಜನರು ತುಕಾಮಾಯಿ (ಮಾಯಿ ಎಂದರೆ ತಾಯಿ ) ಎಂದು ಕರೆಯುತ್ತಿದ್ದರು .
ಒಂದು ದಿನ ಶ್ರೀ ತುಕಾರಾಮರು ಆ ಊರಿನ ಜನರೊಡನೆ, "ಎಚ್ಚರಿಕೆ, ಒಬ್ಬ ಕಳ್ಳ ಬರುತ್ತಾ ಇದ್ದಾನೆ .ನನ್ನಲ್ಲಿರುವುದನ್ನೆಲ್ಲಾ ದೋಚುತ್ತಾನೆ ", ಎಂದು ಹೇಳಿದರು .ಅದನ್ನು ಕೇಳಿದ ಜನರಿಗೆ ಅರ್ಥವಾಗಲಿಲ್ಲ. ಶ್ರೀ ತುಕಾರಾಮರ ಬಳಿ ದೋಚಲು ಯಾವ ವಸ್ತು ಇದೆ ಎಂದು ಯೋಚಿಸಿದರು. ಗುರುಗಳು ಹೇಳುತ್ತಿರುವುದು ಅವರಲ್ಲಿ ಹೇರಳವಾಗಿರುವ ಆಧ್ಯಾತ್ಮಿಕ ಶಕ್ತಿ ಎಂದು ಆ ಜನರಿಗೆ ತಿಳಿಯಲಿಲ್ಲ.
ಶ್ರೀ ತುಕಾರಾಮರು ಎಚ್ಚರಿಕೆ ನೀಡಿದ ಮೂರನೆಯ ದಿನವೇ ಬಾಲಕ ಮಹಾರಾಜರು ಶ್ರೀ ತುಕಾರಾಮರ ಮನೆಗೆ ಬಂದರು . ಶ್ರೀ ತುಕಾರಾಮರು ಮನೆಯಲ್ಲಿರಲಿಲ್ಲ. ಅವರು ಎಷ್ಟು ಹೊತ್ತಿಗೆ ಹಿಂತಿರುಗುವರೆಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ . ಮಹಾರಾಜರು ನದಿಗೆ ಹೋಗಿ ಸ್ನಾನಮಾಡಿ ಆಹ್ನಿಕಗಳನ್ನು ತೀರಿಸಿಕೊಂಡು ಶ್ರೀ ಗುರುಗಳ ಮನೆಯ ಬಳಿ ಬಂದು ಧ್ಯಾನ ಮಾಡುತ್ತಾ ಕುಳಿತರು . ಮನೆಯವರು ಊಟಕ್ಕೆ ಕರೆದರೂ ನಿರಾಕರಿಸಿದರು . ಗುರುದರ್ಶನಕ್ಕಾಗಿ ಉಪವಾಸದಿಂದಲೇ ಕಾದರು .
ಸಂಜೆಯಾಯಿತು . ಶ್ರೀ ತುಕಾರಾಮರು ಮನೆಗೆ ಬಂದರು . ಒಬ್ಬ ಚಿಕ್ಕ ಹುಡುಗನು ನಿಮಗಾಗಿ ಬೆಳಗಿನಿಂದ ಕಾದಿರುವನೆಂದು ಹೇಳಿದರು. ಕೂಡಲೇ ಅವರು ಮನೆಯಿಂದ ಹೊರಗೆ ಬರುತ್ತಾ , "ಎಲ್ಲಿ ಆ ಕಳ್ಳ " ಎಂದು ಕೂಗಿದರು. ಮಹಾರಾಜರು ಕೈ ಮುಗಿದುಕೊಂಡು ನಿಂತಿರುವುದನ್ನು ಕಂಡು , " ಬಾ, ನಿನ್ನನ್ನು ಕೊಲ್ಲುತ್ತೇನೆ " ಎಂದರು . ಆಗ ಮಹಾರಾಜರು , " ನಾನು ನಿಮಗೆ ಶರಣಾಗುವೆನು " ಎಂದು ಹೇಳುತ್ತಾ ದೀರ್ಘ ದಂಡ ಪ್ರಣಾಮ ಮಾಡಿದರು. ಕೂಡಲೇ ಶ್ರೀ ತುಕಾರಾಮರು ಬಾಲಕನನ್ನು ಎತ್ತಿ ತಬ್ಬಿಕೊಂಡರು . ಇಬ್ಬರ ಕಣ್ಣಿನಿಂದಲೂ ಆನಂದಾಶ್ರು ಧಾರಾಳವಾಗಿ ಸುರಿಯಿತು. ಮಹಾರಾಜರನ್ನು ಕೈಹಿಡಿದು ಮನೆಯೊಳಗೆ ಕರೆದುಕೊಂಡು ಹೋದರು . ಇಬ್ಬರು ದಿವ್ಯ ಪುರುಷರ ಸಂಪರ್ಕ ಈ ರೀತಿ ಪ್ರಾರಂಭವಾಯಿತು .
ಬಾಲಕ ಮಹಾರಾಜರು ಗುರುಗಳಿಗೆ ಪೂರ್ಣ ಶರಣಾದರು . ಅವರ ಮನೆಯ ಕೆಲಸ , ಪರಿಚಾರಿಕೆ ಅಲ್ಲದೆ ಅವರ ಸ್ವಂತ ಅಗತ್ಯಗಳನ್ನು ಪೂರೈಸಲು ಸದಾ ತಯಾರಾಗಿರುತ್ತಿದ್ದರು .ಗುರುಗಳಿಗಾದರೋ ಈ ಶಿಷ್ಯನನ್ನು ಕಂಡರೆ ಬಹಳ ಪ್ರೀತಿ . ದಯಾಳುವಾದ ಗುರುವು ಶಿಷ್ಯನನ್ನು ಪರೀಕ್ಷೆಮಾಡಲು ಬಹಳ ಕಠಿಣವೆಂದು ತೋರುವ ಹಲವಾರು ಪರೀಕ್ಷೆಗಳನ್ನು ಒಡ್ಡಿದರು .
ಒಂದು ಸಲ ಒಂದು ಮರದ ಕೆಳಗೆ ಶಿಷ್ಯನೊಡನೆ ಕುಳಿತಿದ್ದ ಗುರುಗಳು "ಆ ಮರದ ಎಲೆಗಳನ್ನು ಕಿತ್ತು ಹಾಕು" ಎಂದು ಹೇಳಿದರು . ಕೂಡಲೇ ಮಹಾರಾಜರು ಮರ ಹತ್ತಿ ಎಲೆಗಳನ್ನು ಕೀಳಲು ಪ್ರಾರಂಭಿಸಿದರು. ಅರ್ಧ ಮರದ ಎಲೆಗಳನ್ನು ಕಿತ್ತ ಕೂಡಲೇ , " ಗಣೂ , ಎಲೆಗಳಿಂದ ರಸ ಸೋರುತ್ತಿದೆ . ಅವುಗಳಿಗೆ ಇದರಿಂದ ನೋವಾಗುತ್ತಿರಬಹುದು . ಈ ಕಿತ್ತಿರುವ ಎಲೆಗಳನ್ನು ಮತ್ತೆ ಮರದ ರೆಂಬೆಗಳಿಗೇ ಅಂಟಿಸಿಬಿಡು " ಎಂದರು . ಮಹಾರಾಜರು ಏನೊಂದೂ ಮಾತನಾಡದೆ ಎಲೆಗಳನ್ನು ಮತ್ತೆ ಮರಕ್ಕೇ ಅಂಟಿಸುವ ಕಾರ್ಯಕ್ಕೆ ತೊಡಗಿದರು. ಆಶ್ಚರ್ಯವೇನೆಂದರೆ ಕೆಲವೇ ಕ್ಷಣಗಳಲ್ಲಿ ಆ ಮರದಎಲೆಗಳು ಕೊಂಬೆಗಳಿಗೆ
ಅಂಟಿಕೊಂಡು ಮರವು ಯಥಾ ಸ್ಥಿತಿಗೆ ಬಂದಿತು .
ಅಂಟಿಕೊಂಡು ಮರವು ಯಥಾ ಸ್ಥಿತಿಗೆ ಬಂದಿತು .
ಕೆಲವು ಸಲ ನೀರಿನ ಮಡುವಿನಲ್ಲಿ ಧುಮಕಲು ಹೇಳುತ್ತಿದ್ದರು . ಮಹಾರಾಜರು ಒಡನೆಯೇ ನೀರಿಗೆ ಧುಮುಕುತ್ತಿದ್ದರು . ಆದರೆ ಗುರುಗಳು ಮೇಲೆ ಬರಲು ಕರೆಯುವವರೆಗೂ ಮೇಲೆ ಬರುತ್ತಿರಲಿಲ್ಲ. ಅವರಿಗೆ ಗಂಟೆಗಟ್ಟಲೆ ಉಸಿರು ಕಟ್ಟಿ ನೀರಿನಲ್ಲಿ ಇರುವುದು ಚೆನ್ನಾಗಿ ಬರುತ್ತಿತ್ತು .
ಒಂದು ದಿವಸ ಗುರು ಶಿಷ್ಯರು ನದೀ ತೀರದಲ್ಲಿಕುಳಿತಿದ್ದಾಗ ಮೂರು ಮಕ್ಕಳು ಮರಳಿನಲ್ಲಿ ಆಡುತ್ತಿದ್ದರು. . ಗುರುಗಳು ಶಿಷ್ಯನಿಗೆ ದೊಡ್ಡ ಹಳ್ಳ ತೋಡಲು ಹೇಳಿದರು . ಆ ಮೂರು ಮಕ್ಕಳನ್ನೂ ಹಿಡಿದು ಎಳೆದು ಆ ಹಳ್ಳದೊಳಗೆ ದಬ್ಬಿ ಮರಳು ಮುಚ್ಚಲು ಶಿಷ್ಯನಿಗೆ ಹೇಳಿದರು. ನಂತರ ಶಿಷ್ಯನಿಗೆ ಆ ಮಣ್ಣಿನ ಗುಡ್ಡೆಯ ಮೇಲೆ ಸಿದ್ಧಾಸನ ಹಾಕಿ ಮೌನವಾಗಿ ಕುಳಿತುಕೊಳ್ಳುವಂತೆ ಹೇಳಿದರು . ಏನೇ ಆದರೂ ಜಾಗ ಬಿಟ್ಟು ಕದಲಬಾರದು ಮತ್ತು ಮಾತನಾಡಬಾರದು ಎಂದು ಹೇಳಿದರು . ನಂತರ ಅವರು ದೂರ ಹೋಗಿ ಒಂದು ಮರದ ಕೆಳಗೆ ಕುಳಿತರು.
ಸ್ವಲ್ಪ ಹೊತ್ತಿನಲ್ಲಿ ಆ ಮಕ್ಕಳ ತಂದೆ ತಾಯಿಯರು ಬಾಲಕರನ್ನು ಹುಡುಕಿಕೊಂಡು ಬಂದರು . ಮಹಾರಾಜರನ್ನು ನೋಡಿ ಮಕ್ಕಳ ಬಗ್ಗೆ ವಿಚಾರಿಸಿದರು . ಆದರೆ ಮಹಾರಾಜರು ಗುರುಗಳ ಆಜ್ಞೆ ಯಂತೆ ಏನೂ ಮಾತನಾಡಲಿಲ್ಲ . ಆಗ ಸ್ವಲ್ಪ ದೂರದಲ್ಲಿ ಕುಳಿತಿದ್ದ ಶ್ರೀ ತುಕಾರಾಮರನ್ನು ವಿಚಾರಿಸಿದಾಗ ಅವರು, "ಆ ಹುಡುಗನನ್ನು ಕೇಳಿ . ಅವನು ಮಕ್ಕಳನ್ನು ಹಳ್ಳದಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಕುಳಿತಿರುವನು ." ಎಂದು ಹೇಳಿದರು. ಕೂಡಲೇ ಆ ಜನರು ಮಹಾರಾಜರನ್ನು ಚೆನ್ನಾಗಿ ಹೊಡೆದು ಅವರನ್ನು ದೂರಕ್ಕೆ ತಳ್ಳಿ ಮರಳನ್ನು ತೆಗೆದರು . ಆಗ ಮೂರು ಮಕ್ಕಳೂ ಹಳ್ಳದಲ್ಲಿ ಬಿದ್ದಿರುವುದನ್ನು ನೋಡಿದರು . ಆಗ ಅವರ ದುಃಖ ಇನ್ನೂ ಹೆಚ್ಚಾಗಿ ಮಹಾರಾಜರನ್ನು ಮತ್ತೆ ಹೊಡೆಯಲು ಪ್ರಾರಂಭಿಸಿದರು . ಆಗ ಶ್ರೀ ತುಕಾರಾಮರು ಓಡುತ್ತಾ ಬಂದು "ಮಕ್ಕಳಿಗೇನೂ ಆಗಿಲ್ಲ ಅವನನ್ನು ಹೊಡೆಯಬೇಡಿರಿ " ಎಂದು ಕೂಗಿದರು. ಅವರು ಹೇಳಿದಹಾಗೇ ಆ ಮಕ್ಕಳು ನಗುತ್ತಾ ಹಳ್ಳ ದಿಂದ ಎದ್ದು ಬಂದರು . ಆಗ ಶ್ರೀ ತುಕಾರಾಮರು ಮಹಾರಾಜರನ್ನು ಅಪ್ಪಿಕೊಂಡು , "ಮಗು ! ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀನು ನನಗಾಗಿ ಮನೆ, ತಾಯಿ, ತಂದೆ ಎಲ್ಲರನ್ನೂ ಬಿಟ್ಟು ಇಲ್ಲಿ ಬಂದಿರುವೆ . ಆದರೆ ನಾನು ನಿನಗೆ ಹೀಗೆ ಹೊಡೆಸುತ್ತಿದ್ದೇನೆ . ಆದರೆ ಭಗವಂತನು ಇದರ ಮಧುರ ಫಲವನ್ನುನಿನಗೆ ಖಂಡಿತ ಕೊಡುತ್ತಾನೆ ." ಎಂದರು
ಈ ರೀತಿ ಗುರು ಸೇವೆಯಲ್ಲಿ ತಮ್ಮನ್ನು ತಾವೇ ಪರಿಪೂರ್ಣ ಅರ್ಪಿಸಿಕೊಂಡ ಮಹಾರಾಜರು ಬಂದು ಒಂಬತ್ತು ತಿಂಗಳಾದವು . ಶ್ರೀ ತುಕಾರಾಮರಿಗೆ ಶಿಷ್ಯನು ದೇಹಾಭಿಮಾನ ಶೂನ್ಯನಾಗಿರುವನೆಂದು ಮನದಟ್ಟಾಯಿತು .
ಶ್ರೀ ರಾಮನವಮಿಯದಿನ , ಗುರು ಶಿಷ್ಯರಿಬ್ಬರೂ ನದಿಯಲ್ಲಿ ಸ್ನಾನ ಮಾಡಿ ಒಂದು ಅರಳಿಮರದ ಕೆಳಗೆ ಕುಳಿತರು. ಆಗ ಶ್ರೀ ತುಕಾರಾಮರು ಬಹಳ ಪ್ರೇಮದಿಂದ , " ಮಗೂ , ಇದುವರೆಗೂ ನಿನಗೆ ಬಹಳ ಕಷ್ಟವಾದ ಪರೀಕ್ಷೆಗಳನ್ನು ಕೊಟ್ಟಿದ್ದೇನೆ . ನೀನು ಎಲ್ಲದರಲ್ಲೂ ಉತ್ತಮ ರೀತಿಯಲ್ಲಿ ಸಾಧಿಸಿರುವೆ . ಭಗವತ್ಕೃಪೆಗೆ ಪೂರ್ಣ ಪಾತ್ರನಾಗಿರುವೆ . ಹಿಂದೆ ವಸಿಷ್ಠರು ಶ್ರೀ ರಾಮಚಂದ್ರನಿಗೆ ಏನು ಕೊಟ್ಟರೋ , ನನ್ನ ಗುರುಗಳು ನನಗೆ ಏನು ಕೊಟ್ಟರೋ ಅದನ್ನು ನಿನಗೆ ಕೊಡುವೆನು ."ಎಂದು ಹೇಳಿ ತಾರಕಮಂತ್ರ "ಶ್ರೀ ರಾಮ ಜಯರಾಮ ಜಯ ಜಯ ರಾಮ " ವನ್ನು ಕಿವಿಯಲ್ಲಿ ಉಪದೇಶಿಸಿದರು . ನಂತರ ಅವರ ತಲೆಯಮೇಲೆ ತಮ್ಮ ಕೈ ಇಟ್ಟರು . ಕೂಡಲೇ ಮಹಾರಾಜರು ಸಮಾಧಿ ಸ್ಥಿತಿಗೆ ಹೋದರು . ಸ್ವಲ್ಪ ಹೊತ್ತಿನ ನಂತರ ಸಮಾಧಿ ಸ್ಥಿತಿಯಿಂದ ಹೊರಬಂದಾಗ ಗುರುಗಳು , " ಬ್ರಹ್ಮಚೈತನ್ಯ " ಎಂಬ ಹೆಸರನ್ನಿತ್ತು ಪ್ರೇಮದಿಂದ ಅಪ್ಪಿಕೊಂಡರು . ಗುರುಗಳ ಅನುಗ್ರಹದಿಂದ ಶ್ರೀ ಮಹಾರಾಜರು ಭಗವಂತನನ್ನು ತಮ್ಮಲ್ಲೇ ಕಂಡು ದಿವ್ಯ ಆನಂದವನ್ನು ಪಡೆದರು . ಪರಿಪೂರ್ಣ ಸಂತರಾದರು . ಅಷ್ಟ ಸಿದ್ಧಿಗಳೂ ಅವರ ಕರಗತವಾದವು. ಶ್ರೀ ಗುರುಗಳು ಹೇಳಿದರು : ಭಗವಂತನನ್ನು ಕಾಣುವ ಬಯಕೆಯಿರುವ ಜನರಿಗೆ ರಾಮ ಮಂತ್ರವನ್ನು ಉಪದೇಶಿಸು . ಪ್ರಾಪಂಚಿಕ ಸುಖಾಪೇಕ್ಷೆ ಉಳ್ಳ ಜನರೇ ಹೆಚ್ಚಾಗಿರುವರು. ಸ್ವಾರ್ಥಿಗಳೇ ಹೆಚ್ಚಿರುವ ಈ ಪ್ರಪಂಚದಲ್ಲಿ ಬಡವರು, ದೀನ ದಲಿತರು ಕೊರಗಬೇಕಾಗುವುದು . ಅವರಿಗೆ ಸಹಾಯ ಮಾಡು . ರಾಮ ನಾಮ ಪ್ರಸಾರ ಮಾಡು. ಸ್ವಲ್ಪ ಕಾಲ ತೀರ್ಥಯಾತ್ರೆಯನ್ನು ಮಾಡಿ ನಿಮ್ಮ ತಾಯಿ ತಂದೆಯರ ಬಳಿಗೆ ಹೋಗು . ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ ." ಎಂದರು .
ಶ್ರೀ ತುಕಾರಾಮರಿಂದ ಅನುಗ್ರಹ ಪಡೆದಮೇಲೆ ಶ್ರೀ ಮಹಾರಾಜರು ಏಹಳೆಗಾವ್ ನಲ್ಲಿ ಕೆಲವು ದಿನಗಳಿದ್ದು ಶ್ರೀ ತುಕಾರಾಮರ ಅಪ್ಪಣೆ ಪಡೆದು ಯಾತ್ರಾ ಸಲುವಾಗಿ ಹೊರಟರು.
ತಪಶ್ಚರ್ಯ, ಭಗವತ್ಪ್ರಾಪ್ತಿ
ಹದಿನಾರು ವರ್ಷದ ಬಾಲಕ ಸಾಧು ಶ್ರೀ ಬ್ರಹ್ಮಚೈತನ್ಯರು ಕಾಲ್ನಡಿಗೆಯಲ್ಲಿ ಹೋಗುತ್ತಾ ಉಜ್ಜಯಿನಿಯ ಹತ್ತಿರವಿರುವ ದಟ್ಟ ಅರಣ್ಯ ಪ್ರವೇಶಿಸಿದರು . ಅಲ್ಲಿ ಅನೇಕ ಕ್ರೂರ ಮೃಗಗಳಿದ್ದರೂ ಹೆದರದೆ ಒಂದು ಗುಹೆಯಲ್ಲಿದ್ದರು . ಆ ಗುಹೆಯಲ್ಲಿರುವಾಗ ಒಂದು ಹಸು ಅಲ್ಲಿಗೆ ದಿನವೂ ಬಂದು ಮಹಾರಾಜರಿಗೆ ಹಾಲುಣಿಸಿ ಹೋಗುತಿತ್ತು. ಅಲ್ಲಿ ಸುಮಾರು ಎರಡು ತಿಂಗಳು ಸಮಾಧಿ ಸ್ಥಿತಿಯಲ್ಲಿದ್ದು ಮುಂದೆ ನೈಮಿಷಾರಣ್ಯಕ್ಕೆ ಹೋದರು . ಅಲ್ಲಿ ಒಂದು ಗುಹೆಯಲ್ಲಿದ್ದು ಅನುಷ್ಠಾನ ನಡೆಸುತ್ತಿದ್ದರು .
1857 ರಲ್ಲಿ ಭಾರತವನ್ನು ಅನ್ಯಾಯವಾಗಿ ಆಕ್ರಮಿಸಿದ್ದ ಇಂಗ್ಲಿಷರ ಮೇಲೆ ಹಲವಾರು ರಾಜರು ಸೇರಿ ಯುದ್ಧ ಮಾಡಿದರು . ಮಹಾರಾಷ್ಟ್ರ ವನ್ನು ಆಳುತ್ತಿದ್ದ ಪೇಷ್ವೆ ನಾನಾರಾವ್ ತನ್ನ ಮಂತ್ರಿಯಾದ ತಾತ್ಯಾ ಟೋಪಿ ರವರ ಮುಂದಾಳತ್ವದಲ್ಲಿ ಯುದ್ಧ ನಡೆಸಿದರು . ಆ ಕಾಲದಲ್ಲಿ ಯುದ್ಧಮಾಡಿದ ಝಾನ್ಸಿ ರಾಣಿ ,ಕುಮಾರ ಸಿಂಹ, ಬಹದ್ದೂರ್ ಷಾ ಮುಂತಾದವರ ಹೆಸರನ್ನು ಇಲ್ಲಿ ಸ್ಮರಿಸಬಹುದು . ಆದರೆ ಇಂಗ್ಲೀಷಿನವರ ಕೈ ಮೇಲಾಗಿ ರಾಜರುಗಳನ್ನು ಸದೆ ಬಡಿದರು. ತಾತ್ಯಾ ಟೋಪಿಯನ್ನು ಹಿಡಿದು ನೇಣಿಗೇರಿಸಿ ಕೊಂದರು . ನಾನಾ ಸಾಹೇಬರನ್ನು ಹಿಡಿಯಲು ಹಲವಾರು ಅಂಗ್ರೇಜಿ ಸೈನಿಕರು ಪ್ರಯತ್ನಿಸಿದರು. ಆದರೆ ನಾನಾ ಸಾಹೇಬರು ತಪ್ಪಿಸಿಕೊಂಡು ನೈಮಿಷಾರಣ್ಯ ಪ್ರವೇಶಿಸಿದರು . ಅಲ್ಲಿಗೂ ಅಂಗ್ರೇಜಿಗಳು ಬಂದರು . ಆದರೆ ಶ್ರೀ ಮಹಾರಾಜರ ನೆರವಿನಿಂದ ನಾನಾ ಸಾಹೇಬರು ಬದುಕುಳಿದರು . ಬ್ರಿಟಿಷ್ ಸೈನಿಕರು ಹೊರಟುಹೋದಮೇಲೆ ಶ್ರೀ ಮಹಾರಾಜರು ಹತ್ತಿರದಲ್ಲೇ ಒಂದುದೊಡ್ಡಗುಹೆಯನ್ನು ತೋರಿಸಿ ಅಲ್ಲಿರಲು ಹೇಳಿದರು . ಅದರಂತೆಯೇ ನಾನಾ ಸಾಹೇಬರು ಒಬ್ಬ ಅನುಯಾಯಿಯ ಜೊತೆ ಆ ಗುಹೆಯಲ್ಲೇ ಇರುತ್ತಿದ್ದರು . ಶ್ರೀ ಮಹಾರಾಜರು ನಾನಾ ಸಾಹೇಬರಿಗೆ ಬ್ರಿಟಿಷರನ್ನು ಓಡಿಸಲು ಅದು ಸರಿಯಾದ ಸಮಯವಲ್ಲವೆಂದೂ , ಹೋರಾಟ ಬೇರೆ ರೀತಿಯಲ್ಲಿ ನಡೆಸಲು ಜನರು ತಯಾರಾಗುತ್ತಿರುವರೆಂದೂ ಅದಕ್ಕಾಗಿ ರಾಜ್ಯದ ಗೀಳು ಬಿಟ್ಟು ಭಗವಂತನ ಧ್ಯಾನದಲ್ಲಿರಬೇಕೆಂದು ಬೋಧಿಸಿ ಅನುಗ್ರಹಿಸಿದರು . ಹಲವಾರು ತಿಂಗಳುಗಳ ಕಾಲ ಜೊತೆಯಲ್ಲೇ ಇರುತ್ತಿದ್ದರು. ನಂತರ ಶ್ರೀ ಮಹಾರಾಜರು ನೈಮಿಷಾರಣ್ಯ ಬಿಟ್ಟು ಹೊರಡುವಾಗ ನಾನಾ ಸಾಹೇಬರು ಬಹಳ ದುಃಖಪಟ್ಟರು . ಆಗ ಶ್ರೀ ಮಹಾರಾಜರು ಭಯಪಡಬೇಡ . ನಿನ್ನ ಕೊನೆಗಾಲದಲ್ಲಿ ನಾನು ಬರುವೆನು ಎಂದು ಹೇಳಿ ಸಮಾಧಾನಪಡಿಸಿದರು.
ಹಲವಾರು ಪುಣ್ಯಕ್ಷೇತ್ರಗಳಲ್ಲಿ ಸ್ವಲ್ಪ ಕಾಲ ಇದ್ದು ನಂತರ ಅಯೋಧ್ಯೆಗೆ ಬಂದರು. ಅವರು ಹೋದೆಡೆಯಲ್ಲೆಲ್ಲಾ ರಾಮನಾಮ ಜಪಿಸುವಂತೆ ಹೇಳುತ್ತಿದ್ದರು. ಅವರ ಆಧ್ಯಾತ್ಮಿಕ ತೇಜಸ್ಸು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು . ಬಹಳ ಮಂದಿ ಅವರ ಬೋಧನೆಯಿಂದ ಪ್ರಭಾವಿತ ರಾಗುತ್ತಿದ್ದರು . ಹಲವಾರು ಪರಸ್ಥಳಗಳಿಂದ ಬಂದಿದ್ದ ಯಾತ್ರಿಗಳು ಅವರುಗಳ ಊರಿಗೆ ಆಹ್ವಾನಿಸುತ್ತಿದ್ದರು . ಹೀಗೆ ಶ್ರೀ ಮಹಾರಾಜರು ಮತ್ತೆ ಕಾಶೀ, ಕಲ್ಕತ್ತಾ ಮುಂತಾದ ನಗರಕ್ಕೆ ಹೋಗಬೇಕಾಯಿತು . ಕಾಶಿಯಲ್ಲಿರುವಾಗ ಒಂದು ದಿನ ಗಂಗಾತೀರದಲ್ಲಿ ಧ್ಯಾನಮಾಡುತ್ತಾ ಕುಳಿತಿದ್ದರು ಆಗ ಒಂದು ಶವಯಾತ್ರೆ ಅಂತ್ಯ ಕ್ರಿಯೆಗಾಗಿ ಅವರ ಬಳಿಯಲ್ಲಿ ಹೋಯಿತು . ಆ ಸತ್ತವನ ಹೆಂಡತಿ , ಯುವತಿ, ಸಹಗಮನಾಕಾಂಕ್ಷಿಯಾಗಿ ಶವದ ಹಿಂದೆ ಹೋಗುತ್ತಿದ್ದವಳು ಧ್ಯಾನಮಾಡುತ್ತಾ ಕುಳಿತಿದ್ದ ಸಾಧುವನ್ನು ನೋಡಿ ಕೊನೆಯದಾಗಿ ಸತ್ಪುರುಷರೊಬ್ಬರ ಆಶೀರ್ವಾದ ಪಡೆಯಲೆಂಬ ಇಚ್ಛೆಯಿಂದ ಅವರಬಳಿಗೆಹೋಗಿ ನಮಸ್ಕರಿಸಿದಳು . ಬಳೆಗಳ ಸದ್ದು ಕೇಳಿದ ಶ್ರೀ ಮಹಾರಾಜರು "ದೀರ್ಘ ಸುಮಂಗಲೀ ಭವ " ಎಂದು ಆಶೀರ್ವದಿಸಿದರು. ಕೂಡಲೇ ಆ ಯುವತಿಯು ಅಳುತ್ತಾ "ಇನ್ನೆಲ್ಲಿ ನಿಮ್ಮ ಆ ಆಶೀರ್ವಾದ ಫಲಿಸುವುದು?" ಎಂದಳು. ಕಣ್ಣುಬಿಟ್ಟು ನೋಡಿದ ಶ್ರೀ ಮಹಾರಾಜರಿಗೆ ಸಂದರ್ಭದ ಅರಿವಾಯಿತು . ಕೂಡಲೇ ಅವರು ಹೇಳಿದರು ," ತಾಯೀ, ನನ್ನ ಬಾಯಿಂದ ಶ್ರೀ ರಾಮಚಂದ್ರನು ನುಡಿಸಿದ ಮಾತು ಸುಳ್ಳಾಗಲಾರದು " ಎನ್ನುತ್ತಾ ಎದ್ದು ಶವದ ಬಳಿ ಹೋದರು. ಗಂಗೆಯ ನೀರನ್ನು ತರಲು ಹೇಳಿ ಅದನ್ನು ಶವದಮೇಲೆ ಚುಮುಕಿಸಿದರು. ಕೂಡಲೇ ಮಲಗಿದ್ದ ವ್ಯಕ್ತಿಯಲ್ಲಿ ಜೀವ ಸಂಚರಿಸಿತು . ಕಣ್ಣುಬಿಟ್ಟು ನಿದ್ರೆಯಿಂದ ಎಚ್ಚರವಾದಂತೆ ಎದ್ದು ಕುಳಿತನು . ಅಲ್ಲಿದ್ದ ಜನರು ಸಂತೋಷದಿಂದ ಆ ವ್ಯಕ್ತಿಯನ್ನು ಮಾತನಾಡಿಸುತ್ತಿರುವಾಗ ಶ್ರೀ ಮಹಾರಾಜರು ಅಲ್ಲಿಂದ ಕಣ್ಮರೆಯಾದರು .
ಶ್ರೀ ಮಹಾರಾಜರು ಇಂದೂರು ಬಿಟ್ಟು ದಕ್ಷಿಣದ ಕಡೆಗೆ ಹೊರಟಾಗ ಕೆಲವು ಸಾಧುಗಳು ಅವರ ಜೊತೆಯಾದರು . ಹಲವಾರು ಯಾತ್ರಾ ಸ್ಥಳಗಳನ್ನು ಸಂದರ್ಶಿಸಿ ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ರಾಮೇಶ್ವರದತ್ತ ಪ್ರಯಾಣ ಬೆಳಸಿದರು . ಮಾರ್ಗ ಮಧ್ಯದಲ್ಲಿ ಒಬ್ಬ ಕುಷ್ಠರೋಗಿಯು ಕುಳಿತಿದ್ದನು .ಅವನಿಗೆ ಎರಡು ಕಾಲೂ ಸ್ವಾಧೀನವಿರಲಿಲ್ಲ .ಅವನನ್ನು ವಿಚಾರಿಸಲಾಗಿ ಅವನು ತನ್ನ ಜೀವಿತದ ಕೊನೆಯ ಯಾತ್ರೆಯಾಗಿ ರಾಮೇಶ್ವರನ ದರ್ಶನ ಮಾಡಬೇಕೆಂಬ ಇಚ್ಛೆ ಇದೆ ಎಂದು ಹೇಳಿದನು. ಶ್ರೀ ಮಹಾರಾಜರು ಜೊತೆಯಲ್ಲಿದ್ದ ಸಾಧುಗಳ ನೆರವಿನಿಂದ ಆತನನ್ನು ಜೋಳಿಗೆಯಲ್ಲಿ ಕೂರಿಸಿ ಸರದಿ ಪ್ರಕಾರ ಎತ್ತಿಕೊಂಡು ರಾಮೇಶ್ವರಕ್ಕೆ ಹೋದರು . ಆದರೆ ಆತನಿಗೆ ರಾಮನಾಮವನ್ನು ಅನ್ನುತ್ತಿರಬೇಕೆಂದು ಹೇಳಿದರು .ಕೊನೆಗೆ ರಾಮೇಶ್ವರನ ದರ್ಶನವಾದಮೇಲೆ ಅವನು ದೇಹ ಬಿಟ್ಟನು .ಅವನ ಅಂತ್ಯ ಕ್ರಿಯೆಗಳನ್ನು ಮಹಾರಾಜರೇ ಮಾಡಿದರು.
ಗೋಂದಾವಳಿಗೆ ಪುನರಾಗಮನ, ಮಾತಾ ಪಿತೃಗಳ ಭೇಟಿ.
ಶೀಘ್ರದಲ್ಲೇ ಗಣಪತಿ ಬಂದಿರುವ ವಿಷಯ ಊರಿಗೆಲ್ಲಾ ಹಬ್ಬಿತು . ಆತನ ಹಳೆಯ ಮಿತ್ರರು , ಪರಿಚಯಸ್ಥರು ಎಲ್ಲರೂ ಬಂದು ಮಾತನಾಡಿಸಿಕೊಂಡು ಹೋದರು . ಮಿತ್ರರು ಅವರ ಪ್ರವಾಸದ ಬಗ್ಗೆ ಕೇಳುತ್ತಿದ್ದರು . ಶ್ರೀ ಮಹಾರಾಜರು ತಾವು ನೋಡಿದ ಆಶ್ಚರ್ಯ ಸಂಗತಿಗಳನ್ನು ಹೇಳುತ್ತಿದ್ದರು . ಅವರನ್ನು ನೋಡಲು ಬಂದ ಎಲ್ಲರಿಗೂ ರಾಮ ನಾಮದ ಮಹತ್ವವನ್ನು ಹೇಳಿ ನಾಮಸ್ಮರಣೆ ಮಾಡಲು ಹೇಳುತ್ತಿದ್ದರು . ಎಲ್ಲರಿಗೂ ಸಮಾಧಾನವಾಗುತಿತ್ತು . ಅವರನ್ನು ಭೇಟಿ ಮಾಡಲು ಬರುವ ಜನರ ಸಂಖ್ಯೆ ಹೆಚ್ಚಾಯಿತು .
ಕೆಲವು ಮಿತ್ರರು ಇವರಿಗೆ ಜಟೆ,ಗಡ್ಡ ಇರುವುದರಿಂದ ಇವರನ್ನು ನೋಡಲು ಹೆಚ್ಚು ಜನ ಬರುತ್ತಿರುವರೆಂದು ಭಾವಿಸಿದರು . ಅದಕ್ಕಾಗಿ ಶ್ರೀ ಮಹಾರಾಜರ ಹತ್ತಿರೆ ಅವನ್ನು ತೆಗೆಯಲು ಪ್ರಸ್ತಾಪಿಸಿದರು . ಅದಕ್ಕೆ ಶ್ರೀ ಮಹಾರಾಜರು " ಅದಕ್ಕೇನೂ ಅಭ್ಯಂತರವಿಲ್ಲ . ಆದರೆ , ಅದಕ್ಕಾಗಿ ಹೋಮ, ಹವನ , ಅನ್ನಸಂತರ್ಪಣೆ ಮುಂತಾದ ಕಾರ್ಯ ಮಾಡಬೇಕಾಗುತ್ತ್ತದೆ . ಅದಕ್ಕೆ ಬಹಳ ಖರ್ಚಾಗುತ್ತದೆ " ಎಂದರು . ಆಗ ಆ ಜನರು ಆ ಎಲ್ಲ ಖರ್ಚನ್ನು ತಾವೇ ಮಾಡುವುದಾಗಿ ಹೇಳಿದರು . ಕೆಲವು ದಿನ ಗಳನಂತರ ಶಾಸ್ತ್ರೋಕ್ತವಾಗಿ ಹೋಮ ಹವನ , ಅನ್ನಸಂತರ್ಪಣೆ ವಿಧಿಗಳಾಗಿ ಶ್ರೀ ಮಹಾರಾಜರ ಜಟಾ ಭಾರ ಇಳಿಸಲಾಯಿತು .
ಶ್ರೀಮತಿ ಗೀತಾಬಾಯಿಯವರಿಗೆ ಮಗನು ಗೃಹಸ್ಥಾಶ್ರಮಿಯಾಗಬೇಕೆಂದು ಅನಿಸಿತು. ಅದಕ್ಕೆ ಸೊಸೆಯನ್ನು ಮನೆಗೆ ಕರೆಸಬೇಕೆಂದು ತೀರ್ಮಾನಿಸಿ ಶ್ರೀ ಮಹಾರಾಜರೊಡನೆ ಪ್ರಸ್ತಾಪ ಮಾಡಿದರು . ಅದಕ್ಕೆ ಸರಿಯಾಗಿ ಖಾತವಳದಿಂದ ಗೋಂದಾವಳಿಗೆ ಬಂದಿದ್ದ ಶ್ರೀ ಮಹಾರಾಜರ ಮಾವನವರೂ ಸಹ ತಮ್ಮ ಮಗಳನ್ನು ಗೋಂದಾವಳಿಗೆ ಕಳಿಸಿಕೊಡುವ ಪ್ರಸ್ತಾಪ ಮಾಡಿದರು . ಅದಕ್ಕೆ ಶ್ರೀ ಮಹಾರಾಜರು ಒಪ್ಪಿ ಅವರ ಜೊತೆಯಲ್ಲೇ ಖಾತವಳಕ್ಕೆ ಹೋಗಿ ಅವರ ಪತ್ನಿ ಶ್ರೀಮತಿ ಸರಸ್ವತಿ ಬಾಯಿಯವರನ್ನು ಮನೆಗೆ ಕರೆದು ಕೊಂಡು ಬಂದರು . ಮಗನು ಎಲ್ಲರಂತೆಯೇ ಸಂಸಾರ ಮಾಡಿಕೊಂಡು ಮನೆಯಲ್ಲಿಯೇ ಇರುವನೆಂದು ಶ್ರೀಮತಿ ಗೀತಾಬಾಯಿಯವರಿಗೆ ಆನಂದವಾಯಿತು.
ಶ್ರೀ ರಾವೂಜಿ ಪಂತರು ವೈರಾಗ್ಯ ಮನೋಭಾವದವರು . ಮಗನಿಗೆ ಮನೆಯ ವ್ಯವಹಾರದ ಜೊತೆಗೆ ಕುಲಕರ್ಣಿಕೆಯನ್ನೂ ಕೊಟ್ಟುಬಿಟ್ಟರು. ಶ್ರೀ ಮಹಾರಾಜರು ಕುಲಕರ್ಣಿಕೆಯನ್ನು ಶ್ರದ್ಧೆಯಿಂದ ನಡೆಸುತ್ತಿದ್ದರು . ಕೆಲವು ಕಾಲದ ಮೇಲೆ ಶ್ರೀ ರಾವೂಜಿ ಪಂತರು ಸ್ವರ್ಗಸ್ಥರಾದರು .
ಶ್ರೀ ಮಹಾರಾಜರು ಹಲವಾರು ತಿಂಗಳು ಕುಲಕರ್ಣಿ ವೃತ್ತಿಯನ್ನು ನಡೆಸಿ ಕೆಲವು ತಿಂಗಳುಗಳಾದ ಮೇಲೆ ಆ ವೃತ್ತಿಯನ್ನು ಬೇರೊಬ್ಬ ವ್ಯಕ್ತಿಗೆ ವಹಿಸಿಕೊಟ್ಟು ತಾವು ನಿವೃತ್ತರಾದರು.
ಶ್ರೀ ಮಹಾರಾಜರಿಗೆ ಅವರ ಗುರುಗಳಾದ ಶ್ರೀ ತುಕಾಮಾಯಿಯವರನ್ನು ನೋಡಿಕೊಂಡುಬರಲು ಮನಸ್ಸಾಯಿತು. ಶ್ರೀಮತಿ ಸರಸ್ವತೀಬಾಯಿಯವರಿಗೂ ಶ್ರೀ ಗುರುಗಳನ್ನು ನೋಡಬೇಕೆಂಬ ಇಚ್ಛೆಯಿತ್ತು. ತಾಯಿಯವರಲ್ಲಿ ಪ್ರಸ್ತಾಪಿಸಲು ಶ್ರೀಮತಿ ಗೀತಾಬಾಯಿಯವರು " ಈ ಸಲ ನೀನೊಬ್ಬನೇ ಹೋಗಕೂಡದು . ನಿನ್ನ ಹೆಂಡತಿಯನ್ನೂ ಕರೆದುಕೊಂಡು ಹೋಗು " ಎಂದರು , ಅದರಂತೆ ಶ್ರೀ ಮಹಾರಾಜರು ತಮ್ಮ ಪತ್ನಿಯನ್ನು ಕರೆದುಕೊಂಡು ಏಹಳೆಗಾವ್ ಗೆ ಹೋದರು . ಶ್ರೀ ತುಕಾ ಮಾಯಿಯವರಿಗೆ ಪತ್ನಿಯೊಡನೆ ಬಂದ ತಮ್ಮ ಪ್ರಿಯ ಶಿಷ್ಯನನ್ನು ಕಂಡು ಬಹಳ ಸಂತೋಷವಾಯಿತು. ಎಂಟು ದಿನಗಳು ತಮ್ಮಲ್ಲೇ ಇಟ್ಟುಕೊಂಡು ಉಪಚಾರ ಮಾಡಿದರು .
ಅಲ್ಲಿಂದ ಹೊರಡುವಾಗ ಶ್ರೀಮತಿ ಸರಸ್ವತೀಬಾಯಿಯವರು ಶ್ರೀ ತುಕಾಮಾಯಿಯವರಿಗೆ ನಮಸ್ಕರಿಸಿದರು . ಆಗ ಗುರುಗಳು "ತಾಯೀ , ನಿನಗೇನು ಬೇಕು " ಎಂದು ಕೇಳಿದರು. ಅದಕ್ಕೆ ಶ್ರೀಮತಿ ಸರಸ್ವತೀಬಾಯಿಯವರು , "ಇವರಂಥ ಒಬ್ಬ ಮಗ ಬೇಕು " ಎಂದರು. ಅದಕ್ಕೆ ಗುರುಗಳು ನಗುತ್ತಾ ,"ತಥಾಸ್ತು" ಎಂದರು . ಅಲ್ಲಿಂದ ಹೊರಟಮೇಲೆ ಶ್ರೀ ಮಹಾರಾಜರು ,"
ಗುರುಗಳಲ್ಲಿ ಎಂಥಾ ವಸ್ತು ಕೇಳಿದೆ . ಏನು ಬೇಕಾದರೂ ಕೊಡ ಬಲ್ಲಂತಹ ಸಾಮರ್ಥ್ಯವುಳ್ಳವರಿಂದ ಅಶಾಶ್ವತ ವಾದುದನ್ನು ಬೇಡಿದೆಯಲ್ಲ . ನಿನಗೇನೊ ಮಗ ಹುಟ್ಟುತ್ತಾನೆ . ಆದರೆ ಅಲ್ಪಾಯುಷಿಯಾಗುತ್ತಾನೆ." ಎಂದರು.
ಏಹಳೆಗಾವ್ ನಿಂದ ಇಬ್ಬರೂ ನಾಸಿಕ್ ಗೆ ಹೋದರು . ಅಲ್ಲಿ ಗೋದಾವರಿ ದಂಡೆಯಲ್ಲಿರುವ ಒಂದು ಮಂದಿರದಲ್ಲಿ ಇಳಿದುಕೊಂಡರು . ಅಲ್ಲಿ ಶ್ರೀ ಮಹಾರಾಜರು ಪತ್ನಿಗೆ ಯೋಗಾಭ್ಯಾಸ ಮಾಡಿಸಿ ಭಗವಂತನ ಧ್ಯಾನ ಮಾಡುವುದನ್ನು
ಕಲಿಸಿದರು . ನಾಸಿಕ್ ನಲ್ಲಿ ಅನೇಕ ಮಂದಿ ಅವರ ಶಿಷ್ಯರಾದರು . ಅವರಲ್ಲಿ ಕೃಷ್ಣಾಜಿ ಪಂತ್ ಎಂಬ ಸದ್ಭಕ್ತರಿದ್ದರು . ಶ್ರೀ ಮಹಾರಾಜರು ತಾವು ಇನ್ನೂ ಉತ್ತರದಲ್ಲಿ ಪ್ರವಾಸ ಮಾಡಬೇಕಿರುವುದರಿಂದ ಶ್ರೀಮತಿ ಸರಸ್ವತೀಬಾಯಿಯವರಿಗೆ ಗೋಂದಾವಳಿಗೆ ಹಿಂದಿರುಗಬೇಕೆಂದು ಅನೇಕ ರೀತಿಯಲ್ಲಿ ಹೇಳಿ ಒಪ್ಪಿಸಿ ಶ್ರೀ ಕೃಷ್ಣಾಜಿಪಂತರ ಜೊತೆ ಮಾಡಿ ಊರಿಗೆ ಕಳುಹಿಸಿದರು . ಶ್ರೀಮತಿ ಸರಸ್ವತೀ ಬಾಯಿಯವರು ಗೋಂದಾವಳಿಯಲ್ಲಿದ್ದು, ಸದಾ ನಾಮಸ್ಮರಣೆ ಮಾಡುತ್ತಾ ತಮ್ಮ ಮನದಲ್ಲಿ ಶ್ರೀ ಮಹಾರಾಜರ ಪೂಜೆಯನ್ನು ಮಾಡುತ್ತಾ ತನ್ಮಯರಾಗುತ್ತಿದ್ದರು. ಅವರಿಗೆ ಅನೇಕ ಸಲ ಶ್ರೀ ಮಹಾರಾಜರು ಪ್ರತ್ಯಕ್ಷರಾದ ಅನುಭವ ಉಂಟಾಗುತ್ತಿತ್ತು . ಇತ್ತ ಶ್ರೀ ಮಹಾರಾಜರು ಇಂದೂರು, ಕಾಶೀ, ಅಯೋಧ್ಯಾ, ನೈಮಿಷಾರಣ್ಯ ಮುಂತಾದ ಸ್ಥಳಗಳಿಗೆ ಹೋಗಿ ಗೋಂದಾವಳಿಗೆ ಹಿಂತಿರುಗಿದರು . ನಂತರ ಶ್ರೀ ಮಹಾರಾಜರು ಕೆಲವು ವರ್ಷಗಳು ಗೋಂದಾವಳಿ ಬಿಟ್ಟು ದೂರ ಎಲ್ಲಿಗೂ ಹೋಗಲಿಲ್ಲ .ಅವರು ನೈಮಿಷಾರಣ್ಯದಲ್ಲಿರುವಾಗ ಕೆಲವು ಮಂತ್ರವಾದಿಗಳು ಆವರನ್ನು ಸರ್ಪ ಬಂಧನದಿಂದ ಬಂಧಿಸಿದರು. ಆದರೆ ಶ್ರೀ ಮಹಾರಾಜರು ಲೀಲಾಜಾಲವಾಗಿ ಅದರಿಂದ ಮುಕ್ತರಾದರು .
1876-77 ರ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಬರಗಾಲವು ಅತಿ ತೀಕ್ಷ್ಣವಾಗಿತ್ತು . ಜನರು ಊಟವಿಲ್ಲದೆ ಕಂಗಾಲಾಗಿದ್ದರು . ಆ ಸಮಯದಲ್ಲಿ ಶ್ರೀ ಮಹಾರಾಜರು ತಮ್ಮ ಹೊಲಗಳಲ್ಲಿ ಕೆಲಸ ಕಾಮಗಾರಿಕೆ ಪ್ರಾರಂಭಿಸಿ ನೂರಾರು ಜನರಿಗೆ ಊಟ ಹಾಕುತ್ತಿದ್ದರು . ಶ್ರೀ ಮಹಾರಾಜರು ಹೊಟ್ಟೆಗೆ ಅನ್ನ
ಕೊಡುವರೆಂದು ತಿಳಿದು ಬರೀ ಗೋಂದಾವಳಿಯವರಷ್ಟೇ ಅಲ್ಲ, ಅಕ್ಕ ಪಕ್ಕದ ಹಳ್ಳಿಯ ಬಡ ಜನರೂ ಕೂಡ ಕೆಲಸಕ್ಕೆ ಬರುತ್ತಿದ್ದರು . ಶ್ರೀ ಮಹಾರಾಜರು ಬಡಜನರಿಗಾಗಿ ತಮ್ಮ ಭಂಡಾರವನ್ನು
ಕೊಡುವರೆಂದು ತಿಳಿದು ಬರೀ ಗೋಂದಾವಳಿಯವರಷ್ಟೇ ಅಲ್ಲ, ಅಕ್ಕ ಪಕ್ಕದ ಹಳ್ಳಿಯ ಬಡ ಜನರೂ ಕೂಡ ಕೆಲಸಕ್ಕೆ ಬರುತ್ತಿದ್ದರು . ಶ್ರೀ ಮಹಾರಾಜರು ಬಡಜನರಿಗಾಗಿ ತಮ್ಮ ಭಂಡಾರವನ್ನು
ತೆರೆದಿಟ್ಟರು. ಔ೦ಧ್ ಪ್ರದೇಶದ ರಾಜನು ಒಂದು ದಿನ ಗೋಂದಾವಳಿಯ ಮೂಲಕ ಹೋಗುತ್ತಾ ಅನೇಕ ಜನರು ಕೆಲಸ ಮಾಡುತ್ತಿರುವುದನ್ನು ನೋಡಿ ಈ ಬರಗಾಲದಲ್ಲೂ ಇಷ್ಟು ಜನರಿಗೆ ಕೆಲಸ ಕೊಡುತ್ತಿರುವವರು ಯಾರೆಂದು ವಿಚಾರಿಸಿ ಶ್ರೀ ಮಹಾರಾಜರನ್ನು ಭೇಟಿ ಮಾಡಿ ಅನುಗ್ರಹ ಪಡೆದನು .
ಈ ಮಧ್ಯೆ ಶ್ರೀಮತಿ ಸರಸ್ವತೀಬಾಯಿಯವರು ಗರ್ಭವತಿಯಾದರು . ಶ್ರೀಮತಿ ಗೀತಾಬಾಯಿಯವರಿಗೆ ಬಹಳ ಸಂತೋಷವಾಯಿತು . ಸೊಸೆಗೆ ಅನೇಕ ರೀತಿ ಉಪಚಾರ ಮಾಡಿದರು . ಶ್ರೀ ಮಹಾರಾಜರಂತೆಯೇ ಕಾಣುವ ಒಂದು ಗಂಡು ಶಿಶು ಜನಿಸಿತು . ಆದರೆ ಒಂದು ವರ್ಷ ತುಂಬುವ ಮೊದಲೇ ಮಗು ತೀರಿಕೊಂಡಿತು . ಶ್ರೀಮತಿ ಸರಸ್ವತೀ ಬಾಯಿಯವರಿಗೆ ಪದೇ ಪದೇ ಜ್ವರಬರುತ್ತಿತ್ತು . ಒಂದು ದಿನ ಶ್ರೀ ಮಹಾರಾಜರ ಪಾದೋದಕ ತೆಗೆದುಕೊಂಡು ಸಿದ್ಧಾಸನದಲ್ಲಿ ಕುಳಿತುಕೊಂಡು ನಾಮಸ್ಮರಣೆಮಾಡುತ್ತಾ ದೇಹ ತ್ಯಾಗ ಮಾಡಿದರು .
ಶ್ರೀಮತಿ ಸರಸ್ವತೀ ಬಾಯಿಯವರು ತೀರಿಕೊಂಡು ಹಲವಾರು ತಿಂಗಳಾದಮೇಲೆ ಮತ್ತೆ ವಿವಾಹವಾಗಲು ಕನ್ಯೆಯರು ಬರತೊಡಗಿದರು . ಶ್ರೀ ಮಹಾರಾಜರು ಏನಾದರೂ ಕಾರಣ ಹೇಳಿ ನಿರಾಕರಿಸುತ್ತಿದ್ದರು . ಕೊನೆಗೆ ಒಂದು ದಿವಸ ಶ್ರೀಮತಿ ಗೀತಾಬಾಯಿಯವರು , "ಗಣು , ನೀನಿನ್ನೂ ಚಿಕ್ಕವನು, ಮದುವೆ ಬೇಡ ಎನ್ನಬೇಡ. ನೀನು ಮತ್ತೆ ವಿವಾಹವಾಗಬೇಕೆಂದು ನನ್ನ ಇಚ್ಛೆ "ಎಂದರು . ಆಗ ಶ್ರೀ ಮಹಾರಾಜರು " ಅಮ್ಮ, ನಿನ್ನ ಮಾತನ್ನು ಕೇಳುತ್ತೇನೆ . ಆದರೆ ಒಂದು ಷರತ್ತು . ಹುಡುಗಿಯನ್ನು ನಾನೇ ನಿಶ್ಚಯಿಸುತ್ತೇನೆ " ಎಂದರು . ಅದಕ್ಕೆ ಶ್ರೀಮತಿ ಗೀತಾಬಾಯಿಯವರು ಒಪ್ಪಿದರು .
ಇದಾದ ಸ್ವಲ್ಪ ದಿನಗಳಬಳಿಕ ಶ್ರೀ ಮಹಾರಾಜರು ಆಟಪಾಡಿ ಎಂಬ ಗ್ರಾಮಕ್ಕೆ ಹೋದರು. ಅಲ್ಲಿ ಸಖಾರಾಮ್ ಪಂತ ದೇಶಪಾಂಡೆ ಎಂಬ ಗೃಹಸ್ಥರ ಮನೆಗೆ ಹೋದರು . ಸಖಾರಾಮರಿಗೆ ಐದು ಜನ ಹೆಣ್ಣು ಮಕ್ಕಳಿದ್ದರು . ಅವರಲ್ಲಿ ಒಬ್ಬಳು ಹುಟ್ಟು ಕುರುಡಿ . ಅವಳೊಡನೆ ಲಗ್ನ ನಿಶ್ಚಯಮಾಡಿಕೊಂಡು ಬಂದರು . ನಂತರ ಮದುವೆಯ ದಿನ ಅವರು ಒಬ್ಬರೆ ಆಟಪಾಡಿಗೆ ಹೋಗಿ ಹುಟ್ಟು ಕುರುಡಿಯಾದ ಶ್ರೀಮತಿ ಯಮುನಾಬಾಯಿಯವರನ್ನು ಲಗ್ನವಾಗಿ ಗೊಂದಾವಳಿಗೆ ಕರೆತಂದರು. ಸಂತೋಷದಿಂದ ಸೊಸೆಯನ್ನು ಬರಮಾಡಿಕೊಳ್ಳುತ್ತಿರುವ ತಾಯಿಯವರಿಗೆ ನಮಸ್ಕರಿಸಲು ಹೇಳಿ , "ಅಮ್ಮಾ, ನೋಡು. ನಿನಗೆ ಹೊಸ ಸೊಸೆಯನ್ನು ಕರೆತಂದಿರುವೆ. ಇವಳು ನಿನ್ನ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ ." ಎಂದರು . ಶ್ರೀಮತಿ ಗೀತಾ ಬಾಯಿಯವರು ಹುಡುಗಿಯ ಮುಖ ನೋಡಿ ಕುರುಡಿ ಎಂದು ಅರಿವಾದೊಡನೆ , ಚಡಪಡಿಸುತ್ತಾ , "ಗಣು , ನೀನು ಯಾವಾಗ ಏನು ಮಾಡುತ್ತಿ ಎಂದು ಗೊತ್ತಾಗುವುದಿಲ್ಲ ಇನ್ನೇನು ಮಾಡುವುದು . ಆಗಿದ್ದು ಆಗಿ ಹೋಯಿತು ." ಎನ್ನುತ್ತಾ ಸೊಸೆಯನ್ನು ಬರಮಾಡಿಕೊಂಡರು . ತವರುಮನೆಯ ಯಮುನಾ ಹೆಸರಿನ ಬದಲಾಗಿ ಸರಸ್ವತಿ ಎಂದು ಹೆಸರಿಟ್ಟರು. ಶ್ರೀ ಮಹಾರಾಜರು ಪ್ರತಿ ದಿನವೂ ಜ್ಞಾನೇಶ್ವರಿ , ದಾಸಬೋಧ ಪ್ರವಚನ ಮಾಡುತ್ತಿದ್ದರು . ಅದನ್ನು ಕೇಳಲು ಊರಿನ ಜನರಲ್ಲದೇ ಪರಊರಿನವರೂ ಬರುತ್ತಿದ್ದರು. ಶ್ರೀ ಮಹಾರಾಜರ ಬೋಧನೆಯಿಂದ ಪ್ರಭಾವಿತರಾಗಿ ಎಲ್ಲರೂ ತಾರಕ ನಾಮ ಉಪದೇಶ ಪಡೆದು ನಾಮಸ್ಮರಣೆ ಮಾಡುತ್ತಿದ್ದರು . ಅದರಿಂದ ಅವರಿಗೆ ಪ್ರಾಪಂಚಿಕ ಸಮಾಧಾನವೂ ಸಿಗುತ್ತಿತ್ತು .
ಹಗಲು ರಾತ್ರಿ ಎನ್ನದೆ ಶ್ರೀ ಮಹಾರಾಜರ ದರ್ಶನ ಪಡೆಯಲು ಜನರು ಬರುತ್ತಿದ್ದರು . ವಾಸುದೇವ ಬಲವಂತ ಫಡಕೆ ಎಂಬುವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮುಖ್ಯಸ್ಥರಲ್ಲಿ ಒಬ್ಬರು . ಅವರು ಶ್ರೀ ದತ್ತಾತ್ರೇಯರ ಆರಾಧಕರಾಗಿದ್ದರು . ಶ್ರೀ ಮಹಾರಾಜರು ಬಡವರಿಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗಮಾಡುವುದನ್ನು ತಿಳಿದು ಶ್ರೀ ಫಡಕೆಯವರು ಶ್ರೀ ಮಹಾರಾಜರ ದರ್ಶನಕ್ಕೆ ಬಂದರು . ಬ್ರಿಟಿಷರನ್ನುಯುದ್ಧಮಾಡಿ ಹೊಡೆದೋಡಿಸುವ ತಮ್ಮ ಇಚ್ಛೆ ಯನ್ನು ಶ್ರೀ ಮಹಾರಾಜರಿಗೆ ತಿಳಿಸಿದರು . ಆಗ ಶ್ರೀ ಮಹಾರಾಜರು "ಈಗ ಸಮಯ ಸರಿಯಾಗಿಲ್ಲ .ಆಯುಧದಿಂದ ಅವರನ್ನು ಗೆಲ್ಲುವ ಸಾಧ್ಯತೆಯಿಲ್ಲ . ಹೋರಾಡಿ ನಿಮ್ಮ ಶಕ್ತಿಯನ್ನು ವ್ಯರ್ಥ ಗೊಳಿಸಬೇಡಿ . ಭಗವಂತನ ಉಪಾಸನೆ ಮಾಡಿ " ಎಂದರು . ಆದರೆ ಫಡಕೆಯವರಿಗೆ ಸಮಾಧಾನವಾಗಲಿಲ್ಲ . ಕೋಪದಿಂದ ಎದ್ದು ಹೊರಟುಹೋದರು. ನಂತರ ಸ್ವಲ್ಪ ಜನರನ್ನು ಸೇರಿಸಿಕೊಂಡು ಸರ್ಕಾರದ ವಿರುದ್ಧ ಸಶಸ್ತ್ರ ಚಳುವಳಿ ನಡೆಸಿದರು . ಬ್ರಿಟಿಷರು ಫಡಕೆಯವರನ್ನು ಹಿಡಿದು ಸೆರೆಮನೆಗೆ ಹಾಕಿದರು. ಫಡಕೆಯವರು ಒಂದೆರಡು ವರ್ಷಗಳಲ್ಲಿ ಸೆರೆಮನೆಯಲ್ಲೇ ದೇಹ ಬಿಟ್ಟರು .
ಶ್ರೀ ಮಹಾರಾಜರು ಬಾಲ್ಯದಿಂದಲೂ ಶ್ರೀ ರಾಮಭಕ್ತರು. ಅವರಲ್ಲಿಗೆ ಬಂದ ಜನರಿಗೆಲ್ಲಾ ರಾಮನಾಮವನ್ನೇ ಬೋಧಿಸುತ್ತಿದ್ದರು . ಅವರನ್ನು ನೋಡಲು ಬಂದ ಪರ ಊರಿನ ಭಕ್ತರಿಗೆ ಉಳಿದುಕೊಳ್ಳಲು ಸ್ಥಳ ಸಾಲದಾಗುತ್ತಿತ್ತು . ಹೀಗಾಗಿ ಒಂದು ರಾಮಮಂದಿರ ಕಟ್ಟಿಸಬೇಕೆಂದು ತೀರ್ಮಾನಿಸಿ ಅವರ ಮನೆಯ ಆವರಣದಲ್ಲೇ ಮಂದಿರ ಕಟ್ಟಿಸಲು ಪ್ರಾರಂಭಿಸಿದರು. ಕಟ್ಟಡದ ಕೆಲಸವೇನೋ ಮುಗಿಯುತ್ತಾ ಬಂದಿತು . ಆದರೆ ಮೂರ್ತಿಗಳ ವಿಷಯದಲ್ಲಿ ಏನೂ ಪ್ರಯತ್ನ ನಡೆಯಲಿಲ್ಲ . ಯಾರಾದರೂ ಮೂರ್ತಿಗಳ ವಿಷಯ ಕೇಳಿದರೆ , "ನಾವು ಯಾರಿಗಾಗಿ ಮಂದಿರ ಕಟ್ಟಿಸುತ್ತಿರುವೆವೋ ಅವರು ತಾವಾಗಿಯೇ ಬರುವರು" ಎಂದು ಹೇಳುತ್ತಿದ್ದರು .
ತಡವಳೇ ಗ್ರಾಮದ ಕುಲಕರ್ಣಿ ಶ್ರೀಮಂತರಾಗಿದ್ದು ಶ್ರೀ ರಾಮ ಮಂದಿರ ಕಟ್ಟಿಸಬೇಕೆಂಬ ಇಚ್ಛೆಯಿಂದ ಧನ ಸಂಗ್ರಹಿಸಿ ಮಂದಿರದ ಕಟ್ಟಡ ಪ್ರಾರಂಭಿಸಿದರು . ಹಾಗೆಯೇ ರಾಮ, ಸೀತಾ ಮತ್ತು ಲಕ್ಷ್ಮಣ ಮೂರ್ತಿಗಳನ್ನು ಮಾಡಿಸಿ ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು . ಕಟ್ಟಡ ಮುಗಿಯುವ ಹಂತಕ್ಕೆ ಬಂದಿತ್ತು . ದುರದೃಷ್ಟವಶಾತ್ ಆ ಮನೆಗೆ ಬೆಂಕಿ ತಗಲಿ ಸುಟ್ಟು ಭಸ್ಮವಾಯಿತು . ಮೂರ್ತಿಗಳಿಗೂ ಸ್ವಲ್ಪ ಬೆಂಕಿಯ ಝಳ ತಾಕಿ ಸ್ವಲ್ಪ ಕೆಂಪಾಯಿತು . ಕೆಲವು ದಿವಸಗಳ ನಂತರ ಕುಲಕರ್ಣಿಯವರಿಗೆ ಅವರು ಮಾಡಿಸಿದ ಶ್ರೀ ರಾಮ ಮೂರ್ತಿಯು ಕನಸಿನಲ್ಲಿ ಬಂದು "ಇಲ್ಲಿ ನನ್ನನ್ನು ಎಷ್ಟು ದಿನ ಕೂಡಿ ಹಾಕುವೆ. ನನ್ನನ್ನು ಗೋಂದಾವಲೆಯ ಬ್ರಹ್ಮಚೈತನ್ಯರಿಗೆ ಕೊಡು" ಎಂದು ಹೇಳಿದಂತಾಯಿತು . ಆದ್ದರಿಂದ ಆ ಮೂರ್ತಿಗಳನ್ನು ತಾವಾಗಿಯೇ ಶ್ರೀ ಮಹಾರಾಜರಿಗೆ ತಂದು ಕೊಟ್ಟರು . ಆ ದಿನ , ರವಿವಾರ, ಶ್ರೀ ಮಹಾರಾಜರು ಬೆಳಿಗ್ಗೆ ಎದ್ದೊಡನೆ " ಇವತ್ತು ಯಾರೋ ದೊಡ್ಡ ಅತಿಥಿಗಳು ನಮ್ಮ ಮನೆಗೆ ಬರುತ್ತಾರೆ. ಆದ್ದರಿಂದ ನಾವು ಎಲ್ಲರೂ ಉಪವಾಸದಿಂದ ಭಜನೆ ಮಾಡೋಣ " ಎಂದರು .ಇವರ ಹೇಳಿಕೆಯಂತೆ ಎಲ್ಲರೂ ಭಜನೆ ಮಾಡುತ್ತಾ ಕುಳಿತರು . ಸಂಜೆ 4 ಗಂಟೆಗೆ ಎರಡು ಎತ್ತಿನ ಗಾಡಿಗಳು ಬಂದವು . ಮೂರ್ತಿಗಳನ್ನು ತೆಗೆದುಕೊಂಡು ಬಂದಿರುವರೆಂಬ ಸಮಾಚಾರ ತಿಳಿದೊಡನೆ ಶ್ರೀ ಮಹಾರಾಜರು, "ಜಯ ಜಯ ಶ್ರೀ ರಾಮ" ಎಂದು ಭಜನೆ ಮಾಡುತ್ತಾ ಎಲ್ಲ ಜನರೊಂದಿಗೆ ಶ್ರೀ ರಾಮನನ್ನು ಎದುರುಗೊಳ್ಳಲು ಹೋದರು . ಅತ್ಯಂತ ಪ್ರೇಮದಿಂದ ಭಜನೆ ಮಾಡುತ್ತಾ ಮೂರ್ತಿಗಳನ್ನು ಮನೆಗೆ ಕರೆತಂದರು .
ಒಂದು ಸುಮುಹೂರ್ತದ ಸಮಯದಲ್ಲಿ ಅನೇಕ ಭಕ್ತ ಜನರ ಹಾಗೂ ಕಾಶೀ, ಪ್ರಯಾಗ,ಅಯೋಧ್ಯಾ, ಪುಣೆ, ಮುಂತಾದ ಸ್ಥಳಗಳಿಂದ ಆಗಮಿಸಿದ ದೊಡ್ಡ ದೊಡ್ಡ ವಿದ್ವಾಂಸರ ಸಮ್ಮುಖದಲ್ಲಿ ಶ್ರೀ ರಾಮಚಂದ್ರಮೂರ್ತಿ, ಸೀತಾದೇವಿ, ಲಕ್ಷ್ಮಣಸ್ವಾಮಿಯ ಮೂರ್ತಿಗಳ ಪ್ರಾಣ ಪ್ರತಿಷ್ಠೆಯು ನಡೆಯಿತು.
ಛತ್ರ ಸಿಂಹಾಸನದಿ ।ಅಯೋಧ್ಯೆಯ ರಾಜ ।। ಶೋಭಿಸುತ್ತಿರುವನು । ನನ್ನ ತಾಯಿ ತಂದೆ ।। ಎಂಬ ಅಭಂಗದಿಂದ ಭಜನೆ ಪ್ರಾರಂಭಿಸಿದರು. ಸುಮಾರು ಮೂರು ಗಂಟೆಗಳ ಭಜನೆಯಾದಮೇಲೆ ಪ್ರೇಮಾಶ್ರುಗಳು ತುಂಬಿಕೊಂಡು , "ಶ್ರೀ ರಾಮಚಂದ್ರ ಕರುಣಾಸಮುದ್ರಾ । ಧ್ಯಾನಿಸುವೆ ನಿನ್ನ ರಾಜಸ ಯೋಗಮುದ್ರಾ ।।।ಎಂದು ಹೇಳುತ್ತಾ ದೀರ್ಘದಂಡ ನಮಸ್ಕಾರ ಮಾಡಿದರು. ಎಂಟು ದಿವಸಗಳ ಕಾರ್ಯಕ್ರಮ. ಭಜನೆ,ಜಪ, ಹೋಮಹವನಗಳು , ಅನ್ನಸಂತರ್ಪಣೆ ಅಮೋಘವಾಗಿ ನಡೆದವು.
.
ಶ್ರೀ ರಾಮ ಮಂದಿರ ನಿರ್ಮಾಣವಾದ ಮೇಲೆ ಶ್ರೀ ಮಹಾರಾಜರ ಕೀರ್ತಿ ಹೆಚ್ಚಾದಂತೆ ಬರುವ ಭಕ್ತರೂ ಹೆಚ್ಚಾದರು . ಶ್ರೀ ಮಹಾರಾಜರು ಎಲ್ಲರಿಗೂ ರಾಮನಾಮದ ಮಹಿಮೆ ತಿಳಿಸಿ ನಾಮಸ್ಮರಣೆ ಮಾಡಲು ಹೇಳುತ್ತಿದ್ದರು. ಬಂದವರ ಪ್ರಾಪಂಚಿಕ ಸ್ಥಿತಿಯು ಉತ್ತಮವಾಗುತ್ತಿತ್ತು . ಅವರ ಅನೇಕ ಪವಾಡ ಸದೃಶ ಲೀಲೆಗಳನ್ನು ಹೇಳುವ ಉದ್ದಿಶ್ಯ ಇಲ್ಲಿಲ್ಲ . ಆದರೆ ಶ್ರೀಮಹಾರಾಜರು ಬರುವ ಜನರ ಆಧ್ಯಾತ್ಮಿಕ ಉನ್ನತಿಯನ್ನು ಬಯಸುತ್ತಿದ್ದರು.
ಉಪದೇಶ ಪಡೆದ ಹಲವಾರು ಭಾವುಕ ಭಕ್ತರು ಶ್ರೀ ಮಹಾರಾಜರ ಪಾದುಕೆಗಳನ್ನು ಪಡೆದು ತಮ್ಮ ಮನೆಗಳಲ್ಲಿಟ್ಟು ಪೂಜೆ ಮಾಡುತ್ತಿದ್ದರು . ಇಂದೂರಿನಲ್ಲಿ ಭಯ್ಯಾ ಸಾಹೇಬ್ ಮೊದಕ , ಜೀಜಾಬಾಯಿ ಮುಂತಾದ ಅನೇಕ ಭಕ್ತರಿದ್ದುದರಿಂದ ಅವರ ಆಹ್ವಾನದ ಮೇಲೆ ಶ್ರೀ ಮಹಾರಾಜರು ಆಗಾಗ ಇಂದೂರಿಗೆ ಹೋಗುತ್ತಿದ್ದರು. ಒಮ್ಮೆ ಅನಂತಶಾಸ್ತ್ರಿಗಳೆಂಬ ಒಬ್ಬ ವಿದ್ವಾಂಸರು ಭಗವತ್ಪ್ರಾಪ್ತಿಗಾಗಿ ಸದ್ಗುರುಗಳ
ಆಶ್ರಯಕ್ಕಾಗಿ ದೇಶವೆಲ್ಲಾ ಸುತ್ತುತ್ತಾ ಕೊನೆಗೆ ಇಂದೂರಿನಲ್ಲಿ ಶ್ರೀ ಮಹಾರಾಜರ ಬಳಿ ಬಂದರು.
ಶ್ರೀ ಮಹಾರಾಜರನ್ನು ನೋಡಿದಕೂಡಲೇ ಅವರು ಗುರುವಿಗಾಗಿ ಮಾಡಿದ ಹುಡುಕಾಟ ಕೊನೆಯಾಯಿತು. ಅಭಿಮಾನ ಶೂನ್ಯರಾಗಿ ಗುರುವಿಗೆ ಶರಣಾದರು.
ಶ್ರೀ ಮಹಾರಾಜರೊಡನೆ ಗೋಂದಾವಳಿಗೆ ಬಂದು ಶ್ರೀ ಮಹಾರಾಜರಿಗೆ ದಾಸಾನುದಾಸರಾದರು . ಅಂದೇ ಅವರ ಸಂಸ್ಕೃತ,ವೇದಾಂತಗಳ ಪಾಂಡಿತ್ಯಕ್ಕೆ ಕೊನೆಯಾಯಿತು . ರಾಮನಾಮವೇ ಅವರ ಉಸಿರಾಯಿತು.
ಶ್ರೀ ಮಹಾರಾಜರು ಗೊಂದಾವಳಿಯಲ್ಲೇ ಇದ್ದು ಅನೇಕ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದ್ದರು. ಶಿಷ್ಯ ವರ್ಗ ಹೆಚ್ಚಿತು. ಸಂಸಾರದಲ್ಲಿದ್ದುಕೊಂಡೇ ಹೇಗೆ ಮುಕ್ತಿ ಮಾರ್ಗ ಹಿಡಿಯಬಹುದೆಂದು ತೋರಿಸಿದರು ." ಪ್ರಾಪಂಚಿಕ ಕರ್ತವ್ಯವನ್ನು ನಿಸ್ಪೃಹತೆಯಿಂದ ಮಾಡಿ. ಆದರೆ ಎಲ್ಲವೂ ರಾಮನ ಇಚ್ಛೆಯಂತೆ ನಡೆಯುತ್ತದೆ ಎಂಬುದನ್ನು ಮರೆಯಬೇಡಿ" ಎನ್ನುತ್ತಿದ್ದರು. .
ಗೋಂದಾವಳಿಗೆ ಹಿಂದಿರುಗಿದಮೇಲೆ ಬಂದ ಭಕ್ತ ಮಂದಿಗೆ ರಾಮನಾಮ ಉಪದೇಶಿಸುತ್ತಾ , ಜ್ಜಾನೇಶ್ವರಿ ,ದಾಸಬೋಧ ಪ್ರವಚನ ನೀಡುತ್ತಾ ಜನರನ್ನು ಸನ್ಮಾರ್ಗಕ್ಕೆ ಎಳೆಯುತ್ತಿದ್ದರು . ಹೀಗಿರುವಾಗ ಒಂದು ದಿನ ಇಬ್ಬರು ಪೋಲೀಸರು ಒಬ್ಬ ದರೋಡೆಗಾರನನ್ನು ಹಿಡಿದುಕೊಂಡು ಸತಾರಾದಲ್ಲಿರುವ ಕೋರ್ಟಿಗೆ ಹೋಗುವ ಸಲುವಾಗಿ ಬಂದವರು ರಾತ್ರಿ ಉಳಿದುಕೊಳ್ಳಲು ಗೋಂದಾವಳಿಯಲ್ಲಿ ಮಹಾರಾಜರ ಬಳಿಗೆ ಬಂದರು . ಶ್ರೀ ಮಹಾರಾಜರು ಆದರದಿಂದ ಉಳಿದುಕೊಳ್ಳಲು ಸ್ಥಳ ನೀಡಿ ಊಟ ಮಾಡಲು ಹೇಳಿದರು . ಆದರೆ ಕಳ್ಳನ ಕೈಗೆ ತೊಡಿಸಿದ್ದ ಬೇಡಿಗಳನ್ನು ಬಿಚ್ಚಲು ಪೊಲೀಸರು ನಿರಾಕರಿಸಿದರು . ಏಕೆಂದರೆ, ಬೇಡಿ ಬಿಚ್ಚಿದರೆ ಆ ಕಳ್ಳನು ಓಡಿಹೋಗುವನೆಂದು ಹೆದರಿದ್ದರು . ಆಗ ಶ್ರೀ ಮಹಾರಾಜರು "ಅವನೂ ಊಟ ಮಾಡಲಿ ,ಕೈ ಬೇಡಿಗಳನ್ನು ತೆಗೆಯಿರಿ . ಅವನು ಓಡಿ ಹೋಗುವುದಿಲ್ಲವೆಂದು ನಾನು ಆಶ್ವಾಸನೆ ಕೊಡುತ್ತೇನೆ" ಎಂದರು . ನಂತರ ಅವನು ಊಟಮಾಡಿದಮೇಲೆ ಅವನು ಶ್ರೀ ಮಹಾರಾಜರ ಕಾಲುಗಳ ಮೇಲೆ ಬಿದ್ದನು . ಆಗ ಶ್ರೀ ಮಹಾರಾಜರು ಈ ಸಲ ಶ್ರೀ ರಾಮನ ಅನುಗ್ರಹದಿಂದ ಬಿಡುಗಡೆ ಹೊಂದುತ್ತೀ . ಆದರೆ ಇನ್ನು ಮುಂದೆ ಇಂಥ ಕೆಲಸ ಮಾಡಬೇಡ . ನೀತಿಯಿಂದ ಯಾವುದಾದರೂ ಉದ್ಯೋಗ ಮಾಡು . ರಾಮನು ನಿನಗೆ ಒಳ್ಳೆಯದನ್ನು ಮಾಡುವನು " ಎಂದರು . ಅವರು ಹೇಳಿದಂತೆ ಕೋರ್ಟ್ನಲ್ಲಿ ಅವನಿಗೆ ಶಿಕ್ಷೆಯಾಗಲಿಲ್ಲ . ಬಿಡುಗಡೆಯಾದಮೇಲೆ ಅವನು ಪುನಃ ಕಳ್ಳತನ ಮಾಡದೆ ಗೌರವಸ್ಥನಾಗಿ ಬಾಳಿದನು . ಅವನು ಶ್ರೀ ಮಹಾರಾಜರ ಅನನ್ಯ ಭಕ್ತನಾದನು.
ಶ್ರೀ ಮಹಾರಾಜರಿಗೆ ಹಸುಗಳೆಂದರೆ ಬಹಳ ಪ್ರೇಮವಿತ್ತು . ಕಸಾಯಿಖಾನೆಗೆ ಹೋಗುತ್ತಿದ್ದ ಅನೇಕ ಹಸುಗಳನ್ನು ಅವರು ಹೇಳಿದ ಬೆಲೆಗೆ ಕೊಂಡು, ಸಾಕುತ್ತಿದ್ದರು . ಇವರ ಆರೈಕೆಗೆ ಬಂಜೆ ಎಂದು ಕೊಂಡಿದ್ದ ಹಸುಗಳೂ ಸಹ ಕರುಗಳನ್ನು ಕೊಟ್ಟು ಹಾಲು ಕೊಡುತ್ತಿದ್ದವು . ಎಲ್ಲ ಹಸುಗಳಿಗೂ ಹೆಸರು ಕೊಟ್ಟಿದ್ದರು. ಶ್ರೀ ಮಹಾರಾಜರು ಆ ಹಸುಗಳ ಹೆಸರನ್ನು ಕೂಗಿದರೆ ಅವರ ಬಳಿ ಓಡಿ ಬರುತ್ತಿದ್ದವು .
ಶ್ರೀಮತಿ ಯಮುನಾಬಾಯಿಯವರು ಕುರುಡಾದರೂ ಮನೆಯ ವ್ಯವಹಾರಗಳನ್ನು ದಕ್ಷತೆಯಿಂದ ಗಮನಿಸುತ್ತಿದ್ದರು . ಸದಾ ನಾಮಸ್ಮರಣೆಯಲ್ಲಿರುತ್ತಿದ್ದ ಅವರಿಗೆ ಬೇರೆ ಏನೂ ಕಾಣಿಸದಿದ್ದರೂ ಶ್ರೀ ಮಹಾರಾಜರೊಬ್ಬರು ತಮ್ಮ ನಿಜಸ್ವರೂಪದಿಂದ ಕಾಣಿಸಿಕೊಳ್ಳುತ್ತಿದ್ದರು.
ಶ್ರೀ ಮಹಾರಾಜರು ಒಂದು ದಿನ ಶ್ರೀ ರಾಮನ ಭಜನೆಯ ನಂತರ ನೆರೆದಿರುವ ಭಕ್ತ ಜನರ ಮುಂದೆ , "ನನಗೆ ವಯಸ್ಸಾಯಿತು. ನೈಮಿಷಾರಣ್ಯಕ್ಕೆ ಹೋಗಬೇಕೆಂದಿದ್ದೇನೆ . ನೀವೆಲ್ಲಾ ಸದಾಚರಣೆಯಲ್ಲಿರಿ .ರಾಮನನ್ನು ಮರೆಯಬೇಡಿರಿ . ನಾಮಸ್ಮರಣೆ ಮಾಡುತ್ತಾ ಆನಂದದಿಂದ ಕಾಲ ಕಳೆಯಿರಿ" ಎಂದರು . ಅಲ್ಲಿ ನೆರೆದಿದ್ದ ಎಲ್ಲರಿಗೂ ಶ್ರೀ ಮಹಾರಾಜರು ಅಲ್ಲಿಂದ ಹೊರಡುವ ಸಮಾಚಾರ ಕೇಳಿ ಬಹಳ ದುಃಖವಾಯಿತು . ಎಲ್ಲರೂ ಶ್ರೀ ಮಹಾರಾಜರ ಪಾದದ ಮೇಲೆ ತಲೆಯಿಟ್ಟು ಆಶೀರ್ವಾದ ಪಡೆದರು. .ಅನಂತರ ಶ್ರೀ ಮಹಾರಾಜರು ಶ್ರೀ ರಾಮನ ಮುಂದೆ ತಮ್ಮ ಸಂಕಲ್ಪವನ್ನು ಅರಿಕೆ ಮಾಡಿ ನಂತರ ಹೊರಟರು. ಹೊರಗೆ ಹೋಗಿ ಟಾಂಗಾದಲ್ಲಿ ಕುಳಿತರು. ಅಷ್ಟರಲ್ಲಿ ಮಂದಿರದ ಒಳಗಿದ್ದ ಒಬ್ಬರು ಓಡುತ್ತಾ ಬಂದು " ಮಹಾರಾಜ , ಶ್ರೀ ರಾಮ , ಸೀತಾ, ಲಕ್ಷ್ಮಣ ಮೂರ್ತಿಗಳ ಕಣ್ಣುಗಳಿಂದ ಒಂದೇ ಸಮನೆ ಕಣ್ಣೀರು ಬರುತ್ತಿದೆ" ಎಂದರು . ಆಗ ಕೂಡಲೇ ಶ್ರೀ ಮಹಾರಾಜರು ಟಾಂಗಾದಿಂದ ಇಳಿದು ಮಂದಿರಕ್ಕೆ ಹೋಗಿ ಮಡಿ ಉಟ್ಟು ಶ್ರೀ ರಾಮಚಂದ್ರನ ಬಳಿ ಹೋಗಿ ಒಂದು ಮೃದುವಾದ ಶುಭ್ರ ಬಟ್ಟೆಯಿಂದ ಕಣ್ಣುಗಳನ್ನು ಒರೆಸುತ್ತಾ , " ಶ್ರೀ ರಾಮಚಂದ್ರಾ , ಏಕೆ ನಿನ್ನ ಕಣ್ಣಿನಲ್ಲಿ ಅಶ್ರು ಸುರಿಯುತ್ತಿದೆ , ನಾನು ಇಲ್ಲಿಂದ ಹೋಗುವುದು ನಿನಗೆ ಇಷ್ಟವಿಲ್ಲವೇ ? ನಿನಗೆ ಇಷ್ಟವಿಲ್ಲದಿದ್ದರೆ ನಾನು ಇಲ್ಲೇ ನಿಲ್ಲುವೆನು . ದಯವಿಟ್ಟು ನನ್ನನ್ನು ಕ್ಷಮಿಸು. " ಎಂದರು. ಶ್ರೀ ಮಹಾರಾಜರು ಹಾಗೆಂದ ಕೂಡಲೇ ಮೂರ್ತಿಗಳ ಕಣ್ಣಿನಿಂದ ನೀರು ಸುರಿಯುವುದು ನಿಂತಿತು .
ಶ್ರೀಮತಿ ಗೀತಾಬಾಯಿಯವರಿಗೆ ವಯಸ್ಸಾಗುತ್ತಾ ಬಂದಿತು. ಒಂದು ದಿನ ಶ್ರೀ ಮಹಾರಾಜರು ,"ಅಮ್ಮಾ, ನಿನ್ನ ಇಚ್ಛೆ ಏನಾದರೂ ಇದೆಯೇನು?" ಎಂದು ಕೇಳಿದರು . ಅದಕ್ಕೆ ಶ್ರೀಮತಿ ಗೀತಾಬಾಯಿಯವರು , "ನಿನ್ನಂತಹ ಮಗನಿರುವಾಗ ನನಗೇನು ಇಚ್ಛೆ ಉಳಿದಿರುತ್ತದೆ? ಆದರೆ ಒಂದು ಸಲ ಕಾಶೀ ವಿಶ್ವನಾಥನ ದರ್ಶನ ಮಾಡಬೇಕೆಂಬ ಒಂದು ಆಸೆ ಇದೆ " ಎಂದರು. ಕೂಡಲೇ ಶ್ರೀ ಮಹಾರಾಜರು , "ಆಗಲಿ, ಕಾಶಿಗೆ ಹೊರಡೋಣ , ಪ್ರಯಾಣಕ್ಕೆ ಎಲ್ಲ ತಯಾರಿಯಾಗಲಿ "ಎಂದರು . ಹಲವಾರು ಜನ ಶ್ರೀ ಮಹಾರಾಜರ ಜೊತೆಯಲ್ಲಿ ಕಾಶಿಗೆ ಹೊರಡಲು ಸಿದ್ಧರಾದರು . ಶ್ರೀ ಮಹಾರಾಜರ ಜೊತೆ ಕಾಶಿಗೆ ಹೋಗಲು ಬೇರೆ ಬೇರೆ ಸ್ಥಳಗಳಿಂದ ಭಕ್ತರು ಬಂದು ಸುಮಾರು ನೂರು ಜನ ಸೇರಿದರು. ತಾವೂ ಶ್ರೀ ಮಹಾರಾಜರ ಜೊತೆ ಕಾಶಿಗೆ ಹೋಗುವ ಇಚ್ಛೆಯಿಂದಿದ್ದ ತಮ್ಮ ಪತ್ನಿಗೆ "ಮುಂದೆ ಯಾವಾಗಲಾದರೂ ಒಮ್ಮೆ ಖಂಡಿತ ಹೋಗೋಣ "ಎಂದು ಸಮಾಧಾನಪಡಿಸಿ ಅವರನ್ನು ತವರಿಗೆ ಕಳುಹಿಸಿದರು . ಎಲ್ಲರೂ ರೈಲಿನಲ್ಲಿ ಪ್ರಯಾಣ ಬೆಳೆಸಿದರು .
ಯಾತ್ರೆಗೆ ಹೋಗಲು ಮನೆಯಿಂದ ಆಚೆಗೆ ಹೋದಾಗ ಶ್ರೀಮತಿ ಗೀತಾಬಾಯಿಯವರು ಮನೆಗೆ ಸರಿಯಾಗಿ ಬೀಗ ಹಾಕಿದೆಯಾ ಎಂಬ ಬಗ್ಗೆ ವಿಶೇಷ ಆಸಕ್ತಿ ತೋರಿದರು . ಆವಾಗ ಶ್ರೀ ಮಹಾರಾಜರು , "ಅಮ್ಮಾ, ನೀನೇನೂ ಚಿಂತೆ ಮಾಡಬೇಡ, ನಾನು ಅದರ ಬಗ್ಗೆ ನೋಡಿಕೊಳ್ಳುತ್ತೇನೆ " ಎಂದು ಹೇಳಿ ಮನೆಯ ಬಾಗಿಲು ತೆಗೆದು ಸ್ವಲ್ಪ ನೀರನ್ನು ತರಿಸಿ ಊರ ಜನರಿಗೆ , " ಮನೆಯಲ್ಲಿರುವ ಎಲ್ಲ ವಸ್ತುವೂ ನಿಮ್ಮದೇ . ಯಾರಿಗೆ ಏನು ಬೇಕಾದರೂ ತೆಗೆದುಕೊಳ್ಳಬಹುದು " ಎಂದು ನೀರು ಬಿಟ್ಟರು . ಕೂಡಲೇ ಅನೇಕರು ಮನೆಯ ಒಳಗೆ ಹೋಗಿ ಅವರಿಗೆ ಬೇಕಾದ , ಸಿಕ್ಕಿದ ವಸ್ತುವನ್ನು ತೆಗೆದುಕೊಂಡು ಹೋದರು .ಮನೆ ಖಾಲಿಯಾಯಿತು . " ಅಮ್ಮ ನೀನೀಗ ನಿಶ್ಚಿಂತೆ ಯಿಂದ ಯಾತ್ರೆ ಮಾಡಬಹುದು " ಎಂದರು . ಅದನ್ನು ಕಂಡು ಆವಾಕ್ಕಾದ ಶ್ರೀಮತಿ ಗೀತಾಬಾಯಿಯವರು "ಗಣು , ನೀನು ಯಾವಾಗ ಏನು ಮಾಡುತ್ತೀ ಎಂದು ತಿಳಿಯುವುದಿಲ್ಲ " ಎಂದು ಉದ್ಗರಿಸಿದರು .
ಎಲ್ಲರೂ ಕೋರೆಗಾವ್ ರೈಲ್ವೆ ಸ್ಟೇಷನ್ ನಿಂದ ರೈಲಿನಲ್ಲಿ ಪ್ರಯಾಣ ಮಾಡಿದರು . ಶ್ರೀ ಮಹಾರಾಜರು ಒಂದು ತಿಂಗಳ ಕಾಲ ಕಾಶಿಯಲ್ಲಿದ್ದು ಪ್ರತಿ ದಿನ ತಮ್ಮ ತಾಯಿಯನ್ನು ಎತ್ತಿಕೊಂಡು ಗಂಗಾಸ್ನಾನಕ್ಕೆ ಹೋಗುತ್ತಿದ್ದರು . ಮೆಟ್ಟಲು ಹತ್ತಿ , ಇಳಿಯಲು ಶ್ರೀಮತಿ ಗೀತಾಬಾಯಿಯವರಿಗೆ ಕಷ್ಟವಾಗುತ್ತಿದ್ದುದರಿಂದ ಶ್ರೀ ಮಹಾರಾಜರೇ ಸ್ವತಃ ಅವರನ್ನು ಮಗುವಿನಂತೆ ನೋಡಿಕೊಂಡರು .ಸ್ನಾನದ ನಂತರ ಶ್ರೀ ವಿಶ್ವನಾಥನ ದರ್ಶನ, ದಿನವೂ ಊಟೋಪಚಾರಗಳು ಎಲ್ಲರಿಗೂ ಚೆನ್ನಾಗಿ ಜರುಗುತ್ತಿತ್ತು. ಕಾಶಿಯಲ್ಲಿ ಅನೇಕ ವಿದ್ವಾಂಸರು, ಸಾರ್ವಜನಿಕರು ಶ್ರೀ ಮಹಾರಾಜರ ದರ್ಶನ ಪಡೆಯುತ್ತಿದ್ದರು . ಗಯಾ, ಪ್ರಯಾಗ, ನೋಡಿಕೊಂಡು ಅಯೋಧ್ಯೆಗೆ ಹೋದರು .
ಅಯೋಧ್ಯೆಯಲ್ಲಿ ಸರಯೂ ನದಿಯಲ್ಲಿ ಸ್ನಾನ, ಶ್ರೀ ರಾಮದರ್ಶನ ಮಾಡಿದರು. ಆದರೆ ಅಯೋಧ್ಯೆಗೆ ಬಂದ ಮೇಲೆ ಶ್ರೀಮತಿ ಗೀತಾಬಾಯಿಯವರಿಗೆ ಆರೋಗ್ಯ ಹದಗೆಟ್ಟಿತು . ಬಹಳ ಆಯಾಸವಾಗುತ್ತಿತ್ತು .ಔಷಧ ಏನೂ ತೆಗೆದುಕೊಳ್ಳಲಿಕ್ಕೆ ಅವರು ಒಪ್ಪಲಿಲ್ಲ . ಊಟ ಮಾಡುವುದು ಬಿಟ್ಟು ಬರೀ ಹಾಲು ಕುಡಿಯುತ್ತಿದ್ದರು. ಸದಾ ನಾಮಸ್ಮರಣೆ ಮಾಡುತ್ತಿದ್ದರು. ಶ್ರೀ ಮಹಾರಾಜರು ಯಾವಾಗಲೂ ಅವರ ಹತ್ತಿರವೇ ಇರುತ್ತಿದ್ದರು . ತಾವು ಇನ್ನು ಹೆಚ್ಚು ದಿನ ಉಳಿಯುವುದಿಲ್ಲ. ಆದ್ದರಿಂದ ಮತ್ತೆ ಸರಯೂ ಸ್ನಾನ ಮಾಡಿ ಶ್ರೀ ರಾಮನ ದರ್ಶನ ಪಡೆದು ಸ್ವಲ್ಪ ದಾನ ಧರ್ಮ ಮಾಡಬೇಕು ಎಂದು ಮಗನಿಗೆ ಹೇಳಿದರು . ಅದರಂತೆ ಶ್ರೀ ಮಹಾರಾಜರು ನದಿಯಲ್ಲಿ ಸ್ನಾನ ಮಾಡಿಸಿ ಶ್ರೀ ರಾಮ ದರ್ಶನ ಮಾಡಿಸಿ ಹತ್ತಿರದಲ್ಲೇ ಒಂದು ಮರದ ಕೆಳಗೆ ಮೆತ್ತನೆಯ ಆಸನದ ಮೇಲೆ ತಾಯಿಯನ್ನು ಕೂರಿಸಿದರು . "ಅಮ್ಮಾ, ಈ ಆಸನದ ಕೆಳಗೆ ದುಡ್ಡಿದೆ .ನಿನಗೆ ಇಷ್ಟ ಬಂದಷ್ಟು ದಾನಮಾಡು " ಎಂದರು . ಅದರಂತೆ ಶ್ರೀಮತಿ ಗೀತಾಬಾಯಿಯವರು ಬಂದವರಿಗೆಲ್ಲಾ ಕೈಗೆ ಸಿಕ್ಕ ಹಣವನ್ನು ಮನಃ ಪೂರ್ತಿಯಾಗಿ ದಾನ ಮಾಡಿದರು . ಮಾರನೆಯ ದಿನ ಶ್ರೀ ಮಹಾರಾಜರ ತೊಡೆಯಮೇಲೆ ಮಲಗಿ ರಾಮ ನಾಮಸ್ಮರಣೆ ಮಾಡುತ್ತಾ ಇಹಲೋಕ ತ್ಯಜಿಸಿದರು . ವೈರಾಗ್ಯ ಮೂರ್ತಿಯಾದ ಶ್ರೀ ಮಹಾರಾಜರು ಸಹಾ ಕಣ್ಣೀರು ಸುರಿಸುತ್ತಾ "ಅಮ್ಮಾ, ನೀನು ಹೋದೆಯಾ " ಎಂದರು .
ಶ್ರೀ ಮಹಾರಾಜರು ಉತ್ತರ ಕ್ರಿಯೆಯನ್ನು ಅಯೋಧ್ಯೆಯಲ್ಲೇ ಮಾಡಿ ದಾನಧರ್ಮಗಳನ್ನೂ, ಅನ್ನಸಂತರ್ಪಣೆ ಯನ್ನೂ ಮಾಡಿದರು .
ಪೊಲೀಸ್ ಇಲಾಖೆಯಲ್ಲಿದ್ದ ಭಿಕಾಜಿ ಶ್ರೀ ಪಂತ ಎಂಬುವರ ಬಳಿ ಬತಾಶಾ ಎಂಬ ಒಂದು ಸುಂದರ ಆದರೆ ಹಠಮಾರಿ ಕುದುರೆ ಇತ್ತು . ಅದನ್ನು ಅವರು ಶ್ರೀ ಮಹಾರಾಜರಿಗೆ ತಂದು ಒಪ್ಪಿಸಿದರು . ಶ್ರೀ ಮಹಾರಾಜರು ಆ ಮೂಕಪ್ರಾಣಿಯನ್ನು ಅತ್ಯಂತ ಪ್ರೇಮದಿಂದ ಸಾಕಿದರು . ಎರಡು ಮೂರು ದಿನಗಳಿಗೊಮ್ಮೆಯಾದಾರೂ ಅದರ ಮೇಲೆ ಸವಾರಿ ಮಾಡುತ್ತಿದ್ದರು . ಆ ಕುದುರೆ ಬೇರೆ ಯಾರನ್ನೂ ತನ್ನ ಮೇಲೆ ಸವಾರಿ ಮಾಡಲು ಬಿಡುತ್ತಿರಲಿಲ್ಲ .
ಶ್ರೀ ಮಹಾರಾಜರು ಅನೇಕ ರಾಮ ಮಂದಿರಗಳನ್ನು ಕಟ್ಟಿಸಿದರು. ಅನೇಕರಿಗೆ ಮಂದಿರ ಕಟ್ಟಿಸಲು ಹೇಳಿದರು, ಚೈತನ್ಯ ನೀಡಿದರು . ಗೋಂದಾವಳಿಯು ರಾಮನಾಮದ ಸಂತೆಯಾಯಿತು . ಅನೇಕರು ಆಧ್ಯಾತ್ಮಿಕ ಉನ್ನತಿಗಾಗಿ ಅವರ ಬಳಿ ಬರುತ್ತಿದ್ದರು . ಆದರೆ ಪ್ರಾಪಂಚಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಬರುತ್ತಿದ್ದವರ ಸಂಖ್ಯೆ ಏನೂ ಕಡಿಮೆಯಿರಲಿಲ್ಲ .ಆದರೆ ಶ್ರೀ ಮಹಾರಾಜರು ದಯೆಯಿಂದ ಎಲ್ಲರಿಗೂ ಸಮಾಧಾನ ನೀಡುತ್ತಿದ್ದರು . ಅವರಿಗೆ ಇದ್ದಲ್ಲೇ ಇದ್ದು ದೂರದಲ್ಲಿರುವ ಭಕ್ತರಿಗೆ ಕಾಣಿಸಿಕೊಳ್ಳುವ ಶಕ್ತಿ ಇತ್ತು . ಹೇಗೆ ಅವರು ದೂರದಲ್ಲಿದ್ದ , ಆದರೆ ಅನುಗ್ರಹಿಸಬೇಕೆಂದಿದ್ದ ಒಬ್ಬ ವ್ಯಕ್ತಿಯನ್ನು ತಮ್ಮ ಬಳಿಗೆ ಕರೆಸಿಕೊಂಡು ಅನುಗ್ರಹಿಸಿದರು ಎಂಬುದಕ್ಕೆ ಒಂದು ನಿದರ್ಶನ ಶ್ರೀ ಗಂಜೂರು ವೆಂಕಣ್ಣಯ್ಯನವರು .
ಚಿಂತಾಮಣಿಯ ಬಳಿಯಲ್ಲಿರುವ ಗಂಜೂರಿನ ಶ್ರೀ ವೆಂಕಣ್ಣಯ್ಯನವರು ಮೈಸೂರಿನ ಇಂಜಿನಿಯರಿಂಗ್ ಸ್ಕೂಲಿನಲ್ಲಿ ವ್ಯಾಸಂಗ ಮುಗಿಸಿ ಮೈಸೂರು ಮಹಾರಾಜರ ಸರ್ಕಾರದ ಇಂಜಿನಿಯರಿಂಗ್ ಇಲಾಖೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು . ಅದೇ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದಲ್ಲಿ ಕೆರೆಗೆ ಕಟ್ಟೆ ಕಟ್ಟಿಸುವ ಕೆಲಸಕ್ಕೆ ಮೇಲ್ವಿಚಾರಣೆ ನೆಡೆಸಬೇಕಿತ್ತು. 1913 ರಲ್ಲಿ ನವೆಂಬರ್ ತಿಂಗಳು ಒಂದು ದಿನ ಮಧ್ಯಾಹ್ನ ಊಟದ ವಿರಾಮದ ಸಮಯ. ಒಂದು ಮರದ ಕೆಳಗೆ ಮನೆಯಿಂದ ತಂದಿದ್ದ ಲಘು ಊಟವನ್ನು ಮುಗಿಸಿ ಚಿಕ್ಕಂದಿನಿಂದ ಅಭ್ಯಾಸವಿದ್ದ ರಾಮನಾಮವನ್ನು ಜಪಿಸುತ್ತಾ ಕಣ್ಣುಮುಚ್ಚಿಕೊಂಡು ಕುಳಿತಿದ್ದರು . ಆಗ , " ಮಹಾ ಪುರುಷ , ಮಹಾ ಪುರುಷ " ಎಂಬ ಶಬ್ದ ಕೇಳಿ ಕಣ್ಣು ತೆರೆದರು. ಎದುರಿಗೆ ಆಜಾನುಬಾಹು ಪುರುಷರೊಬ್ಬರು ನಿಂತಿದ್ದಾರೆ ! ಅಕ್ಕಪಕ್ಕದಲ್ಲಿ ಶಿಷ್ಯರಂತಿದ್ದ ಇಬ್ಬರು ವ್ಯಕ್ತಿಗಳಿದ್ದಾರೆ . ಯಾರೋ ಮಹಾ ಪುರುಷರಿರಬೇಕೆಂದು ಎದ್ದು ದೀರ್ಘ ದಂಡ ನಮಸ್ಕಾರ ಮಾಡಿದರು . ನಮಸ್ಕಾರ ಮಾಡುವಾಗ "ಗೋಂದಾವಲ್ಯಾವೆ "ಎಂಬ ಶಬ್ದ ಕೇಳಿಸಿತು . ಆದರೆ ನಮಸ್ಕಾರ ಮಾಡಿ ಏಳುವುದರಲ್ಲಿ ಆ ಮಹಾಪುರುಷರು ಅದೃಶ್ಯರಾಗಿದ್ದರು . ಆಶ್ಚರ್ಯದಿಂದ ದಿಗ್ಮೂಢರಾಗಿದ್ದ ಶ್ರೀ ವೆಂಕಣ್ಣಯ್ಯನವರಿಗೆ ಆ ಶಬ್ದದ ಅರ್ಥ ತಿಳಿಯದೇ ಆ ಪದವನ್ನು ತಮ್ಮ ಡೈರಿಯಲ್ಲಿ ಬರೆದುಕೊಂಡರು . ಸಂಜೆ ಚಿಕ್ಕನಾಯನಹಳ್ಳಿಯಲ್ಲಿದ್ದ ತಮ್ಮ ಮನೆಗೆ ಹಿಂತಿರುಗಿದರು . ಪ್ರತಿ ಸಂಜೆ ಕೆಲವು ಮಿತ್ರರು ಸೇರುತ್ತಿದ್ದರು . ಅವರಲ್ಲಿ ಒಬ್ಬರು ಮರಾಠಿ ಮಾತನಾಡುವ ದೇಶಸ್ಥರು . ಅವರು ಗೋಂದಾವಲ್ಯಾವೆ ಎಂದರೆ ಗೋಂದಾವಳಿಗೆ ಬಾ ಅಂತ ಎಂದು ಹೇಳಿದರು . ಆದರೆ ಗೋಂದಾವಳಿ ಎಲ್ಲಿದೆ ಎಂಬುದು ಅವರಿಗೂ ಗೊತ್ತಿರಲಿಲ್ಲ.
ಹೀಗಾಗಿ ಶ್ರೀ ವೆಂಕಣ್ಣಯ್ಯನವರು ಇದೇ ಯೋಚನೆಯಲ್ಲಿರುವಾಗ ಎರಡು ಮೂರು ದಿನಗಳ ನಂತರ ಬೆಳಗಿನಝಾವ, ಕನಸಿನಲ್ಲಿ ಒಬ್ಬ ಶ್ರೀ ವೈಷ್ಣವರು ಒಂದು ಜಗಲಿಯ ಮೇಲೆ ಕುಳಿತು ಗೀತಾ ಪಾರಾಯಣ ಮಾಡುತ್ತಿದ್ದಾರೆ, ಮತ್ತೊಬ್ಬ ಶ್ರೀ ವೈಷ್ಣವರು ಗೀತಾ ಪಾರಾಯಣ ಮಾಡುತ್ತಿದ್ದ ವ್ಯಕ್ತಿಯ ಕಡೆಗೆ ಕೈ ತೋರಿಸಿ ಅವರ ಬಳಿಗೆ ಹೋದರೆ ಎಲ್ಲ ತಿಳಿಯುವುದೆಂದು ಹೇಳಿದಂತೆ ಕನಸಾಯಿತು . ಈ ಆಶ್ಚರ್ಯಕರ ಕನಸಿನ ಬಗ್ಗೆ ಯೋಚಿಸುತ್ತ ಬೆಳಿಗ್ಗೆ ವಾಯು ಸಂಚಾರಕ್ಕೆ ಹೋಗಿ ಹಿಂತಿರುಗುತ್ತಿರುವಾಗ ಶ್ರೀ ವೆಂಕಟರಮಣಸ್ವಾಮಿ ಗುಡಿಯ ಮುಂದೆ ಕನಸಿನಲ್ಲಿ ಗೀತಾ ಪಾರಾಯಣ ಮಾಡುತ್ತಿದ್ದ ವ್ಯಕ್ತಿಯನ್ನು ಕಂಡರು. ಆಶ್ಚರ್ಯಚಕಿತರಾಗಿ ಅವರ ಕಡೆ ನೋಡುತ್ತಿರಲು, ಅವರೂ ಸಹ ಇವರ ಕಡೆ ನೋಡಿ ನಗುಮುಖದಿಂದ ಮಾತನಾಡಿಸಿ ಶ್ರೀ ವೆಂಕಣ್ಣಯ್ಯನವರನ್ನು ಹತ್ತಿರದಲ್ಲೇ ಇದ್ದ ಅವರ ಮನೆಗೆ ಕರೆದುಕೊಂಡು ಹೋದರು. ಅವರ ಹೆಸರು ಶ್ರೀ ರಂಗಾಚಾರ್ಯರು . ಅವರು ಯೋಗಾಭ್ಯಾಸಿಗಳು. ಅವರ ಮನೆಗೆ ಹೋದಮೇಲೆ ಶ್ರೀ ವೆಂಕಣ್ಣಯ್ಯನವರು ಅವರಿಗಾದ ಮಹಾಪುರುಷರ ದರ್ಶನದ ವಿಷಯ ಅವರಿಗೆ ಹೇಳಿದರು . ಆಗ ಅವರು ಶ್ರೀ ವೆಂಕಣ್ಣಯ್ಯನವರಿಗೆ ಅಲ್ಲೇ ಕುಳಿತುಕೊಳ್ಳಲು ಹೇಳಿ ದೇವರಮನೆಯಲ್ಲಿ ಧ್ಯಾನಮಾಡಲು ಕುಳಿತರು . ಸುಮಾರು ಒಂದು ಗಂಟೆಯ ನಂತರ ಇವರ ಬಳಿಗೆ ಬಂದು ಹೇಳಿದರು : "ನಾನು ಧ್ಯಾನದಲ್ಲಿ ಗೋಂದಾವಳಿಗೆ ಹೋಗಿದ್ದೆ. ಪೂನಾಗೆ ಹೋಗುವ ರೈಲು ಮಾರ್ಗದಲ್ಲಿ ಕೋರೆಗಾವ್ ಎಂಬ ನಿಲ್ದಾಣ ಸಿಗುವುದು . ಅಲ್ಲಿಂದ ಮುಂದೆ ರಸ್ತೆ ಮಾರ್ಗದಲ್ಲಿ ಹೋಗಬೇಕು . ಅಲ್ಲಿ ಒಂದು ರಾಮ ಮಂದಿರ ಇದೆ . ಶ್ರೀ ರಾಮನ ದರ್ಶನ ಮಾಡಿದೆ . ಆಗ ಶ್ರೀ ರಾಮನ ಮೂರ್ತಿಯು "ಇಲ್ಲಿಯ ರಾಮನು ನಾನಲ್ಲ .ಮಹಾರಾಜರಿರುವರು" ಅಂತ ಹೇಳಿತು. ಅಷ್ಟರಲ್ಲಿ ಅಲ್ಲಿಗೆ ಶ್ರೀ ಮಹಾರಾಜರು ಬಂದರು . ಅವರಿಗೆ ನಮಸ್ಕರಿಸಲು ಅವರು ನಮ್ಮಿಬ್ಬರಿಗೂ ಬರಲು ಹೇಳಿದರು . ಅವರ ಹೆಸರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ " ಎಂದು ಹೇಳಿದರು . ಹೀಗೆ ಹೇಳಿ ಅವರೂ ಗೋಂದಾವಳಿಗೆ ಬರುವುದಾಗಿ ತಿಳಿಸಿದರು . ಇದಾಗಿ ಎಂಟು ದಿನಗಳೊಳಗೆ ಇವರಿಬ್ಬರೂ ಗೋಂದಾವಳಿಗೆ ಹೋದರು . ಆದಿನ ಶ್ರೀ ಮಹಾರಾಜರು ಯಾವುದೋ ಊರಿಗೆ ಹೋಗಬೇಕಿತ್ತು. ಆದರೆ ಅವರು ದೂರದಿಂದ ಇಬ್ಬರು ಭಕ್ತರು ಅಲ್ಲಿಗೆ ಬರುತ್ತಿರುವುದರಿಂದ ತಮ್ಮ ಪ್ರಯಾಣವನ್ನು ರದ್ದುಪಡಿಸಿದ್ದರು. ಗೊಂದಾವಳಿಯಲ್ಲಿ ಶ್ರೀ ಮಹಾರಾಜಾರ ದರ್ಶನ ಪಡೆದ ಮೇಲೆ ಮಾರನೆಯ ದಿನ ಶ್ರೀ ವೆಂಕಣ್ಣಯ್ಯನವರನ್ನು ಹತ್ತಿರ ಕರೆದು ಕೂಡಿಸಿಕೊಂಡು ಶ್ರೀ ರಾಮ ತಾರಕ ಮಂತ್ರವನ್ನು ಉಪದೇಶಿಸಿ ನಂತರ ಹೇಳಿದರು :" ೧. ನಿಲ್ಲಿಸದೇ ನಾಮಸ್ಮರಣೆ ಮಾಡು . ೨. ರಾಮನಾಮವನ್ನು ಪ್ರಚಾರ ಮಾಡು ೩. ಒಂದು ಸಣ್ಣ ರಾಮ ಮಂದಿರವನ್ನು ಕಟ್ಟಿಸು ೪. ಉಪಾಸನೆಯನ್ನು ಮುಂದುವರಿಸು ." ಎಂದು ಹೇಳಿದರು. .ಗೋಂದಾವಳಿಯಿಂದ ಹೊರಟಾಗ ಅವರ ಪಾದುಕೆಯನ್ನೂ ಒಂದು ರೂಪಾಯಿಯನ್ನು ಕೊಟ್ಟು ಆಶೀರ್ವದಿಸಿದರು . ಶ್ರೀ ವೆಂಕಣ್ಣಯ್ಯನವರು ಚಿಕ್ಕನಾಯಕನಹಳ್ಳಿಗೆ ಹಿಂತಿರುಗಿದ ಮೇಲೆ ಒಂದು ತಿಂಗಳಿನಲ್ಲೇ ಶ್ರೀ ಮಹಾರಾಜರು ದೇಹಬಿಟ್ಟವಾರ್ತೆ ಟೆಲಿಗ್ರಾಂ ಮೂಲಕ ತಿಳಿಯಿತು . ಆಗ ಶ್ರೀ ವೆಂಕಣ್ಣಯ್ಯನವರು ಬಹಳ ದುಃಖ ಪಟ್ಟು ಗೋಂದಾವಳಿಗೆ ಅಂತಿಮ ಕಾರ್ಯಗಳಿಗೆ ಹೋಗಿ ಬಂದರು . ಸ್ವಲ್ಪ ದಿನಗಳಲ್ಲಿಯೇ ಅವರಿಗೆ ಚಿಕ್ಕನಾಯಕನಹಳ್ಳಿಯಿಂದ ವರ್ಗ ವಾಯಿತು . ಬೇರೆ ಬೇರೆ ಸ್ಥಳಗಳಿಗೆ ವರ್ಗವಾಗುತ್ತಿದ್ದುದರಿಂದ ಕೆಲವು ಕಾಲ ಮಂದಿರ ಕಟ್ಟಿಸಲಾಗಲಿಲ್ಲ . ಆದರೆ ಅವರ ಮೇಲೆ ಶ್ರೀ ಮಹಾರಾಜರ ಕೃಪೆ ಸದಾ ಇರುವುದೆಂಬ ಅರಿವು ಅವರಿಗೆ ಇದ್ದು ಅನೇಕ ಸಂದರ್ಭಗಳಲ್ಲಿ ಅದರ ನಿದರ್ಶನವಾಯಿತು . ಅವರು ಎಲ್ಲಿದ್ದರೂ ಶ್ರೀ ರಾಮ ನಾಮಸ್ಮರಣೆ, ಜಪಾನುಷ್ಠಾನ ಜರುಗಿಸುತ್ತಿದ್ದರು. . ಕೆಲಸದಿಂದ ನಿವೃತ್ತಿ ಪಡೆದಮೇಲೆ ಅವರ ಸ್ವಸ್ಥಳವಾದ ಗಂಜೂರಿನ ಸಮೀಪದಲ್ಲೇ ಇದ್ದ ಚಿಂತಾಮಣಿಯಲ್ಲಿ ಒಂದು ನಿವೇಶನ ಕೊಂಡು 1939ರಲ್ಲಿ ಶಂಕು ಸ್ಥಾಪನೆ ನಡೆಸಿ ಅಖಂಡ ಜಪಾನುಷ್ಠಾನ ನಡೆಸುತ್ತಾ 1949ರಲ್ಲಿ ಶ್ರೀ ಸೀತಾ ರಾಮಚಂದ್ರ ಲಕ್ಷ್ಮಣ ಮೂರ್ತಿ ಸಹಿತ ಶ್ರೀ ಬ್ರಹ್ಮಚೈತನ್ಯರ ಅಮೃತಶಿಲಾ ಮೂರ್ತಿಗಳನ್ನು ಸ್ಥಾಪಿಸಿದರು.
ಶ್ರೀ ಮಹಾರಾಜರು ಅನೇಕ ರಾಮ ಮಂದಿರಗಳನ್ನು ಸ್ಥಾಪಿಸಿದರು ಮತ್ತು ಅನೇಕರಿಗೆ ಸ್ಥಾಪನೆ ಮಾಡಲು ಚೈತನ್ಯ ನೀಡಿದರು . ಗೋಂದಾವಳಿಯಲ್ಲಿ ಎರಡು ರಾಮ ಮಂದಿರ , ದತ್ತ ಮಂದಿರ ,ಶನಿ ಮಂದಿರಗಳನ್ನೂ ಸ್ಥಾಪಿಸಿದರು . ಅದಲ್ಲದೆ, ಬೇರೆ ಬೇರೆ ಸ್ಥಳಗಳಲ್ಲಿ, ಭಕ್ತರಿಂದ ಅನೇಕ ರಾಮ ಮಂದಿರಗಳನ್ನು ಸ್ಥಾಪಿಸಿದರು .
ಶ್ರೀ ಮಹಾರಾಜರು ಬಂದಿದ್ದ ಭಕ್ತ ಜನರಿಗೆ "ನಾನೇನೂ ಹೆಚ್ಚು ದಿನ ಇರುವುದಿಲ್ಲ . ಎಲ್ಲರೂ ನೀತಿಯಿಂದ ನಡೆದುಕೊಳ್ಳಿ . ಹೆಚ್ಚು ಹೆಚ್ಚು ನಾಮಸ್ಮರಣೆ ಮಾಡಿ ಎಂದು ಹೇಳುತ್ತಿದ್ದರು . ಆದರೆ ಶ್ರೀ ಮಹಾರಾಜರು ಹೆಚ್ಚು ದಿನ ಇರುವುದಿಲ್ಲ ಎಂಬ ಮಾತನ್ನು ಶಿಷ್ಯವರ್ಗವು ಲಘುವಾಗಿ ಪರಿಗಣಿಸಿ ಏನೋ ತಮಾಷೆಗೆ ಹೇಳುತ್ತಾರೆ ಎಂದು ತಿಳಿದುಕೊಂಡಿದ್ದರು .
ಮಾರ್ಗಶಿರ ಬಹುಳ ನವಮಿ(21-12-1913)ಯಂದು ಗೋಶಾಲೆಗೆ ಹೋದರು . ಗೋವುಗಳನ್ನೆಲ್ಲಾ ಪ್ರೀತಿಯಿಂದ ಮೈ ಸವರಿ ಮಾತನಾಡಿಸಿದರು .ಶ್ರೀ ಮಹಾರಾಜರಿಗಾಗಿ ಹಾಕಿದ್ದ ಕುರ್ಚಿಯ ಮೇಲೆ ಸ್ವಲ್ಪ ಹೊತ್ತು ಕುಳಿತಿದ್ದರು. ಗೋಶಾಲೆಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಹುಲ್ಲನ್ನು ಸ್ವಚ್ಛ ಮಾಡಲು ಹೇಳಿದರು . ಕೂಡಲೇ ಭವಾನ್ ರಾವ್ ಸ್ವಚ್ಛ ಮಾಡಿದರು . ಆಗ " ಈ ಸ್ಥಳ ಬಹಳ ಚೆನ್ನಾಗಿದೆ. ನಾಳೆಯಿಂದ ನಾನು ಇಲ್ಲೇ ಬಂದು ಇರುತ್ತೇನೆ ." ಎಂದು ಹೇಳಿ ಭವಾನ್ ರಾವ್ ಗೆ ಅಂದು ಅಲ್ಲೇ ಇರಲು ಹೇಳಿ ಹೊರಟರು .
ಅಂದು ರಾತ್ರಿ ಬಹಳ ಹೊತ್ತಿನವರೆಗೂ ಭಜನೆ ಮಾಡುತ್ತಿದ್ದರು .
ನಂತರ ಮಲಗಲು ಹೊರಟರು. ಆಗ ಒಬ್ಬ ಮಹಿಳೆಯ ಪ್ರಶ್ನೆಗೆ " ದೇವರು ಇಟ್ಟ ಹಾಗೆ ಇರಬೇಕು . ಹಾಗೂ ಅವನ ಕರೆ ಬಂದಿತೆಂದರೆ ಆನಂದದಿಂದ ಹೋಗಬೇಕು ". ಎಂದರು . ಸ್ವಲ್ಪ ಹೊತ್ತು ಮಲಗಿ ಎದ್ದು ಶೌಚ ಮುಖಮಾರ್ಜನ ಮಾಡಿಕೊಂಡು ಬಂದು ಶ್ರೀ ರಾಮನ ದರ್ಶನಮಾಡಿ ಹಾಸಿಗೆಯಮೇಲೆ ಕುಳಿತುಕೊಂಡರು . ಅವರ ಪಾದಗಳಮೇಲೆ ತಲೆಯಿಟ್ಟು ನಮಸ್ಕರಿಸಿದ ವಾಮನ
ರಾಯರನ್ನು ಅತ್ಯಂತ ಪ್ರೇಮದಿಂದ ನೋಡುತ್ತಾ , "ಎಲ್ಲಿ ನಾಮವೋ ಅಲ್ಲಿ ನನ್ನ ಪ್ರಾಣ । ಕಾಯ್ದುಕೊಳ್ಳಿರಿ ನನ್ನ ಈ ಪ್ರಮಾಣ ।।" ಎಂದರು. ನಂತರ ಏನೂ ಮಾತನಾಡಲಿಲ್ಲ . ಕಣ್ಣು ಮುಚ್ಚಿದರು . ಶ್ವಾಸವು ಜೋರಾಗಿ ಆಡತೊಡಗಿತು . ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಾಣ ಜ್ಯೋತಿಯನ್ನು ಭಗವಂತನಲ್ಲಿ ಲೀನ ಮಾಡಿಬಿಟ್ಟರು . .
ಜೈ ಜೈ ರಘುವೀರ ಸಮರ್ಥ
No comments:
Post a Comment